Site icon Vistara News

Cardamom Benefits: ಏಲಕ್ಕಿ ಕೇವಲ ಘಮದಲ್ಲಷ್ಟೇ ಅಲ್ಲ, ಇದರ ಪ್ರಯೋಜನಗಳು ಎಷ್ಟೊಂದು!

Cardamom Benefits

ಮಸಾಲೆಗಳ ರಾಣಿ ಎಂದೇ ಹೆಸರಾದ ಏಲಕ್ಕಿಗೆ ಒಂದು ಅಪರೂಪದ ಘಮವಿದೆ. ತನ್ನ ಘಮದ ಮೂಲಕ ಯಾವುದೇ ಆಹಾರವನ್ನು ಕ್ಷಣ ಮಾತ್ರದಲ್ಲಿ ತನ್ನತನವನ್ನು ಅದಕ್ಕೆ ಕೊಡುವ ಶಕ್ತಿಯಿದೆ. ಯಾವುದೇ ಆಹಾರ ತಯಾರಿಸುವ ಸಂದರ್ಭ ಚಿಟಿಕೆ ಏಲಕ್ಕಿಯನ್ನು ಅದಕ್ಕೆ ಹಾಕಿದರೂ ಸಾಕು, ಅದು ಏಲಕ್ಕಿಯ ಘಮವನ್ನು ಪಡೆದುಕೊಂಡುಬಿಡುತ್ತದೆ. ಅದಕ್ಕಾಗಿಯೇ, ಇದು ಸಿಹಿತಿಂಡಿಗಳಿಗೆ ಹೇಳಿ ಮಾಡಿಸಿದ ಮಸಾಲೆ. ಒಂದು ಚಿಟಿಕೆ ಏಲಕ್ಕಿ ಹಾಕಿದ ಪಾಯಸದ ರುಚಿಯೇ ಬೇರೆ. ಆದರೆ, ಏಲಕ್ಕಿ, ಕೇವಲ ತನ್ನ ಘಮದಲ್ಲಷ್ಟೇ ಶ್ರೀಮಂತಿಕೆ ಮೆರೆದಿಲ್ಲ. ಗುಣದಲ್ಲೂ ಏಲಕ್ಕಿ ಶ್ರೀಮಂತಿಕೆಯಲ್ಲಿ ಯಾವುದಕ್ಕೂ ಕಡಿಮೆಯಿಲ್ಲ. ಬನ್ನಿ, ಏಲಕ್ಕಿಯ ಆರೋಗ್ಯಕರ ಲಾಭಗಳನ್ನು (cardamom benefits) ತಿಳಿಯೋಣ.

ರಕ್ತದೊತ್ತಡಕ್ಕೆ ಪರಿಹಾರ

ಅಧಿಕ ರಕ್ತದೊತ್ತಡ ಇರುವ ಮಂದಿಗೆ ಏಲಕ್ಕಿಯಿಂದ ಲಾಭಗಳಿವೆ. ಒಂದು ಸಂಶೋಧನೆಯ ಪ್ರಕಾರ, ಅಧಿಕ ರಕ್ತದೊತ್ತಡ ಸಮಸ್ಯೆ ಆರಂಭವಾದ 20 ಮಂದಿಗೆ ಪ್ರತಿದಿನ ಮೂರು ಗ್ರಾಂಗಳಷ್ಟು ಏಲಕ್ಕಿ ಪುಡಿ ಪ್ರತಿಯೊಬ್ಬರೂ ಸೇವಿಸದಾಗ 12 ವಾರಗಳಲ್ಲೇ ಅವರ ರಕ್ತದೊತ್ತಡ ಸಮತೋಲನಕ್ಕೆ ಬಂದಿರುವುದು ಸಾಬೀತಾಗಿದೆ. ಇದಕ್ಕೆ ಕಾರಣ, ಏಲಕ್ಕಿಯಲ್ಲಿರುವ ಆಂಟಿ ಆಕ್ಸಿಡೆಂಟ್‌ಗಳು.

ಜೀರ್ಣಕಾರಿ ಗುಣಗಳಿವೆ

ಏಲಕ್ಕಿಯಲ್ಲಿ ಜೀರ್ಣಕಾರಿ ಗುಣಗಳಿವೆ. ಏಲಕ್ಕಿಯಲ್ಲಿರುವ ಮೆಂಥೋನ್‌ ಎಂಬ ಎಣ್ಣೆಯಂಶಕ್ಕೆ ಜೀರ್ಣಕ್ರಿಯೆಗೆ ಸಹಾಯ ಮಾಡುವ ಗುಣವಿದೆ. ಇದು ಅಸಿಡಿಟಿ, ಅಜೀರ್ಣ ಹಾಗೂ ಹೊಟ್ಟೆ ನೋವಿನಂಥ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತದೆ. ಇದಕ್ಕೆ ಜೀರ್ಣಕ್ರಿಯೆಯನ್ನು ಪ್ರಚೋದಿಸುವ ಗುಣವಿದೆ.

ವಾಂತಿಗೆ ಪರಿಹಾರ

ಏಲಕ್ಕಿಯಲ್ಲಿ ವಾಂತಿ ಹಾಗೂ ತಲೆಸುತ್ತಿನಂಥ ಸಮಸ್ಯೆಗೆ ಪರಿಹಾರವಿದೆ. ವಾಂತಿಯಾದ ಮೇಲೆ ಆಗುವ ಗಂಟಲಿನ ಹುಳಿ ರುಚಿಯಂಥ ಕಿರಿಕಿರಿ ಗಂಟಲು ಕೆರೆತದ ಭಾವಕ್ಕೆ ಏಲಕ್ಕಿ ಒಳ್ಳೆಯ ಪರಿಹಾರ. ಅಷ್ಟೇ ಅಲ್ಲ, ಪ್ರಯಾಣದಲ್ಲಿ ಆಗುವ ವಾಂತಿಯಂಥ ಸಮಸ್ಯೆಗೂ ಏಲಕ್ಕಿಯನ್ನು ಬಾಯಲ್ಲಿ ಇಟ್ಟುಕೊಳ್ಳುವುದರಿಂದ ಈ ಸಮಸ್ಯೆಗೆ ಪರಿಹಾರ ಸಿಗುತ್ತದೆ.

ಹಲ್ಲು ನೋವು ನಿವಾರಣೆ

ಏಲಕ್ಕಿಯಲ್ಲಿ ಆಂಟಿ ಸೆಪ್ಟಿಕ್‌ ಹಾಗೂ ಆಂಟಿ ಮೈಕ್ರೋಬಿಯಲ್‌ ಗುಣಗಳಿವೆ. ಇದರಿಂದಾಗಿ ಇದು ಹಲ್ಲಿನ ಸಮಸ್ಯೆಗಳಿಗೆ ಒಳ್ಳೆಯದು. ಏಲಕ್ಕಿಯಲ್ಲಿರುವ ಎಣ್ಣೆಯ ಅಂಶ ಹಲ್ಲು ನೋವಿಗೆ ಒಳ್ಳೆಯ ಔಷಧಿ. ಯಾಕೆಂದರೆ ಇದರಲ್ಲಿರುವ ಆಂಟಿ ಸೆಪ್ಟಿಕ್‌ ಗುಣವು ಕ್ಯಾವಿಟಿಗೆ ಬಹಳ ಒಳ್ಳೆಯದು. ಅಷ್ಟೇ ಅಲ್ಲ, ಹಲ್ಲು ಹುಳುಕಾಗುವುದನ್ನೂ ಇದು ತಡೆಯುತ್ತದೆ.

ಶೀತ ಬಾಧೆ ನಿವಾರಣೆ

ಶೀತ ಹಾಗೂ ನೆಗಡಿಗೂ ಏಲಕ್ಕಿ ಒಳ್ಳೆಯದು ಎಂದರೆ ನಂಬುತ್ತೀರಾ? ಹೌದು, ನಂಬಲೇಬೇಕು. ಏಲಕ್ಕಿಯಲ್ಲಿರುವ ವಿಶೇಷ ಗುಣವು ಕಫ ಕಟ್ಟುವುದನ್ನು ತಡೆಯುತ್ತದೆ. ಇದು ಶ್ವಾಸಕೋಶದಲ್ಲಿ ರಕ್ತ ಪರಿಚಲನೆಯನ್ನು ಚುರುಕಾಗಿಸುತ್ತದೆ. ಇದರಿಂದ ಉಸಿರಾಟದ ಗತಿಯೂ ಚುರುಕಾಗುತ್ತದೆ.

ಅತ್ಯುತ್ತಮ ಡಿಟಾಕ್ಸ್‌

ಏಲಕ್ಕಿ ಅತ್ಯುತ್ತಮ ಡಿಟಾಕ್ಸ್‌ ಕೂಡಾ ಹೌದು. ಇದು ರಕ್ತದಲ್ಲಿರುವ ವಿಷಕಾರಿ ಅಂಶವನ್ನು ದೇಹದಿಂದ ಹೊರಕ್ಕೆ ಕಳುಹಿಸುತ್ತದೆ. ಏಲಕ್ಕಿಯಲ್ಲಿರುವ ಏಸೆನ್ಶಿಯಲ್ ಆಯಿಲ್‌ ಹಾಗೂ ಫೈಟೋಕೆಮಿಕಲ್‌ಗಳಲ್ಲಿ ಡಿಟಾಕ್ಸ್‌ ಗುಣವಿದೆ.

ನಿಕೋಟಿನ್‌ನಿಂದ ಹೊರ ಬರಲು ಮದ್ದು

ನಿಕೋಟಿನ್‌ ಚಟಕ್ಕೆ ಬಿದ್ದ ಮಂದಿ, ಇದರಿಂದ ಹೊರಬರುವ ಇಚ್ಛೆಯಿದ್ದರೆ ನೈಸರ್ಗಿಕ ಉಪಾಯ ಎಂದರೆ ಅದು ಏಲಕ್ಕಿ. ಏಲಕ್ಕಿಯನ್ನು ದಿನಕ್ಕೆ ನಾಲ್ಕೈದು ಬಾರಿ ಜಗಿಯುವ ಮೂಲಕ ನಿಕೋಟಿನ್‌ ಬಯಕೆಯನ್ನು ನಿಧಾನವಾಗಿ ಹತ್ತಿಕ್ಕಬಹುದು. ಖಿನ್ನತೆಯಂತ ಸಮಸ್ಯೆ ಇರುವ ಮಂದಿಯ ನಿದ್ದೆಗೂ ಇದು ಒಳ್ಳೆಯದು.

ಕ್ಯಾನ್ಸರ್‌ ವಿರೋಧಿ ಗುಣ

ಏಲಕ್ಕಿಯಲ್ಲಿ ಕ್ಯಾನ್ಸರ್‌ ವಿರೋಧಿ ಗುಣಗಳೂ ಇವೆ. ದೇಹದಲ್ಲಿರುವ ಕ್ಯಾನ್ಸರ್‌ ವಿರೋಧಿ ಕಿಣ್ವಗಳನ್ನು ಮತ್ತಷ್ಟು ಚುರುಕಾಗಿಸುವ ಮೂಲಕ ಏಲಕ್ಕಿ ಕ್ಯಾನ್ಸರ್‌ನಂತಹ ಕಾಯಿಲೆಯ ವಿರುದ್ಧವೂ ಹೋರಾಡುವ ಗುಣ ಹೊಂದಿದೆ. ಇತ್ತೀಚೆಗೆ ನಡೆದ ಅಧ್ಯಯನವೊಂದು ಇದನ್ನು ಪುಷ್ಠೀಕರಿಸುತ್ತದೆ. ಕ್ಯಾನ್ಸರ್‌ನ ಗಡ್ಡೆಯ ಅಂಗಾಂಶಗಳನ್ನು ಕೊಲ್ಲಲು ಏಲಕ್ಕಿಯಲ್ಲಿರುವ ವಿಶೇಷ ಗುಣವು ಸಹಾಯ ಮಾಡುತ್ತದೆ.

ಇದನ್ನೂ ಓದಿ: Mouthwashes: ಬಾಯಿಯ ಎಲ್ಲ ಸಮಸ್ಯೆಗಳಿಗೂ ಮೌತ್‌ವಾಷ್‌ ಪರಿಹಾರವೆ? ಇದರ ಇತಿಮಿತಿ ಬಗ್ಗೆಯೂ ತಿಳಿದಿರಲಿ

ಏನು ಮಾಡಬಹುದು?

ಏಲಕ್ಕಿಯ ಈ ಆರೋಗ್ಯಕರ ಗುಣಗಳನ್ನು ಪಡೆಯಲು ನಾವು ಏನು ಮಾಡಬಹುದು, ಹೇಗೆ ಇದನ್ನು ಸೇವಿಸಬೇಕು ಎಂಬುದು ಈಗ ಬಹುತೇಕರಲ್ಲಿರುವ ಪ್ರಶ್ನೆ. ಏಲಕ್ಕಿಯ ಒಂದೆರಡು ಬೀಜಗಳನು ಬಾಯಲ್ಲಿ ಹಾಕಿ ಮೌತ್‌ ಫ್ರೆಶ್ನರ್‌ನ ಹಾಗೆ ಬಳಸಬಹುದು. ಅಥವಾ ಏಲಕ್ಕಿ, ಜಾಯಿಕಾಯಿ, ಅರಿಶಿನ, ಕರಿಮೆಣಸು ಇತ್ಯಾದಿಗಳ ಪುಡಿ ಮಾಡಿ ಇಟ್ಟುಕೊಂಡು ರಾತ್ರಿ ಮಲಗುವ ಮುನ್ನ ಕುಡಿಯುವ ಹಾಲಿಗೆ ಚಿಟಿಕೆ ಪುಡಿ ಸೇರಿಸಿ ಕುಡಿಯಬಹುದು. ಇದರಿಂದ ಸೊಂಪಾದ ನಿದ್ರೆಯೂ ಬರುತ್ತದೆ. ಅಥವಾ ನಿತ್ಯವೂ ಕುಡಿಯುವ ನೀರಿಗೆ ಏಲಕ್ಕಿಯ ಎಸಳೊಂದನ್ನು ಹಾಕಿಡಬಹುದು. ಇನ್ನುಳಿದಂತೆ, ಆಹಾರದ ಮೂಲಕ, ಸಿಹಿತಿಂಡಿಗಳ ಮೂಲಕ ಏಲಕ್ಕಿ ಆಗಾಗ ದೇಹ ಸೇರುತ್ತಲೇ ಇರುತ್ತದೆ. ಈ ಎಲ್ಲ ವಿಧಾನಗಳ ಮೂಲಕ ಏಲಕ್ಕಿಯ ಲಾಭವನ್ನು ನಾವು ಪಡೆಯಬಹುದು.

Exit mobile version