Site icon Vistara News

Covid Subvariant JN1: ಕೋವಿಡ್‌ ಉಲ್ಬಣ; ದಿನೇಶ್‌ ಗುಂಡೂರಾವ್‌ ನೇತೃತ್ವದಲ್ಲಿ ಸಂಪುಟ ಉಪ ಸಮಿತಿ ರಚನೆ

Cabinet sub committee constituted under Dinesh Gundu Rao

ಬೆಂಗಳೂರು: ಕೊರೊನಾ ವೈರಸ್‌ (Corona Virus) ನೂತನ ರೂಪಾಂತರಿ (Covid Subvariant JN1) ಪ್ರಕರಣಗಳು ಹೆಚ್ಚಾಗುತ್ತಿವೆ. ದೇಶದಲ್ಲಿ ಗುರುವಾರ (ಡಿ. 21) 6 ಮಂದಿ ಸತ್ತಿದ್ದರೆ, ಶುಕ್ರವಾರ 328 ಹೊಸ ಕೋವಿಡ್‌ ಪ್ರಕರಣಗಳು ಪತ್ತೆಯಾಗಿವೆ. ರಾಜ್ಯದಲ್ಲಿಯೂ ಸಹ ಪ್ರಕರಣಗಳು ಕಂಡು ಬರುತ್ತಲೇ ಇವೆ. ಅಲ್ಲದೆ, ಬರುವ 2024ರ ಜನವರಿಯಲ್ಲಿ ರೂಪಾಂತರಿ ವೈರಸ್‌ ಮಹಾಸ್ಫೋಟಗೊಳ್ಳಲಿದೆ ಎಂದು ತಜ್ಞರಿಂದ ಅಂದಾಜಿಸಲಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಈಗ ಇದರ ಭಾಗವಾಗಿ ಕೋವಿಡ್ ನಿಯಂತ್ರಣ ಸಂಬಂಧ ಸಚಿವ ಸಂಪುಟ ಉಪ ಸಮಿತಿಯನ್ನು ರಚಿಸಿ ಸರ್ಕಾರದ ಆದೇಶ ಹೊರಡಿಸಿದೆ.

ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಸಂಪುಟ ಉಪ ಸಮಿತಿಯನ್ನು ರಚನೆ ಮಾಡಿದ್ದು, ಸಚಿವರಾದ ಎಚ್.ಸಿ. ಮಹದೇವಪ್ಪ, ಶರಣ ಪ್ರಕಾಶ್ ಪಾಟೀಲ್, ಎಂ.ಸಿ. ಸುಧಾಕರ್ ಅವರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ. ಕೋವಿಡ್ ಸೇರಿ ಸಾಂಕ್ರಾಮಿಕ ರೋಗಗಳ ಕುರಿತು ಈ ಸಮಿತಿಯು ಪರಾಮರ್ಶೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ.

ತಾಂತ್ರಿಕ ಸಮಿತಿ ಸೂಚಿಸಿದ್ರೆ ಮಾತ್ರ ವ್ಯಾಕ್ಸಿನೇಷನ್‌: ದಿನೇಶ್‌ ಗುಂಡೂರಾವ್

ಕೋವಿಡ್‌ಗೆ ಸಂಬಂಧಪಟ್ಟಂತೆ ತಾಂತ್ರಿಕ ಸಮಿತಿ ಸೂಚಿಸಿದರೆ ಮಾತ್ರ ವ್ಯಾಕ್ಸಿನೇಷನ್‌ ಬಗ್ಗೆ ನಿರ್ಧಾರವನ್ನು ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಂಗಳೂರಿನಲ್ಲಿ ಹೇಳಿದರು. ನಾವು ಯಾವುದೇ ಸಂದರ್ಭದಲ್ಲಿಯೂ ಈ ಬಗ್ಗೆ ಸಿದ್ಧರಿದ್ದೇವೆ ಎಂಬುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಕ್ಯಾಬಿನೆಟ್ ಉಪಸಮಿತಿಯು ಸೋಮವಾರ ಅಥವಾ ಮಂಗಳವಾರ ಈ ಬಗ್ಗೆ ಸಭೆ ನಡೆಸಲಿದೆ. ಕೇಂದ್ರ ಮತ್ತು ಬೇರೆ ರಾಜ್ಯಗಳ ಮಾಹಿತಿ ಪಡೆದು ಮುಂದಿನ ನಿರ್ಧಾರವನ್ನು ಅಂದು ಕೈಗೊಳ್ಳಲಾಗುತ್ತದೆ. ಯಾವುದೇ ಕಾರ್ಯಕ್ರಮ ನಿಲ್ಲಿಸುವ ನಿರ್ಧಾರ ಮಾಡಿಲ್ಲ. ಇಲ್ಲಿಯವರೆಗೆ ಎಲ್ಲವೂ ಸಹಜ ಸ್ಥಿತಿಯಲ್ಲಿ ‌ಇರಲಿದೆ ಎಂದು ಸ್ಪಷ್ಟಪಡಿಸಿದರು.

ಈ ಕೋವಿಡ್ ಅಪಾಯಕಾರಿಯಾಗಿ ಇರುವುದಿಲ್ಲ. ಯಾರಿಗೂ ಹೆಚ್ಚು ಅಪಾಯ ಇಲ್ಲ. ಈ ಬಗ್ಗೆ ಮೆಡಿಕಲ್ ತಾಂತ್ರಿಕ ಸಮಿತಿಗಳು ಈಗಾಗಲೇ ಹೇಳಿದೆ. ಆದರೂ ನಮ್ಮ ಎಚ್ಚರಿಕೆಯಲ್ಲಿ ನಾವು ಇರೋದು ಒಳಿತು. ಸಂಪುಟ ಉಪಸಮಿತಿಯು ತಜ್ಞರ ವರದಿ ಪಡೆದು ನಿರ್ಧಾರ ಮಾಡಲಿದೆ. ರಾಜ್ಯದಲ್ಲಿ ಸದ್ಯ ಐದು ಸಾವಿರ ಟೆಸ್ಟಿಂಗ್ ಟಾರ್ಗೆಟ್ ನೀಡಲಾಗಿದೆ. ಗಡಿ ಜಿಲ್ಲೆಯಾದ ಮಂಗಳೂರು, ಮೈಸೂರಿನಲ್ಲಿ ಹೆಚ್ಚು ನಿಗಾ ನೀಡಲಾಗಿದೆ. ವೆಂಟಿಲೇಟರ್ ಕಾರ್ಯನಿರ್ವಹಣೆ ಪರೀಕ್ಷೆ ಬಗ್ಗೆ ಕ್ರಮ ವಹಿಸುತ್ತೇವೆ. ಸರ್ಕಾರಿ ಆಸ್ಪತ್ರೆಗಳಿಗೆ ಪಿಪಿಇ ಕಿಟ್ ಪೂರೈಕೆಯ ಕೆಲಸ ಆಗುತ್ತಿದೆ. ಕೆಲವು ಕಡೆ ಸ್ವಲ್ಪ ತಡ ಆಗಿದೆ. ಆದರೆ, ಎಲ್ಲವೂ ಶೀಘ್ರದಲ್ಲಿ ಆಗಲಿದೆ. ಹೆಚ್ಚು ಟೆಸ್ಟಿಂಗ್ ಮಾಡುವ ಅಗತ್ಯ ಇದೆಯಾ ಅಂತ ನಿರ್ಧಾರ ಮಾಡುತ್ತೇವೆ ಎಂದು ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದರು.

ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಮತ್ತು ಗೈಡ್‌ಲೈನ್ಸ್‌ಗಳ ಬಗ್ಗೆ ಮುಂದೆ ನಿರ್ಧಾರವನ್ನು ತೆಗೆದುಕೊಳ್ಳಲಾಗುತ್ತದೆ. ಕ್ರಿಸ್‌ಮಸ್, ಹೊಸ ವರ್ಷಕ್ಕೆ ಯಾವುದೇ ಹೊಸ ಗೈಡ್‌ಲೈನ್ಸ್ ಇಲ್ಲ. ಆದರೆ‌ ಜನ ಇರುವ ಪ್ರದೇಶಗಳಲ್ಲಿ ಮಾಸ್ಕ್ ಧರಿಸಲು ಸಲಹೆ ಕೊಡುತ್ತೇವೆ. ಯಾವುದೂ ಕಡ್ಡಾಯ ಅಲ್ಲ, ನಾವು ಯಾವುದೇ ನಿರ್ಬಂಧ ವಿಧಿಸಲ್ಲ. ಈ ಉಪತಳಿ ಬಗ್ಗೆ ಆತಂಕಪಡುವ ಯಾವುದೇ ಅವಶ್ಯಕತೆ ಇಲ್ಲ. ಹೆಚ್ಚು ಕಡಿಮೆ ಆಗದಂತೆ ಪೂರ್ವ ಸಿದ್ಧತೆಯನ್ನು ಕೈಗೊಳ್ಳುತ್ತಿದ್ದೇವೆ. ಈ ಮೂಲಕ ನಮ್ಮ ವ್ಯವಸ್ಥೆ ಕೂಡ ಒಮ್ಮೆ ಮತ್ತೆ ಪರೀಕ್ಷೆಗೆ ಒಳ ಪಡುತ್ತದೆ. ಇದರಿಂದ ನಾವು ಇನ್ನಷ್ಟು ಸುಸಜ್ಜಿತವಾಗಿ ಇರಲು ಸಾಧ್ಯವಾಗಲಿದೆ ಎಂದು ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದರು.

ಸಭೆ ನಡೆಸಿರುವ ಸಿಎಂ

ಕರ್ನಾಟಕದಲ್ಲಿ ನಿನ್ನೆ ಕೋವಿಡ್ ಸ್ಥಿತಿಗತಿ ಪರಿಶೀಲನೆಯ ಬಗ್ಗೆ ಸಿಎಂ ಹಾಗೂ ಆರೋಗ್ಯ ಸಚಿವರ ಸಭೆ ನಡೆಸಲಾಗಿದೆ. ಗಡಿಯಲ್ಲಿ ಹೆಚ್ಚಿನ ನಿಗಾ ಇಡಲು ಸೂಚಿಸಲಾಗಿದೆ. ಮಾಸ್ಕ್‌ ಧಾರಣೆಯನ್ನು ಆದ್ಯತೆಯ ಮೇರೆಗೆ ಮಾಡಲು ಕರೆ ನೀಡಲಾಗಿದೆ.

ವೃದ್ಧರಿಗೆ ಎಚ್ಚರಿಕೆ

“ಹೊಸ JN.1 ಸ್ಟ್ರೈನ್ ವೈರಸ್, ವೃದ್ಧರಿಗೆ ಹಾಗೂ ಹಲವು ಕೊಮೊರ್ಬಿಡಿಟಿ (comorbidity) ಕಾಯಿಲೆಗಳನ್ನು ಹೊಂದಿರುವವರಿಗೆ ಹೆಚ್ಚಿನ ಸಮಸ್ಯೆ ಉಂಟುಮಾಡಬಹುದು” ಎಂದುಐಎಂಎ ಕೋವಿಡ್ ಟಾಸ್ಕ್ ಫೋರ್ಸ್ ಸಹ-ಅಧ್ಯಕ್ಷ, ತಜ್ಞ ಡಾ ರಾಜೀವ್ ಜಯದೇವನ್ ಹೇಳಿದ್ದಾರೆ. “JN.1 ವೇಗವಾಗಿ ಹರಡುವ ರೂಪಾಂತರಿಯಾಗಿದೆ. ಇದು ಮುಂದಿನ ಹಂತಕ್ಕೆ ಹೋಗಬಹುದು. ದುರ್ಬಲ ಆರೋಗ್ಯದವರು, ಹಿರಿಯ ನಾಗರಿಕರು ಮತ್ತು ಬಹು ಕೊಮೊರ್ಬಿಡಿಟಿ ಕಾಯಿಲೆಗಳನ್ನು ಹೊಂದಿರುವವರು ಇದರ ಬಗ್ಗೆ ಎಚ್ಚರ ವಹಿಸಬೇಕು” ಎಂದಿದ್ದಾರೆ.

ಜನವರಿಗೆ ರೂಪಾಂತರಿ ಕಾಟ

ಈಗ ರಾಜ್ಯಾದ್ಯಂತ ಕೊರೊನಾ ಟೆಸ್ಟಿಂಗ್‌ ಹೆಚ್ಚಿಸಲಾಗುತ್ತಿದೆ. ಇವುಗಳ ಪೈಕಿ ಕೆಲವು ಆಯ್ದ ಸ್ಯಾಂಪಲ್‌ಗಳನ್ನು ಅಂದರೆ ಸೋಂಕಿತರ ಗಂಟಲು ದ್ರವವನ್ನು (Throat swab) ಜಿನೋಮಿಕ್ ಸೀಕ್ವೆನ್ಸ್‌ಗೆ ಕಳುಹಿಸಲಾಗುತ್ತಿದೆ. ಗುರುವಾರ ಸುಮಾರು 50 ಜನ ಸೋಂಕಿತರ ಗಂಟಲು ದ್ರವವನ್ನು ಆರೋಗ್ಯ ಇಲಾಖೆ ರವಾನೆ ಮಾಡಿದೆ. ಇದರಲ್ಲಿ ರೂಪಾಂತರಿ ವೈರಸ್ JN1 ವೈರಸ್ ಇದೆಯಾ ಎಂಬುದರ ಬಗ್ಗೆ ಪರೀಕ್ಷೆ ನಡೆಯಲಿದೆ. ಇದರ ವರದಿ ಮುಂದಿನ ವಾರ ಆರೋಗ್ಯ ಇಲಾಖೆ ಕೈಸೇರಲಿದೆ. ಒಂದು ವೇಳೆ ಜಿನೋಮಿಕ್ ಸೀಕ್ವೆನ್ಸ್ ನಲ್ಲಿ JN1 ವೈರಸ್‌ ಪತ್ತೆಯಾದರೆ ರಾಜ್ಯದಲ್ಲಿ ಮತ್ತಷ್ಟು ಟೈಟ್ ರೂಲ್ಸ್ ಜಾರಿಗೆ ಬರಲಿದೆ. ಮತ್ತು ರೂಪಾಂತರಿ ವೈರಸ್‌ನ ಅಸಲಿ ಆಟ ಜನವರಿ ಮೊದಲ ವಾರದಿಂದ ಆರಂಭವಾಗಲಿದೆ ಎನ್ನುವುದು ಆರೋಗ್ಯ ತಜ್ಞರ ಲೆಕ್ಕಾಚಾರವಾಗಿದೆ.

ಇದನ್ನೂ ಓದಿ: Toilet Cleaning: ಬೆಂಗಳೂರು ಶಾಲೇಲಿ ಮಕ್ಕಳಿಂದ ಟಾಯ್ಲೆಟ್‌ ಕ್ಲೀನ್;‌ ಮುಖ್ಯ ಶಿಕ್ಷಕಿ ಅಮಾನತು

ಆರೋಗ್ಯ ಇಲಾಖೆ ಸುತ್ತೋಲೆ ಕಡೆಗಣನೆ

ಕೊರೋನಾ ಆತಂಕ ಬೆನ್ನಲ್ಲೇ ಆರೋಗ್ಯ ಇಲಾಖೆ ವತಿಯಿಂದ ಸುತ್ತೋಲೆ ಹೊರಡಿಸಲಾಗಿದೆ. ಇದರಲ್ಲಿ ಮಾಸ್ಕ್ ಧರಿಸಬೇಕು, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ. ಆದರೆ, ಕೋರೋನಾ ಮಾರ್ಗಸೂಚಿ ಪಾಲನೆ ಮಾಡುವಲ್ಲಿ ಸಾರ್ವಜನಿಕರು ಹಿಂದೇಟು ಹಾಕುತ್ತಿರುವುದು ಕಂಡುಬಂದಿದೆ. ನಗರದ ಪ್ರಮುಖ ಜನದಟ್ಟಣೆ ಪ್ರದೇಶಗಳಲ್ಲಿ ಮಾಸ್ಕ್ ಧರಿಸದೆ ಜನರ ಓಡಾಟ ಕಂಡುಬಂದಿದೆ. ಆರೋಗ್ಯ ಇಲಾಖೆ ಸುತ್ತೋಲೆಗೆ ಸೀಮಿತವಾಗಿದ್ದು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿಲ್ಲ.

Exit mobile version