ಜಗತ್ತಿನಲ್ಲಿ ಕೋವಿಡ್ ವಿದ್ಯಮಾನಗಳು ಹೇಗೆಂದರೆ ಮಳೆ ನಿಂತರೂ ಹನಿ (Covid-19 linked with high BP) ಮುಂದುವರಿಯುವ ಸ್ಥಿತಿ. ರೋಗ ಬಂತು- ಬಂದಿದ್ದು ಹೋಯ್ತು ಎನ್ನುವಂತೆಯೇ ಇಲ್ಲ. ಹೋದ್ಯಾ ಪಿಶಾಚಿ ಎಂದರೆ ಬಂದೆ ಗವಾಕ್ಷೀಲಿ ಬಂದೆ ಎಂಬಂತೆ, ರೂಪಾಂತರಿ ತಳಿಗಳು ಪ್ರಕಟವಾಗುತ್ತಲೇ ಇವೆ. ಮಾತ್ರವಲ್ಲ, ಸೋಂಕು ತಾಗಿ ಉಳಿದವರಿಗೆ ಹಲವು ರೀತಿಯ ಸಮಸ್ಯೆಗಳನ್ನು ಈ ರೋಗ ತಂದೊಡ್ಡುತ್ತಿದೆ. ಕೋವಿಡ್ ನಂತರ ಆರೋಗ್ಯದ ಸ್ಥಿತಿಗತಿಗಳ ಬಗ್ಗೆ ಹಲವಾರು ಅಧ್ಯಯನಗಳು ವಿಶ್ವದ ಹಲವೆಡೆಗಳಲ್ಲಿ ನಡೆಯುತ್ತಿವೆ. ಅಂಥದ್ದೇ ಒಂದು ಅಧ್ಯಯನ ಅಮೆರಿಕನ್ ಹಾರ್ಟ್ ಅಸೋಸಿಯೇಶನ್ ನಿಯತಕಾಲಿಕದಲ್ಲಿ ಪ್ರಕಟವಾಗಿದ್ದು, ಕೋವಿಡ್ ಪೀಡಿತರು ಭವಿಷ್ಯದಲ್ಲಿ ರಕ್ತದ ಏರೊತ್ತಡದ ಸಮಸ್ಯೆಯಿಂದ ಬಳಸಲುವ ಸಾಧ್ಯತೆಗಳು ದಟ್ಟವಾಗಿವೆ.
“ರಕ್ತದೊತ್ತಡ, ಮಧುಮೇಹದಂಥ ಸಮಸ್ಯೆ ಇರುವವರಲ್ಲಿ ಕೋವಿಡ್ ಸೋಂಕು ಮಾರಕವಾಗಿಯೇ ಕಂಡಿದ್ದು ಹೌದು. ಅಂಥವರು ಆಸ್ಪತ್ರೆಗೆ ದಾಖಲಾಗಿದ್ದು ಮತ್ತು ಜೀವ ಕಳೆದುಕೊಂಡಿದ್ದೂ ತೀವ್ರಗತಿಯಲ್ಲಿಯೇ ಇತ್ತು. ಈಗಾಗಲೇ ಈ ಸಮಸ್ಯೆ ಇರುವವರಲ್ಲಿ ಇದು ಹೆಚ್ಚುತ್ತದೋ ಅಥವಾ ಇಲ್ಲದಿರುವವರನ್ನು ಈ ಬಲೆಗೆ ನೂಕುತ್ತದೊ ಎನ್ನುವ ಬಗ್ಗೆ ಸ್ಪಷ್ಟ ಅಧ್ಯಯನಗಳು ನಡೆಯಬೇಕಿದೆ” ಎಂದು ಈ ಅಧ್ಯಯನದಲ್ಲಿ ಪಾಲ್ಗೊಂಡಿದ್ದ ಹಿರಿಯ ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಆದರೆ ಹೆಚ್ಚಿನ ಜನರು ರಕ್ತದೊತ್ತಡದ ಸಮಸ್ಯೆ ಎದುರಿಸುವ ಸೂಚನೆಗಳು ಸ್ಪಷ್ಟವಾಗಿವೆ.
ಅಧ್ಯಯನ ನಡೆಸಿದ್ದು ಯಾರಲ್ಲಿ?
ಕೋವಿಡ್ ಮತ್ತು ಇತರ ವೈರಸ್ ಸೋಂಕುಗಳ (ಫ್ಲೂ, ಶ್ವಾಸಕೋಶಕ್ಕೆ ತಗುಲುವ ಇತರ ವೈರಸ್ ಸೋಂಕುಗಳು) ನಡುವಿನ ಪಶ್ಚಾತ್ ಪರಿಣಾಮಗಳ, ಅದರಲ್ಲೂ ಮುಖ್ಯವಾಗಿ ರಕ್ತದೊತ್ತಡದ ಕುರಿತಾದ, ಮೊದಲ ತೌಲನಿಕ ಅಧ್ಯಯನವಿದು. ವಯಸ್ಕರಲ್ಲಿ ಸಿಸ್ಟೋಲಿಕ್ ಮತ್ತು ಡಯಾಸ್ಟೋಲಿಕ್ ಅಂಶಗಳು 130/80ಕ್ಕಿಂತ ಹೆಚ್ಚಿದ್ದರೆ, ಅದನ್ನು ರಕ್ತದ ಏರೊತ್ತಡ ಎಂದು ಪರಿಗಣಿಸಲಾಗುತ್ತದೆ.
ನ್ಯೂಯಾರ್ಕ್‌ನ ಮಾಂಟೆಫಾಯ್ರ್ ಹೆಲ್ತ್ ಸಿಸ್ಟಂನಲ್ಲಿ ದಾಖಲಾಗುವ ಅಪಾರ ಪ್ರಮಾಣದ ಆರೋಗ್ಯ ದಾಖಲೆಗಳನ್ನು ಈ ಅಧ್ಯಯನಕ್ಕಾಗಿ ಬಳಸಿಕೊಳ್ಳಲಾಗಿತ್ತು. ಇದಕ್ಕಾಗಿ ಅಧ್ಯಯನ ನಡೆಸಲಾದ ಸುಮಾರು 45 ಸಾವಿರ ವ್ಯಕ್ತಿಗಳ ಆರೋಗ್ಯ ದಾಖಲೆಗಳು ನಾನಾ ದೇಶ, ಭಾಷೆ, ಬಣ್ಣಗಳಿಗೆ ಸೇರಿದವರದ್ದಾಗಿದ್ದವು.
ಭವಿಷ್ಯದಲ್ಲಿ ಸಮಸ್ಯೆ ಹೆಚ್ಚಬಹುದು
ಫ್ಲೂನಂಥ ವೈರಸ್ ಸೋಂಕುಗಳಿಗೆ ಹೋಲಿಸಿದರೆ, ಒಮ್ಮೆಲೆ ಕೋವಿಡ್ ಸೋಂಕಿಗೆ ತುತ್ತಾದವರ ಸಂಖ್ಯೆ ಅಪಾರ ಪ್ರಮಾಣದಲ್ಲಿದೆ. ಹಾಗಾಗಿ ಭವಿಷ್ಯದಲ್ಲಿ ರಕ್ತದೊತ್ತಡದ ಸಮಸ್ಯೆಯಿಂದ ನರಳುವವರ ಸಂಖ್ಯೆ ಮಿತಿಮೀರಬಹುದು. ಈ ಹಿನ್ನೆಲೆಯಲ್ಲಿ ಮತ್ತೊಂದು ಆರೋಗ್ಯ ತುರ್ತು ಪರಿಸ್ಥಿತಿ ಎದುರಿಸಲು ಸಜ್ಜಾಗಬೇಕಿದೆಯೇ ಎಂಬ ಆತಂಕವನ್ನು ಅಧ್ಯಯನ ವ್ಯಕ್ತಪಡಿಸಿದೆ. “ಕೋವಿಡ್ ಸೋಂಕಿಗೆ ತುತ್ತಾದವರು ತಮ್ಮ ಆರೋಗ್ಯದ ಕಾಳಜಿ ಮಾಡುವ ಬಗ್ಗೆ ಸೂಕ್ತ ಮಾಹಿತಿ ಹೊಂದಿರಬೇಕು. ಅದರಲ್ಲೂ ರಕ್ತದೊತ್ತಡದಂಥ ಸಮಸ್ಯೆಯ ಅಂಚಿಗೆ ಇರುವವರಿಗೆ ಈ ಬಗ್ಗೆ ಹೆಚ್ಚಿನ ಕಾಳಜಿ ಅಗತ್ಯವಿದೆ. ಇದರಿಂದುಂಟಾಗುವ ಹೃದಯದ ಸಮಸ್ಯೆ, ಪಾರ್ಶ್ವವಾಯು, ಕಿಡ್ನಿ ಸಮಸ್ಯೆ ಮುಂತಾದವುಗಳ ಬಗ್ಗೆ ಅವರಲ್ಲಿ ಅರಿವು ಮೂಡಿಸುವ ಅಗತ್ಯವಿದೆ” ಎಂಬುದು ಅಧ್ಯಯನಕಾರರ ಕಳಕಳಿ.
ಮಾನಸಿಕತೆಯೂ ಕಾರಣ
ಸಾಮಾಜಿಕ ಮತ್ತು ಆರ್ಥಿಕವಾಗಿ ಹೆಚ್ಚು ಸಬಲರಲ್ಲದ ವ್ಯಕ್ತಿಗಳ ದಾಖಲೆಗಳೇ ಈ ಅಧ್ಯಯನದಲ್ಲಿ ಹೆಚ್ಚಾಗಿದ್ದವು. ಹಾಗಾಗಿ ರೋಗದ ಅಡ್ಡ ಪರಿಣಾಮಕ್ಕೆ ತುತ್ತಾಗುವ ಸಾಧ್ಯತೆಯೂ ಅವರಲ್ಲಿ ದಟ್ಟವಾಗಿಯೇ ಇದೆ ಎಂಬುದನ್ನು ವಿಜ್ಞಾನಿಗಳು ಒಪ್ಪಿಕೊಂಡಿದ್ದಾರೆ. ಇದಲ್ಲದೆ, ಕೋವಿಡ್ ದಿನಗಳಲ್ಲಿ ಎದುರಿಸಬೇಕಾಗಿದ್ದ ಒಂಟಿತನ, ಮಾನಸಿಕ ಒತ್ತಡ, ಭೀತಿ, ಅನಾರೋಗ್ಯಕರ ಆಹಾರಶೈಲಿ, ವ್ಯಾಯಾಮವಿಲ್ಲದ ಜಡ ಬದುಕು ಮುಂತಾದ ಹಲವು ಸಮಸ್ಯೆಗಳಿಂದ ಅಡ್ಡಪರಿಣಾಮಗಳು ತೀವ್ರವಾಗಿಯೇ ಕಾಣಿಸಿಕೊಂಡಿರಬಹುದು ಎನ್ನುವುದು ಅಧ್ಯಯನದ ಅಂಬೋಣ.
ಇದಲ್ಲದೆ, ರಕ್ತದೊತ್ತಡ ಮತ್ತು ಹೃದಯಾರೋಗ್ಯದ ಮೇಲಿನ ಕೋವಿಡ್ ಸೋಂಕಿನ ಅಡ್ಡ ಪರಿಣಾಮಗಳು ತಮ್ಮಷ್ಟಕ್ಕೆ ವಾಸಿಯಾಗುತ್ತವೆಯೇ ಅಥವಾ ದೀರ್ಘಕಾಲದವರೆಗೆ ಅವುಗಳಿಗೆ ಔಷಧಿಯ ನೆರವು ಬೇಕೆ ಎಂಬ ಬಗ್ಗೆ ಇನ್ನಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಮತ್ತು ಸುದೀರ್ಘ ಕಾಲದ ಅಧ್ಯಯನಗಳ ಅಗತ್ಯವಿರುವುದನ್ನು ಈಗ ನಡೆಸಿರುವ ಅಧ್ಯಯನದ ವರದಿ ಒತ್ತಿಹೇಳಿದೆ.
ಈದನ್ನೂ ಓದಿ: Free Health Camp: ಗ್ರಾಮೀಣ ಭಾಗದಲ್ಲಿ ಆರೋಗ್ಯ ಇಲಾಖೆಯಿಂದ ಉಚಿತ ಆರೋಗ್ಯ ಶಿಬಿರ: ಸಚಿವ ದಿನೇಶ್ ಗುಂಡೂರಾವ್