Site icon Vistara News

Children Mobile Addiction: ನಮ್ಮ ಮಕ್ಕಳು ಎಷ್ಟು ಹೊತ್ತು ಮೊಬೈಲ್‌ ನೋಡಬಹುದು?

Children Mobile Addiction

ಮಕ್ಕಳೆಂದರೆ ಹಾರಾಡುವ (Children Mobile Addiction) ಬಣ್ಣದ ಚಿಟ್ಟೆಗಳೆಂಬ (butterfly) ಭಾವ ಇತ್ತೀಚೆಗೆ ಕಡಿಮೆಯಾಗುತ್ತಿದೆ. ಕೂತಲ್ಲೇ ಅಂಟಿಕೊಂಡು, ಕರೆದರೂ ಕೇಳದ ಸ್ಥಿತಿಯಲ್ಲಿ, ಮಾತು ಬಾರದವರಂತೆ, ಎದುರಿನವರ ಪರಿಚಯವೂ ಇಲ್ಲದಂತೆ, ಹಸಿವೆ-ನೀರಡಿಕೆಗಳ ಪರಿವೆಯಿಲ್ಲದಂತೆ ಕೂತಿರುತ್ತಾರೆ… ಕೈಯಲ್ಲೊಂದು ಮೊಬೈಲು (mobile) ಹಿಡಿದು.

ಅದನ್ನು ಅವರ ಕೈಯಿಂದ ಕಿತ್ತರೆ ಟ್ಯಾಬ್‌ ಹಿಡಿಯುತ್ತಾರೆ, ಅದನ್ನೂ ಕಸಿದುಕೊಂಡರೆ ಎಲ್ಲಿ ಲ್ಯಾಪ್‌ಟಾಪ್‌ ಸಿಗುವಂತಿದೆ ನೋಡುತ್ತಾರೆ, ಕಡೆಗೆ ಟಿವಿಯಾದರೂ ಬೇಕು. ಅಂತೂ ಕೈಯಲ್ಲೊಂದು ಸ್ಕ್ರೀನ್‌ ಇಲ್ಲದಿದ್ದರೆ ಮಕ್ಕಳು ತಾವಾಗಿರುವುದಿಲ್ಲ ಎಂಬಂತೆ ಭಾಸವಾಗುತ್ತದೆ. ಅವರನ್ನೇ ಬಿಟ್ಟರೆ ಎಚ್ಚರ ಇದ್ದಷ್ಟೂ ಹೊತ್ತು ಕೈಯಲ್ಲಿ ಗೆಜೆಟ್‌ ಹಿಡಿದೇ ಇರುತ್ತಾರೆ. ಆದರೆ ಚಿಕ್ಕ ಮಕ್ಕಳು, ಅಂದರೆ ನಾಲ್ಕು-ಐದು ವರ್ಷದ ಒಳಗಿನ ಮಕ್ಕಳು ದಿನಕ್ಕೆ ಎಷ್ಟು ಹೊತ್ತು ಸ್ಕ್ರೀನ್‌ ನೋಡಬಹುದು?

ಜಾರಿಕೊಳ್ಳುತ್ತಿದ್ದಾರೆ ಹೆತ್ತವರು

ಹೆತ್ತವರ ವಿಷಯಕ್ಕೆ ಬಂದರೆ, ಬಹಳ ಮಂದಿಗೆ ಮಕ್ಕಳು ತಮ್ಮಷ್ಟಕ್ಕೆ ತಾವಿರುವುದು ಅನುಕೂಲವೇ. ಅವರು ಏನಾದರೂ ಮಾಡಿಕೊಳ್ಳಲಿ, ತಮ್ಮ ತಂಟೆಗೆ ಬಾರದಿದ್ದರೆ ಸಾಕು ಎಂಬ ಮನಸ್ಥಿತಿ ಹೆಚ್ಚಿವರದ್ದು. ಇದಕ್ಕೆ ಕಾರಣಗಳೂ ಇಲ್ಲದಿಲ್ಲ.

ದಿನವಿಡೀ ದುಡಿದು ಹೈರಾಣಾಗಿ ಬಂದ ದೊಡ್ಡವರಿಗೂ ತಮ್ಮದೇ ಆದ ಸಮಯ ಬೇಕು. ಮನೆಯದ್ದೇ ಆದ ನಿತ್ಯದ ಕೆಲಸಗಳನ್ನು ನಿಭಾಯಿಸಬೇಕು. ಮಾರನೇ ದಿನಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಇದಿಷ್ಟರ ನಡುವೆ ಮಕ್ಕಳನ್ನೂ ಸುಧಾರಿಸಬೇಕೆಂದರೆ…? ಹಾಗಾಗಿ ಸುಲಭದ ಉಪಾಯವೆಂಬಂತೆ ಅವರ ಕೈಗೊಂದು ಗೆಜೆಟ್‌ ಕೊಟ್ಟರೆ ಮುಗಿಯಿತು ಸಮಸ್ಯೆ. ಆದರಿದು ಸಾಧುವೇ? ಮಕ್ಕಳ ದೈಹಿಕ, ಮಾನಸಿಕ ಬೆಳವಣಿಗೆಗಳ ಗತಿಯೇನು?ಮನೆಯಲ್ಲಿ ದೊಡ್ಡವರೂ ಕೈಯಲ್ಲಿರುವ ಮೊಬೈಲ್‌ ಗೀರುವುದನ್ನೇ ಮಕ್ಕಳು ಸದಾ ಕಾಣುವಾಗ ಅದನ್ನು ತಪ್ಪು ಎಂದು ಹೇಳುವುದು ಹೇಗೆ? ಅದು ಒಳ್ಳೆಯದಲ್ಲ ಎಂದು ಅರ್ಥ ಮಾಡಿಸುವುದು ಹೇಗೆ?

Children Mobile Addiction


ಏನಾಗುತ್ತದೆ?

ಮಕ್ಕಳ ಕೈಯಲ್ಲಿ ಸದಾ ಗೆಜೆಟ್‌ ಇದ್ದರೆ ಏನಾಗುತ್ತದೆ ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳೋಣ. ದಿನಕ್ಕೆ ಮಿತಿಮೀರಿದ ಸ್ಕ್ರೀನ್‌ ಸಮಯದಿಂದಾಗಿ ಮಕ್ಕಳಲ್ಲಿ ಏಕಾಗ್ರತೆಯ ತೀವ್ರ ಸಮಸ್ಯೆ ಉಂಟಾಗುತ್ತದೆ. ಸಾಮಾಜಿಕ ಸಂಬಂಧಗಳು ಕಳಚಿ ಒಂಟಿತನದ ಭಾವನೆ ಎಳವೆಯಿಂದಲೇ ಬರುತ್ತದೆ. ಗಮನ ಸೆಳೆಯುವುದಕ್ಕಾಗಿ ರಚ್ಚೆ ಹಿಡಿಯುವ, ಅತಿಯಾದ ಚಂಚಲತೆಯನ್ನು ತೋರಿಸುತ್ತಾರೆ.

ಗಮನ ಕೊರತೆಯ ಅಸ್ವಸ್ಥತೆ (hyperactivity and attention deficit disorder) ಎಂದು ಕರೆಯಲಾಗುವ ಈ ಸಮಸ್ಯೆಯು ಮೆದುಳಿನ ಸಾಮರ್ಥ್ಯವನ್ನು ಕುಗ್ಗಿಸುತ್ತದೆ. ಈ ಎಲ್ಲವುಗಳ ಫಲವಾಗಿ, ಈ ಮಕ್ಕಳಲ್ಲಿ ಋಣಾತ್ಮಕ ವರ್ತನೆಗಳು ಕಂಡುಬರುತ್ತವೆ. ಶಿಸ್ತಿಲ್ಲದ, ಯಾವ ನಿಬಂಧನೆಗಳಿಗೂ ಒಳಪಡದ, ನಂಟುಗಳನ್ನೂ ಹಚ್ಚಿಕೊಳ್ಳದ ಬೀಡುಬೀಸಾದ ವರ್ತನೆ ಚಿಕ್ಕಂದಿನಲ್ಲೇ ಕಾಣಿಸಿಕೊಳ್ಳುತ್ತದೆ.

ದೃಷ್ಟಿದೋಷ

ಕೈಯಲ್ಲಿ ಹಿಡಿದು ನೋಡುವಂಥ ಗೆಜೆಟ್‌ಗಳನ್ನು ಸಾಮಾನ್ಯವಾಗಿ 2 ಅಡಿಗಿಂತ ಕಡಿಮೆ ಅಂತರಲ್ಲಿ ಇರಿಸಿಕೊಂಡು ವಾಚಿಸುತ್ತಾರೆ ಮಕ್ಕಳು. ಇದರಿಂದ ದೃಷ್ಟಿದೋಷವೂ ಹೆಚ್ಚುತ್ತದೆ. ಮೊದಲಿಗಿಂತ ಅತಿ ಹೆಚ್ಚಿನ ಪ್ರಮಾಣದಲ್ಲಿ ಬಾಲವಾಡಿಯ ಮಕ್ಕಳ ಕಣ್ಣಿಗೆ ಕನ್ನಡಕಗಳು ಬಂದಿರುವುದನ್ನು ಕಾಣಬಹುದು.

ದೈಹಿಕ ಆರೋಗ್ಯ

ಕೂತಲ್ಲೇ ಕೂತು ಕಳೆಯುವುದಾದರೆ ದೇಹ ಸ್ವಾಸ್ಥ್ಯ ಹಾಳಾಗುವುದೇ ತಾನೇ? ಮಕ್ಕಳೆಂದರೆ ಚಟುವಟಿಕೆಯ ಚಿಲುಮೆಗಳಂತೆ ಇರಬೇಕಾದವರು. ಓಡುವವರನ್ನು ಹಿಡಿದು ಕೂರಿಸುವುದು ಹೇಗೆ ಎಂದು ಹೆತ್ತವರು ಚಿಂತಿಸಬೇಕು. ಆದರೆ ಈಗಿನ ದಿನಗಳಲ್ಲಿ ಕೂತವರನ್ನು ಎಬ್ಬಿಸಿ ಆಡುವುದಕ್ಕೆ ಹೊರಗೆ ಕಳಿಸುವುದು ಹೇಗೆ ಎಂಬ ಚಿಂತೆಯಲ್ಲಿದ್ದರೆ ಸಹ.

Children Mobile Addiction


ಮಿತಿ ಎಷ್ಟು?

ದೊಡ್ಡ ಮಕ್ಕಳಿಗೆ ಶಾಲೆಯಿಂದ ಬರುವ ಹೋಮ್ ವರ್ಕ್‌ ಸಲುವಾಗಿ ಒಂದಿಷ್ಟು ಹೊತ್ತು ಪರದೆಯ ಮುಂದೆ ಕೂರುವುದು ಅನಿವಾರ್ಯವಾಗಬಹುದು. ಅದರ ಹೊರತಾಗಿ ಎಷ್ಟು ಹೊತ್ತು ಪರದೆಗೆ ಅಂಟಿಕೊಂಡಿರುತ್ತಾರೆ ಎಂಬುದನ್ನು ಗಮನಿಸಿ.

ಇದನ್ನೂ ಓದಿ: Smartphone Charging Tips: ನಿಮ್ಮ ಸ್ಮಾರ್ಟ್ ಪೋನ್ ಬ್ಯಾಟರಿ ಹೆಚ್ಚು ಬಾಳಿಕೆ ಬರಲು ಹೀಗೆ ಮಾಡಿ

ಶಾಲೆಯ ದಿನಗಳಲ್ಲಿ ಅನಗತ್ಯ ಸ್ಕ್ರೀನ್‌ ಸಮಯ ಇಲ್ಲದಿದ್ದರೇ ಒಳಿತು. ರಜೆಯ ದಿನಗಳಲ್ಲಿ ಪರದೆಯ ಪರಿಮಿತಿಯನ್ನು ಒಂದು ತಾಸಿಗೆ ನಿಗದಿಗೊಳಿಸಿ. ಬಾಲವಾಡಿ ಅಥವಾ ಅದಕ್ಕಿಂತ ಚಿಕ್ಕ ಮಕ್ಕಳಿಗೆ ದಿನಕ್ಕೆ ಒಂದು ತಾಸಿನ ಸ್ಕ್ರೀನ್‌ ಸಮಯ ಸಾಕಾಗುತ್ತದೆ. ಉಳಿದ ಸಮಯವನ್ನು ಅರ್ಥಪೂರ್ಣವಾಗಿ ಕಳೆಯುವುದು ಹೇಗೆ ಎಂಬುದನ್ನು ಹೆತ್ತವರೇ ನಿರ್ಧರಿಸಬೇಕಾಗುತ್ತದೆ.

Exit mobile version