ಬಣ್ಣಬಣ್ಣದ ಹತ್ತಿಯ ಉಂಡೆಯಂಥ ಕಾಟನ್ ಕ್ಯಾಂಡಿ ಇತ್ತೀಚೆಗೆ ಸುದ್ದಿಯಾಗಿದೆ. ಕಡು ಗುಲಾಬಿ ಬಣ್ಣದಲ್ಲಿ ಸಾಮಾನ್ಯವಾಗಿ ಕಂಡು ಬರುತಿದ್ದ ಕಾಟನ್ ಕ್ಯಾಂಡಿಗಳು ಇತ್ತೀಚೆಗೆ ವರ್ಣಾಂತರ ಹೊಂದಿ, ಹಸಿರು, ನೇರಳೆಯಂಥ ಕಣ್ಣು ಕೋರೈಸುವ ಬಣ್ಣಗಳಿಂದ ಶೋಭಿಸಿ, ಚಿಣ್ಣರ ಬಾಯಲ್ಲಿ ನೀರೂರಿಸುತ್ತಿದ್ದವು. ಆದರೆ ಆರೋಗ್ಯಾಧಿಕಾರಿಗಳು ತಮಿಳುನಾಡಿನಲ್ಲಿ ಇತ್ತೀಚೆಗೆ ನಡೆಸಿದ ದಾಳಿಯಲ್ಲಿ, ಇಂಥ ವರ್ಣರಂಜಿತ ಕಾಟನ್‌ಕ್ಯಾಂಡಿಗಳ ಹಿಂದಿನ ಬಣ್ಣ ಬಯಲು ಮಾಡಿದ್ದಾರೆ. ಏನಿತ್ತು ಈ ಬಣ್ಣದ ಹತ್ತಿಯುಂಡೆಯಂಥ ಕ್ಯಾಂಡಿಗಳಲ್ಲಿ? ಅವು ಆರೋಗ್ಯಕ್ಕೆ (Cotton Candy) ಹಾಳು ಎಂದೇಕೆ ಹೇಳಲಾಗುತ್ತಿದೆ? ಜವಳಿ ಉದ್ದಿಮೆಗಳಲ್ಲಿ ಬಳಸಲಾಗುವ ರೋಡಮೈನ್ ಬಿ (Harmful Effects of ‘Rhodamine B’) ಎನ್ನುವ ಡೈ ಈ ತಿನ್ನುವ ವಸ್ತುಗಳಲ್ಲಿತ್ತು ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ, ಈ ಬಗೆಗಿನ ವಿವರಗಳಿಲ್ಲಿವೆ. ರೋಡಮೈನ್ ಬಿ ಎನ್ನುವುದು ಸಿಂಥೆಟಿಕ್ ಡೈ. ಇದನ್ನು ಯಾವುದೇ ತಿನ್ನುವ ವಸ್ತುಗಳಲ್ಲಿ ಬಳಸುವಂತಿಲ್ಲ. ಆದರೆ ಕಾಟನ್ ಕ್ಯಾಂಡಿಗೆ ಕಡು ಗುಲಾಬಿಯಿಂದ ಹಿಡಿದು ತರಹೇವಾರಿ ಬಣ್ಣಗಳನ್ನು ನೀಡುವಲ್ಲಿ ಇಂಥ ಸಿಂಥೆಟಿಕ್ ಬಣ್ಣಗಳು ಪ್ರಧಾನವಾಗಿ ಬಳಕೆಯಲ್ಲಿವೆ. ಆರೋಗ್ಯವನ್ನು ಕಡೆಗಣಿಸಿ, ವೆಚ್ಚವನ್ನು ಕಡಿಮೆ ಮಾಡುವ ಉದ್ದೇಶದಿಂದ, ಕ್ಯಾಂಡಿ ತಯಾರಕರು ಇಂಥ ಹಾನಿಕಾರಕ ಬಣ್ಣಗಳನ್ನು ಬಳಸುತ್ತಿರುವುದು ಆಘಾತಕಾರಿ. ಏನು ಇಂಥ ಬಣ್ಣಗಳು ಉಂಟುಮಾಡುವ ಕೆಟ್ಟ ಪರಿಣಾಮಗಳು?
ಕ್ಯಾನ್ಸರ್‌ಕಾರಕ
ರೋಡಮೈನ್ ಬಿ ಮನುಷ್ಯರಲ್ಲಿ ಕ್ಯಾನ್ಸರ್ ಉಂಟುಮಾಡುವ, ಅದರಲ್ಲೂ ಪ್ರಧಾನವಾಗಿ ಮೂತ್ರಜನಕಾಂಗಗಳ ಕ್ಯಾನ್ಸರ್ ತರುವ ಸಾಧ್ಯತೆಯಿದೆ ಎನ್ನುತ್ತದೆ ಕ್ಯಾನ್ಸರ್ ಸಂಶೋಧನೆ ಕುರಿತಾದ ಅಂತಾರಾಷ್ಟ್ರೀಯ ಸಂಸ್ಥೆ (ಐಎಆರ್‌ಸಿ). ಈ ಬಗ್ಗೆ ವಿಶ್ವ ಮಟ್ಟದಲ್ಲಿ ನಡೆದಿರುವ ಕೆಲವು ಅಧ್ಯಯನಗಳು ಸಹ ಈ ವಿಷಯವನ್ನು ದೃಢಪಡಿಸಿವೆ.
ಅಲರ್ಜಿ
ಈ ರಾಸಾಯನಿಕ ಹಲವು ರೀತಿಯಲ್ಲಿ ಅಲರ್ಜಿಗಳನ್ನು ತರಬಲ್ಲದು. ಸೂಕ್ಷ್ಮ ಚರ್ಮದವರಿಗೆ ತುರಿಕೆಯಾಗಿ ಚರ್ಮ ಕೆಂಪಾಗಿ ಉರಿಯೇಳುವ ಸಾಧ್ಯತೆಯಿದೆ. ಕಣ್ಣಿಗೇನಾದರೂ ಹೋದರೆ ಕಣ್ಣುರಿ, ಕೆಂಪಾಗುವುದು, ನೀರು ಸುರಿಯುವುದು, ಕಿರಿಕಿರಿಯಂಥ ಸಮಸ್ಯೆಗಳು ಎದುರಾಗಬಹುದು. ಶ್ವಾಸಕೋಶದಲ್ಲಿ ಉರಿಯೂತ ಕಾಣಿಸಿಕೊಂಡು ಅಸ್ತಮಾ, ಉಸಿರಾಟದ ತೊಂದರೆ, ಕೆಮ್ಮಿನಂಥ ಆರೋಗ್ಯ ತೊಂದರೆಗಳು ಕಾಣಬಹುದು. ಇವೆಲ್ಲ ಸೂಕ್ಷ್ಮ ಇರುವವರಿಗೆ ಮಾತ್ರವೇ ಅಲ್ಲ, ಯಾರಲ್ಲಿಯೂ ಅಲರ್ಜಿ ಸಮಸ್ಯೆಗಳನ್ನು ಹುಟ್ಟುಹಾಕಬಹುದು.
ಜೀರ್ಣಾಂಗದ ತೊಂದರೆಗಳು
ರೋಡಮೈನ್ ಹೊಟ್ಟೆಗೆ ಹೋಗುವುದರಿಂದ ಜೀರ್ಣಾಂಗಗಳಲ್ಲಿ ಹಲವು ರೀತಿಯ ವೈಪರಿತ್ಯಗಳು ಕಂಡುಬಂದೀತು. ಹೊಟ್ಟೆ ತೊಳೆಸುವುದು, ಹೊಟ್ಟೆ ನೋವು, ವಾಂತಿ, ಡಯರಿಯದಂಥ ಸಮಸ್ಯೆಗಳು ಸಾಮಾನ್ಯ. ಕೆಲವು ಅಪರೂಪದ ಪ್ರಕರಣಗಳಲ್ಲಿ ಜೀರ್ಣಾಂಗಗಳಲ್ಲಿ ರಕ್ತಸ್ರಾವವೂ ಆಗಬಹುದು.
ಭ್ರೂಣಕ್ಕೆ ತೊಂದರೆ
ಗರ್ಭಿಣಿಯರು ಈ ರಾಸಾಯನಿಕವನ್ನು ಸೇವಿಸಿದಲ್ಲಿ ಹೊಟ್ಟೆಯಲ್ಲಿರುವ ಶಿಶುವಿಗೆ ತೊಂದರೆ ಸಂಭವಿಸಬಹುದು. ಮಗುವಿನ ಬೆಳವಣಿಗೆ ಕುಂಠಿತವಾಗುವ ಸಾಧ್ಯತೆಯನ್ನು ಅಧ್ಯಯನಗಳು ಸೂಚಿಸುತ್ತವೆ. ಈ ರಾಸಾಯನಿಕಕ್ಕೆ ಅತಿಯಾಗಿ ತೆರೆದುಕೊಂಡಲ್ಲಿ ಫಲವಂತಿಕೆಯ ಮೇಲೂ ಪ್ರತಿಕೂಲ ಪರಿಣಾಮ ಬೀರಬಹುದು.
ಇದನ್ನೂ ಓದಿ: Dates Benefits: ಲೈಂಗಿಕ ಶಕ್ತಿ ಹೆಚ್ಚಿಸಿಕೊಳ್ಳಬೇಕೆ? ದಿನಕ್ಕೊಂದು ಖರ್ಜೂರ ತಿಂದರೆ ಸಾಕು!
ಪರಿಸರದ ಮೇಲಿನ ಪರಿಣಾಮ
ಮಣ್ಣಿನಲ್ಲಿ ಸುಲಭವಾಗಿ ಕರಗದಿರುವಂಥ ರಾಸಾಯನಿಕವಿದು. ವಾತಾವರಣದಲ್ಲಿ ದೀರ್ಘಕಾಲದವರೆಗೆ ಅಳಿಯದೇ ಉಳಿಯುವಂಥ ಈ ವಸ್ತುವು, ಮಣ್ಣು, ನೀರು, ಗಾಳಿಯನ್ನೆಲ್ಲ ಮಲಿನ ಮಾಡಬಲ್ಲದು. ಜಲಚರಗಳ ಆರೋಗ್ಯಕ್ಕೆ ಹಾನಿ ಮಾಡಬಲ್ಲದು. ಎಲ್ಲಾ ನಿಸರ್ಗ ಮೂಲಗಳ ಮೂಲಕ ಮತ್ತೆ ನಮ್ಮದೇ ದೇಹವನ್ನು ಪ್ರವೇಶಿಸಿ, ಇನ್ನಷ್ಟು ಸಮಸ್ಯೆಗಳನ್ನು ಸೃಷ್ಟಿಸಬಲ್ಲದು.