ಕಾಲಕ್ಕೆ ತಕ್ಕಂತೆ ನಡೆಯಬೇಕು ಎನ್ನುವ ಮಾತಿನಂತೆ ಚಳಿಗಾಲಕ್ಕೆ ನಮ್ಮ ಜೀವನಶೈಲಿಯಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿಕೊಳ್ಳುವುದು ಅನಿವಾರ್ಯ. ಇಲ್ಲದಿದ್ದರೆ ಕೆಲವು ಆರೋಗ್ಯ ಸಮಸ್ಯೆಗಳು ಚಳಿಗಾಲದುದ್ದಕ್ಕೂ ಬಿಟ್ಟೂ ಬಿಡದಂತೆ ಕಾಡಿ, ಗ್ರಹಚಾರ ಕೆಟ್ಟರೆ ನಂತರವೂ ಮುಂದುವರಿಯುತ್ತವೆ. ವರ್ಷದ ಉಳಿದೆಲ್ಲಾ ಕಾಲಗಳಲ್ಲಿ ಕಾಣದಿದ್ದ ಮಲಬದ್ಧತೆಯ ಸಮಸ್ಯೆ ಚಳಿಗಾಲದಲ್ಲಿ ಕಾಡುವುದು ಸ್ವಲ್ಪ ಹೆಚ್ಚು. ಅದರಲ್ಲೂ ಈ ಋತುವಿನಲ್ಲಿ ಕಾಣಿಸಿಕೊಳ್ಳುವ ಮಲಬದ್ಧತೆ ಮತ್ತೆ ಬೆನ್ನು ಹತ್ತಬಾರದೆಂದರೆ ಕೆಲವು ವಿಷಯಗಳ ಬಗ್ಗೆ ಗಮನ ಹರಿಸುವುದು ಅಗತ್ಯ.
ಚಳಿಗಾಲದಲ್ಲೇ ಏಕೆ?: ವರ್ಷವಿಡೀ ಈ ಸಮಸ್ಯೆ ಇದ್ದರೆ ಅಂಥವರಿಗೆ ಸೂಕ್ತ ಚಿಕಿತ್ಸೆಯೇ ಅಗತ್ಯ. ಆದರೆ ಉಳಿದ ಸಮಯದಲ್ಲಿ ಇಲ್ಲದ್ದು, ಕೆಲವರಲ್ಲಿ ಇದು ಚಳಿಗಾಲದಲ್ಲೇ ಕಾಣಿಸಿಕೊಳ್ಳುತ್ತದೆ ಎಂದಾದರೆ, ಇದೀಗ ಜೀವನಶೈಲಿಯಿಂದ ಬರುವಂಥದ್ದು. ಚಳಿ ಹೆಚ್ಚಿದ್ದಾಗ ಬಾಯಾರಿಕೆ ಕಡಿಮೆ ಎನ್ನುವ ಕಾರಣಕ್ಕೆ ಕುಡಿಯುವ ನೀರಿನ ಪ್ರಮಾಣ ಕಡಿಮೆಯಾಗಬಹುದು. ತಣ್ಣೀರು ಕುಡಿಯಲಾಗದು ಎಂಬ ಕಾರಣದಿಂದ ಬಿಸಿಯಾಗಿ ಕುಡಿಯುವ ಟೀ, ಕಾಫಿ ಪ್ರಮಾಣ ಹೆಚ್ಚಿರಬಹುದು. ತಣ್ಣಗಿನ ಕೋಸಂಬರಿ, ಸಲಾಡ್‌ನಂಥ ಹಸಿ ತರಕಾರಿಗಳು ಬಹುತೇಕ ಊಟದ ತಟ್ಟೆಯಿಂದ ಮಾಯವಾಗಿರುತ್ತವೆ. ಇದರಿಂದ ಸಹಜವಾಗಿ ನಾರಿನಂಶ ಆಹಾರದಲ್ಲಿ ಕ್ಷೀಣಿಸಿರುತ್ತದೆ. ಬಿಸಿಯಾಗಿ, ಖಾರವಾಗಿ, ನಾಲಿಗೆಯಲ್ಲಿ ನೀರೂರುವಂತೆ ತಿಂದರೆ ಮಾತ್ರವೇ ಚಳಿಗೆ ಮದ್ದು ಎಂಬುದು ಸಹಜ ಭಾವನೆ. ಹಾಗಾಗಿ ದೇಹವನ್ನು ಬೆಚ್ಚಗಿಡುವ ನೆವದಿಂದ ಕರಿದಿದ್ದು ಮತ್ತು ಮಸಾಲೆಯುಕ್ತ ಆಹಾರದ ಪ್ರಮಾಣ ಅರಿವಿಲ್ಲದಂತೆಯೇ ಹೆಚ್ಚಾಗಿರುತ್ತದೆ. (ಇದೇ ಕಾರಣದಿಂದ ಸೂಪು, ಕಷಾಯ, ಗ್ರೀನ್ ಟೀಗಳು ಹೊಟ್ಟೆಗಿಳಿದರೆ ತೊಂದರೆಯಿಲ್ಲ) ಇವೆಲ್ಲವಕ್ಕೂ ಕಳಶವಿಟ್ಟಂತೆ, ಬೆಳಗ್ಗೆ ಬೇಗೇಳುವುದಕ್ಕೆ ಆಗದೆ ವ್ಯಾಯಾಮವೂ ಕಡಿಮೆಯಾಗಿರಬಹುದು. ಇದರಲ್ಲಿ ತಪ್ಪು ನಮ್ಮದಲ್ಲ, ಚಳಿಯದ್ದು. ಆದರೆ ತೊಂದರೆ ಆಗುತ್ತಿರುವುದು ಮಾತ್ರ ನಮಗೆ!
ಏನು ಮಾಡಬಹುದು?: ಮೇಲ್ನೋಟಕ್ಕೆ ಕಂಡುಬರುವ ಕಾರಣಗಳು ಇದಿಷ್ಟಾದರೆ, ದೇಹದ ಪಚನಕ್ರಿಯೆ ಸರಿಯಿಲ್ಲದಿದ್ದರೆ, ರಾತ್ರಿ ತಡವಾಗಿ ಊಟ ಮಾಡುತ್ತಿದ್ದರೆ, ನಿದ್ದೆ ಸರಿಯಿಲ್ಲದಿದ್ದರೆ, ವ್ಯಾಯಾಮವಿಲ್ಲದ ಜಡ ಬದುಕಿನಿಂದಲೂ ಈ ಸಮಸ್ಯೆ ಉಂಟಾಗುತ್ತದೆ. ಇದಕ್ಕಾಗಿ ವಿರೇಚಕಗಳು ಅಥವಾ ಲ್ಯಾಕ್ಸೆಟಿವ್‌ಗಳು ತಾತ್ಕಾಲಿಕ ಪರಿಹಾರ ನೀಡಬಹುದೇ ಹೊರತು ದೀರ್ಘಕಾಲ ಇವುಗಳ ಬಳಕೆಯಿಂದ ಸಮಸ್ಯೆ ಉಂಟಾಗಬಹುದು. ಹಾಗಾಗಿ ಊಟದಲ್ಲಿ ಸಾಕಷ್ಟು ಪ್ರಮಾಣದಲ್ಲಿ ನಾರಿನಂಶ ಇರುವ ಸೊಪ್ಪು, ತರಕಾರಿಗಳು, ಋತುಮಾನದ ಹಣ್ಣುಗಳು, ಇಡೀ ಧಾನ್ಯಗಳು, ತುಪ್ಪ, ಮಜ್ಜಿಗೆಯಂಥವು ಇರುವಂತೆ ನೋಡಿಕೊಳ್ಳುವುದು ಮುಖ್ಯ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವ ಕೆಲವು ಆಹಾರಗಳೂ ಸಹ ನಮ್ಮ ಹೊಟ್ಟೆಯನ್ನು ಕಾಲಕಾಲಕ್ಕೆ ಖಾಲಿ ಮಾಡಲು ನೆರವಾಗುತ್ತದೆ.
ಖರ್ಜೂರ: ಮಲಬದ್ಧತೆ, ಅತಿಯಾದ ಆಸಿಡಿಟಿ, ಕೀಲು ನೋವು, ಆಯಾಸ, ಒತ್ತಡ, ಸುಸ್ತು, ಕೂದಲು ಉದುರುವುದು ಇಂಥ ಹಲವು ಹತ್ತು ಸಮಸ್ಯೆಗಳಿಗೆ ಖರ್ಜೂರ ಉತ್ತವಾಗಬಲ್ಲದು. ರಾತ್ರಿ ಮಲಗುವ ಮುನ್ನ ೨-೩ ಖರ್ಜೂರಗಳನ್ನು ಬೆಚ್ಚಗಿನ ಸ್ವಚ್ಛ ನೀರಿನಲ್ಲಿ ನೆನೆಯಿಸಬೇಕು. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಆ ನೀರಿನ ಸಮೇತ ಖರ್ಜೂರವನ್ನು ಸೇವಿಸಬೇಕು. ಇದನ್ನು ತಿಂದ ಬಳಿಕ ಸ್ವಲ್ಪ ಬೆಚ್ಚಗಿನ ನೀರು ಸೇವಿಸುವುದು ಹೆಚ್ಚಿನ ಅನುಕೂಲ ನೀಡುತ್ತದೆ.
ಮೆಂತೆ ಬೀಜಗಳು: ರಾತ್ರಿಯೇ ಮೆಂತೆ ಬೀಜಗಳನ್ನು ನೀರಿಗೆ ಹಾಕಿ ಬೆಳಗಿನ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ಮೆಂತೆಯನ್ನು ಪುಡಿ ಮಾಡಿಟ್ಟುಕೊಂಡು, ಬೆಚ್ಚಗಿನ ನೀರಿನೊಂದಿಗೆ ಒಂದು ಚಮಚದಷ್ಟು ಸೇವಿಸಿದರೂ ಉತ್ತಮ ಪರಿಣಾಮ ಬೀರುತ್ತದೆ.
ಹಸುವಿನ ತುಪ್ಪ: ಪ್ರೊಬಯಾಟಿಕ್ ಅಂಶವಿರುವ ಹಸುವಿನ ತುಪ್ಪ, ದೇಹದ ಪಚನ ಕ್ರಿಯೆಯನ್ನು ಚುರುಕುಗೊಳಿಸುತ್ತದೆ. ದೇಹಕ್ಕೆ ಉತ್ತಮ ಕೊಬ್ಬಿನಂಶ ಒದಗಿಸಿ, ಎ, ಡಿ, ಇ ಮತ್ತು ಕೆ ಜೀವಸತ್ವಗಳನ್ನು ಹೀರಿಕೊಳ್ಳಲು ಶರೀರಕ್ಕೆ ನೆರವಾಗುತ್ತದೆ. ಬೆಳಗಿನ ಖಾಲಿ ಹೊಟ್ಟೆಯಲ್ಲಿ ಒಂದು ಸಣ್ಣ ಲೋಟ ಬೆಚ್ಚಗಿನ ಹಸುವಿನ ಹಾಲಿನಲ್ಲಿ ಒಂದು ಚಮಚದಷ್ಟು ಹಸುವಿನ ತುಪ್ಪ ಸೇವಿಸುವುದು ಮಲಬದ್ಧತೆಗೆ ಸಮರ್ಥ ಪರಿಹಾರ ನೀಡುತ್ತದೆ ಎಂಬುದು ಆಯುರ್ವೇದ ಪರಿಣಿತರ ಮಾತು.
ನೆಲ್ಲಿಕಾಯಿ: ಹತ್ತು ಹಲವು ಆರೋಗ್ಯಕರ ಗುಣಗಳ ಗಣಿಯಾಗಿರುವ ನೆಲ್ಲಿಕಾಯಿ ಮಲಬದ್ಧತೆಗೂ ಪರಿಣಾಮಕಾರಿ ಪರಿಹಾರ ನೀಡುತ್ತದೆ. ಬೆಳಗಿನ ಖಾಲಿ ಹೊಟ್ಟೆಯಲ್ಲಿ ಚಮಚದಷ್ಟು ನೆಲ್ಲಿಕಾಯಿ ಪುಡಿಯನ್ನು ಬೆಚ್ಚಗಿನ ನೀರಿನೊಂದಿಗೆ ಸೇವಿಸಬಹುದು. ಇದೀಗ ನೆಲ್ಲಿಕಾಯಿಯ ಋತುವೂ ಹೌದಾದ್ದರಿಂದ ತಾಜಾ ನೆಲ್ಲಿಕಾಯಿ ಲಭ್ಯವಿದ್ದರೆ, ಖಾಲಿ ಹೊಟ್ಟೆಯಲ್ಲಿ ೨-೩ರಷ್ಟು ಅಗಿದು ತಿನ್ನುವುದು ಒಳ್ಳೆಯದು.
ನೆನೆಸಿದ ಒಣದ್ರಾಕ್ಷಿ: ಕಪ್ಪು ದ್ರಾಕ್ಷಿಯಲ್ಲಿ ಹೆಚ್ಚಿನ ಪ್ರಮಾಣದ ನಾರಿನಂಶ ಅಡಕವಾಗಿದೆ. ಚನ್ನಾಗಿ ತೊಳೆದು ರಾತ್ರಿಡೀ ನೆನೆಸಿದ ಒಣದ್ರಾಕ್ಷಿಗಳನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನುವುದು ಮಲಬದ್ಧತೆಗೆ ಪರಿಹಾರವಾಗಬಲ್ಲದು.