Site icon Vistara News

Coriander Benefits: ಚರ್ಮದ ಯಾವುದೇ ಸಮಸ್ಯೆಗಳಿಗೂ ಕೊತ್ತಂಬರಿ ಸೊಪ್ಪು ಮದ್ದು

Coriander Benefits

ಯಾವುದೋ ಸಲಾಡ್‌ ಮೇಲೋ, ದಾಲ್‌ ಮೇಲೋ, ರಸಂಗೋ ಅಥವಾ ಪಲಾವ್‌ ಮೇಲೋ, ಅಲಂಕಾರಕ್ಕೆಂದು ಉದುರಿಸಿದ ಕೊತ್ತಂಬರಿ ಸೊಪ್ಪಿನಿಂದ ನಿಮ್ಮ ಚರ್ಮ ಫಳಫಳಿಸಬಹುದು ಎಂಬುದು ಗೊತ್ತೇ? ಗಾಢ ಪರಿಮಳದ, ತನ್ನತನವನ್ನು ಮಾಡಿದ ಆಹಾರಕ್ಕೆಲ್ಲ ದಾಟಿಸುವ ಈ ಕೊತ್ತಂಬರಿ ಸೊಪ್ಪು ಎಂಬ ಗಿಡ ಇಲ್ಲದೆ ನಮ್ಮ ಬಹುತೇಕ ಅಡುಗೆಗಳ ಪರಿಮಳ ಹೆಚ್ಚದು. ಕೊತ್ತಂಬರಿ ಸೊಪ್ಪೇ ಮುಖ್ಯ ಪದಾರ್ಥವಾಗಿ ಮಾಡುವ ಅಡುಗೆಗಳು ಕಡಿಮೆ ಇದ್ದರೂ, ಕೊತ್ತಂಬರಿ ಸೊಪ್ಪಿನ ಉಪಯೋಗ ಹೆಚ್ಚೇ. ಇಂಥ ಕೊತ್ತಂಬರಿ ಸೊಪ್ಪು ಎಂಬ ಮಾಂತ್ರಿಕ ನಮ್ಮ ಚರ್ಮದ ಆರೋಗ್ಯದ ಮೇಲೆ ಮಾಡುವ ಜಾದು (coriander benefits) ಒಂದೇ, ಎರಡೇ, ಹೇಳಿ!

ಚರ್ಮದ ಆರೋಗ್ಯಕ್ಕೆ ಪೂರಕ

ಕೊತ್ತಂಬರಿ ಸೊಪ್ಪಿನಲ್ಲಿ ಅತ್ಯಂತ ಹೆಚ್ಚು ಫೋಲೇಟ್‌, ಆಂಟಿ ಆಕ್ಸಿಡೆಂಟ್‌, ವಿಟಮಿನ್‌ ಸಿ ಹಾಗೂ ಬೀಟಾ ಕ್ಯಾರೋಟಿನ್‌ ಇವೆ. ಇವೆಲ್ಲವೂ ಚರ್ಮಕ್ಕೆ ಅತ್ಯಂತ ಒಳ್ಳೆಯದನ್ನೇ ಮಾಡುತ್ತವೆ. ಒತ್ತಡದಂತಹ ಸಮಸ್ಯೆಗಳಿಂದ ನಿಮ್ಮ ಚರ್ಮ ಕಳೆಗುಂದಿದ್ದರೂ ಇದು ಉತ್ತಮ ಪರಿಣಾಮ ನೀಡುತ್ತದೆ. ಫ್ರೀ ರ್ಯಾಡಿಕಲ್‌ಗಳ ವೃದ್ಧಿಯಾಗದಂತೆ ಇದು ತಡೆಯುವ ಮೂಲಕ ಚರ್ಮ ಬೇಗನೆ ವಯಸ್ಸಾದಂತೆ ಕಾಣುವುದನ್ನೂ ಇದು ತಡೆಯುತ್ತದೆ. ಚರ್ಮದಲ್ಲಿ ಯೌವನದ ಕಾಂತಿ ಮೂಡುತ್ತದೆ. ಚರ್ಮದಲ್ಲಿ ತೇವಾಂಶವನ್ನೂ ಹೆಚ್ಚಿಸಿ ಒಣಗಿದಂತಾಗುವುದನ್ನು ತಡೆಯುತ್ತದೆ. ಕೊತ್ತಂಬರಿ ಸೊಪ್ಪಿನಲ್ಲಿ ಕಬ್ಬಿಣಾಂಶವೂ ಹೇರಳವಾಗಿದೆ. ಇದರಿಂದಾಗಿ ರಕ್ತದಲ್ಲಿ ಹಿಮೋಗ್ಲೋಬಿನ್‌ ಹೆಚ್ಚಳಕ್ಕೂ ಇದು ಸಹಾಯ ಮಾಡುತ್ತದೆ.

ಹಿಮೋಗ್ಲೋಬಿನ್ ಅಂಶ

ಹಿಮೋಗ್ಲೋಬಿನ್‌ ಹೆಚ್ಚು ಮಾಡುವ ಕಾರಣದಿಂದ ಇದು ಅನೀಮೀಯ/ರಕ್ತಹೀನತೆಯಂಥ ಸಮಸ್ಯೆ ಅನುಭವಿಸುವವರಿಗೂ ಒಳ್ಳೆಯದು. ಅಷ್ಟೇ ಅಲ್ಲ, ರಕ್ತಶುದ್ಧಿಯಾಗುವುದರಿಂದ ಕಳಾಹೀನ ಚರ್ಮವೂ ಕಳೆಕಳೆಯಾಗುತ್ತದೆ. ಕೆಲವರಿಗೆ ಅತ್ಯಂತ ಹೆಚ್ಚಿನ ಒಣಚರ್ಮ ಅಥವಾ ಅತ್ಯಂತ ಹೆಚ್ಚಿನ ಎಣ್ಣೆಯುಕ್ತ ಚರ್ಮದ ಸಮಸ್ಯೆಯಿರುತ್ತದೆ. ಅಂಥ ಮಂದಿ ಹಸಿ ಕೊತ್ತಂಬರಿ ಸೊಪ್ಪನ್ನು ನಿತ್ಯವೂ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ಸಮಸ್ಯೆಗೆ ಒಳ್ಳೆಯ ಪರಿಹಾರ ಸಿಗುತ್ತದೆ. ಕೇವಲ ಇಷ್ಟೇ ಅಲ್ಲ, ಮೊಡವೆ, ಕಜ್ಜಿ, ಕಪ್ಪು ಕಲೆ, ಬ್ಲ್ಯಾಕ್‌ಹೆಡ್‌ ಏನೇ ಚರ್ಮದ ಸಮಸ್ಯೆಗಳೂ ಇರಲಿ, ಕೊತ್ತಂಬರಿ ಸೊಪ್ಪು ಅತ್ಯುತ್ತಮ ಔಷಧಿಯಾಗಿ ಕೆಲಸ ಮಾಡುತ್ತದೆ. ಇದರ ಆಂಟಿ ಫಂಗಲ್‌ ಹಾಗೂ ಆಂಟಿ ಮೈಕ್ರೋಬಿಯಲ್‌ ಗುಣಗಳಿಂದಾಗಿ ಎಕ್ಸಿಮಾದಂತಹ ಸಮಸ್ಯೆಗಳನ್ನೂ ಕಡಿಮೆ ಮಾಡುವಲ್ಲಿ ಪಾತ್ರ ವಹಿಸುತ್ತದೆ. ಕಪ್ಪಗಾದ ತುಟಿಗಳನ್ನೂ ಮೊದಲಿನಂತೆ ಮಾಡುವಲ್ಲಿ ಇದು ಸಹಾಯ ಮಾಡುತ್ತದೆ.

ಅಸಿಡಿಟಿಗೂ ಮದ್ದು

ಅಸಿಡಿಟಿ, ಗ್ಯಾಸ್‌ ಸಮಸ್ಯೆ ಇರುವ ಮಂದಿಗೂ ಕೊತ್ತಂಬರಿ ಸೊಪ್ಪು ಒಳ್ಳೆಯದು. ಬಹಳಷ್ಟು ಮಂದಿಗೆ ಅಸಿಡಿಟಿಯ ಸಮಸ್ಯೆಯಿಂದಾಗಿ ಮುಖದಲ್ಲಿ ಮೊಡವೆಗಳೇಳುತ್ತದೆ. ಕೊತ್ತಂಬರಿ ಸೊಪ್ಪಿನ ಪೇಸ್ಟ್‌ ಹಚ್ಚುವುದರಿಂದ ಹಾಗೂ ಜ್ಯೂಸ್‌ ಮಾಡಿ ಕುಡಿಯುವದರಿಂದಲೂ ಸಾಕಷ್ಟು ಉತ್ತಮ ಪರಿಣಾಮ ಕಾಣಬಹುದು.

ಕೊತ್ತಂಬರಿ ಸೊಪ್ಪಿನ ಪೇಸ್ಟ್

ಕೊತ್ತಂಬರಿ ಸೊಪ್ಪಿನ ಪೇಸ್ಟ್‌ಗೆ ಕೊಂಚ ಶ್ರೀಗಂಧ, ಓಟ್‌ಮೀಲ್‌ ಹಾಗೂ ರೋಸ್‌ ವಾಟರ್‌ ಸೇರಿಸಿ ಹಚ್ಚಿದರೆ ಒಣ ಚರ್ಮ ಇನ್ನೂ ಹೆಚ್ಚಿನ ಫಲ ಕಾಣಬಹುದು. ಅಥವಾ ಕೊತ್ತಂಬರಿ ಸೊಪ್ಪಿನ ಪೇಸ್ಟ್‌ಗೆ ಕೊಂಚ ಆಲೊವೆರಾ ಜೆಲ್‌ ಸೇರಿಸಿ ಹಚ್ಚಬಹುದು. ಇದು ಚರ್ಮ ಸುಕ್ಕಾಗದಂತೆ ರಕ್ಷಿಸುತ್ತದೆ. ಇದಲ್ಲದೆ, ಕೊತ್ತಂಬರಿ ಸೊಪ್ಪಿಗೆ ನಿಂಬೆಹಣ್ಣಿನ ರಸವನ್ನೂ ಸೇರಿಸಿ ಹಚ್ಚಿದರೆ ಬ್ಲ್ಯಾಕ್‌ಹೆಡ್‌ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಕೊತ್ತಂಬರಿ ಸೊಪ್ಪಿಗೆ ಕೊಂಚ ಹಾಲು, ಜೇನು, ಹಾಘೂ ನಿಂಬೆರಸ ಸೇರಿಸಿಯೂ ಹಚ್ಚಬಹುದು. ಇದರಿಂದ ಚರ್ಮಕ್ಕೆ ಇನ್ನಷ್ಟು ಹೊಳಪು ಬರುತ್ತದೆ. ಕೊತ್ತಂಬರಿ ಸೊಪ್ಪಿಗೆ ಅಕ್ಕಿ ಹಿಟ್ಟು ಹಾಗೂ ಮೊಸರು ಸೇರಿಸಿ ಹಚ್ಚಿದರೆ ಮುಖದ ಸ್ನಾಯುಗಳಿಗೆ ಒಳ್ಳೆಯ ಮಸಾಜ್‌ ಸಿಗುತ್ತದೆ.

ಇದನ್ನೂ ಓದಿ: Jackfruit Benefits: ಈ ಬೇಸಿಗೆಯಲ್ಲಿ ಹಲಸಿನಹಣ್ಣನ್ನು ಯಾಕೆ ತಿನ್ನಲೇಬೇಕು ಗೊತ್ತೆ? ಇಲ್ಲಿವೆ 10 ಕಾರಣಗಳು!

Exit mobile version