ಮಾಡಿದ ತಿನಿಸುಗಳ ಅಲಂಕಾರದ ವಿಚಾರಕ್ಕೆ ಬಂದಾಗ ಕೊತ್ತಂಬರಿ ಸೊಪ್ಪನ್ನು ನಾವು ಮರೆಯುವುದಿಲ್ಲ. ಸಾರು, ಸಾಂಬಾರು, ಬಗೆಬಗೆಯ ಚಾಟ್‌ಗಳು ಅಥವಾ ಇನ್ನೂ ಅನೇಕ ಬಗೆಯ ತಿನಿಸುಗಳಿಗೆ ಮೇಲೆ ಕೊತ್ತಂಬರಿ ಸೊಪ್ಪನ್ನು ಚಿಕ್ಕದಾಗಿ ಕತ್ತರಿಸಿ ಹಾಕದಿದ್ದರೆ ನಮಗೆ ಅದೇಕೋ ಸಮಾಧಾನವಾಗದು. ಇದೊಂದು ಬಿಟ್ಟರೆ ಅತೀ ಹೆಚ್ಚು ನಾವು ಕೊತ್ತಂಬರಿ ಸೊಪ್ಪನ್ನು ಬಳಸುವುದು ಚಟ್ನಿಗೆ. ಇವಿಷ್ಟಾದರೆ, ಕೊತ್ತಂಬರಿ ಸೊಪ್ಪಿನ ಕತೆ ಮುಗಿಯಿತು. ಆದರೆ ಇವೆಲ್ಲವನ್ನೂ ಮೀರಿ ನಾವು ಕೊತ್ತಂಬರಿ ಸೊಪ್ಪಿಗೆ ಅಡುಗೆ ಮನೆಯಲ್ಲಿ ಸ್ಥಾನ ಕೊಟ್ಟಿದ್ದು ಕಡಿಮೆಯೇ. ಫ್ರಿಡ್ಜ್‌ನ ಮೂಲೆಯಲ್ಲಿ ಕೊಳೆಯುತ್ತಾ ಬಿದ್ದಿರುವ ವಸ್ತು ಎಂದರೆ ಇದೇ ಕೊತ್ತಂಬರಿ ಸೊಪ್ಪೇ. ಆದರೆ, ಆರೋಗ್ಯದ ವಿಚಾರಕ್ಕೆ ಬಂದರೆ, ನಾವು ನಿರ್ಲಕ್ಷ್ಯ ಮಾಡುವ ಕೊತ್ತಂಬರಿ ಸೊಪ್ಪು ಬಹಳ ಮುಂದೆ ಇದೆ. ಇದರಲ್ಲಿ ಸಾಕಷ್ಟು ಪ್ರಮಾಣದಲ್ಲಿ ವಿಟಮಿನ್ ಎ ಇದ್ದು ಕಣ್ಣಿನ ಆರೋಗ್ಯಕ್ಕೆ ಬಹಳ ಅಗತ್ಯವಾದ ಪೋಷಕಾಂಶ. ಇದಲ್ಲದೆ, ಸಾಕಷ್ಟು ಬಗೆಯ ಆಂಟಿ ಆಕ್ಸಿಡೆಂಟ್‌ಗಳು, ಆಂಟಿ ಫಂಗಲ್ ಗುಣಗಳಿರುವ ಪೋಷಕಾಂಶಗಳೂ ಇದರಲ್ಲಿದ್ದು ಇವೆಲ್ಲವುಗಳ ಲಾಭ ಪಡೆಯಬೇಕೆಂದರೆ ನಾವು ಹೆಚ್ಚು ಹೆಚ್ಚು ಕೊತ್ತಂಬರಿ ಸೊಪ್ಪನ್ನು ಬೇರೆಯೇ ಮಾದರಿಯಲ್ಲಿ ಅಡುಗೆಗೆ ಬಳಸಬೇಕು. ನಮ್ಮ ಅಡುಗೆಯ ಅಲಂಕಾರಕ್ಕೂ ಮೀರಿ ಇವುಗಳನ್ನು ಹೇಗೆ ಬಳಸಬಹುದು (Coriander Greens Benefits) ಎಂಬುದನ್ನು ನೋಡೋನ ಬನ್ನಿ.
ಕೊತ್ತಂಬರಿ ಸೊಪ್ಪಿನ ರೈಸ್
ನಾವು ಬಗೆಬಗೆಯ ರೈಸ್‌ಗಳನ್ನು ಮಾಡುವುದರಲ್ಲಿ ದಕ್ಷಿಣ ಭಾರತೀಯರು ಸಿದ್ಧ ಹಸ್ತರು. ಪುದಿನ ರೈಸ್, ಟೊಮೆಟೋ ರೈಸ್, ನೆಲ್ಲಿಕಾಯಿ, ಮಾವಿನಕಾಯಿ, ಹೀಗೆ ಏನೇ ಸಿಕ್ಕರೂ ಅದರಲ್ಲೊಂದು ರೈಸ್ ವೆರೈಟಿ ಮಾಡುತ್ತೇವೆ. ಹೀಗೆಯೇ ಕೊತ್ತಂಬರಿ ಸೊಪ್ಪಿನ ರೈಸ್ ಕೂಡಾ ಮಾಡಬಹುದು. ಒಳ್ಳೆಯ ಘಮ ಅಷ್ಟೇ ಅಲ್ಲ, ಕೊತ್ತಂಬರಿ ಸೊಪ್ಪಿನ ಎಲ್ಲ ಆರೋಗ್ಯಕರ ಲಾಭಗಳನ್ನೂ ಈ ಮೂಲಕ ಪಡೆಯಬಹುದು.
ಕೊತ್ತಂಬರಿ ಸೊಪ್ಪಿನ ಪರಾಠಾ
ಆಲೂ ಪರಾಠಾ, ಈರುಳ್ಳಿ ಪರಾಠಾ, ಗೋಬಿ ಪರಾಠಾ ಹೀಗೆ ಬಗೆಬಗೆಯ ಪರಾಠಾ ನೀವು ಮಾಡಿರಬಹುದು. ತಿಂದಿರಬಹುದು. ಗೋಧಿ ಹಿಟ್ಟು ಕಲಸಿಟ್ಟು, ಸಾಮಾನ್ಯ ಚಪಾತಿ ಮಾಡಲು ಹೊರಡುವ ಸಂದರ್ಭ ಫ್ರಿಡ್ಜ್‌ನ ಮೂಲೆಯಲ್ಲಿಟ್ಟಿರುವ ಕೊತ್ತಂಬರಿ ಸೊಪ್ಪನ್ನು ಕೊಳೆಯಿಸಿ ಯಾಕೆ ಎಸೆದುಬಿಡುತ್ತೀರಿ. ಸಣ್ಣದಾಗಿ ಹೆಚ್ಚು ಈ ಹಿಟ್ಟಿನ ಜೊತೆಗೆ ಕಲಸಿ ಉಂಡೆ ಮಾಡಿ ಲಟ್ಟಿಸಿ ಬೇಯಿಸಿ. ಅಷ್ಟೇ. ಕೊತ್ತಂಬರಿ ಸೊಪ್ಪಿನ ಆರೋಗ್ಯಕರ ಲಾಭಗಳನ್ನು ಪಡೆಯುತ್ತೀರಿ.
ದಾಲ್
ಕೊತ್ತಂಬರಿ ಸೊಪ್ಪನ್ನು ಬಳಸುವ ಇನ್ನೊಂದು ವಿಧಾನ ಎಂದರೆ ದಾಲ್‌ಗಳು. ಬಹುತೇಕರು ಮನೆಗಳಲ್ಲಿ ದಾಲ್ ಮಾಡುವುದು ಸಾಮಾನ್ಯ. ಚಪಾತಿ ಜೊತೆ, ಅನ್ನದ ಜೊತೆ ಸುಲಭವಾಗಿ ಹೊಂದಿಕೊಂಡು ಹೋಗುವ ಸರಳ ಅಡುಗೆ ಈ ದಾಲ್. ಈ ದಾಲ್‌ನಲ್ಲಿರುವ ಪ್ರೊಟೀನ್ ಜೊತೆ, ವಿಟಮಿನ್ ಎ ಕೂಡಾ ಸಿಗಬೇಕೆಂದರೆ, ಕೊತ್ತಂಬರಿ ಸೊಪ್ಪನ್ನು ಕತ್ತರಿಸಿ ಧಾರಾಳವಾಗಿ ಸೇರಿಸಿ. ನಿಮ್ಮ ದಾಲ್‌ನ ಘಮ ಹೆಚ್ಚುತ್ತದೆ. ಅಷ್ಟೇ ಅಲ್ಲ, ಪೋಷಕಾಂಶವೂ ಕೂಡಾ.
ಕೊತ್ತಂಬರಿ ಸೊಪ್ಪಿನ ಜ್ಯೂಸ್
ಉತ್ತಮ ಆಹಾರದ ಜೊತೆಗೆ ನಿಮ್ಮ ಬೆಳಗನ್ನು ಆರಂಭಿಸಬೇಕೆಂದಿದ್ದರೆ ಅದಕ್ಕೆ ಕೊತ್ತಂಬರಿ ಸೊಪ್ಪಿ ಜ್ಯೂಸ್‌ಗಿಂತ ಉತ್ತಮ ಜ್ಯೂಸ್ ಇನ್ನೊಂದಿಲ್ಲ. ಕೊತ್ತಂಬರಿ ಸೊಪ್ಪನ್ನು ಚೆನ್ನಾಗಿ ಸ್ವಲ್ಪ ನೀರು ಹಾಕಿ ಸೋಸಿಕೊಂಡು ಕುಡಿದರೆ, ಸಾಕಷ್ಟು ಆರೋಗ್ಯದ ಲಾಭಗಳನ್ನು ಪಡೆಯಬಹುದು. ಇದು ಒಳ್ಳೆಯ ಡಿಟಾಕ್ಸ್ ಡ್ರಿಂಕ್ ಕೂಡಾ. ಹಾಗೆಯೇ ಕುಡಿಲಾಗದಿದ್ದರೆ ನಿಂಬೆಹಣ್ಣು, ಶುಂಠಿ, ಸೌತೆಕಾಯಿ ಇತ್ಯಾದಿಗಳನ್ನೂ ಸೇರಿಸಿಕೊಂಡು ರುಬ್ಬಿ ಬೇಕಿದ್ದರೆ, ಚಿಟಿಕೆ ಉಪ್ಪು ಸೇರಿಸಿ ಕುಡಿಯಬಹುದು. ಬೇಸಿಗೆಯಲ್ಲಿ ಇದು ಅತ್ಯಂತ ಒಳ್ಳೆಯದು. ರಿಫ್ರೆಶಿಂಗ್ ಕೂಡಾ. ತೂಕ ಇಳಿಸಲು ಬಯಸುವ ಮಂದಿಗೂ ಇದು ಬಹಳ ಒಳ್ಳೆಯದು.
ಇದನ್ನೂ ಓದಿ: Summer Skincare: ಬೇಸಿಗೆಯಲ್ಲಿ ನಿಮ್ಮ ಚರ್ಮ ಕಪ್ಪಾಗದಂತೆ ತಡೆಯಲು ಹೀಗೆ ಮಾಡಿ