Site icon Vistara News

Cats in danger : ನಿಮ್ಮೂರಲ್ಲಿ ಬೆಕ್ಕುಗಳು ಇದ್ದಕ್ಕಿದ್ದಂತೆಯೇ ಸಾಯುತ್ತಿವೆಯಾ?; ಏನಿದು ಹೊಸ ಕಾಯಿಲೆ, ನಿಮ್ಮನೆ ಬೆಕ್ಕು ಸೇಫಾ?

Cats face health issues

ಕಡಬ (ದಕ್ಷಿಣ ಕನ್ನಡ): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಲ್ಲಿ ನೂರಾರು ಬೆಕ್ಕುಗಳು ಸಾವನ್ನಪ್ಪುತ್ತಿವೆ (Cats death). ಜ್ವರ, ರಕ್ತ ವಾಂತಿ, ರಕ್ತ ಬೇಧಿಯಿಂದ ಆರಂಭವಾಗುವ ತೊಂದರೆಗಳು ಸಾವಿನೊಂದಿಗೆ (Cats in Danger) ಅಂತ್ಯವಾಗುತ್ತಿದೆ. ರಾಜ್ಯದ ಇನ್ನೂ ಕೆಲವು ಭಾಗಗಳಲ್ಲಿ ಕಂಡುಬಂದಿರುವ ಈ ಸಮಸ್ಯೆ ಬಗ್ಗೆ ಜನರು ಆತಂಕಗೊಂಡಿದ್ದಾರೆ. ಕೆಲವರು ಬೆಕ್ಕುಗಳ ಸಂಪರ್ಕದಿಂದ ತಮಗೂ ತೊಂದರೆ ಆಗಬಹುದು ಎಂಬ ಆತಂಕದಿಂದ ರ‍್ಯಾಬಿಸ್‌ ವೈರಸ್‌ ಇಂಜೆಕ್ಷನ್‌ (Rabies virus Injection) ಚುಚ್ಚಿಸಿಕೊಳ್ಳುವುದು ಕೂಡಾ ಕಂಡುಬರುತ್ತಿದೆ!

Cats health issues

ಇದು ಫೆಲೈನ್ ಪ್ಯಾನ್ಲ್ಯುಕೋಪೆನಿಯಾ ವೈರಸ್‌ (Feline panleukopenia virus) ನಿಂದಾಗಿ ಉಂಟಾಗಿರುವ ಸಮಸ್ಯೆ ಎಂದು ತಿಳಿದುಬಂದಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಕೆಲವೇ ದಿನಗಳಲ್ಲಿ ದಿನಗಳಲ್ಲಿ ನೂರಾರು ಬೆಕ್ಕುಗಳು ಸಾವನ್ನಪ್ಪಿವೆ. ಆದರೆ, ಇದರ ವಿಚಾರವೇ ತಿಳಿಯದೆ ಜನರು ಆತಂಕಕ್ಕೀಡಾಗಿದ್ದಾರೆ. ನಾಯಿಗಳಲ್ಲಿ ಕಂಡುಬರುವ ರ‍್ಯಾಬಿಸ್‌, ಮಂಗನ ಕಾಯಿಲೆಯ ಹಾಗೆ ಈ ಬೆಕ್ಕಿನ ಕಾಯಿಲೆಯೂ ತಮಗೂ ಹರಡಬಹುದೇ ಎಂಬ ಆತಂಕ ಜನರಲ್ಲಿದೆ.

ಈ ಎಲ್ಲ ಗೊಂದಲಗಳ ಬಗ್ಗೆ ಜಿಲ್ಲಾ ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕ ಅರುಣ್ ಕುಮಾರ್ ಶೆಟ್ಟಿ ಅವರು ವಿಸ್ತಾರ ನ್ಯೂಸ್‌ಗೆ ಮಾಹಿತಿಯನ್ನು ನೀಡಿದ್ದಾರೆ.

Cats health issues

ಏನಿದು ವೈರಸ್‌ ಕಾಯಿಲೆ, ಲಕ್ಷಣಗಳೇನು? ಚಿಕಿತ್ಸೆ ಹೇಗೆ?

  1. ಬೆಕ್ಕುಗಳನ್ನು ಕಾಡುತ್ತಿರುವ ಈ ಕಾಯಿಲೆಗೆ ಮೂಲ ಕಾರಣ ಫೆಲೈನ್ ಪ್ಯಾನ್ಲ್ಯುಕೋಪೆನಿಯಾ ವೈರಸ್ (Feline panleukopenia virus) ಸೋಂಕು.
  2. ಈ ವೈರಸ್‌ ದಾಳಿ ಮಾಡಿದಾಗ ಬೆಕ್ಕಿನ ದೇಹದಲ್ಲಿ ಬಿಳಿ ರಕ್ತ ಕಣಗಳ ಇಳಿಕೆಗೆ ಕಾರಣವಾಗುತ್ತದೆ.
  3. ಫೆಲೈನ್ ಪ್ಯಾನ್ಲ್ಯುಕೋಪೆನಿಯಾ ವೈರಸ್ (ಎಫ್‌ಪಿಎಲ್‌ವಿ) ಎಂಬುದು ಪಾರ್ವೊವೈರಸ್ ಕುಟುಂಬದ ವೈರಸ್‌.
  4. ವೈರಸ್‌ ಸೋಂಕಿಗೆ ಒಳಗಾದ ಬೆಕ್ಕಿನಲ್ಲಿ ಹೆಚ್ಚಿನ ಜ್ವರ, ವಾಂತಿ, ರಕ್ತಸಿಕ್ತವಾಗಿ ಅತಿಸಾರ, ಹಸಿವಿನ ಕೊರತೆ, ಅನೋರೆಕ್ಸಿಯಾ ಮತ್ತು ನಿರ್ಜಲೀಕರಣದ ಲಕ್ಷಣಗಳು ಕಾಣಿಸುತ್ತಿದ್ದು ಕೊನೆಗೆ ಬೆಕ್ಕುಗಳ ಮರಣವು ಸಂಭವಿಸುತ್ತದೆ.
  5. ಬೆಕ್ಕುಗಳ ಪರಸ್ಪರ ಸಂಪರ್ಕದಿಂದ ಈ ಸೋಂಕು ಹರಡುತ್ತದೆ. ಆರಂಭದಲ್ಲಿ ಆದರೆ ಇದಕ್ಕೆ ವ್ಯಾಕ್ಸಿನೇಷನ್ ಪರಿಹಾರವಿದೆ.
Cats health issues

ಇದು ಮನುಷ್ಯರಿಗೆ ಹರಡುತ್ತದಾ?

ಇದು ಬೆಕ್ಕು ಹೊರತುಪಡಿಸಿ ಇತರ ಪ್ರಾಣಿಗಳಿಗೆ ಅಥವಾ ಮನುಷ್ಯರಿಗೆ ಹರಡುವ ರೋಗವಲ್ಲ ಎನ್ನಲಾಗಿದೆ. ಆದರೂ ಮುನ್ನೆಚ್ಚರಿಕೆ ವಹಿಸಬೇಕು. ಹಲವು ಕಡೆಗಳಲ್ಲಿ ಬೆಕ್ಕು ಕಚ್ಚಿದೆ ಅಥವಾ ಪರಚಿದೆ ಎಂದು ರ‍್ಯಾಬಿಸ್‌ ಇಂಜೆಕ್ಷನ್ ತೆಗೆದುಕೊಳ್ಳುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಇದರಿಂದಾಗಿ ತೊಂದರೆ ಇಲ್ಲ. ಆದರೆ ಅದಕ್ಕಿಂತ ಮುಂಚೆ ಆಯಾ ಭಾಗಗಳಲ್ಲಿ ಇರುವ ನಮ್ಮ ಪಶುವೈದ್ಯಾಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಿ ಎನ್ನುವುದು ವೈದ್ಯರ ಸಲಹೆ.

Cats health issues

ಲಸಿಕೆ ಹಾಕಿಕೊಂಡರೆ ಬೆಕ್ಕುಗಳು ಸೇಫ್‌

ಅಲೆಮಾರಿ ಬೆಕ್ಕುಗಳು ಮತ್ತು ಸಾಕು ಬೆಕ್ಕುಗಳೂ ಎಫ್‌ಪಿಎಲ್ ಸೋಂಕಿಗೆ ಬಲಿಯಾಗುತ್ತಿವೆ. ಸೋಂಕಿತ ಬೆಕ್ಕುಗಳಲ್ಲಿ ತೀವ್ರವಾಗಿ ನಿರ್ಜಲೀಕರಣ ಕಾಣಿಸಿ ಬೆಕ್ಕುಗಳು ಕ್ಷೀಣಿಸುತ್ತದೆ. ಆದರೆ, ಲಸಿಕೆ ಹಾಕಿದ ಬೆಕ್ಕುಗಳು ಸುರಕ್ಷಿತವಾಗಿವೆ. ವಯಸ್ಕ ಬೆಕ್ಕುಗಳು ತಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಅವಲಂಬಿಸಿ ಬದುಕಬಹುದು ಎನ್ನುವುದ ಡಾ.ಅರುಣ್ ಕುಮಾರ್ ಶೆಟ್ಟಿ ಅವರ ಮಾತು.

Cats health issues

ಲಸಿಕೆ ಹಾಕಿಸಿ, ಆರಂಭಿಕ ಹಂತದಲ್ಲೇ ಚಿಕಿತ್ಸೆ ಕೊಡಿಸಿ

  1. ಸಾಕು ಪ್ರಾಣಿಗಳ ಮಾಲೀಕರು ತಮ್ಮ ಬೆಕ್ಕುಗಳಿಗೆ ಲಸಿಕೆ ಹಾಕಿಸಲು ಮುಂದೆ ಬರುತ್ತಿಲ್ಲ.
  2. ಹೆಚ್ಚಿನವರು ಸಾಕು ಪ್ರಾಣಿಗಳು ಸಂಪೂರ್ಣವಾಗಿ ಅನಾರೋಗ್ಯಕ್ಕೆ ಒಳಗಾದ ನಂತರವೇ, ಅವರು ವೈದ್ಯಕೀಯ ಸಹಾಯವನ್ನು ಪಡೆಯಲು ಧಾವಿಸುತ್ತಾರೆ.
  3. ಬೆಕ್ಕುಗಳಿಗೆ ಸೋಂಕು ತಗುಲಿದೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಲು ಬೆಕ್ಕುಗಳ ನಡವಳಿಕೆ ಮತ್ತು ಆಹಾರ ಪದ್ಧತಿಯಲ್ಲಿ ಯಾವುದೇ ಬದಲಾವಣೆಯನ್ನು ಗಮನಿಸಬೇಕಾಗುತ್ತದೆ.
  4. ಬೆಕ್ಕುಗಳಿಗೆ ಟ್ರೈಕ್ಯಾಟ್, ಫೆಲಿಜೆನ್ ಅಥವಾ ಫೆಲೋಸೆಲ್ ಲಸಿಕೆಯನ್ನು ನೀಡಬೇಕು.
  5. ಲಸಿಕೆಗಳನ್ನು ಸದ್ಯಕ್ಕೆ ಸರ್ಕಾರವು ಜಾನುವಾರುಗಳಿಗೆ ಮಾತ್ರ ಪೂರೈಸುತ್ತಿದೆ. ಆದರೆ ಖಾಸಗಿ ವೈದ್ಯಕೀಯ ಅಂಗಡಿಗಳಲ್ಲಿ ಲಸಿಕೆಗಳು ಲಭ್ಯವಿದೆ.
  6. ಸಾಕುಪ್ರಾಣಿಗಳ ಮಾಲೀಕರು ಲಸಿಕೆಯನ್ನು ತಾವೇ ಪ್ರಯೋಗ ಮಾಡಬಾರದು. ಅವರು ಆಯಾ ಪ್ರದೇಶಗಳ ಅರ್ಹ ಪಶುವೈದ್ಯರ ಸಹಾಯವನ್ನು ಪಡೆಯಬೇಕು ಎಂದು ಡಾ.ಅರುಣ್ ಕುಮಾರ್ ಶೆಟ್ಟಿ ಅವರು ಹೇಳಿದ್ದಾರೆ.
Exit mobile version