ಬೆಂಗಳೂರು: ಬೆಂಗಳೂರಿನ ವೈದ್ಯಕೀಯ ಕಾಲೇಜಿನ 49 ಹಾಸ್ಟೆಲ್ ವಿದ್ಯಾರ್ಥಿನಿಯರು (Hostel Students) ಅಸ್ವಸ್ಥರಾಗಿರುವ ಪ್ರಕರಣದಲ್ಲಿ, ಇಬ್ಬರು ವಿದ್ಯಾರ್ಥಿನಿಯರಿಗೆ ಕಾಲರಾ ಪಾಸಿಟಿವ್ (Cholera test positive) ಇರುವುದು ಪತ್ತೆಯಾಗಿದೆ. ಹಾಸ್ಟೆಲ್‌ನ ಎಲ್ಲ 49 ವಿದ್ಯಾರ್ಥಿನಿಯರ ಕಾಲರಾ ವರದಿ (Cholera Outbreak) ಕೈ ಸೇರಿದ್ದು, ಇತರರು ಸೋಂಕಿನಿಂದ ಸೇಫ್ ಎಂದು ಹೇಳಲಾಗುತ್ತಿದೆ. ಎಂದು ಊಹಿಸಲಾಗಿದೆ. ಇದರ ಜತೆಗೆ ಹಾಸ್ಟೆಲ್ ಅವ್ಯವಸ್ಥೆ ತನಿಖೆಗಾಗಿ ಸಮಿತಿಯೊಂದನ್ನು ರಚಿಸಲಾಗಿದೆ. ಹಾಲಿ ಹಾಸ್ಟೆಲ್‌ನ ಕಿಚನ್ ಅನ್ನು ಸೀಝ್ ಮಾಡಲಾಗಿದೆ. ಸದ್ಯ ವಿದ್ಯಾರ್ಥಿಗಳಿಗೆ ಹೊರಗಿನಿಂದ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ. ವಿಕ್ಟೋರಿಯಾ ಆಸ್ಪತ್ರೆ ಕಿಚನ್‌ನಿಂದ ಊಟ ಕೊಡಲಾಗುತ್ತಿದೆ.
ಇದರಿಂದಾಗಿ, ಸಾಮಾನ್ಯವಾಗಿ ಕಲುಷಿತ ನೀರು (Contaminated Water) ಹಾಗೂ ಆಹಾರದಿಂದ ಹರಡುವ ಕಾಲರಾ ಸಾಂಕ್ರಾಮಿಕ ಬೆಂಗಳೂರಿನ ಇನ್ನಿತರ ಕಡೆಯೂ ಹರಡುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ. ಸಂಭಾವ್ಯ ಕಾಲರಾ ಸಾಂಕ್ರಾಮಿಕ (Cholera epidemic) ಪರಿಸ್ಥಿತಿಯನ್ನು ಎದುರಿಸಲು ಆರೋಗ್ಯ ಇಲಾಖೆ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಬೆಂಗಳೂರು ವೈದ್ಯಕೀಯ ಕಾಲೇಜು ವಿದ್ಯಾರ್ಥಿನಿಗೆ ಕಾಲರಾ ಇರುವುದು ಪತ್ತೆಯಾಗಿದೆ. 49 ವೈದ್ಯಕೀಯ ವಿದ್ಯಾರ್ಥಿಗಳು ನಿನ್ನೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದರು. 49 ವಿದ್ಯಾರ್ಥಿನಿಯರಲ್ಲಿ 26 ವರ್ಷದ ಫ್ರಫುಲ್ಲ ಎಂಬಾಕೆಯ ಬ್ಲಡ್ ಸ್ಯಾಂಪಲ್‌ನಲ್ಲಿ ಕಾಲರಾ ಪಾಸಿಟಿವ್ ಪತ್ತೆಯಾಗಿದೆ. ಇನ್ನೊಬ್ಬರ ಹೆಸರು ಗೊತ್ತಾಗಿಲ್ಲ.
ಈಗ ಉಳಿಕೆ ಸಂಶೋಧನಾ ವಿದ್ಯಾರ್ಥಿನಿಯರ ಟೆಸ್ಟ್ ರಿಪೋರ್ಟ್ ಬಂದಿದೆ. ಸದ್ಯ ಬ್ಲಡ್ ಟೆಸ್ಟ್ ವರದಿ ಬಂದಿದ್ದು, ಹೆಚ್ಚಿನ ಕನ್ಫರ್ಮೇಷನ್‌ಗಾಗಿ ಕಲ್ಚರ್ ಟೆಸ್ಟ್‌ಗೆ ಸ್ಯಾಂಪಲ್ ರವಾನಿಸಲಾಗಿದ್ದು, ಅದರ ರಿಪೋರ್ಟ್ ಇನ್ನು ಎರಡು ದಿನದಲ್ಲಿ ಬರುವ ಸಾಧ್ಯತೆ ಇದೆ. ಕಲ್ಚರ್ ರಿಪೋರ್ಟ್ ಬಂದನಂತರ ಕಾಲರಾ ಸ್ಪಷ್ಟನೆ ಸಿಗಲಿದೆ. ಸಾಮಾನ್ಯವಾಗಿ ಕಾಲರಾ ಗುಣಲಕ್ಷಣಗಳು ಕಾಣಿಸಿಕೊಂಡ 24 ಗಂಟೆ ಒಳಗಾಗಿ ಕಲ್ಚರ್ ಟೆಸ್ಟ್ ಸ್ಯಾಂಪಲ್ ಪಡೆಯಲಾಗುತ್ತದೆ.
ಪ್ರಕರಣದ ಬಳಿಕ ಮೆಡಿಕಲ್ ಕಾಲೇಜು ಆಡಳಿತ ಮಂಡಳಿ ಎಚ್ಚೆತ್ತಿದ್ದು, ಹಾಸ್ಟೆಲ್‌ನ ಕುಡಿಯುವ ನೀರನ್ನು ಪರಿಶೀಲಿಸಲು ಸೂಚನೆ ನೀಡಲಾಗಿದೆ. ಇಂಜಿನಿಯರ್‌ಗಳಿಂದ ನೀರಿನ ಪರೀಕ್ಷೆ ಮಾಡಿಸುತ್ತಿದ್ದು, ನೀರು ಕಲುಷಿತಗೊಂಡಿದ್ದು ಅದರಿಂದ ಸಮಸ್ಯೆ ಆಗಿದ್ದರೆ ಮುಂದಿನ ಕ್ರಮ ಕೈಗೊಳ್ಳಲು ಮುಂದಾಗಿದೆ. ಎಲ್ಲ ವಿದ್ಯಾರ್ಥಿನಿಯರ ಆರೋಗ್ಯ ಸ್ಥಿರವಾಗಿದ್ದು, ಇಂದು ಐಸಿಯು ವಿದ್ಯಾರ್ಥಿನಿಯರು ಬಿಟ್ಟು ಉಳಿದವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ನೀರಿನಿಂದ ಬಂದಿಲ್ಲ, ಆಹಾರದಿಂದ ಬಂದಿರಬಹುದು: ಬಿಎಂಎಸ್ ಡೀನ್
ಪ್ರಕರಣದ ಕುರಿತು ಬೆಂಗಳೂರು ವೈದ್ಯಕೀಯ ಕಾಲೇಜು ಡೀನ್ ಡಾ.ರಮೇಶ್ ಕೃಷ್ಣ ಹೇಳಿಕೆ ನೀಡಿದ್ದಾರೆ. “ನಿನ್ನೆ BMSನ 47 ವೈದ್ಯಕೀಯ ವಿದ್ಯಾರ್ಥಿಗಳು ಅಡ್ಮಿಟ್ ಆಗಿದ್ದಾರೆ. 41 ವಿದ್ಯಾರ್ಥಿಗಳು ಟ್ರಾಮಾ ಸೆಂಟರ್‌ನಲ್ಲಿ ಇದ್ದಾರೆ. ಇನ್ನುಳಿದ ವಿದ್ಯಾರ್ಥಿಗಳು discharge ಆಗಿದ್ದಾರೆ. ಎಲ್ಲಾ ವಿದ್ಯಾರ್ಥಿಗಳ ಆರೋಗ್ಯ ಸ್ಥಿರವಾಗಿದೆ. ಸ್ಕ್ರೀನಿಂಗ್ ಟೆಸ್ಟ್‌ನಲ್ಲಿ ಒಬ್ಬ ವಿದ್ಯಾರ್ಥಿಯ ಟೆಸ್ಟ್ ರಿಪೋರ್ಟ್ ಪಾಸಿಟಿವ್ ಬಂದಿದೆ. ಐಸಿಯುನಲ್ಲಿ ಒಬ್ಬ ಪೇಷೆಂಟ್ ಇದ್ದಾರೆ. ಈ ಬಗ್ಗೆ ಬಿಬಿಎಂಪಿಗೆ ಮಾಹಿತಿ ಕೊಡಲಾಗಿದೆ. ಕಲ್ಚರ್ ರಿಪೋರ್ಟ್ ಬರಲು ಇನ್ನೂ 3 ದಿನ ಬೇಕು” ಎಂದು ಹೇಳಿದ್ದಾರೆ.
“ಹಾಸ್ಟೆಲ್‌ನಲ್ಲಿ ಒಟ್ಟು 200 ವಿದ್ಯಾರ್ಥಿಗಳು ಇದ್ದಾರೆ. ನೀರಿನಿಂದ ಆಗಿದ್ದರೆ ಎಲ್ಲ ವಿದ್ಯಾರ್ಥಿಗಳಿಗೆ ಸೋಂಕು ತಗುಲಬೇಕಿತ್ತು. ಆದರೆ, ಕೇವಲ 47 ವಿದ್ಯಾರ್ಥಿಗಳಿಗೆ ಮಾತ್ರ ಹೀಗಾಗಿದೆ. ಆಹಾರದಿಂದ ಹೀಗಾಗಿರಬಹುದು. ಹೀಗಾಗಿ ಹಾಸ್ಟೆಲ್ ಅಡುಗೆ ಮನೆ ಸೀಲ್ ಮಾಡಲಾಗಿದೆ. ನಮ್ಮ ಆಸ್ಪತ್ರೆ ಕಡೆಯಿಂದ ವಿದ್ಯಾರ್ಥಿಗಳಿಗೆ ಊಟ, ನೀರಿನ ವ್ಯವಸ್ಥೆ ಮಾಡಲಾಗಿದೆ. ಈಗ ಹಾಸ್ಟೆಲ್ ವ್ಯವಸ್ಥೆ ಚೆನ್ನಾಗಿದ್ದು, ನಾನು ಕೂಡ ಹಾಸ್ಟೆಲ್‌ಗೆ ಹೋಗಿ ಪರಿಶೀಲನೆ ನಡೆಸಿದ್ದೇನೆ. ಫೋಟೊಗೂ, ಈ ಆರೋಗ್ಯ ಸಮಸ್ಯೆಗೂ ಯಾವುದೇ ಸಂಬಂಧ ಇಲ್ಲ. ಹಾಸ್ಟೆಲ್‌ನಲ್ಲಿ ಉಳಿದವರಿಗೆ ಯಾವುದೇ ಗುಣಲಕ್ಷಣಗಳು ಇಲ್ಲ. ಸುಮಾರು 800 ವಿದ್ಯಾರ್ಥಿಗಳು ಇದ್ದಾರೆ, ಒಟ್ಟು 2 ಹಾಸ್ಟೆಲ್ ಇದೆ. H ಬ್ಲಾಕ್‌ನಲ್ಲಿ ಇರುವ ವಿದ್ಯಾರ್ಥಿಗಳು ಇವತ್ತು ಸಂಜೆ ಡಿಸ್ಚಾರ್ಜ್ ಆಗಬಹುದು. ಇಬ್ಬರು ವಿದ್ಯಾರ್ಥಿಗಳು ಮಾತ್ರ ಐಸಿಯುನಲ್ಲಿ ಇದ್ದಾರೆ. ಅವರ ಆರೋಗ್ಯ ಕೂಡ ಸ್ಥಿರವಾಗಿದೆ. 47 ವಿದ್ಯಾರ್ಥಿಗಳಿಗೆ ಲೂಸ್ ಮೋಷನ್, ವಾಮಿಟಿಂಗ್ ಇತ್ತು. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ವಿದ್ಯಾರ್ಥಿಗಳಿಗೆ ಚಿಕಿತ್ಸೆ ಕೊಡಲಾಗುತ್ತಿದೆ” ಎಂದು ಬೆಂಗಳೂರು ವೈದ್ಯಕೀಯ ಕಾಲೇಜು ಡೀನ್ ಡಾ.ರಮೇಶ್ ಕೃಷ್ಣ ಹೇಳಿದ್ದಾರೆ.
ಇಲ್ಲಿ ಅಖಿಲಾಂಡೇಶ್ವರಿ ಹಾಸ್ಟೆಲ್ ವಾರ್ಡನ್ ಆಗಿದ್ದಾರೆ. ಬೆಂಗಳೂರು ವೈದ್ಯಕೀಯ ಕಾಲೇಜಿನ ಡೀನ್ ನಿನ್ನೆ ಹಾಸ್ಟೆಲ್ ವಿಸಿಟ್ ಮಾಡಿದ್ದು, ಹಾಸ್ಟೆಲ್ ಅವ್ಯವಸ್ಥೆ ಕುರಿತು ತನಿಖೆ ಕಮಿಟಿ ರಚನೆ ಮಾಡಿದ್ದಾರೆ. ಕಮಿಟಿ ಸಭೆ ನಡೆಸಿ ವಾರ್ಡನ್ ತಪ್ಪು ಕಂಡುಬಂದರೆ ಶಿಸ್ತು ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ನೀರು ಪೂರೈಕೆ ಸಮಸ್ಯೆ
ಈ ಬಾರಿ ಬೆಂಗಳೂರಿನಲ್ಲಿ ಕುಡಿಯುವ ನೀರಿಗೆ ತತ್ವಾರವಾಗಿದೆ. ಕಾವೇರಿ ನೀರು ಪೂರೈಕೆಯಲ್ಲಿ ಕೊರತೆ ಉಂಟಾಗಿದ್ದು, ಕಾವೇರಿ ನೀರು ಪೈಪ್‌ಲೈನ್ ಇರುವಲ್ಲಿಯೂ ನೀರು ಕಡಿಮೆ ಬಿಡಲಾಗುತ್ತಿದೆ. ಕಾವೇರಿ ಪೂರೈಕೆ ಇಲ್ಲದ ಕಡೆ ಬೋರ್‌ವೆಲ್ ಹಾಗೂ ಟ್ಯಾಂಕರ್‌ಗಳನ್ನು ಅವಲಂಬಿಸಲಾಗಿದೆ. ಆದರೆ ಈ ಬಾರಿ ಬೇಸಿಗೆಯ ಆರಂಭದಲ್ಲೇ ನೀರು ತಳ ಹಿಡಿದಿರುವುದರಿಂದ, ಮಣ್ಣು ಮತ್ತಿತರ ಪದಾರ್ಥಗಳು ಸೇರಿ ಕಲುಷಿತಗೊಂಡಿರುವ ನೀರು ಕುಡಿಯುವ ನೀರಾಗಿ ವ್ಯಾಪಕವಾಗಿ ಬಳಕೆಯಾಗುತ್ತಿರುವ ಸಾಧ್ಯತೆ ಇದೆ. ಇದು ಕಾಲರಾಗೆ ಮೂಲವಾಗಿದೆ.
ಹಾಗೆಯೇ ಬೀದಿ ಬದಿ ಮಾರಾಟ ಮಾಡುವ ಪಾನೀಯಗಳು, ತಿಂಡಿ- ಖಾದ್ಯಗಳು ಕೂಡ ಸಮರ್ಪಕವಾದ ಕುಡಿಯುವ ನೀರನ್ನು ಬಳಸುತ್ತಿದ್ದಾರೆಯೇ ಇಲ್ಲವೇ ಎಂಬುದು ತಿಳಿಯದು. ಇದನ್ನು ಪರಿಶೀಲಿಸಿ ಖಚಿತಪಡಿಸುವ ವ್ಯವಸ್ಥೆ ಬಿಬಿಎಂಪಿಯಲ್ಲಾಗಲೀ ಸಾರ್ವಜನಿಕರಲ್ಲಾಗಲೀ ಇಲ್ಲ. ರೆಸ್ಟೊರೆಂಟ್‌ಗಳು ಬಿಸಿನೀರನ್ನು ಗ್ರಾಹಕರಿಗೆ ಒದಗಿಸಬೇಕು ಎಂಬ ನಿಯಮ ಇದ್ದರೂ ಅದು ಎಲ್ಲ ಕಡೆ ಪಾಲನೆಯಾಗುತ್ತಿಲ್ಲ. ಇವೆಲ್ಲವೂ ಬೆಂಗಳೂರಿನಲ್ಲಿ ಸಾರ್ವಜನಿಕ ಆರೋಗ್ಯಕ್ಕೆ ಸಮಸ್ಯೆ ಉಂಟುಮಾಡುವ ಸಾಧ್ಯತೆ ದಟ್ಟವಾಗಿದೆ.
ಕಾಲರಾಕ್ಕೆ ಆರೋಗ್ಯ ಇಲಾಖೆ ಮಾರ್ಗಸೂಚಿ
1) ಕೈ ಶುದ್ಧವಾಗಿರಬೇಕು
2) ಕೈ ಸ್ವಚ್ಚಗೊಳಿಸಿ ಆಹಾರ ಸೇವಿಸಬೇಕು
3) ಶುದ್ಧ ಕುಡಿಯುವ ನೀರು ಬಳಸಬೇಕು
4) ಕುದಿಸಿ ಆರಿಸಿದ ನೀರನ್ನು ಕುಡಿಯಿರಿ. ಸೋಸಿದ ನೀರು ಬಳಸಿ.
5) ಚರಂಡಿ ನೀರು ಅಥವಾ ಕುಡಿಯುವ ನೀರಿನ ಪೈಪ್ ಒಟ್ಟಾಗದಂತೆ ನೋಡಿಕೊಳ್ಳಬೇಕು
6) ಹೊರಗಿನ ಬೀದಿ ಬದಿ ಆಹಾರ ಸೇವಿಸುವುದರಿಂದ ದೂರವುಳಿಯಿರಿ
7) ರೆಸ್ಟೋರೆಂಟ್‌ಗಳಲ್ಲಿ ಬಿಸಿ ನೀರು ಕೇಳಿ ಪಡೆಯಿರಿ.
8) ಬೀದಿ ಆಹಾರ ಸೇವಿಸುವ ಮುನ್ನ ಅಲ್ಲಿನ ಸ್ವಚ್ಛತೆ ಪರಿಶೀಲಿಸಿ.
9) ಭೇದಿ, ಹೊಟ್ಟೆನೋವು, ಜ್ವರ ಮುಂತಾದ ಲಕ್ಷಣಗಳು ಕಂಡುಬಂದರೆ ತಡಮಾಡದೆ ವೈದ್ಯರನ್ನು ಸಂಪರ್ಕಿಸಿ.
ಇದನ್ನೂ ಓದಿ: Bangalore Medical College: ಬೆಂಗಳೂರು ಮೆಡಿಕಲ್ ಕಾಲೇಜಿನ 47 ವಿದ್ಯಾರ್ಥಿನಿಯರು ಅಸ್ವಸ್ಥ; ಆಸ್ಪತ್ರೆಗೆ ದಾಖಲು
ಮಹಿಳಾ ಆಯೋಗದ ಅಧ್ಯಕ್ಷರ ಭೇಟಿ
ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಅವರು ಐಸಿಯು ಹಾಗೂ ಜನರಲ್ ವಾರ್ಡ್‌ನಲ್ಲಿರುವ ವಿದ್ಯಾರ್ಥಿನಿಯರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಐಸಿಯು ಹಾಗೂ ಜನರಲ್ ವಾರ್ಡ್‌ನಲ್ಲಿರುವ ವಿದ್ಯಾರ್ಥಿನಿಯರನ್ನು ಭೇಟಿಯಾಗಿ ಮಾತನಾಡಿದ್ದೇನೆ. ಅನೇಕರಿಗೆ ಪ್ರಜ್ಞೆಯೇ ಇರಲಿಲ್ಲ. 6ನೇ ಫ್ಲೋರ್‌ನಲ್ಲಿ ವಾಟರ್ ಟ್ಯಾಂಕ್ ರಿಪೇರಿಯಲ್ಲಿದೆ. ಅದೇ ನೀರನ್ನು ನೀಡಲಾಗುತ್ತಿತ್ತು. ಈಗಾಗಲೇ ಮೆಸ್ ಅನ್ನು ಕ್ಲೋಸ್ ಮಾಡಿಸಲಾಗಿದೆ. ಅವರ ಬೆಡ್‌ನಲ್ಲಿ ತಿಗಣೆ ಇತ್ತು ಎಂಬುದನ್ನು ವಿದ್ಯಾರ್ಥಿನಿಯರು ಹೇಳಿದ್ದಾರೆ. ಅವರ ಆರೋಪಗಳ ಬಗ್ಗೆ ನಾನು ಡಾಕ್ಯುಮೆಂಟ್ ಕೇಳಿದ್ದೇನೆ. ಒಂದು ವಾರದಲ್ಲಿ ವರದಿಯನ್ನು ಕೊಡಬೇಕು. ಒಂದು ವಾರದಲ್ಲಿ ಸಮಸ್ಯೆ ಬಗೆಹರಿಸಲು ಹೇಳಿದ್ದೇನೆ. ರೂಂಗಳು ಚಿಕ್ಕದಾಗಿದೆ. ಸರಿಯಾದ ವ್ಯವಸ್ಥೆ ಇರಲಿಲ್ಲ. ಅವರಿಗೆ ಊಟವನ್ನು ಈಗ ವಿಕ್ಟೋರಿಯಾ ಆಸ್ಪತ್ರೆಯಿಂದ ಕೊಡುವ ವ್ಯವಸ್ಥೆ ಮಾಡಲಾಗಿದೆ. ಈ ಬಗ್ಗೆ ನಾನು ಮೆಡಿಕಲ್ ಎಜುಕೇಷನ್ ಮಿನಿಸ್ಟರ್ ಗಮನಕ್ಕೆ ತರುತ್ತೇನೆ. ನಾವು ನೋಟಿಸ್ ಕೊಟ್ಟಿದ್ದೇವೆ. ಅದಕ್ಕೆ ಕಾಲೇಜಿನವರು ಅವರು ಉತ್ತರವನ್ನು ಕೊಡಬೇಕು. ಪ್ರತಿಯೊಂದು ಆಸ್ಪತ್ರೆ ಹಾಗೂ ಹಾಸ್ಟೆಲ್ \ಗೆ ನಾನು ವಿಸಿಟ್ ಮಾಡುತ್ತೇನೆ. ಅಲ್ಲಿನ ಸಮಸ್ಯೆ ಬಗ್ಗೆ ತಿಳಿಯುತ್ತೇನೆ. ಈಗ ಸುಮೋಟೋ ಕೇಸ್ ದಾಖಲು ಮಾಡಲಾಗಿದೆ ಎಂದು ಹೇಳಿದ್ದಾರೆ.