ಮಹಿಳೆ ಎಲ್ಲ ರಂಗಗಳಲ್ಲೂ ಪುರುಷರಿಗೆ ಸರಿಸಮನಾಗಿ ನಿಂತಿದ್ದರೂ, ಆರೋಗ್ಯದ ವಿಚಾರಕ್ಕೆ ಬಂದರೆ, ಆಕೆಗೆ ಜೀವನದುದ್ದಕ್ಕೂ ಕಾಡುವ ಸಮಸ್ಯೆ ಎಂದರೆ ಅದು ಕ್ಯಾಲ್ಶಿಯಂ ಕೊರತೆ. ಆಗಾಗ ನಿಯಮಿತವಾಗಿ ಪೋಷಕಾಂಶಗಳ ಕೊರತೆಯ ಪರೀಕ್ಷೆ ಇತ್ಯಾದಿಗಳನ್ನು ಮಾಡುತ್ತಲೇ ಇದ್ದರೆ ಹಾಗೂ ಈ ಪೋಷಕಾಂಶಗಳನ್ನು ಒದಗಿಸುವ ಸಂಪೂರ್ಣ ಆಹಾರ ಸೇವನೆಯತ್ತ ಮಹಿಳೆ ಗಮನ ಹರಿಸಿದರೆ ಮಾತ್ರ ಆಕೆಯ ಆರೋಗ್ಯ ಸರಿಯಾದ ಹಾದಿಯಲ್ಲಿರುತ್ತದೆ. ಮಹಿಳೆ ಜೀವನದುದ್ದಕ್ಕೂ ದೈಹಿಕವಾಗಿಯೂ ಹಲವು ಮಜಲುಗಳನ್ನು ದಾಟಬೇಕಾಗಿರುವುದರಿಂದ, ಋತುಚಕ್ರ, ಹೆರಿಗೆ ಇತ್ಯಾದಿಗಳೂ ಆಕೆಯ ಜೀವನ ಬಹುಮುಖ್ಯ ಘಟ್ಟಗಳಾಗಿರುವುದರಿಂದ ಆಕೆ ಕ್ಯಾಲ್ಶಿಯಂ ಸೇರಿದಂತೆ ಪೋಷಕಾಂಶಯುಕ್ತ ಆಹಾರದ ಬಗ್ಗೆ ಸಹಜವಾಗಿಯೇ ಪುರುಷರಿಗಿಂತಲೂ ಹೆಚ್ಚು ಗಮನ ಹರಿಸಲೇಬೇಕು. ಮನೆಯ ಜವಾಬ್ದಾರಿ, ಮಕ್ಕಳು, ಮನೆಯವರ ಯೋಗಕ್ಷೇಮ, ಅವರ ಆಹಾರ, ತನ್ನ ವೃತ್ತಿ, ತನ್ನ ಜವಾಬ್ದಾರಿಗಳನ್ನು ನಿಭಾಯಿಸುವ ಹೊತ್ತಿನಲ್ಲಿ ಆಕೆ ತನ್ನ ಆರೋಗ್ಯದ ಕಾಳಜಿಯನ್ನೇ ಮರೆಯುತ್ತಾಳೆ (Health Tips for Women) ಎಂಬುದು ಖೇದಕರ. ಆದರೆ, ನಲುವತ್ತರ ನಂತರ, ಮೆನೋಪಾಸ್ ಅವಧಿಯಲ್ಲಿ ಆಕೆಯನ್ನು ನಿಃಶಕ್ತಿ ಕಾಡುತ್ತದೆ. ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತದೆ.
ಮಹಿಳೆಗೆ ಪುರುಷರಿಗಿಂತ ಹೆಚ್ಚು ಕ್ಯಾಲ್ಶಿಯಂ ಬೇಕು
ಬಹಳಷ್ಟು ಮಹಿಳೆಯರು ನಲುವತ್ತು ದಾಟಿದ ತಕ್ಷಣ ಒಂದೊಂದೇ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವುದನ್ನು ಗಮನಿಸಿರಬಹುದು. ಆತ್ಮವಿಶ್ವಾಸ, ಕಿಚ್ಚು, ಬೆಟ್ಟದಷ್ಟು ಕೆಲಸ, ಜವಾಬ್ದಾರಿಗಳು ಇದ್ದರೂ, ಅದನ್ನು ನಿಭಾಯಿಸುವ ಆತ್ಮಸ್ಥೈರ್ಯ ಇದ್ದರೂ ದೇಹ ಮೊದಲಿನಂತೆ ಇಲ್ಲ ಎನ್ನುವುದು ಅರಿವಾಗತೊಡಗುತ್ತದೆ. ಒಂದು ಲೋಟ ಹಾಲು ಕುಡಿದು ಕ್ಯಾಲ್ಶಿಯಂ ನನ್ನ ದೇಹ ಸೇರಿತು ಎಂದುಕೊಂಡರೆ ಸಾಲದು. ವಯಸ್ಸಾಗುತ್ತಾ ಆಗುತ್ತಾ ಮಹಿಳೆ ತನ್ನ ಕ್ಯಾಲ್ಶಿಯಂ ಸೇವನೆಯನ್ನು ಹೆಚ್ಚು ಮಾಡಬೇಕಾಗುತ್ತದೆ. ಪುರುಷರಿಗಿಂತಲೂ ಮೊದಲೇ ಮಹಿಳೆ ತನ್ನ ಕ್ಯಾಲ್ಶಿಯಂ ಸೇವನೆಯ ಪ್ರಮಾಣ ಹೆಚ್ಚಿಸಬೇಕಾಗುತ್ತದೆ. ಮಹಿಳೆಯ ಹಾರ್ಮೋನು ಇಸ್ಟ್ರೋಜನ್ ಇಳಿಕೆಯಾಗುತ್ತಾ ಬರುತ್ತಿದ್ದಂತೆ ಆಕೆಯ ಮೂಳೆ ಸವೆಯುವುದು ಹೆಚ್ಚಾಗುತ್ತದೆ. ಹೈಪೋಥೈರಾಯ್ಡಿಸಂ ಕೂಡಾ ಕ್ಯಾಲ್ಶಿಯಂ ಕೊರತೆಗೆ ಕಾರಣವಾಗುತ್ತದೆ. ಆಗಾಗ ಪರೀಕ್ಷೆ ಮಾಡಿಸಿಕೊಂಡು, ವೈದ್ಯರ ಸಲಹೆಯಿದ್ದರೆ, ಕ್ಯಾಲ್ಶಿಯಂ ಸಪ್ಲಿಮೆಂಟ್ ಸೇವನೆ ಮಾಡುವುದನ್ನೂ ಪರಿಗಣಿಸಬೇಕು. ನಿತ್ಯವೂ ಕ್ಯಾಲ್ಶಿಯಂಯುಕ್ತ ಸಂಪೂರ್ಣ ಆಹಾರ ಸೇವನೆ ಮಾಡಬೇಕು. ಅಧ್ಯಯನಗಳ ಪ್ರಕಾರ, ಪ್ರತಿ 50 ದಾಟಿದ ಮಹಿಳೆಗೆ ಪ್ರತಿದಿನ 1200 ಮಿಲಿಗ್ರಾಂಗಳಷ್ಟು ಕ್ಯಾಲ್ಶಿಯಂ ಬೇಕಾಗುತ್ತದಂತೆ. ೫೦ರೊಳಗಿನ ಮಹಿಳೆಗೆ ಸುಮಾರು 1000 ಮಿಲಿಗ್ರಾಂಗಳ ಕ್ಯಾಲ್ಶಿಯಂ ಅಗತ್ಯವಿದೆ. ಆದರೆ, ಪುರುಷರಿಗೆ 1200 ಮಿಲಿಗ್ರಾಂ ಕ್ಯಾಲ್ಶಿಯಂ 70 ದಾಟಿದ ಮೇಲೆ ತೆಗೆದುಕೊಂಡರೆ ಸಾಕಾಗುತ್ತದೆ. ಅಂದರೆ, ಮಹಿಳೆ ಪುರುಷರಿಗಿಂತ 20 ವರ್ಷಗಳಷ್ಟು ಮೊದಲೇ ಆ ಪ್ರಮಾಣವನ್ನು ಸೇವಿಸಬೇಕು ಎಂದಾಯಿತು.
ಕಾರಣ ಏನು?
ಕ್ಯಾಲ್ಶಿಯಂ ಕೊರತೆಯೊಂದೇ ನಿಮ್ಮ ಆರೋಗ್ಯದ ಸಮಸ್ಯೆಗೆ ಕಾರಣವಾಗಿರಲಾರದು. ಕ್ಯಾಲ್ಶಿಯಂ ಕೊರತೆಗೂ ಕಾರಣ ಬೇರೆ ಇರಬಹುದು ಎಂಬುದು ನಿಮಗೆ ಗೊತ್ತಿರಬೇಕು. ಉದಾಹರಣೆಗೆ ವಿಟಮಿನ್ ಡಿ, ಫಾಸ್ಪರಸ್, ಮೆಗ್ನೀಶಿಯಂನ ಕೊರತೆಯೂ ಕ್ಯಾಲ್ಶಿಯಂನ ಹೀರುವಿಕೆಯ ಮೇಲೆ ಪರಿಣಾಮ ಬೀರಬಹುದು. ನೀವು ಸಮರ್ಪಕವಾಗಿ ಕ್ಯಾಲ್ಶಿಯಂಯುಕ್ತ ಆಹಾರ ಸೇವಿಸುತ್ತಿದ್ದರೂ, ಈ ತೊಂದರೆಗಳಿಂದಾಗಿ ದೇಹ ಅದನ್ನು ಸಮರ್ಪಕವಾಗಿ ಹೀರಿಕೊಳ್ಳದೇ ಇರಬಹುದು. ವಯಸ್ಸಾಗುವಿಕೆ, ಮೆನೋಪಾಸ್, ಕ್ಯಾಲ್ಶಿಯಂ ಅನ್ನು ದೇಹ ಸರಿಯಾಗಿ ಹೀರಿಕೊಳ್ಳಲು ಸಾಧ್ಯವಾಗದೇ ಇರುವುದು, ಬೇರೆ ಆರೋಗ್ಯ ಸಮಸ್ಯೆಗಳಿಗಾಗಿ ತೆಗೆದುಕೊಳ್ಳುವ ಔಷಧಿಗಳು, ಸರಿಯಾಗಿ ಕ್ಯಾಲ್ಶಿಯಂಯುಕ್ತ ಆಹಾರ ಸೇವನೆ ಮಾಡದೆ ಇರುವುದು ಇತ್ಯಾದಿಗಳೂ ಕ್ಯಾಲ್ಶಿಯಂ ಕೊರತೆಯ ಸಮಸ್ಯೆಗಳನ್ನು ಹುಟ್ಟುಹಾಕಬಹುದು. ಮಾಂಸಖಂಡಗಳ ಸೆಳೆತ, ತಲೆಸುತ್ತು, ನಿಃಶಕ್ತಿ, ಒಣ ತ್ವಚೆ, ಮುರಿಯುವ ಉಗುರುಗಳು, ಹಲ್ಲು ಹುಳುಕಾಗುವುದು, ಋತುಚಕ್ರಪೂರ್ವ ಸಮಸ್ಯೆಗಳು, ತಡವಾಗಿ ಋತುಮತಿಯಾಗುವುದು, ನಿದ್ರಾಹೀನತೆ ಇವೆಲ್ಲವೂ ಕ್ಯಾಲ್ಶಿಯಂ ಕೊರತೆಯಿಂದ ಇರಬಹುದಾದ ಸಮಸ್ಯೆಗಳು. ಇವಿಷ್ಟೇ ಅಲ್ಲ, ಮಹಿಳೆಯರು, ಮಾನಸಿಕ ಖಿನ್ನತೆ, ಮೂಳೆ ಸವೆತ, ಗಂಟು ನೋವು, ಹೃದಯದ ಸಮಸ್ಯೆ, ರಕ್ತದೊತ್ತಡ ಏರುಪೇರು ಮತ್ತಿತರ ಸಮಸ್ಯೆಗಳೂ ಕೂಡಾ ಕ್ಯಾಲ್ಶಿಯಂನ ಕೊರತೆಯಿಂದ ಬರಬಹುದು ಎಂಬುದನ್ನು ನೆನಪಿಡಿ.