Site icon Vistara News

Carbohydrates | ಪ್ರೊಟೀನೋ… ಕಾರ್ಬೋಹೈಡ್ರೇಟೋ…? ಗೊಂದಲಕ್ಕೆ ಇಲ್ಲಿದೆ ಮದ್ದು!

carbohydrates

ʻʻಎಷ್ಟು ಸಾಧ್ಯವೋ ಅಷ್ಟು ಪ್ರೊಟೀನು ಡಯಟ್‌ ಮಾಡಿದರೆ, ತೂಕ ಇಳಿಯುತ್ತದೆʼʼ ಎಂಬುದೊಂದು ನಂಬಿಕೆ ತೂಕ ಇಳಿಸುವ ಸರ್ಕಸ್ಸು ಮಾಡಿದ ಬಹುತೇಕರಿಗೆ ಇದೆ. ತೂಕ ಇಳಿಸುವ ಪ್ರಕ್ರಿಯೆಗೆ ಪ್ರೊಟೀನು ಫ್ರೆಂಡಾದರೆ, ಕಾರ್ಬೋಹೈಡ್ರೇಟು ಶತ್ರು ಎಂದು ಹೇಳುವವರು ಅನೇಕರು! ಪ್ರೊಟೀನು ತೂಕ ಇಳಿಕೆಯಲ್ಲಿ ಮುಖ್ಯ ಪಾತ್ರ ವಹಿಸುತ್ತದೆ ಎಂಬುದು ನಿಜವಾದರೂ, ಕಾರ್ಬೋಹೈಡ್ರೇಟು ನಿಜಕ್ಕೂ ಶತ್ರುವಾ ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು. ಪ್ರೋಟೀನಿನ ಜೊತೆಗೆ ಬೇರೆ ಎಲ್ಲ ಬಗೆಯ ಪೋಷಕಾಂಶಗಳೂ ದೇಹಕ್ಕೆ ಬೇಕು ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು.

ತೂಕ ಇಳಿಸುವಲ್ಲಿ ಕಾರ್ಬೋಹೈಡ್ರೇಟಿಗಿಂತ ಪ್ರೊಟೀನು ಒಳ್ಳೆಯದು ಎಂಬ ಕುರುಡು ನಂಬಿಕೆಯನ್ನು ಇಂದಿಗೂ ಅಪ್ಪಿಕೊಂಡು ಶಿಸ್ತಾಗಿ ಡಯಟ್ಟು ಮಾಡುವವರೂ ಇದ್ದಾರೆ. ಆದರೆ, ಇಂಥ ಎಡವಟ್ಟುಗಳಿಂದಲೇ ಬಹಳಷ್ಟು ಬಾರಿ ಆರೋಗ್ಯದಲ್ಲಿ ಏರುಪೇರಾಗುತ್ತದೆ. ಏನೋ ಒಂದು ಸಮಸ್ಯೆ ಕಾರಣ ಗೊತ್ತಾಗದೆ ಕಾಡುತ್ತದೆ.

ಉದಾಹರಣೆಗೆ, ಬೇಯಿಸಿದ ಕಾಬೂಲಿ ಕಡಲೆಯೋ, ಮೊಳಕೆ ಕಾಳಿನ ಜೊತೆಗೋ ಫ್ರೆಂಚ್‌ ಫ್ರೈಸನ್ನು ಹೋಲಿಸಿದರೆ ಖಂಡಿತವಾಗಿಯೂ ಇಲ್ಲಿ ಪ್ರೊಟೀನಿನ ಸ್ಥಾನದಲ್ಲಿರುವ ಕಡಲೆ, ಮೊಳಕೆಕಾಳೇ ಫ್ರೆಂಚ್‌ ಫ್ರೈಸ್‌ಗಿಂತ ಒಳ್ಳೆಯದು. ಇಲ್ಲಿ ವಾದದ ಅಗತ್ಯವೇ ಬರುವುದಿಲ್ಲ. ಆದರೆ ಈ ವಾದದ ಮೂಲಕ ಕಾರ್ಬೋಹೈಡ್ರೇಟ್‌ ಒಳ್ಳೆಯದೇ ಅಲ್ಲ ಎಂದು ಹೇಳುವುದು ಮಾತ್ರ ಮೂರ್ಖತನ. ಹಾಗೆ ನೋಡಿದರೆ, ನಮ್ಮೆಲ್ಲಾ ಶಕ್ತಿಯ ಮೂಲ ಇರುವುದೇ ಕಾರ್ಬೋಹೈಡ್ರೇಟಿನಲ್ಲಿ. ನಮ್ಮ ದೇಹ ಹೆಚ್ಚುವರಿ ಕಾರ್ಬೋಹೈಡ್ರೇಟನ್ನು ಗ್ಲೈಕೋಜನ್‌ ರೂಪದಲ್ಲಿ ಶೇಖರಿಸಿಟ್ಟುಕೊಂಡಿರುತ್ತದೆ. ಹಸಿವಿನ ಸಂದರ್ಭ, ದೇಹಕ್ಕೆ ಬೇಕಾದ ಸಂದರ್ಭ ಆಹಾರ ಪೂರೈಕೆಯಾಗದಿದ್ದಾಗ ಈ ಗ್ಲೈಕೋಜನ್‌ ಶಕ್ತಿಯಾಗಿ ಪರಿವರ್ತನೆಗೊಂಡು ಬಳಕೆಯಾಗುತ್ತದೆ. ಕಾರ್ಬೋಹೈಡ್ರೇಟಿನಲ್ಲಿರುವ ನಾರಿನಂಶ ಪಚನಕ್ರಿಯೆಯಲ್ಲಿ ಸಹಾಯ ಮಾಡುತ್ತದೆ. ಇದರಿಂದ ಹೃದಯದ ಕಾಯಿಲೆ ಹಾಗೂ ಮಧುಮೇಹದ ತೊಂದರೆಗಳು ಹತ್ತಿರ ಬರುವುದು ವಿಳಂಬವಾಗುತ್ತದೆ.

ಇದನ್ನೂ ಓದಿ |

ಹಾಗಾಗಿ ಕಾರ್ಬೋಹೈಡ್ರೇಟುಗಳು ನಮ್ಮ ಶತ್ರುವಲ್ಲ. ಆದರೆ ಎಂತಹ ಕಾರ್ಬೋಹೈಡ್ರೇಟನ್ನು ನಾವು ಸೇವಿಸುತ್ತಿದ್ದೇವೆ ಎಂಬುದರ ಬಗ್ಗೆ ಕೊಂಚ ಗಮನ ಹರಿಸುವುದು ಒಳ್ಳೆಯದು. ಉದಾಹರಣೆಗೆ, ದೇಹಕ್ಕೆ ಬಿಸ್ಕೆಟ್‌, ಬ್ರೆಡ್‌ ಹಾಗೂ ಇಂತಹ ರಿಫೈನ್ಡ್‌ ಆಹಾರಗಳ ರೂಪದಲ್ಲೇ ಕಾರ್ಬೋಹೈಡ್ರೇಟುಗಳು ಒಳ ಸೇರುತ್ತಿದ್ದರೆ ಕೊಂಚ ಉತ್ತಮ ಕಾರ್ಬೋಹೈಡ್ರೇಟುಗಳ ಮೂಲಗಳತ್ತ ಗಮನ ಹರಿಸುವುದು ಒಳ್ಳೆಯದು.

ಇದನ್ನೂ ಓದಿ | Visceral fat | ಒಳಾಂಗಗಳಲ್ಲಿ ಅಡಗುವ ಕೊಬ್ಬು ಕರಗಿಸುವುದು ಹೇಗೆ?

ಪ್ರೊಟೀನ್‌ ನಮ್ಮ ದೇಹಕ್ಕೆ ಖಂಡಿತವಾಗಿಯೂ ಬೇಕು. ಆದರೆ ಎಷ್ಟು ಬೇಕು ಎಂಬುದೂ ಬಹಳ ಮುಖ್ಯವಾದ ಪ್ರಶ್ನೆ. ಯಾಕೆಂದರೆ ಪ್ರೊಟೀನು ನಮ್ಮ ದೇಹಕ್ಕೆ ಎಷ್ಟು ಬೇಕು ಎಂಬುದು ನಮ್ಮ ದೈನಂದಿನ ಚಟುವಟಿಕೆಯ ಮೇಲೆ ಅವಲಂಬಿಸಿದೆ. ಒಂದು ಗ್ರಾಂ ಪ್ರೊಟೀನಿನಲ್ಲಿ ನಾಲ್ಕು ಕ್ಯಾಲರಿಗಳಿದ್ದು, ಕಾರ್ಬೋಹೈಡ್ರೇಟೂ ಕೂಡಾ ಇದೇ ಅಳತೆಯ ಶಕ್ತಿಯನ್ನೇ ನಮಗೆ ಕೊಡುತ್ತದೆ. ಆದರೆ, ನಮ್ಮ ದೇಹ ನಮ್ಮಲ್ಲಿರುವ ಎಲ್ಲ ಪ್ರೊಟೀನನ್ನೂ ಬಳಸುವ ಅಗತ್ಯವಿಲ್ಲ ಹಾಗೂ ಪ್ರೊಟೀನಿಗೆ ಬೇರೆ ಸಾಕಷ್ಟು ಕೆಲಸಗಳೂ ಇರುತ್ತದೆ. ಹಾಗಾಗಿ ಕೇವಲ ಪ್ರೊಟೀನನ್ನೇ ಎಲ್ಲದಕ್ಕೂ ಅವಲಂಬಿಸುವುದು ಅಷ್ಟು ಒಳ್ಳೆಯದಲ್ಲ.

ಕಾರ್ಬೋಹೈಡ್ರೇಟುಗಳು ಹಾಗೂ ಕೊಬ್ಬು ಇವೆರಡೂ ನಮ್ಮ ದೇಹಕ್ಕೆ ಬೇಕಾದ ಶಕ್ತಿ ಉತ್ಪಾದಿಸಲು ಒಳ್ಳೆಯ ಮೂಲಗಳು. ಹಾಗಾಗಿ ಇವನ್ನೇ ಮುಖ್ಯ ಇಂಧನವನ್ನಾಗಿ ಮಾಡುವುದು ಒಳ್ಳೆಯದು. ಪ್ರೊಟೀನನ್ನು ದೇಹದ ತೂಕದ ಪ್ರತಿ ಒಂದು ಗ್ರಾಂಗೆ ಒಂದು ಗ್ರಾಂನಂತೆ ಪ್ರೊಟೀನು ತೆಗೆದುಕೊಳ್ಳಬಹುದು. ಇದಕ್ಕಿಂತ ಹೆಚ್ಚು ತೆಗೆದುಕೊಂಡರೆ ಅದು ನಮ್ಮ ದೇಹದ ವಿವಿಧ ಅಂಗಗಳಾದ ಕಿಡ್ನಿ, ಪಿತ್ತಕೋಶ, ಎಲುಬುಗಳ ಮೇಲೆ ವೃಥಾ ಒತ್ತಡ ಬೀಳುತ್ತದೆ ಎಂಬುದನ್ನು ಗಮನದಲ್ಲಿಡುವುದು ಒಳ್ಳೆಯದು.

ಹಾಗಾಗಿ, ಪ್ರೊಟೀನು ಒಳ್ಳೆಯದು ಎಂಬ ಧಾವಂತದ ನಿರ್ಧಾರಗಳ ಮಧ್ಯದಲ್ಲಿ ನಿಮ್ಮ ಕಾರ್ಬೋಹೈಡ್ರೈಟ್‌ ಆಹಾರ ಮೂಲಗಳನ್ನು ಖಂಡಿತ ಕಡೆಗಣಿಸುವುದು ಒಳ್ಳೆದಲ್ಲ. ದಿನಕ್ಕೆ ದೇಹಕ್ಕೆ ೧೨೦ ರಿಂದ ೧೮೦ ಗ್ರಾಂಗಳಷ್ಟು ಕಾರ್ಬೋಹೈಡ್ರೇಟ್‌ ಪ್ರತಿದಿನವೂ ನಿಮ್ಮ ತಟ್ಟೆಯಲ್ಲಿರಲಿ.

ಇದನ್ನೂ ಓದಿ | Kiss benefits | ಮುತ್ತು ಕೊಟ್ಟು ನೀವೂ ಆರೋಗ್ಯವಾಗಿರಿ! ನಿಮ್ಮವರನ್ನೂ ಆರೋಗ್ಯವಾಗಿರಿಸಿ!

Exit mobile version