Site icon Vistara News

Carrot Benefits: ಕ್ಯಾರೆಟ್‌ನ ಈ ತಾಜಾ ರೆಸಿಪಿಗಳೂ ನಿಮ್ಮ ಆರೋಗ್ಯಕ್ಕೆ ತುಂಬಾ ಅಗತ್ಯ!

carrot juice

ಕ್ಯಾರೆಟ್ಟನ್ನು ನಿತ್ಯವೂ ತಿಂದರೆ ಬಹಳ ಒಳ್ಳೆಯದು (Carrot Benefits). ಕ್ಯಾರೆಟ್ಟಿನಲ್ಲಿರುವ ಬೀಟಾ ಕೆರಟಿನ್‌, ನಾರಿನಂಶ, ಆಂಟಿ ಆಕ್ಸಿಡೆಂಟ್‌ಗಳು, ಕ್ಯಾಲ್ಶಿಯಂ ಹಾಗೂ ಸಾಕಷ್ಟು ಇತರ ವಿಟಮಿನ್ನುಗಳು (vitamins) ಹಾಗೂ ಖನಿಜಾಂಶಗಳು (minerals) ತೂಕ ಕಡಿಮೆಗೊಳಿಸುವುದಲ್ಲದೆ, ಜೀರ್ಣಕ್ರಿಯೆಯನ್ನು ವೃದ್ಧಿಗೊಳಿಸಿ ಕಣ್ಣಿನ ಆರೋಗ್ಯ, ಚರ್ಮದ ಆರೋಗ್ಯವನ್ನು (skin health) ಸಮತೋಲನದಲ್ಲಿರಿಸುತ್ತದೆ. ಅಷ್ಟೇ ಅಲ್ಲ ಹೃದಯಸ್ನೇಹಿಯಾದ ಈ ಕೇಸರಿ ಬಣ್ಣದ ಚಂದನೆಯ ತರಕಾರಿಯಲ್ಲಿರುವ ಬೀಟಾ ಕೆರಟಿನ್‌ ಎಂಬ ಬಣ್ಣ ನೀಡುವ ರಸಾಯನಿಕವು ದೇಹದಲ್ಲಿ ಆಹಾರವನ್ನು ವಿಟಮಿನ್‌ ಎ ಯಾಗಿ ಪರಿವರ್ತಿಸುತ್ತದೆ. ಇದು ದೇಹದಲ್ಲಿರುವ ಕೆಟ್ಟ ಕೊಲೆಸ್ಟರಾಲನ್ನು ಕಡಿಮೆಗೊಳಿಸಿ, ಹೃದಯವನ್ನು ಆರೋಗ್ಯವಾಗಿರಿಸುತ್ತದೆ. ಹೃದಯದ ಅಪಧಮನಿಗಳಲ್ಲಿ ಕೊಲೆಸ್ಟೆರಾಲ್‌ (cholesterol) ಶೇಖರಣೆಯಾಗಿ ರಕ್ತ ಪರಿಚಲನೆಗೆ ಅಡ್ಡಿಯಾಗುವ ಸಮಸ್ಯೆಯನ್ನು ಸರಿಪಡಿಸುತ್ತದೆ. ಕ್ಯಾರೆಟ್ಟಿನಿಂದ ಆರೋಗ್ಯಕ್ಕೆ ಸಾಕಷ್ಟು ಉತ್ತಮ ಲಾಭಗಳಿರುವುದರಿಂದ ಇದರ ನಿತ್ಯೋಪಯೋಗ ಅತ್ಯಂತ ಒಳ್ಳೆಯದು. ಕ್ಯಾರೆಟ್‌ ಹಲ್ವಾ, ಕಾರೆಟ್‌- ಬಟಾಣಿ ಪಲ್ಯ ಎಂದೆಲ್ಲಾ ಬಾಯಲ್ಲಿ ನೀರೂರುವ ಕ್ಯಾರೆಟ್ಟಿನ ವಿಧ ವಿಧ ತಿನಿಸುಗಳನ್ನು ಹೊರತುಪಡಿಸಿದರೆ, ಕ್ಯಾರೆಟ್ಟಿನಿಂದ ಏನೇನು ಮಾಡುವ ಮೂಲಕ ಅದನ್ನು ನಿತ್ಯ ಬಳಕೆ ಮಾಡಬಹುದು ಎಂದು ತಲೆಕೆರೆದುಕೊಳ್ಳುತ್ತಿದ್ದರೆ, ಅಂಥವರಿಗೆ ಕೆಲವು ಸುಲಭೋಪಾಯದ ಅಡುಗೆಗಳು (Carrot recipes) ಇಲ್ಲಿವೆ.‌ ಇವುಗಳ ಮೂಲಕ ಕ್ಯಾರೆಟ್‌ ಹೊಟ್ಟೆ ಸೇರಲು ನೆಪಗಳನ್ನು ಹುಡುಕಬಹುದು.

೧. ಕಿತ್ತಳೆ ಹಾಗೂ ಕ್ಯಾರೆಟ್‌ ಡಿಟಾಕ್ಸ್‌ ಡ್ರಿಂಕ್‌: ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕ್ಯಾರೆಟ್‌ ಜೊತೆಗೆ ದಿನ ಆರಂಭಿಸಿದರೆ ಅದಕ್ಕಿಂತ ಆರೋಗ್ಯಕರ ವಿಧಾನ ಇನ್ನೊಂದಿಲ್ಲ. ಕ್ಯಾರೆಟ್‌ ಜೊತೆಗೆ ಕಿತ್ತಳೆ ಹಣ್ಣನ್ನು ಸೇರಿಸಿ ಜ್ಯೂಸ್‌ ಮಾಡಿ ಖಾಲಿ ಹೊಟ್ಟೆಯಲ್ಲಿ ಹೀರುವುದು ಒಳ್ಳೆಯದು. ಇದು ದೇಹಕ್ಕೆ ಹಗುರ, ಪೋಷಕಾಂಶಯುಕ್ತ ಹಾಗೂ ಶಕ್ತಿವರ್ಧಕ. ಇಡೀ ದಿನಕ್ಕೆ ಬೇಕಾಗುವ ಶಕ್ತಿ ಇದು ನೀಡುತ್ತದೆ.

೨. ಕ್ಯಾರೆಟ್‌ ಹಾಗೂ ಶುಂಠಿ ಸೂಪ್‌: ಸೂಪ್‌ ಹೃದಯಸ್ನೇಹಿ. ತೂಕ ಕಡಿಮೆ ಮಾಡಲಿಚ್ಛಿಸುವ ಮಂದಿಗೂ ಒಳ್ಳೆಯದು. ಚಳಿಗಾಲದಲ್ಲಿ ಬಿಸಿಬಿಸಿಯಾಗಿ ಕುಡಿಯಲಿಚ್ಛಿಸುವವರಿಗೆ ಜ್ಯೂಸ್‌ಗಿಂತ ಸೂಪ್‌ ಉತ್ತಮ. ಎರಡೂ ಒಳ್ಳೆಯದೇ.

carrot pickles

೩. ಕ್ಯಾರೆಟ್‌ ಉಪ್ಪಿನಕಾಯಿ: ನೀವು ಉಪ್ಪಿನಕಾಯಿ ಪ್ರಿಯರಾಗಿದ್ದರೆ, ಕ್ಯಾರೆಟ್ಟನ್ನು ಬಹಳಕಾಲ ತಿನ್ನುತ್ತಲೇ ಇರುವುದಕ್ಕೆ ಉಪ್ಪಿನಕಾಯಿ ಹಾಕಿಟ್ಟುಕೊಳ್ಳಬಹುದು. ಈಗ ಮಾರುಕಟ್ಟೆಯಲ್ಲಿ ಸಿಗುವ ತಾಜಾ ಕ್ಯಾರೆಟ್ಟನ್ನು ಉಪ್ಪಿನಕಾಯಿ ಹಾಕಿಟ್ಟರೆ, ಬಹಳಕಾಲ ಆ ಸ್ವಾದವನ್ನು ಉಳಿಸಿಕೊಳ್ಳಬಹುದು.

೪. ಕ್ಯಾರೆಟ್‌ ಚಿಪ್ಸ್‌: ಆಲೂಗಡ್ಡೆಯಂತೆಯೇ ಕ್ಯಾರೆಟ್ಟಿನ ಫಿಂಗರ್‌ ಚಿಪ್ಸ್‌ ಕೂಡಾ ಮಾಡಬಹುದು. ಅದೇ ಜ್ಯೂಸ್‌, ಸೂಪು, ಹಲ್ವಾ ತಿಂದು ಬೋರಾಗಿದೆ, ಏನಾದರು ಕರುಂಕುರುಂ ಬೇಕು ಅಂತನಿಸಿದರೆ ಹೀಗೆ ಮಾಡಿ ಗರಿಗರಿಯಾಗಿ ಎಣ್ಣೆಯಲ್ಲಿ ಕರಿದು ಮಸಾಲೆ ಹಾಕಿ ತಿನ್ನಬಹುದು.

carrot pickles

೫. ಕ್ಯಾರೆಟ್‌ ಸಲಾಡ್‌: ಕ್ಯಾರೆಟ್ಟನ್ನು ಅದೇ ಹಳೇ ಶೈಲಿಯಲ್ಲಿ ತುರಿದು, ಬೇರೆ ತರಕಾರಿಗಳೊಂದಿಗೆ ಅಥವಾ ಮೊಳಕೆ ಕಾಳುಗಳ ಜೊತೆಗೆ ಮಿಕ್ಸ್‌ ಮಾಡಿ ಸಲಾಡ್‌ ಮಾಡಿ ಬೋರಾಗಿದ್ದರೆ, ಈ ಬಾರಿ ಬೇರೆಯೇ ರೀತಿಯಲ್ಲಿ ಟ್ರೇ ಮಾಡಿ. ಕ್ಯಾರೆಟ್ಟನ್ನು ವೃತ್ತಾಕಾರವಾಗಿ ಕತ್ತರಿಸಿ ಜೇನಿನಲ್ಲಿ ಅದ್ದುವಂತೆ ಹಾಕಿಟ್ಟು ಚಿಟಿಕೆ ಉಪ್ಪು ಸೇರಿಸಿ ತಿನ್ನಬಹುದು.

೬. ರೋಸ್ಟೆಡ್‌ ಕ್ಯಾರೆಟ್‌: ಕ್ಯಾರೆಟ್ಟನ್ನು ಪೂರ್ತಿಯಾಗಿ ಎಣ್ಣೆಯಲ್ಲಿ ಹುರಿದು ಫಿಂಗರ್‌ ಚಿಪ್ಸ್‌ ಮಾಡೋದಕ್ಕೆ ಮನಸ್ಸಿಲ್ಲದಿದ್ದರೆ ವೃತ್ತಾಕಾರವಾಗಿ ಕತ್ತರಿಸಿ ಬಾಣಲೆಯಲ್ಲಿ ಕೊಂಚ ಎಣ್ಣೆ ಹಾಕಿ ಶಾಲೋ ಫ್ರೈ ಮಾಡಬಹುದು. ಅದಕ್ಕೆ ಕೊಂಚ ಜೀರಿಗೆ ಒಗ್ಗರಣೆ ಮಾಡಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ರೋಸ್ಟ್‌ ಮಾಡಿದರೆ ತಿನ್ನಲು ಬಲು ರುಚಿ. ಕೇವಲ ಇಷ್ಟೇ ಅಲ್ಲ, ಕ್ಯಾರೆಟ್ಟಿನ ಸ್ಮೂದಿ, ಕಪ್‌ ಕೇಕ್‌ಗಳನ್ನೂ ಟ್ರೈ ಮಾಡಿ ಹೊಸ ಬಗೆಯ ಅಡುಗೆಗಳ ಪ್ರಯೋಗಗಳನ್ನು ಒಂದೊಂದಾಗಿ ಮಾಡಲು ಕ್ಯಾರೆಟ್‌ ಅತ್ಯುತ್ತಮ ತರಕಾರಿ.

ಇದನ್ನೂ ಓದಿ: Carrot Juice Benefits: ಕ್ಯಾರೆಟ್‌ ಜ್ಯೂಸ್‌ ಪ್ರಿಯರೇ? ಅದರ ಗುಣವೇ ಅಂಥದ್ದು!

Exit mobile version