Site icon Vistara News

Cleaning Grapes: ದ್ರಾಕ್ಷಿಗೆ ರಾಸಾಯನಿಕದ ಕಾಟ; ಇದನ್ನು ಸುರಕ್ಷಿತವಾಗಿ ಸ್ವಚ್ಛಗೊಳಿಸುವುದು ಹೇಗೆ?

Cleaning Grapes

ಮಾರುಕಟ್ಟೆಯಲ್ಲಿ ತೂಗುತ್ತಿರುವ ರಸಭರಿತ ಹಣ್ಣು-ತರಕಾರಿಗಳನ್ನು ಹೊತ್ತು ತರುವುದು ಎಷ್ಟೋ ಜನರಿಗೆ ಬಹಳ ಪ್ರಿಯವಾದ ಸಂಗತಿ. ತಂದ ಮೇಲೆ ಅವುಗಳನ್ನು ತೊಳೆದು ಶುಚಿಗೊಳಿಸುವುದು ರೇಜಿಗೆಯ ಕೆಲಸ. ಅದರಲ್ಲೂ ದ್ರಾಕ್ಷಿಯಂಥ ಹಣ್ಣುಗಳನ್ನು ತಂದರೆ, ʻಗುಳುಂʼ ಮಾಡುವುದು ಎಷ್ಟು ಇಷ್ಟವೋ, ಅದನ್ನು ತೊಳೆದು ಸ್ವಚ್ಛ ಮಾಡುವುದು (Cleaning Grapes) ಅಷ್ಟೇ ಕಷ್ಟ. ಅದರಲ್ಲೂ ಅತಿಯಾಗಿ ಕೀಟನಾಶಕ ಸಿಂಪಡಿಸಿಕೊಳ್ಳುವ ಮತ್ತು ಗೊಂಚಲಾಗಿ ತೂಗುವ ದ್ರಾಕ್ಷಿಯಂಥ ಹಣ್ಣುಗಳನ್ನು ಚೆನ್ನಾಗಿ ತೊಳೆಯದಿದ್ದರೆ ಅದರ ಕಶ್ಮಲಗಳೆಲ್ಲ ಸೇರುವುದು ನಮ್ಮದೇ ಹೊಟ್ಟೆಗೆ. ಹಾಗಾದರೆ ದ್ರಾಕ್ಷಿಯಂಥವನ್ನು ತೊಳೆದು (Cleaning Grapes) ಸ್ವಚ್ಛಗೊಳಿಸುವುದು ಹೇಗೆ? ನಾವು ಸೇವಿಸುವ ಹಣ್ಣು-ತರಕಾರಿಗಳೆಲ್ಲವೂ ಸ್ಥಳೀಯವಾಗಿ ಬೆಳೆಯುವಂಥದ್ದಾದರೆ ಕೊಳೆ, ಧೂಳು, ರೋಗಾಣುಗಳು ಮತ್ತು ಸಂರಕ್ಷಕಗಳಿಗೆ ಹೆಚ್ಚು ಒಡ್ಡಿಕೊಳ್ಳುವ ಮುನ್ನವೇ ಉತ್ಪನ್ನಗಳನ್ನು ಖರೀದಿಸಬಹುದು. ಆದರೆ ಕೆಲವು ಪ್ರದೇಶಗಳಲ್ಲಿ ಕೆಲವು ಬೆಳೆಗಳು ಬೆಳೆಯುವುದಿಲ್ಲ. ಸೇಬು, ದ್ರಾಕ್ಷಿ, ಕಿತ್ತಳೆಯಂಥವು ಎಲ್ಲೋ ಬೆಳೆದು ಎಲ್ಲಿಗೋ ಹೋಗಿ ಮಾರಾಟವಾಗುವಂಥವು. ಆಗ ಸಂರಕ್ಷಕಗಳನ್ನು ಬಳಕೆ ಮಾಡುವುದು ಸಾಮಾನ್ಯ. ಬೆಳೆಯುವಾಗಲೇ ಕೀಟನಾಶಗಳ ಸೇಚನೆ ಮಾಡಿಸಿಕೊಂಡಿದ್ದರಂತೂ, ಅವುಗಳ ಶೇಷ ತೆಗೆಯುವುದು ದೊಡ್ಡ ಕೆಲಸ. ಇವುಗಳನ್ನು ತಿನ್ನುವ ಮುನ್ನ (Cleaning Grapes) ಏನು ಮಾಡಬಹುದು?

ಹರಿಯುವ ನೀರು

ಹಣ್ಣು-ತರಕಾರಿಗಳನ್ನು ಹರಿಯುವ ನೀರಿನಲ್ಲಿ ತೊಳೆದು ಸ್ವಚ್ಛಗೊಳಿಸುವುದು ಎಲ್ಲಕ್ಕಿಂತ ಸುಲಭ ಮತ್ತು ಸುರಕ್ಷಿತವಾದ ಸ್ವಚ್ಛತಾ ಮಾರ್ಗ. ಆದರೆ ದ್ರಾಕ್ಷಿಯ ಗೊಂಚಲಿನಲ್ಲಿ ತೂಗುವ ಎಲ್ಲಾ ಹಣ್ಣುಗಳನ್ನೂ ನಲ್ಲಿಯಡಿ ಹಿಡಿದು, ತೊಳೆದು ಶುಚಿ ಮಾಡುವುದು ಆಗದ ಕೆಲಸ. ಹಾಗೆ ಮಾಡಲು ಪ್ರಯತ್ನಿಸಿದರೆ ಹಣ್ಣುಗಳೆಲ್ಲ ಉದುರಿ ಚೆಲ್ಲಾಪಿಲ್ಲಿಯಾಗುವುದು ನಿಶ್ಚಿತ. ಆದರೆ ಸ್ವಚ್ಛವಾಗಿ ತೊಳೆಯುವುದರಿಂದಲೇ ಬಹಳಷ್ಟು ರಾಸಾಯನಿಕ ಶೇಷ ಮತ್ತು ಕೊಳೆ-ಕಶ್ಮಲಗಳನ್ನು ನಿವಾಳಿಸಬಹುದು ಎನ್ನುವುದೂ ಸತ್ಯ ತಾನೆ?

ನೆನೆಸಿಡಿ

ದೊಡ್ಡದೊಂದು ಪಾತ್ರೆಯಲ್ಲಿ ನೀರು ತುಂಬಿ ಹತ್ತು ನಿಮಿಷಗಳ ಕಾಲ ದ್ರಾಕ್ಷಿಯನ್ನು ಗೊಂಚಲಿನಲ್ಲೇ ನೆನೆಸಿಡಿ. ಕೆಲವು ನಿಮಿಷಗಳ ಕಾಲ ನೆನೆದ ಮೇಲೆ, ಚಮಚವೊಂದನ್ನು ಹಾಕಿ ದ್ರಾಕ್ಷಿಗಳನ್ನು ಲಘುವಾಗಿ ಕಲಕಿ ಅಥವಾ ಕೈ ಹಾಕಿ ಕದಡಿ. ನೀರು ಬಸಿದು, ಇನ್ನೊಂದೆರಡು ಬಾರಿ ಹೀಗೆಯೇ ಮಾಡಿ. ಇದರಿಂದ ನೀರಿನಲ್ಲಿ ಕರಗಬಹುದಾದ ರಾಸಾಯನಿಕಗಳನ್ನೆಲ್ಲ ತೆಗೆಯಬಹುದು. ಜೊತೆಗೆ ಧೂಳು, ಕೊಳೆ, ಸಣ್ಣ ಕೀಟಗಳನ್ನೆಲ್ಲ ಸ್ವಚ್ಛ ಮಾಡಬಹುದು.

ಉಪ್ಪು

ನೀರಿನಲ್ಲಿ ದ್ರಾಕ್ಷಿಗಳನ್ನು ನೆನೆಸುವಾಗ ಒಂದು ಚಮಚ ಉಪ್ಪು ಹಾಕಿ ಹತ್ತಿಪ್ಪತ್ತು ನಿಮಿಷಗಳ ಕಾಲ ನೆನೆಸಿ. ಇದರಿಂದ ಹಲವು ರೀತಿಯ ರೋಗಾಣುಗಳನ್ನು ನಾಶ ಮಾಡಬಹುದು. ಉಪ್ಪಿನ ಬದಲಿಗೆ, ಅಡುಗೆ ಸೋಡಾ ಹಾಕುವ ಕ್ರಮವೂ ಉಪಯುಕ್ತ. ಇದರಿಂದಲೂ ಹಲವು ರೀತಿಯ ಬ್ಯಾಕ್ಟೀರಿಯಗಳನ್ನು ನಾಶಪಡಿಸಬಹುದು. ಮೊದಲಿಗೆ ಹಣ್ಣು-ತರಕಾರಿಗಳನ್ನು ನೆನೆಸುವ ಹಂತದಲ್ಲಿ ವಿನೇಗರ್‌ ಹಾಕುವ ಕ್ರಮವೂ ಉಪಯುಕ್ತ.

ಸೋಡಾ, ವಿನೇಗರ್‌

ಆದರೆ ನೀರಿನಲ್ಲಿ ಉಪ್ಪು, ಅಡುಗೆ ಸೋಡಾ, ವಿನೇಗರ್‌ ಮುಂತಾದ ಯಾವುದನ್ನೇ ಹಾಕಿದರೂ, ನಂತರ ಮೂರ್ನಾಲ್ಕು ಬಾರಿ ಮತ್ತೆ ಮತ್ತೆ ಹಣ್ಣು-ತರಕಾರಿಗಳನ್ನು ತೊಳೆಯಬೇಕಾಗುತ್ತದೆ. ಹಾಗಿಲ್ಲದಿದ್ದರೆ ಉಪ್ಪಿನ ರುಚಿ, ವಿನೇಗರ್‌ನ ಹುಳಿಯಂಶ ಅಥವಾ ಸೋಡಾದ ಒಗರುಗಳೆಲ್ಲ ದ್ರಾಕ್ಷಿಯಂಥ ಗೊಂಚಲುಗಳ ಪದರುಗಳಲ್ಲಿ ಉಳಿಯುವುದು ಖಚಿತ. ಹಾಗಾಗಿ ಮತ್ತೆ ಮತ್ತೆ ನೀರನಲ್ಲಿ ನೆನೆಸಿ ತೊಳಿಯಿರಿ. ನಲ್ಲಿಯಡಿ ಹಿಡಿದು ಹರಿಯುವ ನೀರಲ್ಲಿ ತೊಳೆದರೂ ಒಳ್ಳೆಯದೆ.

ತೊಳೆಯುವುದು ಅಗತ್ಯ

ಸಾವಯವ ಉತ್ಪನ್ನಗಳನ್ನು ಖರೀದಿಸಿದರೂ, ಹರಿಯುವ ನೀರಲ್ಲಿ ಅಥವಾ ನೆನೆಸಿಯಾದರೂ ತೊಳೆಯುವುದು ಉತ್ತಮ. ಬೇರೆ ರಾಸಾಯನಿಕಗಳು ಇಲ್ಲದಿದ್ದರೂ, ಧೂಳು, ಮಣ್ಣಿನಂಥ ಕೊಳೆಗಳು, ಸಣ್ಣ ಕೀಟಗಳು ಮತ್ತು ರೋಗಾಣುಗಳು ಇದಕ್ಕೆ ತಪ್ಪುವುದಿಲ್ಲ. ಒಂದೊಮ್ಮೆ ಸೋಡಾ ಅಥವಾ ವಿನೇಗರ್‌ ಹಾಕುವುದು ಇಷ್ಟವಿಲ್ಲದಿದ್ದರೆ, ಅರಿಶಿನ ಪುಡಿಯ ನೀರಲ್ಲಿ ನೆನೆಸುವುದು ಸಹ ಪರಿಣಾಮಕಾರಿ ಮಾರ್ಗ. ಇದರಿಂದಲೂ ಹಣ್ಣುಗಳನ್ನು ರೋಗಾಣು ಮತ್ತು ಕೀಟಗಳಿಂದ ಮುಕ್ತವಾಗಿಸಬಹುದು. ಈ ಉತ್ಪನ್ನಗಳನ್ನು ತಕ್ಷಣ ತಿನ್ನುವುದಕ್ಕಲ್ಲದೆ, ಫ್ರಿಜ್‌ನಲ್ಲಿ ಇರಿಸಿಕೊಳ್ಳುವುದಕ್ಕೆ ಸ್ವಚ್ಛ ಮಾಡುತ್ತಿದ್ದೀರಿ ಎಂದಾದರೆ, ಶುಭ್ರ ಹತ್ತಿಯ ಬಟ್ಟೆಯ ಮೇಲೆ ಇವುಗಳನ್ನೆಲ್ಲ ಹರವಿಡಿ. ತಂಪಾದ, ನೆರಳಿನಂಥ ಸ್ಥಳದಲ್ಲಿ ಇವುಗಳನ್ನು ಒಂದೆರಡು ತಾಸುಗಳವರೆಗೆ ಆರಲು ಬಿಡಬಹುದು. ಪೂರ್ಣ ಆರಿದ ನಂತರ ಗಾಳಿಯಾಡುವಂಥ ಮೆಶ್‌ ಬ್ಯಾಗ್‌ಗಳಲ್ಲಿ ಅಥವಾ ಕಂಟೇನರ್‌ಗಳಲ್ಲಿ ಹಾಕಿ ಫ್ರಿಜ್‌ನಲ್ಲಿಡಿ.

Exit mobile version