Site icon Vistara News

Chapped Lips: ಈ ಚಳಿಗಾಲದಲ್ಲಿ ತುಟಿ ಬಿರಿಯುತ್ತಿದೆಯೇ? ಇಲ್ಲಿದೆ ಮದ್ದು!

Lips Care In Winter

ಬಿರಿದ ತುಟಿಗಳು ತರುವ ತೊಂದರೆಗಳು (chapped lips) ಒಂದೆರಡಲ್ಲ. ಮುಖ ಅರಳಿಸಿ ನಗುವುದಕ್ಕೆ ಬಿಡಿ, ಮುಖದಲ್ಲಿ ಸಣ್ಣದೊಂದು ಪ್ರಸನ್ನತೆ ತೋರುವುದಕ್ಕೂ ಬಿರಿದ ತುಟಿಗಳು ಬಿಡುವುದಿಲ್ಲ. ಮುಖದಲ್ಲಿ ಇಲ್ಲದಿರುವ ನಸುಕೋಪ, ತುಸುಕೋಪ, ಹುಸಿಕೋಪ ಎಲ್ಲವನ್ನೂ ತೋರಿಸಿ, ಪ್ರೀತಿಪಾತ್ರರಿಗೆ ಗೊಂದಲ ಮೂಡಿಸುತ್ತವೆ. ಇತ್ತ ತುಟಿ ಬಿರಿದ ನೋವಿನ ಜೊತೆಯಲ್ಲಿ, ಮುಖದಲ್ಲಿ ಬಾರದ ಕೋಪವನ್ನೂ ತೋರಿಸಿ ಪೇಚಿಗೆ ಸಿಲುಕುವವರು ನೀವು! ಹಾಗೆಂದೇ ಚಳಿಗಾಲದಲ್ಲಿ ಗೋಳುಗುಟ್ಟಿಸುವ ಈ ಸಮಸ್ಯೆಗೆ ಪರಿಹಾರವನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.

ತುಟಿ ಒಡೆಯುವುದೇಕೆ?

ತುಟಿ ಒಡೆಯುವುದೇಕೆ ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳೋಣ. ದೇಹದ ಉಳಿದೆಲ್ಲಾ ಭಾಗಗಳಿಗಿಂತ ಸೂಕ್ಷ್ಮವಾದ ಚರ್ಮ ತುಟಿಗಳದ್ದು. ಅವುಗಳಲ್ಲಿ ತೈಲಗ್ರಂಥಿಗಳಿಲ್ಲದಿರುವುದರಿಂದ ಬಲು ಬೇಗ ಒಣಗುತ್ತವೆ. ಇದರ ಜೊತೆಗೆ ಒಣ ಹವೆ, ನೀರು ಸಾಕಷ್ಟು ಕುಡಿಯದೆ ಇರುವುದು, ತೀಕ್ಷ್ಣ ಪ್ರಸಾದನಗಳು- ಇಂಥ ಎಲ್ಲಾ ಕಾರಣಗಳಿಂದಲೂ ತುಟಿ ಒಣಗಿ ಬಿರಿದಂತಾಗುತ್ತದೆ. ಹೀಗೆ ನಮ್ಮ ನಗು ಕಸಿಯಬಹುದಾದ ಕಾರಣಗಳು ಹಲವು ಇರಬಹುದಾದರೂ, ಮರಳಿ ನಗು ಅರಳಿಸುವುದಕ್ಕೆ ಏನು ಮಾಡಬೇಕು?

ನೀರು ಬೇಕು

ಅಧರ ಒಣಗಿದೆ ಎಂದರೆ ಅದರ ಮೊದಲ ಅರ್ಥ ದೇಹಕ್ಕೆ ಸಾಕಷ್ಟು ನೀರು ದೊರೆಯುತ್ತಿಲ್ಲ ಎಂಬುದು. ಚಳಿಗಾಲದ ನೆವದಲ್ಲಿ, ಹೆಚ್ಚು ಬಾಯಾರಿಕೆ ಆಗುತ್ತಿಲ್ಲ ಎಂಬ ಕಾರಣ ನೀಡಿ, ನೀರು ಕುಡಿಯದೆ ಇರುವವರ ಸಂಖ್ಯೆ ಬಹಳ. ನೀರಿಲ್ಲದೆ ಶುಷ್ಕವಾದ ದೇಹ ಒಣಗದೆ ಇದ್ದೀತೇ? ಇದರ ಮೊದಲ ಸೂಚನೆಗಳು ಕಾಣುವುದು ತುಟಿಗಳಲ್ಲಿ. ಹಾಗಾಗಿ ದಿನಕ್ಕೆ ಎಂಟರಿಂದ ಹತ್ತು ಗ್ಲಾಸ್‌ ನೀರಿನ ಪ್ರಮಾಣವನ್ನು ತಪ್ಪದೆ ದೇಹಕ್ಕೆ ಒದಗಿಸಬೇಕು. ಇದರಿಂದ ತುಟಿ ಆರ್ದ್ರವಾಗುವುದು ಮಾತ್ರವಲ್ಲ, ಇನ್ನೂ ಕೆಲವು ಸಮಸ್ಯೆಗಳು ಸರಿ ಹೋಗುತ್ತವೆ.

ಶುಷ್ಕತೆ ಕಡಿಮೆ ಮಾಡಿ

ಚಳಿ ಹೆಚ್ಚಿರುವ ಕಡೆಗಳಲ್ಲಿ ಕೆಲವೊಮ್ಮೆ ಹೀಟರ್‌ಗಳನ್ನು ಉಪಯೋಗಿಸಬೇಕಾಗಿ ಬರಬಹುದು. ಆಗ ವಾತಾವರಣದ ಶುಷ್ಕತೆ ಹೆಚ್ಚುತ್ತದೆ. ಕೆಲವು ಪ್ರದೇಶಗಳಲ್ಲಿ ಹವೆಯೇ ಅತ್ಯಂತ ಶುಷ್ಕವಾಗಿರುತ್ತದೆ. ಅಂಥ ಸಂದರ್ಭಗಳಲ್ಲಿ ಹ್ಯುಮಿಡಿಫಯರ್‌ ಉಪಯೋಗ ಮಾಡುವುದು ಒಳ್ಳೆಯದು. ಅದಿಲ್ಲದಿದ್ದರೆ, ಮನೆಯ ಬಾಗಿಲು-ಕಿಟಕಿಗಳನ್ನು ಮುಚ್ಚಿ, ಒಂದು ಲೀಟರ್‌ ನೀರನ್ನು ಸಂಪೂರ್ಣ ಕುದಿಸಿ ಆರಿಸಿ. ಇದರಿಂದ ಅಷ್ಟೂ ಆವಿ ಮನೆಯೊಳಗೇ ಉಳಿಯುವಂತಾಗುತ್ತದೆ. ಹೀಗೆ ಮಾಡುವುದರಿಂದಲೂ ಮನೆಯೊಳಗೆ ತೇವಾಂಶವನ್ನು ಹೆಚ್ಚಿಸಬಹುದು.

ಒದ್ದೆ ಮಾಡಬೇಡಿ

ತುಟಿ ಒಡೆದು, ಕೆಲವೊಮ್ಮೆ ಸೀಳಿ ಉರಿಯುತ್ತಿರುವಾಗ ಪದೇಪದೆ ಅವುಗಳಿಗೆ ನಾಲಿಗೆ ಸೋಕಿಸುವ ಮನಸ್ಸಾಗುತ್ತದೆ. ಹೀಗೆ ನಾಲಿಗೆಯಿಂದ ಒದ್ದೆ ಮಾಡುವುದರಿಂದ ತಾತ್ಕಾಲಿಕವಾಗಿ ಉರಿ ಕಡಿಮೆಯಾದರೂ, ಬಿರಿಯುವುದು ಹೆಚ್ಚುತ್ತದೆ. ಬದಲಿಗೆ, ಉತ್ತಮ ದರ್ಜೆಯ ಪೆಟ್ರೋಲಿಯಂ ಜೆಲ್ಲಿ ಅಥವಾ ಲಿಪ್‌ ಬಾಮ್‌ ಹಚ್ಚಿ. ಇದರಿಂದ ಸಮಸ್ಯೆ ನಿಯಂತ್ರಣಕ್ಕೆ ಬರುತ್ತದೆ.

ಪ್ರಸಾದನಗಳ ಬಗ್ಗೆ ಎಚ್ಚರ

ಕೆಲವೊಮ್ಮೆ ಬಳಸುವ ಪ್ರಸಾದನಗಳಲ್ಲಿನ ರಾಸಾಯನಿಕಗಳು ಅಲರ್ಜಿ ತರಬಹುದು. ಹಾಗಾಗಿ ಅವುಗಳ ಬಗ್ಗೆ ಎಚ್ಚರ ವಹಿಸಿ. ಅದರಲ್ಲೂ ತುಟಿ ಬಿರಿದು ಸಮಸ್ಯೆ ಎದುರಿಸುತ್ತಿರುವಾಗ, ಅದು ಸರಿಯಾಗುವವರೆಗೆ ಯಾವುದೇ ಪ್ರಸಾದನಗಳನ್ನು ಬಳಸದಿರಿ. ಅದರಲ್ಲೂ ಪರಿಮಳಯುಕ್ತ ಕ್ರೀಮುಗಳು, ಮೆಂಥಾಲ್‌ ಸೇರಿದವೆಲ್ಲ ತೊಂದರೆಯನ್ನು ಹೆಚ್ಚಿಸುತ್ತವೆ. ಬದಲಿಗೆ, ನೈಸರ್ಗಿಕ ತೈಲಗಳನ್ನು ಹೊಂದಿದ ಹೀಲಿಂಗ್‌ ಕ್ರೀಮ್‌ಗಳು ಮಾತ್ರವೇ ಸಾಕು.

ಎಸ್‌ಎಫ್‌ಪಿ ಬೇಕು

ಚಳಿಗಾಲದವಾದ್ದರಿಂದ ಬಿಸಿಲಿಗೆ ಒಡ್ಡಿಕೊಳ್ಳುವುದು ಅಗತ್ಯ. ಇಂಥ ಸಂದರ್ಭಗಳಲ್ಲಿ ಸನ್‌ಸ್ಕ್ರೀನ್‌ ಹೊಂದಿರುವ ಲಿಪ್‌ ಬಾಮ್‌ಗಳನ್ನೇ ಬಳಸಿ. ಇದರಿಂದ ಶುಷ್ಕತೆ ಮತ್ತು ಬಿಸಿಲು- ಎರಡಕ್ಕೂ ಉಪಶಮನ ದೊರೆತಂತಾಗುತ್ತದೆ.

ನೀವೇ ಮಾಡಿಕೊಳ್ಳಿ!

ಚಳಿಗಾಲಕ್ಕೆ ತುಟಿಯ ಯೋಗಕ್ಷೇಮಕ್ಕೆ ಬಳಸಬಹುದಾದ ಲಿಪ್‌ಬಾಮ್‌ಗಳನ್ನು ನೀವೇ ತಯಾರಿಸಿಕೊಳ್ಳಬಹುದು. ಇವು ಸುರಕ್ಷಿತ ಮತ್ತು ಸುಲಭ ಮಾರ್ಗಗಳು ಅಧರಗಳನ್ನು ರಕ್ಷಿಸಿಕೊಳ್ಳುವುದಕ್ಕೆ. ಮಾಡುವುದು ಹೇಗೆ ಎಂಬ ವಿವರಗಳಿಲ್ಲಿವೆ.

ಬೇಕಾದ ವಸ್ತುಗಳು

ಕೊಬ್ಬರಿ ಎಣ್ಣೆ 2 ಚಮಚ, ಜೇನು ಮೇಣ 1 ಚಮಚ, ರೋಸ್‌ ತೈಲ- ಕೆಲವು ಹನಿಗಳು.

ಮಾಡುವ ವಿಧಾನ

ಕೊಬ್ಬರಿ ಎಣ್ಣೆ ಮತ್ತು ಜೇನು ಮೇಣವನ್ನು ಒಟ್ಟಾಗಿ ಬಿಸಿ ಮಾಡಿ. ಎರಡೂ ಒಟ್ಟಾಗಿ ಕುದಿಯುವ ಹಂತಕ್ಕೆ ಬಂದ ಮೇಲೆ ಉರಿಯಿಂದ ಇಳಿಸಿ, ಆರಲು ಬಿಡಿ. ಅದು ಬೆಚ್ಚಗಿರುವಾಗ ರೋಸ್‌ ತೈಲದ ಹನಿಗಳನ್ನು ಸೇರಿಸಿ, ಚೆನ್ನಾಗಿ ಬೆರೆಸಿ. ಪೂರ್ಣ ಆರಿದ ಮೇಲೆ ಗಾಳಿಯಾಡದ ಡಬ್ಬಿ ತುಂಬಿ, ಉಪಯೋಗಿಸಿ.

ಇದನ್ನೂ ಓದಿ: Balancing Hormones Naturally: ಹಾರ್ಮೋನು ಸಮತೋಲನಕ್ಕೆ ಬೇಕು ಇಂಥ ಆಹಾರಗಳು

Exit mobile version