Site icon Vistara News

Cholesterol Management Tips: ಕೊಲೆಸ್ಟ್ರಾಲ್‌ ಹೆಚ್ಚಿದೆಯೇ? ಬೆಳ್ಳುಳ್ಳಿಯ ಈ ಉಪಾಯ ಗೊತ್ತಿರಲಿ!

Cholesterol Management Tips

ದೇಹದಲ್ಲಿರುವ ಎಲ್‌ಡಿಎಲ್‌ (Cholesterol Management Tips) ಅಥವಾ ಕೆಟ್ಟ ಕೊಬ್ಬನ್ನು ಕಡಿಮೆ ಮಾಡಲು ನೆರವಾಗುವಂಥ ಕೆಲವು ಉಪಾಯಗಳು ಮಹತ್ವದ ಪರಿಣಾಮ ಬೀರುತ್ತವೆ. ಅಂದರೆ, ದೇಹದ ಚಯಾಪಯವನ್ನು ಹೆಚ್ಚಿಸುವಂಥವು, ಜೀರ್ಣಾಂಗಗಳ ಕ್ಷಮತೆ ವೃದ್ಧಿಸುವಂಥವು, ಕೊಬ್ಬು ಹೀರಿಕೊಳ್ಳುವುದನ್ನು ತಡೆಯುವಂಥವು, ಇತ್ಯಾದಿ ಉಪಾಯಗಳು ಈ ವಿಷಯದಲ್ಲಿ ಸಹಕಾರಿ. ದೇಹದ ಮೇಲೇನಾದರೂ ಗಾಯವಾದರೆ ಅದನ್ನು ನೋಡಿ, ಔಷಧಿ ಹಾಕಿ, ಗುಣಪಡಿಸುವುದು ಕಷ್ಟವಲ್ಲ. ಆದರೆ ದೇಹದೊಳಗೆ ಏನಾದರೂ ಆದರೆ ಅದನ್ನು ತಿಳಿಯುವುದು, ಗುಣಪಡಿಸುವುದು ಕಷ್ಟವಾಗುತ್ತದೆ. ಉದಾ, ರಕ್ತನಾಳಗಳಲ್ಲಿ ಕೊಬ್ಬು ತುಂಬಿದೆ ಎಂದು ರಕ್ತಪರೀಕ್ಷೆಯಲ್ಲಿ ತಿಳಿದರೆ, ಆತಂಕ ಆಗುವುದು ಸಹಜ. ಜಮೆಯಾದ ಕೊಬ್ಬನ್ನು ನಿವಾಳಿಸಲು ಯಾರು ಏನು ಹೇಳಿದರೂ ಮಾಡುತ್ತೇವೆ. ‌ಕಾರಣ, ಈ ಬಗ್ಗೆ ಉದಾಸೀನ ತಳೆದರೆ ಹೃದಯಾಘಾತ, ಪಾರ್ಶ್ವವಾಯುವಿನಂಥ ಮಾರಿಗಳು ವಕ್ಕರಿಸಿಕೊಳ್ಳುತ್ತವೆ.
ರಕ್ತದಲ್ಲಿರುವ ಅಂಟಾದ ಜಿಡ್ಡಿನಂಥ ಅಂಶವೇ ಕೊಲೆಸ್ಟ್ರಾಲ್. ಹೊಸ ಕೋಶಗಳ ಬೆಳವಣಿಗೆಗೆ ಮತ್ತು ಹಾರ್ಮೋನುಗಳ ಉತ್ಪತ್ತಿಗೆ ಈ ಅಂಶ ಬೇಕು. ಆದರೆ ಇದೇ ಅತಿಯಾದರೆ ಜೀವಕ್ಕೆ ಆಪತ್ತು. ಇದಕ್ಕಾಗಿ ಪೂರ್ಣಾವಧಿ ಸ್ವಾಸ್ಥ್ಯದ ಬಗ್ಗೆ ಗಮನ ನೀಡಬೇಕೆಂಬುದು ಆರೋಗ್ಯ ತಜ್ಞರು ಹೇಳುವ ಮಾತು. ಅಂದರೆ ಸರಿಯಾದ ಆಹಾರ ಕ್ರಮ, ಸಾಕಷ್ಟು ನಿದ್ದೆ, ನಿಯಮಿತವಾದ ವ್ಯಾಯಾಮಗಳು ಆವಶ್ಯಕವಾದ ಸಂಗತಿಗಳು. ದೇಹದಲ್ಲಿರುವ ಎಲ್‌ಡಿಎಲ್‌ ಅಥವಾ ಕೆಟ್ಟ ಕೊಬ್ಬನ್ನು ಕಡಿಮೆ ಮಾಡಲು ನೆರವಾಗುವಂಥ ಕೆಲವು ಉಪಾಯಗಳು ಮಹತ್ವದ ಪರಿಣಾಮ ಬೀರುತ್ತವೆ. ಅಂದರೆ, ದೇಹದ ಚಯಾಪಯವನ್ನು ಹೆಚ್ಚಿಸುವಂಥವು, ಜೀರ್ಣಾಂಗಗಳ ಕ್ಷಮತೆ ವೃದ್ಧಿಸುವಂಥವು, ಕೊಬ್ಬು ಹೀರಿಕೊಳ್ಳುವುದನ್ನು ತಡೆಯುವಂಥವು, ಇತ್ಯಾದಿ ಉಪಾಯಗಳು ಈ ವಿಷಯದಲ್ಲಿ ಸಹಕಾರಿ. ಈ ನಿಟ್ಟಿನಲ್ಲಿ ಬೆಳ್ಳುಳ್ಳಿಯ ಗಾತ್ರ ಚಿಕ್ಕದಾದರೂ ಸಾಮರ್ಥ್ಯ ಚಿಕ್ಕದಲ್ಲ. ಬೆಳಗಿನ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಬೆಳ್ಳುಳ್ಳಿ ಕಷಾಯ ಕುಡಿಯುವುದು ಎಲ್‌ಡಿಎಲ್‌ ಕಡಿಮೆ ಮಾಡುವಲ್ಲಿ ಹೇಗೆ ನೆರವಾಗುತ್ತದೆ ಎಂಬುದನ್ನು ನೋಡೋಣ.

ಬೆಳ್ಳುಳ್ಳಿ ಪರಿಣಾಮಕಾರಿಯೇ?

ಈ ಪುಟ್ಟ ಎಸಳುಗಳಲ್ಲಿರುವ ಅಲ್ಲಿಸಿನ್‌ ಅಂಶವು ಅತಿ ಪ್ರಬಲವಾದ ಉತ್ಕರ್ಷಣ ನಿರೋಧಕ. ಇದಕ್ಕೆ ದೇಹದಲ್ಲಿನ ಕೊಲೆಸ್ಟ್ರಾಲ್‌ ಕಡಿಮೆ ಮಾಡುವ ಸಾಮರ್ಥ್ಯವೂ ಇದೆ. ಹಲವು ರೀತಿಯ ಸೋಂಕುಗಳನ್ನು ನಿಯಂತ್ರಿಸುವ ರೀತಿಯಲ್ಲಿ ದೇಹದ ಪ್ರತಿರೋಧಕ ಶಕ್ತಿಯನ್ನೂ ಉದ್ದೀಪಿಸುತ್ತದೆ. ಬೆಳಗಿನ ಹೊತ್ತು ಇದರ ಕಷಾಯವೊಂದು ಹೊಟ್ಟೆಗಿಳಿದರೆ, ದೇಹವನ್ನು ಎಲ್ಲ ರೀತಿಯಲ್ಲೂ ಇದು ಡಿಟಾಕ್ಸ್‌ ಮಾಡಬಲ್ಲದು. ಹೇಗೆ ಎಂಬುದನ್ನ ನೋಡೋಣ

ಮಾಡುವುದು ಹೇಗೆ?

ಬೆಳ್ಳುಳ್ಳಿ ಕಷಾಯ ಮಾಡುವುದೇನೂ ಕಷ್ಟವಲ್ಲ. ಒಂದೆರಡು ಎಸಳು ಬೆಳ್ಳುಳ್ಳಿಯನ್ನು ಚೆನ್ನಾಗಿ ಜಜ್ಜಿ, ಕುದಿಯುವ ನೀರಿನಲ್ಲಿ ಒಂದೆರಡು ನಿಮಿಷಗಳ ಕಾಲ ಹಾಕಿ. ಇದನ್ನು ಸೋಸಿ. ಉಗುರು ಬಿಸಿ ಇರುವಾಗಲೇ ನಿಂಬೆ ರಸ ಅಥವಾ ಜೇನುತುಪ್ಪದೊಂದಿಗೆ ಕುಡಿಯಿರಿ.

ಇದನ್ನೂ ಓದಿ: Vitamin D: ಸೂರ್ಯನ ಕಿರಣಗಳಿಗೆ ಮೈಯೊಡ್ಡಿದರೆ ಮೂಳೆಗಳೂ ಗಟ್ಟಿ, ಹೃದಯಕ್ಕೂ ಶಕ್ತಿ!

ಇದಲ್ಲದೆ…

ನಾರಿನಂಶ ಹೆಚ್ಚಿರುವ ಆಹಾರದ ಸೇವನೆ ಮಾಡಬೇಕು. ಉತ್ಕರ್ಷಣ ನಿರೋಧಕಗಳು ಹೆಚ್ಚಿರುವಂಥ ಹಣ್ಣುಗಳು ಮತ್ತು ತರಕಾರಿಗಳು ಈ ನಿಟ್ಟಿನಲ್ಲಿ ಬೇಕಾಗುವ ಅಂಶಗಳು. ಬಾದಾಮಿ, ವಾಲ್‌ನಟ್‌, ಅವಕಾಡೊದಂಥ ಒಳ್ಳೆಯ ಕೊಬ್ಬನ್ನು ಹೊಂದಿರುವ ಆಹಾರಗಳು ಸಹ ಅಗತ್ಯವಾಗಿ ಬೇಕು. ಓಟ್‌ಮೀಲ್‌, ಸಿರಿ ಧಾನ್ಯಗಳ ಬಳಕೆ ಮಾಡುವುದೊಳಿತು. ಯಾವುದೇ ಇಡೀ ಧಾನ್ಯಗಳು ಪೂರಕ ಪರಿಣಾಮ ಬೀರುತ್ತವೆ. ಸಕ್ಕರೆ ಮತ್ತು ಸಂಸ್ಕರಿತ ಆಹಾರಗಳನ್ನು ಸಾಧ್ಯವಾದಷ್ಟೂ ಕಡಿಮೆ ಮಾಡಿ; ಸಂಪೂರ್ಣ ಬಿಟ್ಟರೆ ಇನ್ನೂ ಒಳ್ಳೆಯದು.

Exit mobile version