Site icon Vistara News

Breakfast Tips: ಬೆಳಗಿನ ಉಪಾಹಾರಕ್ಕೆ ಈ 5 ಬಗೆಯ ಆಹಾರಗಳನ್ನು ಸೇವಿಸಬೇಡಿ!

Breakfast Tip

ಇಡೀ ದಿನದ ಆಹಾರಕ್ರಮದಲ್ಲಿ ಬಹಳ ಮುಖ್ಯವಾದದ್ದು ಬೆಳಗ್ಗಿನ ಉಪಾಹಾರ (Breakfast Tips). ಇದನ್ನು ಸರಿಯಾಗಿ ಮಾಡದಿದ್ದರೆ ಅದು ಇಡೀ ದಿನದ ಕೆಲಸದ ಮೇಲೆ ಪ್ರಭಾವ ಬೀರುತ್ತದೆ. ಉಪಾಹಾರವನ್ನೇ ಬಿಟ್ಟರೆ ಕೇವಲ ದೇಹವಷ್ಟೇ ಅಲ್ಲ, ಮನಸ್ಸೂ ಕೂಡ ಸರಿ ಇರುವುದಿಲ್ಲ. ಕಿರಿಕಿರಿ, ಏನೋ ಕಳೆದುಕೊಂಡ ಭಾವ ಅಷ್ಟೇ ಅಲ್ಲ, ಶಕ್ತಿಗುಂದುವಿಕೆ, ಇಡೀ ದಿನದ ಕೆಲಸಕ್ಕೆ ಶಕ್ತಿ ಇಲ್ಲದಂತಾಗುವುದು ಇತ್ಯಾದಿ ಪರಿಣಾಮ ಕಂಡುಬರುತ್ತದೆ. ಹೀಗಾಗಿ, ಬ್ರೇಕ್‌ಫಾಸ್ಟ್‌ ಅನ್ನು ಬಿಡುವುದು ಆರೋಗ್ಯದ ಲಕ್ಷಣವಲ್ಲ. ಅಷ್ಟೇ ಅಲ್ಲ. ಉತ್ತಮ ಆರೋಗ್ಯಕರ ಬೆಳಗಿನ ಉಪಾಹಾರವೂ ಕೂಡಾ ನಮ್ಮ ಆರೋಗ್ಯದಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಆದರೆ ಕೆಲವು ಅನಾರೋಗ್ಯಕರ ತಿನಿಸುಗಳನ್ನು ಇಂದಿನ ಧಾವಂತದ ಯುಗದಲ್ಲಿ ಬಹುತೇಕರು ಬೆಳಗಿನ ಉಪಹಾರಕ್ಕಾಗಿ ಸೇವಿಸುತ್ತಾರೆ. ಸಂಸ್ಕರಿಸಿದ ಇಂತಹ ಆಹಾರಗಳನ್ನು ಬೆಳಗಿನ ಉಪಹಾರಕ್ಕಾಗಿ ಸೇವಿಸಿದರೆ, ನಮ್ಮ ಜೀರ್ಣಾಂಗ ವ್ಯವಸ್ಥೆಗೆ ನಾವೇ ಅಪಚಾರ ಬಗೆದಂತೆ. ಬನ್ನಿ, ಯಾವೆಲ್ಲ ಆಹಾರಗಳನ್ನು ಬೆಳಗ್ಗಿನ ಉಪಹಾರಕ್ಕೆ ತಿನ್ನಲೇಬಾರದು ಎಂಬುದನ್ನು ನೋಡೋಣ.

ಫ್ಲೇವರ್ಡ್‌ ಮೊಸರು

ಅಂಗಡಿಗಳಲ್ಲಿ ದೊರೆಯುವ ಬಗೆಬಗೆಯ ಫ್ಲೇವರ್ಡ್‌ ಮೊಸರುಗಳು ತಿನ್ನಲು ಬಲು ರುಚಿ. ಸ್ಟ್ರಾಬೆರಿ, ಬ್ಲೂಬೆರ್ರಿ, ರಸ್‌ಬೆರ್ರಿ, ಮಾವು ಇತ್ಯಾದಿ ಇತ್ಯಾದಿ ಬಗೆಬಗೆಯ ಮೊಸರುಗಳು ಡಬ್ಬಗಳಲ್ಲಿ ಇಂದು ಲಭ್ಯ. ಸುಲಭವಾಗಿ ಅಂಗಡಿಗಳಲ್ಲಿ ದೊರೆಯುವ ಆರೋಗ್ಯಕರ ಆಹಾರ ಎಂದು ಬಹುತೇಕರು ಇದನ್ನು ಆಗಾಗ ಬಳಸುವುದುಂಟು. ಆದರೆ, ಇದರಲ್ಲಿ ಸಾಕಷ್ಟು ಪ್ರಮಾಣದಲ್ಲಿ ಸಕ್ಕರೆ, ಕೃತಕ ಪದಾರ್ಥಗಳೂ ಇರುವುದರಿಂದ ಇವು ಖಂಡಿತ ಒಳ್ಳೆಯದು ಮಾಡಲಾರವು. ಇವುಗಳ ಒಳ್ಳೆಯ ಗುಣಗಳಿಗಿಂತ ಅಡ್ಡ ಪರಿಣಾಮಗಳೇ ಹೆಚ್ಚು. ತೂಕ ಹೆಚ್ಚಾಗುವಿಕೆ, ಶೀತ, ಕಫಗಳನ್ನು ಹೆಚ್ಚಿಸುತ್ತವೆ.

ಸಿರಿಯಲ್‌ಗಳು

ಬೆಳಗ್ಗೆ ಎದ್ದ ಕೂಡಲೇ ಸುಲಭವಾಗಿ ಮಾಡಬಹುದಾದ ಬ್ರೇಕ್‌ಫಾಸ್ಟ್‌ಗಳ ಪೈಕಿ, ಒಂದು. ಬಹುತೇಕರು ತಿನ್ನುವುದು ಇಂದು ಇವನ್ನೇ. ಬೆಳಗ್ಗೆ ಎದ್ದ ಕೂಡಲೇ ಒಂದಿಷ್ಟು ಸಿರಿಯಲ್‌ ಅನ್ನು ಬೌಲ್‌ನಲ್ಲಿ ಹಾಕಿ ಅದಕ್ಕೆ ಸ್ವಲ್ಪ ಹಾಲು ಹಾಕಿ ಸೇವಿಸಿದರೆ ಮುಗೀತು. ಆಫೀಸ್‌ ಹೊರಡುವ ಗಡಿಬಿಡಿಯಲ್ಲಿ ಬಹುತೇಕರು ಹೀಗೆ ಇದನ್ನು ತಿನ್ನುವುದು ಹೆಚ್ಚು. ಆದರೆ, ಕಾರ್ನ್‌ ಫ್ಲೇಕ್ಸ್‌ ಸೇರಿದಂತೆ ಇಂಥ ಸಿರಿಯಲ್‌ಗಳು ಸಂಸ್ಕರಿಸಿದ ಆಹಾರಗಳ ಪೈಕಿ ಒಂದಾಗಿರುವುದರಿಂದ ಹಾಗೂ ಇವುಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಸಕ್ಕರೆ ಹಾಗೂ ಕೃತಕ ವಸ್ತುಗಳೂ ಸೇರಿಸಲ್ಪಟ್ಟಿರುವುದರಿಂದ ಆರೋಗ್ಯಕ್ಕೆ ಅಂದುಕೊಂಡ ಹಾಗೆ ಒಳ್ಳೆಯದನ್ನು ಮಾಡಲಾರವು. ಅಡ್ಡ ಪರಿಣಾಮಗಳೂ ಇವೆ.

ಹಣ್ಣಿನ ರಸ

ಹಣ್ಣು ಆರೋಗ್ಯಕ್ಕೆ ಒಳ್ಳೆಯದು ನಿಜ. ಹಾಗೆಯೇ ಹಣ್ಣಿನ ರಸವೂ ಕೂಡಾ. ಆದರೆ, ಹಣ್ಣಿನ ರಸ ಒಳ್ಳೆಯದು ಅಂದುಕೊಂಡು ಬೆಳಗ್ಗೆ ಹಣ್ಣಿನ ರಸ ಕುಡಿದರೆ ಖಂಡಿತ ಒಳ್ಳೆಯದಾಗದು. ಇದರಿಂದ ಇದ್ದಕ್ಕಿದ್ದ ಹಾಗೆ ರಕ್ತದಲ್ಲಿನ ಗ್ಲುಕೋಸ್‌ ಪ್ರಮಾಣ ಏರುತ್ತದೆ. ಒಂದು ಹಣ್ಣು ತಿನ್ನುವುದಕ್ಕೂ ಹಣ್ಣಿನ ರಸ ಕುಡಿಯುವುದಕ್ಕೂ ವ್ಯತ್ಯಾಸವಿದೆ. ಒಂದು ಲೋಟ ಹಣ್ಣಿನ ರಸಕ್ಕೆ ಸಾಕಷ್ಟು ಹಣ್ಣುಗಳು ಬೇಕಾಗುತ್ತವೆ, ಅಷ್ಟೇ ಅಲ್ಲ, ಹಣ್ಣಿನ ನಾರಿನಂಶವನ್ನು ಎಸೆದು ಬಿಡಲಾಗುತ್ತದೆ. ಆದರೆ, ಹಣ್ಣಿನಲ್ಲಿ ಹಾಗಲ್ಲ. ಹಾಗಾಗಿ ಜ್ಯೂಸ್‌ಗಿಂತ ಹಣ್ಣನ್ನು ಹಾಗೆಯೇ ತಿನ್ನುವುದು ಬಹಳ ಒಳ್ಳೆಯದು. ಬೆಳಗ್ಗೆ ಉಪಹಾರಕ್ಕಂತೂ ಹಣ್ಣಿನ ರಸ ಕುಡಿಯುವುದು ಒಳ್ಳೆಯದಲ್ಲ.

ವ್ಯಾಫಲ್

ಪ್ಯಾನ್‌ಕೇಕ್‌ಗಳು ಹಾಗೂ ವ್ಯಾಫಲ್‌ಗಳನ್ನು ಬೆಳಗಿನ ಹೊತ್ತು ಉಪಹಾರಕ್ಕೆ ತಿನ್ನುವುದು ಒಳ್ಳೆಯದಲ್ಲ. ಇದರಲ್ಲಿ ಹೆಚ್ಚು ಮೈದಾ ಇರುತ್ತದೆ. ಅಷ್ಟೇ ಅಲ್ಲ, ಇದರಲ್ಲಿ ಯಾವುದೇ ಪೋಷಕಾಂಶಗಳಿರುವುದಿಲ್ಲ. ಉದಾಸೀನತೆಯನ್ನು ಹೆಚ್ಚು ಮಾಡುವ ಯಾವುದೇ ಶಕ್ತಿ ನೀಡದ ಆಹಾರವಿದು.

ಕೇಕ್‌, ಮಫಿನ್‌ಗಳು

ಬೆಳಗಿನ ಉಪಾಹಾರಕ್ಕೆ ಕೇಕ್‌, ಮಫಿನ್‌ನಂತಹ ಆಹಾರಗಳು ಒಳ್ಳೆಯದಲ್ಲ. ಮೈದಾ, ಸಕ್ಕರೆ, ಎಣ್ಣೆ ಇತ್ಯಾದಿಗಳೇ ಹೆಚ್ಚಿರುವ ಈ ಆಹಾರದಲ್ಲಿ ಒಳ್ಳೆಯ ಅಂಶಗಳು ಕಡಿಮೆ. ಹೆಚ್ಚು ಕ್ಯಾಲರಿಯ, ಹೆಚ್ಚು ಕೊಬ್ಬಿನ ಆಹಾರ. ಸಕ್ಕರೆಯ ಪ್ರಮಾಣವೂ ಹೆಚ್ಚು. ಹಾಗಾಗಿ ಈ ಬೆಳಗಿನ ಉಪಹಾರಕ್ಕೆ ಆರೋಗ್ಯಕರವಲ್ಲ.

ಇದನ್ನೂ ಓದಿ: Sabja Seeds Benefits: ಸಬ್ಜಾ ಬೀಜವನ್ನು ನೆನೆಹಾಕಿ ಸೇವಿಸಿದರೆ ಹಲವು ಆರೋಗ್ಯ ಸಮಸ್ಯೆ ದೂರ

Exit mobile version