Site icon Vistara News

Coronavirus News: ಕೊರೊನಾ ನಿರ್ಲಕ್ಷ್ಯಕ್ಕೆ ಬಲಿ; ಆಸ್ಪತ್ರೆಗೆ ಸೇರದೇ ಶಿವನ ಪಾದ ಸೇರಿದ 7 ಮಂದಿ!

Corona positive cases

ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌ – 19 (Covid 19) ಸಕ್ರಿಯ ಪ್ರಕರಣಗಳ ಸಂಖ್ಯೆ ಈಗಾಗಲೇ 1 ಸಾವಿರ ಗಡಿ ಮುಟ್ಟಿದ್ದರೂ ಜನರಲ್ಲಿ ಮಾತ್ರ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಇದರ ಪರಿಣಾಮ ಆಸ್ಪತ್ರೆಗೆ ದಾಖಲಾಗದೆ ಹಲವು ರೋಗಿಗಳು ಮೃತಪಡುತ್ತಿದ್ದಾರೆ ಎಂಬ ಆತಂಕಕಾರಿ ಅಂಶ ಗೊತ್ತಾಗಿದೆ. ಇನ್ನು ಭಾನುವಾರ 229 ಕೊರೊನಾ ಪಾಸಿಟಿವ್‌ ಪ್ರಕರಣಗಳು (Corona positive cases) ವರದಿಯಾಗಿದ್ದು, 62 ಮಂದಿ ಸೋಂಕಿನಿಂದ (Coronavirus News) ಗುಣಮುಖರಾಗಿ ಡಿಸ್ಚಾರ್ಜ್‌ ಆಗಿದ್ದಾರೆ.

ಕೋವಿಡ್ ಬಗ್ಗೆ ಜನರ ನಿರ್ಲಕ್ಷ್ಯ ಧೋರಣೆ ಬಗ್ಗೆ ಆರೋಗ್ಯ ಇಲಾಖೆ ತೀವ್ರ ಕಳವಳ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಸೋಂಕಿಗೊಳಪಟ್ಟರೂ ಸರಿಯಾದ ಚಿಕಿತ್ಸೆ ಪಡೆಯದೆ, ಆಸ್ಪತ್ರೆಗೆ ದಾಖಲಾಗದೆ ಮೃತಪಡುತ್ತಿದ್ದಾರೆ. ರಾಜ್ಯದಲ್ಲಿ ಇದುವರೆಗೆ ಕೋವಿಡ್‌ಗೆ ಮೃತಪಟ್ಟ 12 ಜನರ ಪೈಕಿ 7 ಮಂದಿ ಸರಿಯಾದ ಸಮಯಕ್ಕೆ ಚಿಕಿತ್ಸೆ ಪಡೆದಿಲ್ಲ ಎಂಬುದು ಗೊತ್ತಾಗಿದೆ. ಇವರು ಕೊನೇ ಕ್ಷಣದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೀಗೆ ದಾಖಲಾದ 24 ಗಂಟೆಯಲ್ಲಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ಹೇಳಿದೆ. ಮೃತರೆಲ್ಲರಲ್ಲಿಯೂ ಕೋವಿಡ್‌ ಸೋಂಕು ದೃಢಪಟ್ಟಿದೆ.

ಕಳೆದ ಅಲೆಯಂತೆ ಈ ಬಾರಿಯೂ ಜನರಲ್ಲಿ ನಿರ್ಲಕ್ಷ್ಯ ಧೋರಣೆ ಮೂಡಿದೆ ಎನ್ನಲಾಗಿದೆ. ಜೆಎನ್ 1 ವೈರಸ್ ಸಾವಿನ ಸಂಖ್ಯೆಯನ್ನು ಏರಿಕೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯಿಂದ ಡೆತ್‌ ಆಡಿಟ್ ಆರಂಭ ಮಾಡಲಾಗಿದೆ.

ಈವರೆಗಿನ ಕೋವಿಡ್‌ ಸ್ಥಿತಿಗತಿ ಹೇಗಿದೆ?

ರಾಜ್ಯಾದ್ಯಂತ 3527 ಮಂದಿಗೆ ಕೋವಿಡ್‌ ತಪಾಸಣೆ ನಡೆಸಲಾಗಿದ್ದು, ಈ ಪೈಕಿ 229 ಮಂದಿಗೆ ಸೋಂಕು ದೃಢಪಟ್ಟಿದೆ. ಇನ್ನು ಕೋವಿಡ್‌ ಪಾಸಿಟಿವಿಟಿ ದರ 6.49 ದಾಖಲಾಗಿದ್ದು, ಮರಣ ಪ್ರಮಾಣ ದರ ಶೂನ್ಯವಿದೆ. ಒಟ್ಟು 1000 ಸಕ್ರಿಯ ಪ್ರಕರಣಗಳಲ್ಲಿ 943 ಮಂದಿ ಹೋಮ್‌ ಐಸೋಲೇಷನ್‌ನಲ್ಲಿದ್ದಾರೆ. 57 ರೋಗಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈ ಪೈಕಿ 22 ಮಂದಿ ಐಸಿಯುನಲ್ಲಿದ್ದಾರೆ.

ಕೋವಿಡ್‌ ಮಾರ್ಗಸೂಚಿ ಅನುಷ್ಠಾನದಲ್ಲಿ ಬಿಬಿಎಂಪಿ ನಿರ್ಲಕ್ಷ್ಯ?

ಮಾಸ್ಕ್ ಮತ್ತು ಸಾಮಾಜಿಕ ಅಂತರ ಕಡ್ಡಾಯ ಇಲ್ಲದಿದ್ದರೂ ಜಾಗೃತಿ ಮೂಡಿಸುವಂತೆ ಆರೋಗ್ಯ ಇಲಾಖೆ ಬಿಬಿಎಂಪಿಗೆ ನಿರ್ದೇಶನ ನೀಡಿತ್ತು. ಈ ಬಗ್ಗೆ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಅವರು ಇತ್ತೀಚೆಗೆ ಬಿಬಿಎಂಪಿ ಆಯುಕ್ತರಿಗೆ ಪತ್ರ ಬರೆದಿದ್ದರು. ಆದರೆ, ಕೋವಿಡ್‌ ನಿಯಮಾವಳಿ ಅನುಷ್ಠಾನದಲ್ಲಿ ಬಿಬಿಎಂಪಿ ನಿರ್ಲಕ್ಷ್ಯ ವಹಿಸುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಹೊಸ ವರ್ಷಾಚರಣೆ ವೇಳೆ ಅತಿ ಹೆಚ್ಚು ಜನದಟ್ಟಣೆ ಪ್ರದೇಶಗಳಲ್ಲಿ ನಿಗಾ ವಹಿಸುವಂತೆ ಆರೋಗ್ಯ ಇಲಾಖೆ ಹೇಳಿತ್ತು. ಬ್ರಿಗೇಡ್ ರೋಡ್, MG ರೋಡ್, ಚರ್ಚ್ ಸ್ಟ್ರೀಟ್ ಗಳಲ್ಲಿ ಮಾಸ್ಕ್ ಹಾಕದೆ ಬಹುತೇಕ ಜನರು ಓಡಾಡುತ್ತಿದ್ದಾರೆ. ಆದರೆ, ಬಿಬಿಎಂಪಿ ವತಿಯಿಂದ ಕನಿಷ್ಠ ಜಾಗೃತಿ ಮೂಡಿಸದೆ ನಿರ್ಲಕ್ಷ್ಯ ವಹಿಸಲಾಗುತ್ತಿರುವುದು ಕಂಡುಬಂದಿದೆ. ಹೀಗಾಗಿ ಸೀಮಿತ ಜನದಟ್ಟಣೆ ಪ್ರದೇಶಗಳಲ್ಲಿ ಮಾರ್ಷಲ್‌ಗಳ ನೇಮಿಸಿ ಜಾಗೃತಿ ಮೂಡಿಸಲು ಬಿಬಿಎಂಪಿ ವಿಫಲವಾಗಿದೆ ಎಂದು ಸಾರ್ವಜನಿಕರು ಅಸಮಾಧಾನ ಹೊರಹಾಕುತ್ತಿದ್ದಾರೆ.

ಜಿಲ್ಲಾಸ್ಪತ್ರೆಗಳಲ್ಲಿ ಕೋವಿಡ್‌ ವಾರ್ಡ್‌ ಮೀಸಲಿಡಲು ಸರ್ಕಾರ ಸೂಚನೆ

ಸೋಂಕು ಹರಡುವಿಕೆ ನಿಯಂತ್ರಿಸಲು ಚಿಕಿತ್ಸೆಗೆ ಆಗಮಿಸುವ ಸೋಂಕಿತರನ್ನು ದಾಖಲಿಸಕೊಳ್ಳಲು ಜಿಲ್ಲಾಸ್ಪತ್ರೆಗಳಲ್ಲಿ ಪ್ರತ್ಯೇಕ ಕೋವಿಡ್‌ ವಾರ್ಡ್‌ (Isolated Covid Wards) ಮೀಸಲಿಡಲು ಅಧಿಕಾರಿಗಳಿಗೆ ರಾಜ್ಯ ಸರ್ಕಾರ ಸೂಚಿಸಿದೆ.

ಸಚಿವ ಸಂಪುಟ ಉಪಸಮಿತಿ (ರಾಜ್ಯ ಕೋವಿಡ್ ಸಾಂಕ್ರಾಮಿಕ ರೋಗ ನಿಯಂತ್ರಣ) ಸಭೆಯ ನಿರ್ದೇಶನದಂತೆ, ಕೋವಿಡ್-19 ಸೋಂಕು ಮುನ್ನೆಚ್ಚರಿಕೆ ವಹಿಸುವ ಸಲುವಾಗಿ ಬೆಂಗಳೂರಿನ ಪ್ರಮುಖ ಸಾರ್ವಜನಿಕ ಆಸ್ಪತ್ರೆಗಳು ಸೇರಿದಂತೆ ಜಿಲ್ಲಾಸ್ಪತ್ರೆಗಳಲ್ಲಿ ಪ್ರತ್ಯೇಕ ಕೋವಿಡ್‌ ವಾರ್ಡ್‌ (Isolated Covid Wards) ಅನ್ನು ಮೀಸಲಿಡಲು ತಿಳಿಸಲಾಗಿದೆ.

ಇದನ್ನೂ ಓದಿ | Skincare Tips: ಚರ್ಮದ ಆರೈಕೆ ಮಾಡುವಾಗ ಈ ಸಂಗತಿ ಮರೆಯಬೇಡಿ

ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಯ H-Block, ಕೆ.ಸಿ.ಜನರಲ್ ಆಸ್ಪತ್ರೆ, ಜಯನಗರ ಜನರಲ್ ಆಸ್ಪತ್ರೆ, ಸಿ.ವಿ.ರಾಮನ್ ಆಸ್ಪತ್ರೆ ಹಾಗೂ ರಾಜೀವ್ ಗಾಂಧಿ ಎದೆರೋಗಗಳ ಸಂಸ್ಥೆ (RGICD) ಗಳಲ್ಲಿ ಪ್ರತ್ಯೇಕ ಕೋವಿಡ್‌ ವಾರ್ಡ್‌ (Isolated Covid Wards) ಅನ್ನು ಕಾಯ್ದಿರಿಸಲು ಮತ್ತು ರಾಜ್ಯದ ಎಲ್ಲಾ ಜಿಲ್ಲೆಯ ಜಿಲ್ಲಾ ಆಸ್ಪತ್ರೆ (ವೈದ್ಯಕೀಯ ಕಾಲೇಜುಗಳು ಸೇರಿದಂತೆ) ಕನಿಷ್ಠ 10 ಸಾಮಾನ್ಯ ಹಾಸಿಗೆಗಳು ಮತ್ತು 5 ಐ.ಸಿ.ಯು ಹಾಸಿಗೆಗಳನ್ನು ಪ್ರತ್ಯೇಕವಾಗಿ ಕೋವಿಡ್-19 ಸೋಂಕಿತರ ಚಿಕಿತ್ಸೆಗಾಗಿ ಕಾಯ್ದಿರಿಸಬೇಕು ಎಂದು ಆರೋಗ್ಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಟಿ.ಕೆ. ಅನಿಲ್‌ ಕುಮಾರ್‌ ಸುತ್ತೋಲೆ ಹೊರಡಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version