ಕಾಲಕ್ಕೆ ತಕ್ಕಂತೆ ನಡೆಯುವ ಹುಮ್ಮಸ್ಸು ಯಾರಿಗಿರುವುದರಿಲ್ಲ ಹೇಳಿ? ʻಹಳೇ ಕಾಲದೋರುʼ ಅನಿಸಿಕೊಳ್ಳುವುದು ಯಾರಿಗೂ ಬೇಡ. ಇಂಥ ಹುಕಿಗಳ ನಡುವಲ್ಲೇ ಹುಟ್ಟುವುದು ನಾನಾ ನಮೂನೆಯ ಟ್ರೆಂಡ್‌ಗಳು. ಅಂಥದ್ದೇ ಒಂದು ಹೊಸ ಅಲೆಯ ಕೂಸು ʻಬಬಲ್ ಟೀʼ ಅಥವಾ ʻಗುಳ್ಳೆ ಚಹಾʼ. ಇತ್ತೀಚಿನ ದಿನಗಳಲ್ಲಿ ಯುವಜನರ ಅಚ್ಚುಮೆಚ್ಚು ಎನಿಸಿರುವ ಬಬಲ್ ಟೀ (Bubble tea) ಆಗಾಗ ಸೃಷ್ಟಿಯಾಗುವ ಹೊಸ ಅಲೆಗಳ ಪೈಕಿ ಒಂದು ಎಂದು ಉಪೇಕ್ಷೆ ಮಾಡುವಂತೆಯೂ ಇಲ್ಲ. ಹಾಗಾಗಿ ಏನಿದು, ಎಲ್ಲಿಂದ ಬಂತು, ಇದನ್ನು ಕುಡಿಯುವುದು ಆರೋಗ್ಯಕ್ಕೆ ಕ್ಷೇಮವೇ ಇತ್ಯಾದಿ ಪ್ರಶ್ನೆಗಳು ಎದುರಾಗಿವೆ.
ಬ್ರಿಟಿಷ್ ಚಹಾ ಅಥವಾ ಭಾರತದಲ್ಲಿ ಪ್ರಚಲಿತದಲ್ಲಿರುವ ಚಹಾವೇ ಗುಳ್ಳೆ ಚಹಾದ (Bubble tea) ಮೂಲದ್ರವ್ಯ. ಕೆಲವೊಮ್ಮೆ ಗ್ರೀನ್ ಟೀ ಸಹ ಇದಕ್ಕೆ ಉಪಯೋಗಿಸಲಾಗುತ್ತದೆ. ಈ ಮೂಲ ಚಹಾಗೆ ಬೇಕಾದ ರುಚಿಯ ಸಿರಪ್ ಸೇರಿಸಲಾಗುತ್ತದೆ. ಮರಗೆಣಸಿನಿಂದ ಮಾಡಲಾಗುವ ಟಪಿಯೋಕ ಗೋಲಿಗಳನ್ನು (ಸಾಬಕ್ಕಿಯ ಮಣಿಗಳ ಮಾದರಿಯಲ್ಲಿ) ಇದಕ್ಕೆ ಸೇರಿಸುವುದು ಮುಖ್ಯ ಆಕರ್ಷಣೆ. ಜೊತೆಗೊಂದಿಷ್ಟು ಐಸ್ ಸುರಿದರೆ ನೋಡುವುದಕ್ಕೆ ಆಕರ್ಷಕವಾದ, ಕುಡಿಯುತ್ತ ತಿನ್ನಲೂಬಹುದಾದ ಚಹಾ ಸಿದ್ಧ. ಬಬಲ್ ಚಹಾ (Bubble tea) ಹೆಸರಿನಲ್ಲಿ ತಂಪಾದ ಪೇಯವನ್ನು ಬೇಕಾದ ರುಚಿಗಳಲ್ಲಿ ಹೀರಬಹುದು. ನಡುವೆ ಅಂಟಾದ ರುಚಿಕರ ಟಪಿಯೋಕ ಗೋಲಿ ಅಥವಾ ಮಣಿಗಳನ್ನು ಜಗಿಜಗಿದು ತಿನ್ನಬಹುದು. ಉಳಿದೆಲ್ಲಾ ಪೇಯಗಳಿಗಿಂತ ಮೋಜೆನಿಸುವ ಇದನ್ನು ಸ್ನೇಹಿತರೊಂದಿಗೆ ಕುಳಿತು ಹೀರುವುದು ಯುವಕರಿಗೆ ಮಾತ್ರವೇ ಅಲ್ಲ, ಎಲ್ಲ ವಯಸ್ಸಿನವರಿಗೂ ಮೆಚ್ಚೆನಿಸಿದೆ.
ತೈವಾನ್‌ನಲ್ಲಿ ಈಗ ಸುಮಾರು 40 ವರ್ಷಗಳ ಹಿಂದೆ ಈ ಚಹಾ ಹುಟ್ಟಿ, ಈಗ ಭಾರತವೂ ಸೇರಿದಂತೆ ಎಲ್ಲೆಡೆ ಪ್ರಚಲಿತವಾಗಿದೆ. 2019ರಲ್ಲಿ ಚೀನಾ ಶಾವೋಶಿಂಗ್ ಪ್ರಾಂತ್ಯದಲ್ಲಿ ಹೊಟ್ಟೆ ನೋವಿನ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ 14 ವರ್ಷದ ಹುಡುಗಿನ ಹೊಟ್ಟೆಯಲ್ಲಿ ನೂರಕ್ಕೂ ಹೆಚ್ಚಿನ ಟಪಿಯೋಕ ಗೋಲಿಗಳು ದೊರೆತಿದ್ದವು ಎನ್ನಲಾಗಿತ್ತು. ಸಾಬಕ್ಕಿಯಂತೆ ಅಂಟಂಟಾಗಿರುವ ಈ ಮಣಿಗಳು ಒಂದಕ್ಕೊಂದು ಸೇರಿಕೊಂಡು ಜೀರ್ಣವಾಗದೆ ಕುಳಿತು ಆಕೆಗೆ ಮಲಬದ್ಧತೆ ಉಂಟುಮಾಡಿ ಹೊಟ್ಟೆನೋವು ತರಿಸಿದ್ದವು ಎಂದೂ ಹೇಳಲಾಗಿತ್ತು. ಆನಂತರದಿಂದ ಬಬಲ್ ಚಹಾ ನಿಜಕ್ಕೂ ಸುರಕ್ಷಿತವೇ ಎಂಬ ಬಗ್ಗೆ ಚರ್ಚೆ ಜಾರಿಯಲ್ಲಿದೆ.
ಸುರಕ್ಷಿತವೇ?
ಬಬಲ್ ಟೀ ಹಾಗೆ ಸುರಕ್ಷಿತವೇ ಹೌದು. ಮಾತ್ರವಲ್ಲ, ಅದಕ್ಕೂ ಕೆಲವು ಪೋಷಕ ಗುಣಗಳಿವೆ. ಇದರಲ್ಲಿರುವ ವಸ್ತುಗಳೆಂದರೆ ಮುಖ್ಯವಾಗಿ ಗೋಲಿ ರೂಪದ ಮರಗೆಣಸು, ಹಾಲು ಮತ್ತು ಬ್ಲಾಕ್ ಟೀ ಅಥವಾ ಗ್ರೀನ್ ಟೀ. ಈ ವಸ್ತುಗಳಿಗೆ ಅವುಗಳದ್ದೇ ಆದ ಸದ್ಗುಣಗಳು ಇದ್ದೇಇವೆ. ಹಾಗಾಗಿ ಆಗೊಮ್ಮೆ ಈಗೊಮ್ಮೆ ಇವನ್ನು ಸೇವಿಸಿದರೆ ತೊಂದರೆಯಿಲ್ಲ. ಆದರೆ ಇವುಗಳ ಜೊತೆಗೆ ಕೃತಕ ಬಣ್ಣ ಮತ್ತು ರುಚಿಗಳನ್ನು ಸೇರಿಸಲಾಗುತ್ತದೆ. ಇವುಗಳ ಬಗ್ಗೆ ಪರಿಣತರದ್ದು ತಕರಾರಿದೆ.
ಎರಡು ಕಪ್ ಬಬಲ್ ಚಹಾದಿಂದ ಸುಮಾರು 30 ಗ್ರಾಂಗಿಂತ ಹೆಚ್ಚು ಸಕ್ಕರೆ ಹೊಟ್ಟೆ ಸೇರುತ್ತದೆ. ಅಂದರೆ ಸೋಡಾದಂಥ ತಂಪು ಪಾನೀಯಗಳಿಗಿಂತ ಇದೇನು ಕಡಿಮೆ ಇಲ್ಲ. ಜೊತೆಗೊಂದಿಷ್ಟು ಕೃತಕ ಬಣ್ಣ ಮತ್ತು ರುಚಿಯೂ ಸೇರಿಕೊಳ್ಳುತ್ತವೆ ಹೊಟ್ಟೆಗೆ. ದೊಡ್ಡದೊಂದು ಕಪ್ ಗೋಲಿಚಹಾದಲ್ಲಿ ಅಂದಾಜು 300 ಕ್ಯಾಲರಿ ದೇಹ ಸೇರುತ್ತದೆ. ಇದರಲ್ಲಿ ಅಜಮಾಸು 40 ಗ್ರಾಂ ಸಕ್ಕರೆಯೇ ಇದೆ. ದಿನಕ್ಕೆ 100 ಗ್ರಾಂ ಸಕ್ಕರೆ ಆರೋಗ್ಯವಂತ ವಯಸ್ಕರಿಗೆ ಸಾಕಾಗುತ್ತದೆ ಎಂಬುದು ತಜ್ಞರ ಅಂದಾಜು. ಒಂದೇ ಕಪ್ ಬಬಲ್ ಚಹಾದಿಂದ ಇಷ್ಟೊಂದು ಸಕ್ಕರೆ ಹೊಟ್ಟೆಗೆ ಹೋದರೆ… ಮುಂದೆ?
ಟಪಿಯೋಕ ಗೋಲಿಗಳ ಬಗ್ಗೆ
ಮರಗೆಣಸಿನಿಂದ ಗೋಲಿಗಳ ಮಾದರಿಯಲ್ಲಿ ತಯಾರಿಸಿದ ವಸ್ತುವಿದು. ಸ್ವಲ್ಪ ಅಂಟಾಗಿಯೂ, ಅದೇ ಕಾರಣಕ್ಕಾಗಿ ಎಲ್ಲರಿಗೂ ರುಚಿಸುವ ಈ ಗೋಲಿಗಳು ಪಿಷ್ಟದಿಂದ ಭರ್ತಿಯಾದವು. ಅಪರೂಪಕ್ಕೊಮ್ಮೆ ಇಷ್ಟು ಪ್ರಮಾಣದ ಕಾರ್ಬ್ ಹೊಟ್ಟೆ ಸೇರಿದರೇನೂ ಸಮಸ್ಯೆಯಿಲ್ಲ. ಆದರೆ ನಿಯಮಿತವಾಗಿ ಇದನ್ನು ಕುಡಿಯುವ ಅಭ್ಯಾಸ ಮಾಡಿಕೊಂಡರೆ ಸ್ವಲ್ಪ ಸಮಸ್ಯೆ ಆಗಬಹುದು. ಅತಿ ಕಡಿಮೆ ಪ್ರೊಟೀನ್, ಜೀವಸತ್ವಗಳು ಮತ್ತು ಖನಿಜಗಳು ಇರುವಂಥ ತಿನಿಸಿದು. ಅಂದರೆ, ಸಕ್ಕರೆ ಮತ್ತು ಪಿಷ್ಟವೇ ಈ ಚಹಾದಿಂದ ದೊರೆಯುವ ಮುಖ್ಯ ಪೋಷಕಾಂಶಗಳು. ನಿಯಮಿತವಾಗಿ ಇದನ್ನು ಸೇವಿಸುತ್ತಿದ್ದರೆ ರಕ್ತದಲ್ಲಿ ಸಕ್ಕರೆಯಂಶ ಏರುವ ಅಪಾಯವಿದೆ. ಕ್ರಮೇಣ ಮಧುಮೇಹದಂಥ ಸಮಸ್ಯೆಗಳು ವಕ್ಕರಿಸಿಕೊಳ್ಳುವುದನ್ನು ತಳ್ಳಿಹಾಕಲಾಗದು. ಮಾತ್ರವಲ್ಲ, ರಕ್ತದೊತ್ತಡ ಮತ್ತು ಹೃದ್ರೋಗಗಳ ಅಪಾಯವೂ ತಪ್ಪಿದ್ದಲ್ಲ ಎನ್ನುತ್ತಾರೆ ಆಹಾರ ತಜ್ಞರು
ಇದನ್ನೂ ಓದಿ: Ghee Health Benefits: ಮಳೆಗಾಲದಲ್ಲಿ ಜಾಸ್ತಿ ತುಪ್ಪ ತಿನ್ನಿ; ಏಕೆಂದರೆ