Site icon Vistara News

Benefits Of Cocoa: ಚಾಕೊಲೇಟ್‌ ತಿಂದೂ ಆರೋಗ್ಯ ಹೆಚ್ಚಿಸಿಕೊಳ್ಳಬಹುದೇ? ಇದು ಸಾಧ್ಯ!

Benefits Of Cocoa

ಚಾಕೊಲೇಟ್‌ ಇಷ್ಟವಿಲ್ಲ ಎಂದವರನ್ನು ನೋಡಿದ್ದೀರಾ? ಹಾಗೊಮ್ಮೆ ಯಾರಾದರೂ ಇದ್ದರೆ, ಅವರನ್ನು ಮನುಷ್ಯರೆಂದು ಗಣಿಸುವುದೇ ಕಷ್ಟ! ಕಾರಣ, ಚಾಕಲೇಟ್‌ ಎಂದರೆ ಎಲ್ಲರಿಗೂ ಅಷ್ಟೊಂದು ಇಷ್ಟ. ಇಷ್ಟೊಂದು ಪ್ರಿಯವಾದ್ದನ್ನು ಮೆಲ್ಲುವುದಕ್ಕೆ ಕಾರಣಗಳೇ ಬೇಕಿಲ್ಲ. ಹುಟ್ಟಿದ ದಿನಕ್ಕೆಂದು ಮಕ್ಕಳು ನೀಡುವ ಪುಟ್ಟ ಸಿಹಿಯಾಗಲೀ, ಯಾರೋ ತಂದು ಕೊಟ್ಟ ವಿದೇಶಿ ಚಾಕಲೇಟ್‌ಗಳಾಗಲೀ (Benefits of Cocoa) ಬಾಯಲ್ಲಿಟ್ಟರೆ ಕರಗುವುದು ಖಾತ್ರಿ. ಹಲ್ಲಿರಲಿ, ಇಲ್ಲದಿರಲಿ, ಹಗಲಾಗಲೀ ರಾತ್ರಿಯಿರಲಿ- ಇದನ್ನು ಒಲ್ಲೆ ಎಂದವರಿದ್ದಾರೆಯೇ? ಥೊಯೊಬ್ರೊಮ ಕೊಕೊ ಎಂದರೆ ಹೆಚ್ಚಿನವರಿಗೆ ಅರ್ಥವಾಗುವುದೇ ಇಲ್ಲ. ಬದಲಿಗೆ ಚಾಕೊಲೇಟ್‌ ಎಂದರೆ ಸಾಕು, ಇಂದ್ರಿಯಗಳೆಲ್ಲ ಚುರುಕಾಗುತ್ತವೆ. ಆದರೆ ಚಾಕಲೇಟ್‌ ತಿಂದರೆ ತೂಕ ಹೆಚ್ಚುತ್ತದೆ, ಹಲ್ಲು ಹಾಳಾಗುತ್ತದೆ ಮುಂತಾದ ಹಲವು ಕೊಸರುಗಳು ಇದಕ್ಕೆ ಅಂಟಿಕೊಂಡೇ ಬರುತ್ತವೆ. ಹೌದು ಅತಿಯಾದರೆ ಎಲ್ಲದೂ ಸಮಸ್ಯೆಯೇ. ಹಾಗೆಂದು ಸಣ್ಣ ಪ್ರಮಾಣದಲ್ಲಿ, ಮಿತಿಯಲ್ಲಿ ಮೆಲ್ಲುತ್ತಿದ್ದರೆ ಚಾಕಲೇಟ್‌ ಸಹ ಆರೋಗ್ಯಕ್ಕೆ ಲಾಭ ತಂದೀತು. ಏನೆಂಬ ಕುತೂಹಲವೇ?

ಉತ್ಕರ್ಷಣ ನಿರೋಧಕಗಳು

ಕೊಕೊ ನಮಗೆ ಬೇಕಾಗುವುದು ಇದರಲ್ಲಿರುವ ಉತ್ಕರ್ಷಣ ನಿರೋಧಕಗಳಿಗಾಗಿ. ಇದರಲ್ಲಿರುವ ಪಾಲಿಫೆನೋಲ್‌ಗಳು ಮತ್ತು ಫ್ಲೆವನಾಯ್ಡ್‌ಗಳು ಉರಿಯೂತ ತಗ್ಗಿಸುತ್ತವೆ. ಆದರೆ ಸಿಹಿ ಸೇರಿದ ಚಾಕಲೇಟ್‌ಗಿಂತ ಸಿಹಿ ಇಲ್ಲದ ಅಥವಾ ಕಡಿಮೆ ಇರುವ ಕಪ್ಪು ಚಾಕಲೇಟ್‌ಗಳು ಈ ನಿಟ್ಟಿನಲ್ಲಿ ಹೆಚ್ಚಿನ ಲಾಭ ತರಬಲ್ಲವು. ಕಾರಣ ಸಕ್ಕರೆಯಂಶ ಉರಿಯೂತವನ್ನು ಹೆಚ್ಚಿಸುತ್ತದೆಯೇ ಹೊರತು ತಗ್ಗಿಸುವುದಿಲ್ಲ. ಆಗ ಕೊಕೊದಲ್ಲಿರುವ ಉಳಿದ ಒಳ್ಳೆಯ ಅಂಶಗಳು ಗೌಣವಾಗಬಹುದು.

ಹೃದಯಕ್ಕೆ ಪೂರಕ

ಹೃದಯದ ಆರೋಗ್ಯ ರಕ್ಷಣೆಯಲ್ಲಿ ಡಾರ್ಕ್‌ ಚಾಕಲೇಟ್‌ಗಳು ಪೂರಕವಾಗಿ ಕೆಲಸ ಮಾಡಬಲ್ಲವು ಎನ್ನುತ್ತವೆ ಹಲವು ಅ‍ಧ್ಯಯನಗಳು. ಕೊಕೊದಲ್ಲಿರುವ ಫ್ಲೆವನಾಯ್ಡ್‌ಗಳು ಹೃದಯದ ಕ್ಷಮತೆಯನ್ನು ಹೆಚ್ಚಿಸಬಲ್ಲವು. ದೇಹದಲ್ಲಿ ಜಮೆಯಾಗಿರುವ ಕೊಲೆಸ್ಟ್ರಾಲ್‌ ಕಡಿಮೆ ಮಾಡಬಲ್ಲವು. ರಕ್ತದೊತ್ತಡ ಹೆಚ್ಚದಂತೆ ಕಾಪಾಡಿ, ರಕ್ತ ಪರಿಚಲನೆಯನ್ನು ಸುಧಾರಿಸಬಲ್ಲವು. ಈ ಕಾರಣಗಳಿಂದಾಗಿ ಸಕ್ಕರೆ ರಹಿತವಾದ, ಡಾರ್ಕ್‌ ಚಾಕಲೇಟನ್ನು ಆಗೀಗ ಮೆಲ್ಲಬಹುದು ಎನ್ನುತ್ತವೆ ಅಧ್ಯಯನಗಳು.

ಮೂಡ್‌ ಸುಧಾರಣೆ

ʻಹ್ಯಾಪಿ ಹಾರ್ಮೋನ್‌ʼ ಎಂದೇ ಕರೆಯಲಾಗುವ ಸೆರೊಟೋನಿನ್‌ ಮತ್ತು ಎಂಡಾರ್ಫಿನ್‌ ಚೋದಕಗಳ ಉತ್ಪಾದನೆಯನ್ನು ದೇಹದಲ್ಲಿ ಪ್ರಚೋದಿಸುವಂಥ ಸಾಮರ್ಥ್ಯ ಕೊಕೊದಲ್ಲಿದೆ. ಉತ್ತಮ ಗುಣಮಟ್ಟದ ಕೊಕೊ ಹೊಂದಿರುವ ಡಾರ್ಕ್‌ ಚಾಕಲೇಟ್‌ಗಳು ಮೂಡ್‌ ಸುಧಾರಿಸಿ, ಸಂತೋಷದ ಭಾವಗಳನ್ನು ಹೆಚ್ಚಿಸಬಲ್ಲವು. ಮನಸ್ಸನ್ನು ಉಲ್ಲಾಸವಾಗಿರಿಸಬಲ್ಲವು.

ಖನಿಜಗಳು ಭರಪೂರ

ಹಲವು ರೀತಿಯ ಖನಿಜಗಳು ಕೊಕೊದಲ್ಲಿ ಸಾಂದ್ರವಾಗಿವೆ. ಅದರಲ್ಲೂ ಮೆಗ್ನೀಶಿಯಂ, ಕಬ್ಬಿಣ ಮತ್ತು ಪೊಟಾಶಿಯಂ ಸತ್ವಗಳು ಭರಪೂರ ಇವೆ. ನರ ಮತ್ತು ಸ್ನಾಯುಗಳ ಕ್ಷಮತೆಗೆ ಮೆಗ್ನೀಶಿಯಂ ಖನಿಜ ಅಗತ್ಯ. ರಕ್ತದಲ್ಲಿನ ಆಮ್ಲಜನಕದ ಮಟ್ಟವನ್ನು ಹೆಚ್ಚಿಸುವಲ್ಲಿ ಕಬ್ಬಿಣ ಮಹತ್ವದ ಕೆಲಸ ಮಾಡಿದರೆ, ರಕ್ತದೊತ್ತಡ ನಿಯಂತ್ರಿಸುವಲ್ಲಿ ಪೊಟಾಶಿಯಂ ಸಹಕಾರಿ. ಹಾಗಾಗಿ ರುಚಿಗಾಗಿ ಒಮ್ಮೊಮ್ಮೆ ಕೊಕೊವನ್ನು ಬಾಯಲ್ಲಿಟ್ಟು ಕರಗಿಸುವುದರಲ್ಲಿ ತಪ್ಪಿಲ್ಲವೇನೊ.

ಮೆದುಳು ಚುರುಕು

ಇದರ ಫ್ಲೆವನಾಯ್ಡ್‌ಗಳು ಮೆದುಳಿನ ಚುರುಕುತನ ಹೆಚ್ಚಿಸುವಲ್ಲಿ ಉಪಯುಕ್ತ ಕೆಲಸವನ್ನು ಮಾಡುತ್ತವೆ. ನೆನಪು ಹೆಚ್ಚಿಸುವಲ್ಲಿ ಮತ್ತು ಕಲಿಯುವಿಕೆಯನ್ನು ಉತ್ತೇಜಿಸುವಲ್ಲಿ ಇವು ನೆರವಾಗುತ್ತವೆ. ಅಲ್‌ಜೈಮರ್ಸ್‌ನಂಥ ಪ್ರಕರಣಗಳಲ್ಲಿ ಕೊಕೊ ಬಳಸಬಹುದೇ ಎಂಬ ಬಗ್ಗೆ ಅಧ್ಯಯನಗಳು ನಡೆಯುತ್ತಿವೆ.
ಆದರೆ ಚಾಕಲೇಟ್‌ನ ಆರೋಗ್ಯಕರ ಲಾಭಗಳನ್ನು ಪಡೆದುಕೊಳ್ಳುವುದಕ್ಕೆ ಚೆನ್ನಾಗಿ ಸಹಿ ಬೆರೆಸಿದ ರುಚಿಕರವಾದವನ್ನು ಆಯ್ದುಕೊಳ್ಳುವುದಲ್ಲ. ಬಾಯಲ್ಲಿಟ್ಟರೆ ಕೊಂಚ ಕಹಿ ಎನಿಸುವ, ಶೇ. 70ಕ್ಕಿಂತ ಹೆಚ್ಚು ಕೊಕೊ ಇರುವ ಡಾರ್ಕ್‌ ಚಾಕಲೇಟ್‌ಗಳು ಈ ನಿಟ್ಟಿನಲ್ಲಿ ಸೂಕ್ತವಾದವು. ಕಹಿಯಾದರೇನು, ಸಿಹಿಯಾದರೇನು, ಬಾಯಲ್ಲಿಟ್ಟರೆ ಕರಗುವುದು ಅದೂನು… ತಿಂದು ನೋಡಬಹುದು.

ಇದನ್ನೂ ಓದಿ: Breast Cancer: ಪುರುಷರಲ್ಲೂ ಸ್ತನ ಕ್ಯಾನ್ಸರ್‌! ಈ ಸಂಗತಿ ತಿಳಿದಿರಲಿ

Exit mobile version