Site icon Vistara News

Burning Feet: ಅಂಗಾಲು ಉರಿಯಲು ಕಾರಣಗಳೇನು? ಇದರಿಂದ ಪಾರಾಗುವುದು ಹೇಗೆ?

Burning Feet

ಅಂಗಾಲು ಉರಿ ಅಂದ್ರೆ ಉರಿ! ಪಾದವೆಲ್ಲಾ ಚುಚ್ಚಿದಂತಾಗಿ ನಿದ್ದೆ ಮಾಡುವುದೇ ಕಷ್ಟವಾಗಿದೆ ಎಂದು ಆತ್ಮೀಯರಲ್ಲಿ ಹೇಳುತ್ತೀರಿ. ಕಾಲಿಗೆ ತಣ್ಣೀರಿನ ಬಟ್ಟೆ ಸುತ್ತಿ, ಕೊಬ್ಬರಿ ಎಣ್ಣೆ ಹಚ್ಚಿ, ಲೋಳೆಸರ ಲೇಪಿಸಿ ಎಂದೆಲ್ಲಾ ಔಷಧಿಗಳ ಸರಮಾಲೆ ಪ್ರಾರಂಭವಾಗುತ್ತದೆ. ಕೆಲವೊಮ್ಮೆ ತಾತ್ಕಾಲಿಕ ಉಪಶಮನ ದೊರೆತರೂ, ಸಮಸ್ಯೆ ನಿವಾರಣೆ ಆಗುವುದಿಲ್ಲ. ಇದು ಮಧುಮೇಹದ (diabetes) ಲಕ್ಷಣ ಎಂಬ ಮಾತು ಕೇಳಿ ವೈದ್ಯರಲ್ಲಿ ಓಡುತ್ತೀರಿ. ಪರೀಕ್ಷೆ ಮಾಡಿ ನೋಡಿದರೆ, ನಿಮ್ಮ ಅದೃಷ್ಟಕ್ಕೆ ಮಧುಮೇಹವಿಲ್ಲ. ಆದರೆ ಅಂಗಾಲು ಉರಿ ಮಾತ್ರ ಕಡಿಮೆಯಾಗುತ್ತಿಲ್ಲ. ಅಲ್ಲಿಗೆ ಬಿಟ್ಟೂಬಿಡದಂತೆ ಕಾಡುವ ಅಂಗಾಲು ಉರಿಗೆ ಮಧುಮೇಹ ಮಾತ್ರವೇ ಕಾರಣವಲ್ಲ ಎಂದಾಯಿತು. ಹಾಗಾದರೆ ಏನೆಲ್ಲಾ ಕಾರಣಗಳಿವೆ?
ಸೂಕ್ಷ್ಮ ಸಂವೇದಕ ನರಗಳಿಗೆ ಆಗುವ ಹಾನಿಯಿಂದ ಉದ್ಭವಿಸುವ ಸಮಸ್ಯೆಯಿದು. ಸಾಮಾನ್ಯವಾಗಿ ಇದಕ್ಕೆ ಮೊದಲ ಕಾರಣವೆಂದು ಮಧುಮೇಹವನ್ನೇ ದೂಷಿಸಲಾಗುತ್ತದೆ. ಅದರಲ್ಲೂ ದೀರ್ಘ ಕಾಲದಿಂದ ಸಕ್ಕರೆ ಕಾಯಿಲೆಯಿದ್ದರೆ ನರಗಳಿಗೆ ಹಾನಿಯಾಗುವ ಸಂಭವ ಹೆಚ್ಚು. ಹಾಗಾಗಿ ಅಂಗಾಲು ಉರಿಗೆ ಮೊದಲ ಕಾರಣವಾಗುವುದು ಮಧುಮೇಹ. ಅದಲ್ಲದಿದ್ದರೆ… ಬೇರೆ ಕಾರಣಗಳು ಹಲವಾರಿವೆ.

ಹೈಪೊಥೈರಾಯ್ಡ್‌

ದೇಹದ ಥೈರಾಯ್ಡ್‌ ಗ್ರಂಥಿ ಕೆಲವೊಮ್ಮೆ ಬೇಕಾದಷ್ಟು ಚೋದಕಗಳನ್ನು ಸ್ರವಿಸುವುದಿಲ್ಲ. ಕಡಿಮೆ ಅಥವಾ ಹೆಚ್ಚೂ ಸ್ರವಿಸಬಹುದು. ಈ ಎರಡೂ ಸಂದರ್ಭಗಳಲ್ಲಿ ಬೇರೆಯದೇ ರೀತಿಯ ತೊಂದರೆಗಳು ದೇಹದಲ್ಲಿ ಕಾಣಿಸಿಕೊಳ್ಳುತ್ತವೆ. ಥೈರಾಯ್ಡ್‌ ಸ್ರವಿಸುವಿಕೆ ಕಡಿಮೆ ಇದ್ದರೆ (Hypothyroidism) ಹೀಗೆ ಕಾಲಿನ ತೊಂದರೆಗಳು ಬರಬಹುದು. ಹಾರ್ಮೋನುಗಳ ಸಮತೋಲನ ಇಲ್ಲದಿದ್ದರೂ ನರಗಳಿಗೆ ಹಾನಿಯಾಗುವ ಸಾಧ್ಯತೆಯಿದೆ.

ಸೋಂಕುಗಳು

ಕೆಲವು ಮಾರಕ ಸೋಂಕುಗಳಿಂದಲೂ ನರಗಳಿಗೆ ಹಾನಿಯಾಗುವ ಸಂಭವವಿದೆ. ಸಿಫಿಲಿಸ್‌, ಎಚ್‌ಐವಿಯಂಥ ಗಂಭೀರ ಸೋಂಕುಗಳು ನರವ್ಯೂಹವೂ ಸೇರಿದಂತೆ ದೇಹದ ಹಲವು ವ್ಯವಸ್ಥೆಗಳನ್ನು ಹಾಳು ಮಾಡುತ್ತವೆ. ಅವುಗಳಿಂದಾಗಿ ಪಾದಗಳಲ್ಲಿ, ಅಂಗಾಲಲ್ಲಿ ಉರಿ ಕಾಡುವ ಸಾಧ್ಯತೆಯಿದೆ.

ವಿಟಮಿನ್‌ ಬಿ12 ಕೊರತೆ

ಸಂಪೂರ್ಣ ಸಸ್ಯಾಹಾರವನ್ನೇ ಸೇವಿಸುವವರಲ್ಲಿ ಕಾಣುವ ದೋಷಗಳಲ್ಲಿ ವಿಟಮಿನ್‌ ಬಿ೧೨ ಕೊರತೆಯೂ ಒಂದು. ಇದರಿಂದಲೂ ಪಾದಗಳ ಉರಿ ಬೆನ್ನು ಹತ್ತಬಹುದು. ಅದಲ್ಲದೆ, ವಿಟಮಿನ್‌ ಬಿ೧ ಮತ್ತು ವಿಟಮಿನ್‌ ಬಿ೬ ಅಂಶಗಳು ದೇಹದಲ್ಲಿ ಅಧಿಕವಾದರೂ ಕಾಡುವ ಸಮಸ್ಯೆಯಿದು. ಹಾಗಾಗಿ ಈ ಬಗ್ಗೆ ವೈದ್ಯರಲ್ಲೇ ಕೇಳುವುದು ಒಳಿತು.

ಆಟೊಇಮ್ಯೂನ್‌ ರೋಗಗಳು

ನಮ್ಮ ದೇಹದ ಅಂಗಾಂಗಗಳನ್ನೇ ಶತ್ರುಗಳೆಂದು ತಿಳಿದು ನಮ್ಮದೇ ದೇಹದ ಪ್ರತಿರೋಧಕ ಶಕ್ತಿಯು ದಾಳಿ ಮಾಡುವಂಥ ತೊಂದರೆಯಿದು. ಇಂಥ ಸಂದರ್ಭಗಳಲ್ಲಿ ದೇಹದ ಕೀಲುಗಳು, ಚರ್ಮ, ನರಗಳಿಗೆಲ್ಲಾ ಹಾನಿ ಉಂಟಾಗುವ ಸಾಧ್ಯತೆಯನ್ನು ತಳ್ಳಿಹಾಕಲಾಗದು. ಇದರಿಂದಲೂ ಸೂಕ್ಷ್ಮ ನರಗಳಿಗೆ ತೊಂದರೆಯಾಗಿ, ಕಾಲುರಿ ಬರುವ ಸಂಭವವಿದೆ.

ಆಲ್ಕೋಹಾಲ್‌

ಸುಮ್ಮನಿರಲಾರದೆ ಮೈಯೆಲ್ಲಾ ಇರುವ ಬಿಟ್ಟುಕೊಂಡವರ ಕತೆಯಿದು. ಬೇರಾವ ರೋಗ, ಸಮಸ್ಯೆಗಳ ಬಾಧೆ ಇಲ್ಲದಿದ್ದಾಗ ಚಟಗಳನ್ನಾದರೂ ಅಂಟಿಸಿಕೊಂಡು ಆರೋಗ್ಯ ಹಾಳುಗಳೆಯುವ ಉತ್ಸಾಹ ಅಗತ್ಯವಿಲ್ಲ. ಮದ್ಯದಲ್ಲಿರುವ (ನೀರಲ್ಲಿ ಇರಬಹುದಾದ) ಟಾಕ್ಸಿನ್‌ ಮತ್ತು ಆರ್ಸೆನಿಕ್‌ ಅಂಶಗಳಿಂದಲೂ ಕಾಲಿನ ಉರಿ ಬರುವ ಸಾಧ್ಯತೆಯಿದೆ. ಮದಿರೆಯ ಮೇಲೆ ಕಡಿವಾಣ ಅಗತ್ಯ.

ಕಿಡ್ನಿ ಸಮಸ್ಯೆ

ದೇಹಕ್ಕೆ ಅನಗತ್ಯವಾದ ಅಂಶಗಳು ಸರಿಯಾಗಿ ಹೊರಗೆ ಹೋಗದಿದ್ದರೆ, ಮೂತ್ರಪಿಂಡದ ಆರೋಗ್ಯದ ಬಗ್ಗೆ ಅನುಮಾನ ಬರುವುದು ಸಹಜ. ಕಿಡ್ನಿಯ ತೊಂದರೆ ರಕ್ತದಲ್ಲಿ ಅನಗತ್ಯ ಅಂಶಗಳು ಹೆಚ್ಚುತ್ತವೆ. ಈ ಸಂದರ್ಭದಲ್ಲೂ ಕಾಲಿನ ಉರಿ ಕಾಣಬಹುದು. ಆದರೆ ಇಂಥ ಪ್ರಕರಣಗಳಲ್ಲಿ ಉರಿಯೊಂದಿಗೆ ನೋವು ಬರುವ ಸಂಭವವೂ ಇರುತ್ತದೆ.

ಆಥ್ಲೀಟ್‌ ಪಾದ

ಇದೊಂದು ರೀತಿಯ ಫಂಗಸ್‌ ಸೋಂಕು. ಇದರಿಂದ ಪಾದದ ತ್ವಚೆ ಒಣಗಿ, ಚರ್ಮದ ಹುರುಪೆ ಎದ್ದು ಬರುವಂತಾಗುತ್ತದೆ. ಚರ್ಮದ ಬಣ್ಣ ಬಿಳಿಯಾಗಿಯೂ ಕಾಣಬಹುದು. ಇಂಥ ಸಮಸ್ಯೆಯೂ ಪಾದಗಳ ಉರಿಗೆ ಕಾರಣವಾಗಬಹುದು.

ಉಪಶಮನ ಹೇಗೆ?

ಇದಕ್ಕೆ ಕಾರಣವೇನು ಎಂಬುದನ್ನು ಅರಿಯುವುದಕ್ಕೆ ವೈದ್ಯರಲ್ಲಿಗೆ ಹೋಗುವುದೇ ಸರಿಯಾದ ಕ್ರಮ. ಆದರೆ ಕೆಲವು ಆರೈಕೆಗಳು ಇದರಿಂದ ತಾತ್ಕಾಲಿಕ ಉಪಶಮನ ನೀಡಬಲ್ಲವು. ಇವು ಸಮಸ್ಯೆಗೆ ಮದ್ದಲ್ಲದಿದ್ದರೂ, ಚುಚ್ಚುವ ಉರಿ ಮತ್ತು ಕಿರಕಿರಿಯನ್ನು ಕಡಿಮೆ ಮಾಡಲು ನೆರವಾಗುತ್ತವೆ.

ಇದನ್ನೂ ಓದಿ: Health Tips: ಅಧಿಕ ರಕ್ತದೊತ್ತಡವನ್ನು ಕಡಿಮೆಗೊಳಿಸಬೇಕೇ? ಹಾಗಿದ್ದರೆ ಇಲ್ಲಿವೆ ಪೇಯಗಳು!

Exit mobile version