ಭಾರತೀಯ ಅಡುಗೆ ಮನೆಗಳ ಪಾತ್ರೆಗಳಲ್ಲೇ ಒಂದು ಸೊಗಸಿದೆ. ನಾವು ನಿತ್ಯವೂ ಅಡುಗೆಗೆ ಬಳಸುವ ಪಾತ್ರೆಗಳಲ್ಲಿ ಪ್ರತಿಯೊಬ್ಬರ ಆಸಕ್ತಿ, ಅಭಿರುಚಿಗಳನ್ನೂ ಗುರುತಿಸಬಹುದು. ಮಣ್ಣಿನ ಮಡಕೆಯಿಂದ ಹಿಡಿದು ಗಾಜಿನ ಪಾತ್ರೆಗಳವರೆಗೆ ತರಹೇವಾರಿ ಪಾತ್ರೆಗಳು ಆಕರ್ಷಕ ವಿನ್ಯಾಸಗಳಲ್ಲಿ ಇಂದು ಲಭ್ಯವಿವೆ. ಅಡುಗೆ ಮನೆಯ ಸೌಂದರ್ಯವನ್ನು ಹೆಚ್ಚಿಸುವಲ್ಲಿ ನಾವು ಆಯ್ಕೆ ಮಾಡುವ ಪಾತ್ರೆಗಳ ಪಾಲೂ ಇದೆ ಎಂಬುದು ನಿಜ. ಆದರೂ, ಪ್ರತಿ ಪಾತ್ರೆಗಳ ಆಯ್ಕೆಯ ಹಿಂದೆ ನಮ್ಮ ಆರೋಗ್ಯದ ರಹಸ್ಯವೂ ಅಡಗಿದೆ. ನಮ್ಮ ಹಳೆಯ ತಲೆಮಾರಿನ ಹಿರಿಯರಿಂದ ಪಾತ್ರೆಗಳ ಬಳಕೆಯ ಬಗ್ಗೆ ನಮಗೆ ದಕ್ಕಿದ ವಿಚಾರದ ಹಿಂದೆ ವಿಜ್ಞಾನವೂ ಇದೆ. ವೈದ್ಯರೂ, ಸಂಶೋಧನೆಗಳೂ ಕೂಡಾ ಇವನ್ನು ಪುಷ್ಟೀಕರಿಸಿವೆ. ಮಣ್ಣಿನ ಪಾತ್ರೆಗಳು, ಕಬ್ಬಿಣದ ಪಾತ್ರೆಗಳ ಬಳಕೆ, ಎಲ್ಲೆಲ್ಲಿ ತಾಮ್ರದ ಪಾತ್ರೆಗಳನ್ನು ಬಳಸಬಹುದು ಇತ್ಯಾದಿ ಮಾಹಿತಿಗಳನ್ನು ನಾವು ಗ್ರಹಿಸಿಕೊಂಡು ಅಳವಡಿಸುವುದರಿಂದ ಸಾಕಷ್ಟು ಆರೋಗ್ಯದ (Cooking in an iron pot) ಲಾಭಗಳನ್ನೂ ಪಡೆಯಬಹುದು. ಹೊಸ ನಮೂನೆಯ ಆಧುನಿಕ ಪಾತ್ರೆಗಳ ಹಾವಳಿಯಿಂದ ತಲೆತಲಾಂತರಗಳಿಂದ ಬಂದ ಕಬ್ಬಿಣದ ಪಾತ್ರೆಗಳ ಬಳಕೆ ಇತ್ತೀಚಿನ ವರ್ಷಗಳಲ್ಲಿ ಕಡಿಮೆಯಾಗಿತ್ತು. ಆದರೆ, ಈಗ ಮತ್ತೆ ಕಬ್ಬಿಣದ ಪಾತ್ರೆಯ ಪ್ರಯೋಜನಗಳ ಬಗ್ಗೆ ಜನರಲ್ಲಿ ನಿಧಾನವಾಗಿ ಅರಿವು ಮೂಡುತ್ತಿರುವುದರಿಂದ ಕಬ್ಬಿಣ ಮತ್ತೆ ಚಾಲ್ತಿಯಲ್ಲಿ ಬರುತ್ತಿದೆ. ಬನ್ನಿ, ಕಬ್ಬಿಣದ ಪಾತ್ರೆಯನ್ನು ಬಳಸುವುದರಿಂದ ಯಾವೆಲ್ಲ ಪ್ರಯೋಜನಗಳಿವೆ ಎಂಬುದನ್ನು ನೋಡೋಣ.
ಹೆಚ್ಚು ಬೇಯಿಸಲು ಉತ್ತಮ
ಕಬ್ಬಿಣದ ಪಾತ್ರೆಯಲ್ಲಿ ಹೆಚ್ಚು ಉಷ್ಣತೆಯ ಹೀಟಿಂಗ್ ಪಾಯಿಂಟ್ ತಲುಪಬಹುದು. ಆಹಾರವನ್ನು ರೋಸ್ಟ್ ಮಾಡಲು, ಗ್ರಿಲ್ ಮಾಡಲು ಹಾಗೂ ಬೇಯಿಸಲು ಕಬ್ಬಿಣದ ಪಾತ್ರೆ ಅತ್ಯುತ್ತಮ. ಆದರೆ, ಕಬ್ಬಿಣದ ಪಾತ್ರೆಯಲ್ಲಿ ಎಲ್ಲ ಭಾಗದಲ್ಲೂ ಒಂದೇ ಸಮನಾದ ಉಷ್ಣತೆ ಹಂಚಿ ಹೋಗುವುದಿಲ್ಲ. ಹಾಗಾಗಿ ಈ ಕಬ್ಬಿಣದ ಪಾತ್ರೆಯಲ್ಲಿ ಅಡುಗೆ ಮಾಡುವ ಮೊದಲೇ ಕೊಂಚ ಹೊತ್ತು ಬಿಸಿಗೆ ಇಡಬೇಕಾಗುತ್ತದೆ. ಆದರೆ ಎಷ್ಟು ಬಿಸಿಯಾದರೂ ನಾನ್‌ಸ್ಟಿಕ್‌ನಂತೆ ಇದರಲ್ಲಿ ರಾಸಾಯನಿಕ ಬಿಡುಗಡೆಯಾಗುವ ಭಯವಿಲ್ಲ.
ತುಕ್ಕು ಹಿಡಿಯಲು ಬಿಡಬಾರದು
ಕಬ್ಬಿಣದ ಪಾತ್ರೆಯ ಬಳಕೆ ಕಷ್ಟ ಎಂಬ ಭಾವನೆ ಹಲವರಲ್ಲಿದೆ. ಆದರೆ ಅದು ಅಷ್ಟು ಕಷ್ಟದ ವಿಚಾರವೇನಲ್ಲ. ಕಬ್ಬಿಣದ ಪಾತ್ರೆ ಕೊಂಚ ಒರಟು ಮೇಲ್ಮೈಯನ್ನು ಹೊಂದಿರುವುದರಿಂದ ಅದನ್ನು ಸದಾ ತೊಳೆದು ಆರಲು ಬಿಟ್ಟು ಎಣ್ಣೆ ಹಚ್ಚಿಟ್ಟರೆ ಸಾಕಾಗುತ್ತದೆ. ತುಕ್ಕು ಹಿಡಿಯಲು ಬಿಡಬಾರದು. ಹಿಡಿದರೆ ಅದನ್ನು ತೊಳೆದು ಮತ್ತೆ ಉಪಯೋಗಿಸಲು ನೆನಪಿಡಿ. ತುಕ್ಕಿನ ಮೇಲೆಯೇ ಹಾಗೆಯೇ ಅಡುಗೆ ಮಾಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲ.
ಸ್ವಚ್ಛಗೊಳಿಸುವುದು ಸುಲಭ
ಹಾಗೆ ನೋಡಿದರೆ ಕಬ್ಬಿಣದ ತವಾ ಅಥವಾ ಪಾತ್ರೆಯನ್ನು ಸ್ವಚ್ಛಗೊಳಿಸುವುದು ಸುಲಭ. ಇದಕ್ಕೆ ಅತ್ಯಂತ ಜಾಗರೂಕತೆಯ ಕಾಳಜಿ ಅಗತ್ಯವಿಲ್ಲ. ನಾನ್‌ಸ್ಟಿಕ್ ಪಾತ್ರೆಯಂತೆ ಜಾಗರೂಕತೆಯ ಅಗತ್ಯವಿಲ್ಲ. ಯಾವುದೇ ಡಿಶ್‌ವಾಶ್ ಜೆಲ್ ಮೂಲಕ ಸ್ವಚ್ಛಗೊಳಿಸಬಹುದು. ತಿಕ್ಕಿ ತೊಳೆಯಬಹುದು. ಆದರೆ ತಿಕ್ಕಿ ತೊಳೆದ ಮೇಲೆ ಒಣಗಿಸುವಾಗ ಸ್ವಲ್ಪ ಕಾಳಜಿ ಬೇಕು. ಎಣ್ಣೆಯನ್ನು ಹಚ್ಚಿ ಇಡುವ ಕೆಲಸ ಮಾತ್ರ ಈ ಪಾತ್ರೆಯ ಕಾವಲಿಯಲ್ಲಿ ಮಾಡಬೇಕಾದ ಹೆಚ್ಚುವರಿ ಕೆಲಸವಾಗಿದೆ.
ಲೋಹದ ಯಾವುದೇ ಸೌಟು ಬಳಸಬಹುದು
ನಾನ್‌ಸ್ಟಿಕ್ ಪಾತ್ರೆಯಂತೆ ಕಬ್ಬಿಣದ ಪಾತ್ರೆಗೆ ಮರದ ಸೌಟನ್ನು ಬಳಸಬೇಕಾಗಿಲ್ಲ. ಲೋಹದ ಯಾವುದೇ ಬಗೆಯ ಸೌಟನ್ನೂ ಬಳಸಬಹುದು. ಅದರ ಮೂಲಕ ಪಾತ್ರೆಗೆ ಯಾವುದೇ ಹಾನಿಯಾಗದು.
ಆರೋಗ್ಯ ದೃಷ್ಟಿಯಿಂದ ಒಳ್ಳೆಯದು
ಕಬ್ಬಿಣದ ಪಾತ್ರೆಯ ಬಳಕೆ ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯದೇ. ನಮ್ಮ ದೇಹಕ್ಕೆ ಕಬ್ಬಿಣಾಂಶವೂ ಇದರಿಂದ ದೊರೆಯುತ್ತದೆ. ರಕ್ತಹೀನತೆಯಂತಹ ಸಮಸ್ಯೆ ಇದರಿಂದ ಬರದು. ಕಬ್ಬಿಣದ ಪಾತ್ರೆಯಲ್ಲಿ ಅಡುಗೆ ಮಾಡುವಾಗ ಕಬ್ಬಿಣದ ಸ್ವಲ್ಪ ಅಂಶ ಆಹಾರಕ್ಕೆ ಸೇರುವುದರಿಂದ ದೇಹಕ್ಕೆ ಕಬ್ಬಿಣಾಂಶವೂ ದೊರೆಯುತ್ತದೆ. ನಮ್ಮ ದೇಹದ ರಕ್ತದಲ್ಲಿನ ಹಿಮೋಗ್ಲೋಬಿನ್‌ನ ಹೆಚ್ಚಳಕ್ಕೆ ಕಬ್ಬಿಣಾಂಶ ಬೇಕೇಬೇಕು. ಹಾಗಾಗಿ ಇದು ಆರೋಗ್ಯಕ್ಕೆ ಪೂರಕ.
ಇದನ್ನೂ ಓದಿ: Clay Pot Cooking: ಮಣ್ಣಿನ ಪಾತ್ರೆಗಳಲ್ಲಿ ಅಡುಗೆ ಮಾಡಲು ಬಯಸಿದ್ದೀರಾ? ಹಾಗಿದ್ದರೆ ಇವಿಷ್ಟು ಸಂಗತಿ ನೆನಪಿರಲಿ!
ಯಾವ ನಿರ್ಬಂಧವೂ ಇಲ್ಲ
ಕಬ್ಬಿಣದ ಪಾತ್ರೆಯಲ್ಲಿ ಅಸಿಡಿಕ್ ಅಥವಾ ಆಮ್ಲೀಯ ಗುಣಗಳ ಆಹಾರವನ್ನು ಇಡುವಂತಿಲ್ಲ ಎಂಬ ಯಾವ ನಿರ್ಬಂಧವೂ ಇಲ್ಲ. ಆದರೆ, ಇಂಥ ಅಡುಗೆಯನ್ನು ಬಹಳ ಹೊತ್ತು ಇಟ್ಟುಕೊಂಡು ಕುದಿಸುವಂಥ ಪ್ರಕ್ರಿಯೆ ಮಾಡದೆ ಇರುವುದು ಒಳ್ಳೆಯದು.