“ಬೆಳಗಿಂದ ಟೀ ಕುಡಿದಿಲ್ಲ. ತಲೆ (Chai curing Headache) ಸಿಡೀತಾ ಇದೆ” ಎನ್ನುತ್ತಾ ಚಹಾ ಕೌಂಟರ್‌ನತ್ತ ಓಡುವವರನ್ನು ಎಷ್ಟು ನೋಡಿಲ್ಲ ನಾವು? ಚಹಾ ಪ್ರಿಯರು ದಿನಕ್ಕಿಷ್ಟು ಎಂದು ನಿಗದಿ ಪಡಿಸಿಕೊಂಡಿರುವಷ್ಟು ಚಹಾ ಹೀರದಿದ್ದರೆ, ಅವತ್ತಿನ ದಿನವೇ ಹಾಳು ಎಂಬಷ್ಟು ಪರದಾಡುತ್ತಾರೆ. ಚಹಾ ಇಲ್ಲದಿದ್ದಕ್ಕೇ ತಲೆನೋವು ಎಂದು ಗೊಣಗುತ್ತಾ, ಹತ್ತಿರದಲ್ಲಿ ಎಲ್ಲಿ ಚಹಾ ದೊರೆಯುತ್ತದೆ ಎಂದು ಪರಾಂಬರಿಸುತ್ತಾರೆ. ಮನೆಯಲ್ಲಿ ಮಾಡಿದ ಹದವಾದ ಚಹವೇ ಬೇಕೆಂದಿಲ್ಲ, ರಸ್ತೆ ಬದಿಯ ಗೂಡಂಗಡಿಯಲ್ಲಿನ ಬಿಸಿ ಚಹಾ ಆದರೂ ಸರಿ, ಅಂತೂ ಟೀ ಬೇಕು. ಚಳಿಗೆ ಬಿಸಿ ಚಹಾ ಎಂದು ಭಾವಿಸಬೇಡಿ. ಹೊರಗೆ ೪೫ ಡಿಗ್ರಿ ಸೆ. ನಷ್ಟು ಕುದಿಯುತ್ತಿದ್ದರೂ, ಚಹಾ ಪ್ರಿಯರು ಬಿಸಿ ಚಹಾ ಇರಲೇಬೇಕು. ಆದರೆ ಚಹಾ ಕುಡಿಯದಿರುವುದಕ್ಕೇ ತಲೆ ನೋಯುತ್ತಿದೆ ಎಂಬ ಅಪವಾದ ಎಷ್ಟು ಸರಿ? ತಲೆನೋವಿಗೂ ಚಹಾಗೂ ಇರುವ ನಂಟೇನು? ಭಾರತಿಯರಿಗೆ ಚಹಾ ಎಂದರೆ ಗ್ರೀನ್ ಟೀ, ಲೆಮೆನ್ ಟೀ ಇತ್ಯಾದಿಗಳೆಲ್ಲ ಅಲ್ಲವೇ ಅಲ್ಲ, ಅಪ್ಪಟ ಇಂಗ್ಲಿಷ್ ಟೀ. ಅಂದರೆ ಹಾಲು ಹಾಕಿಯೇ ಮಾಡಿದ ಚಹ. ಅದರ ಹೊರತಾಗಿ ಉಳಿದವೆಲ್ಲ ಕಷಾಯಕ್ಕೆ ಸಮ! ಇರಲಿ, ವಿಷಯ ಅದಲ್ಲವಲ್ಲ. ಈ ಹಾಲಿನ ಚಹಾಗೂ ತಲೆನೋವಿಗೂ ಏನಾದರೂ ಸಂಬಂಧ ಇದೆಯೇ?
ಕೆಫೇನ್ ಕಾರಣ
ತಜ್ಞರ ಪ್ರಕಾರ, ಕುಡಿಯದಿದ್ದರೆ ತಲೆನೋವು ಬರಿಸುವ, ಕುಡಿದ ತಕ್ಷಣ ಹೋಗಲಾಡಿಸುವ ಯಾವುದೇ ಮಾಯೆಯೂ ಚಹಾದಲ್ಲಿಲ್ಲ. ನೇರವಾಗಿ ಇವೆರಡಕ್ಕೂ ಯಾವುದೇ ನಂಟಿಲ್ಲ. ಆದರೆ ಚಹಾದಲ್ಲಿರುವ ಕೆಫೇನ್‌ನಿಂದಾಗಿ ಈ ಲಕ್ಷಣಗಳು ಕಾಣಬಹುದು. ಹಾಗೆಂದು ಚಹಾ ಕುಡಿಯುವುದನ್ನು ತಪ್ಪಿಸಿದ ಎಲ್ಲರಿಗೂ ತಲೆನೋವು ಬರುತ್ತದೆ ಎನ್ನುವಂತಿಲ್ಲ. ಹಾಗಾಗಿ ಯಾರ ಶರೀರ ಅದೊಂದು ಸಣ್ಣ ಡೋಸ್ ಕೆಫೇನ್‌ಗೆ ಹೊಂದಿಕೊಂಡಿರುತ್ತದೋ, ಅವರಿಗೆ ತಲೆನೋವು ಕಾಣುವುದು ಸಹಜ. ಅಂದಹಾಗೆ, ಒಂದು ದೊಡ್ಡ ಕಪ್ (150 ಎಂ.ಎಲ್) ಫಿಲ್ಟರ್ ಕಾಫಿಯಲ್ಲಿ ಸುಮಾರು 80-120 ಎಂ.ಜಿ. ಕೆಫೇನ್ ದೊರಕೀತು ದೇಹಕ್ಕೆ. ಅಷ್ಟೇ ಪ್ರಮಾಣದ ಚಹಾದಲ್ಲಿ 30-16 ಎಂ.ಜಿ. ಕೆಫೇನ್ ದೇಹ ಸೇರುತ್ತದೆ. ಹೆಚ್ಚು ಕೆಫೇನ್ ದೇಹ ಸೇರಿದಷ್ಟೂ ಅದನ್ನು ನಾವು ಹೆಚ್ಚು ಅವಲಂಬಿಸುತ್ತೇವೆಯೇ ಹಾಗಾದರೆ? ಮಾಮೂಲಿ ಡೋಸ್ ಕೆಫೇನ್ ದೇಹ ಸೇರುತ್ತಿದ್ದ ಕೆಲವೇ ಹೊತ್ತಿನಲ್ಲಿ ತಲೆನೋವು ಮಾಯವಾಗುವುದಕ್ಕೆ ಇದೇ ಕಾರಣ ಇರಬಹುದು.
ಅಥವಾ…ದಿನದ ಆ ಹೊತ್ತಿನಲ್ಲಿ ಅದಷ್ಟು ಪೇಯ ಅಥವಾ ದ್ರವಾಹಾರ ಹೊಟ್ಟೆ ಸೇರುತ್ತದೆ. ಚಹಾ ಕುಡಿದಿಲ್ಲ ಎಂಬ ಕಾರಣ ನೀಡಿ, ನೀರನ್ನಂತೂ ಕುಡಿಯುವುದಿಲ್ಲ ನಾವು. ಹೀಗೆ ಪಾನೀಯಗಳು ಯಾವುವೂ ಹೊಟ್ಟೆ ಸೇರದಿದ್ದಾಗ, ಆ ಹೊತ್ತಿನ ನಿಗದಿತ ನೀರಿನಂಶ ಕಡಿಮೆಯಾಗಿಯೂ ತಲೆನೋವು ಬರುವ ಸಾಧ್ಯತೆಯಿದೆ. ಆದರೆ ಟೀ ಬದಲಿಗೆ ಒಂದಿಡೀ ಗ್ಲಾಸ್ ಬಿಸಿನೀರನ್ನೋ ಕಷಾಯವನ್ನೋ ಕುಡಿದು ಪ್ರಯೋಗ ಮಾಡಿದ್ದರೆ, ನಮಗೆ ತಲೆನೋವು ಬಂದಿದ್ದು ಇದೇ ಕಾರಣಕ್ಕೆ ಹೌದೇ ಎಂಬುದನ್ನು ಪರಿಶೀಲಿಸಲು ಸಾಧ್ಯವಾಗುತ್ತಿತ್ತು. ಹಾಗಲ್ಲದೆ, ಚಹಾವನ್ನು ಹುಡುಕಿಯಾದರೂ ಕುಡಿದು ತಲೆನೋವಿನಿಂದ ಮುಕ್ತರಾಗುತ್ತೇವೆ ನಾವು.
ಮಸಾಲೆ ಚಹಾಗಳು
ಕೆಲವೊಮ್ಮೆ ಇಂಗ್ಲಿಷ್ ಚಹಾ ಮಾತ್ರವಲ್ಲದೆ, ಹರ್ಬಲ್ ಅಥವಾ ಗ್ರೀ ಟೀ ಕುಡಿಯುವವರಿಗೂ ಈ ಲಕ್ಷಣಗಳು ತೋರಬಹುದು. ಇದಕ್ಕೂ ಕಾರಣಗಳು ಇಲ್ಲದಿಲ್ಲ. ಶುಂಠಿ ಚಹಾ, ಏಲಕ್ಕಿ ಚಹಾ, ದಾಲ್ಚಿನ್ನಿ ಚಹಾ ಮುಂತಾದ ಮಸಾಲೆ ಚಹಾಗಳಲ್ಲಿ ಸಣ್ಣ ಪ್ರಮಾಣದಲ್ಲಿ ನೋವು ಕಡಿಮೆ ಮಾಡುವ ಗುಣಗಳಿವೆ. ಅದರಲ್ಲೂ ಮೈಗ್ರೇನ್ ಕಾಡುತ್ತಿದ್ದರೆ ಈ ಚಹಾಗಳಲ್ಲಿರುವ ಘಮವೇ ಅರೋಮಥೆರಪಿಯ ರೀತಿಯಲ್ಲಿ ಕೆಲಸ ಮಾಡುತ್ತದೆ. ಇದಕ್ಕೆ ನಿಂಬೆ ಚಹಾ, ಪುದೀನಾ ಚಹಾ, ಕ್ಯಾಮೊಮೈಲ್ ಚಹಾ ಮುಂತಾದ ಯಾವುದೇ ಪರಿಮಳದ ಚಹಾ ಪರಿಹಾರ ನೀಡಬಲ್ಲದು. ಇದು ಮೈಗ್ರೇನ್‌ಗೆ ಮಾತ್ರವೇ ಅಲ್ಲ, ಮಾನಸಿಕ ಒತ್ತಡದಿಂದ, ಜೀರ್ಣಾಂಗದ ಸಮಸ್ಯೆಯಿಂದ ತಲೆನೋವು ಕಾಡುತ್ತಿದ್ದರೂ ಅದಕ್ಕೆ ಉಪಶಮನ ನೀಡಬಲ್ಲದು.
ಇದನ್ನೂ ಓದಿ: Egg Yolk Benefits: ಮೊಟ್ಟೆಯ ಹಳದಿ ಲೋಳೆಯನ್ನು ಎಸೆಯುತ್ತೀರಾ? ಎಸೆಯುವ ಮೊದಲು ಒಮ್ಮೆ ಯೋಚಿಸಿ!
ತಲೆನೋವು ಬರಬಹುದು!
ಚಹಾ ಕುಡಿಯುವುದರಿಂದ ತಲೆನೋವು ಹೋಗುವುದಷ್ಟೇ ಅಲ್ಲ, ಬರಲೂಬಹುದು! ಹೌದು, ಚಹಾ ಕುಡಿಯುವುದು ಮಿತಿಮೀರಿದರೆ ತೊಂದರೆಯನ್ನು ಆಹ್ವಾನಿಸಿದಂತೆ. ದಿನಕ್ಕೆ ಒಂದೆರಡು ಕಪ್ ಚಹಾ ಕುಡಿಯುವುದು ಸಮಸ್ಯೆ ತರುವುದು ಅನುಮಾನ. ಆದರೆ ಮೂರು ಕಪ್‌ಗಿಂತ ಹೆಚ್ಚು ಚಹಾ ಕುಡಿಯುವುದನ್ನು ನಿಯಮಿತವಾಗಿ ರೂಢಿಸಿಕೊಂಡರೆ, ಹೊಟ್ಟೆ ಹಸಿದಾಗ ಚಹಾ ಕುಡಿದರೆ, ನಿದ್ದೆಗೆಡುವುದಕ್ಕೆ ಚಹಾ ಕುಡಿದರೆ… ಆಸಿಡಿಟಿ ಅಥವಾ ಗ್ಯಾಸ್ಟ್ರೈಟಿಸ್ ಸಂಬಂಧಿ ತೊಂದರೆಗಳನ್ನು ತರಬಹುದು. ಆಸಿಡಿಟಿ ಹೆಚ್ಚಾದರೂ ಮೈಗ್ರೇನ್ ರೀತಿಯ ತಲೆನೋವು ಕಾಡುತ್ತದೆ.