ಬೆಂಗಳೂರು: ಕೇರಳದಲ್ಲಿ ಕೋವಿಡ್ ಉಪ ತಳಿ ಜೆಎನ್ 1 (COVID Subvariant JN1) ಪತ್ತೆಯಾದ ಹಿನ್ನೆಲೆಯಲ್ಲಿ ರಾಜ್ಯ ಆರೋಗ್ಯ ಇಲಾಖೆ (State Health Department) ಹೈ ಅಲರ್ಟ್ (High alert) ಆಗಿದೆ. ಈ ಹಿನ್ನೆಲೆಯಲ್ಲಿ ಎರಡು ಪ್ರತ್ಯೇಕ ಮಾರ್ಗಸೂಚಿಯನ್ನು (Health Department Guidelines) ರಾಜ್ಯ ಸರ್ಕಾರ ಹೊರಡಿಸಿದೆ. ಅದರಂತೆ ಹಿರಿಯ ನಾಗರಿಕರು, ಗರ್ಭಿಣಿ, ತಾಯಂದಿರು ಹೊರಗೆ ಹೋಗುವಾಗ ಮಾಸ್ಕ್ ಅನ್ನು ಕಡ್ಡಾಯವಾಗಿ ಧರಿಸುವಂತೆ ಸೂಚನೆ ನೀಡಲಾಗಿದೆ.
ಎಲ್ಲ ಜಿಲ್ಲೆಯ ಜಿಲ್ಲಾಧಿಕಾರಿ, ಸಿಇಒ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಮಾರ್ಗಸೂಚಿಯನ್ನು ರವಾನೆ ಮಾಡಲಾಗಿದೆ. ಒಂದರಲ್ಲಿ ಕೋವಿಡ್ ಸರ್ವೇಕ್ಷಣೆ ಹಾಗೂ ಮೇಲುಸ್ತುವಾರಿ ಕೈಗೊಳ್ಳುವ ನಿಟ್ಟಿನಲ್ಲಿ ಸುತ್ತೋಲೆಯನ್ನು ಹೊರಡಿಸಲಾಗಿದೆ. ಮತ್ತೊಂದರಲ್ಲಿ ಸಾರ್ವಜನಿಕ ಸಲಹಾ ಮಾರ್ಗಸೂಚಿಯನ್ನು ಪ್ರಕಟಿಸಲಾಗಿದೆ.
ಮುಂಜಾಗ್ರತಾ ಕ್ರಮಗಳ ಕುರಿತು ಸರ್ಕಾರದ ಸುತ್ತೋಲೆ
- ಭಾರತ ಸರ್ಕಾರದ ಮಾರ್ಗಸೂಚಿಗಳ ಅನ್ವಯ, ಕೇರಳ ಹಾಗೂ ತಮಿಳುನಾಡು ರಾಜ್ಯಕ್ಕೆ ಹೊಂದಿಕೊಂಡಿರುವ ಗಡಿ ಭಾಗದ ಜಿಲ್ಲೆಗಳಲ್ಲಿ ಸರ್ವೇಕ್ಷಣೆಯನ್ನು ಹೆಚ್ಚಿಸುವುದು ಅಥವಾ ನಿರ್ಬಂಧಗಳನ್ನು ಈಗಲೇ ಹೇರುವ ಅವಶ್ಯಕತೆಯಿರುವುದಿಲ್ಲ.
- ಆದಾಗ್ಯೂ, ಕೇರಳ ಹಾಗೂ ತಮಿಳುನಾಡು ರಾಜ್ಯಕ್ಕೆ ಹೊಂದಿಕೊಂಡಿರುವ ಗಡಿ ಭಾಗದ ಜಿಲ್ಲೆಗಳಲ್ಲಿ ಎಚ್ಚರಿಕೆಯಿಂದ ಅಗತ್ಯ ಸಂಖ್ಯೆಯ ಪರೀಕ್ಷೆಗಳನ್ನು ನಡೆಸುವುದು ಹಾಗೂ ವರದಿ ಸಲ್ಲಿಸುವುದು ಅಗತ್ಯವಾಗಿದೆ.
- ಸರ್ಕಾರಿ, ಖಾಸಗಿ ಹಾಗೂ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ, ಎಲ್ಲ SARI ಪ್ರಕರಣಗಳು ಹಾಗೂ 20 ILI ಪ್ರಕರಣಗಳ ಪೈಕಿ 1 ILI ಪ್ರಕರಣವನ್ನು ಕೋವಿಡ್ -19 ಪರೀಕ್ಷೆಗೆ ಒಳಪಡಿಸಬೇಕು.
Whole genome sequencing (WGS) ಪರೀಕ್ಷೆಗೆ ಕಳುಹಿಸಲು ಸೂಚನೆ
ಈ ಕೆಳಕಂಡ ಪ್ರಕರಣಗಳ ಮಾದರಿಗಳನ್ನು Whole genome sequencing (WGS) ಪರೀಕ್ಷೆಗೆ ರವಾನಿಸಬೇಕು ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.
- ಅಂತಾರಾಷ್ಟ್ರೀಯ ಪ್ರಯಾಣದ ಹಿನ್ನೆಲೆಯಿದ್ದು, ಕೋವಿಡ್ -19 ಸೋಂಕಿನ ಲಕ್ಷಣಗಳನ್ನು ಹೊಂದಿರುವವರು (irrespective of Ct value are to be sent for WGS).
- ಗುಂಪು – ಗುಂಪಾಗಿ ವರದಿಯಾಗುವ ಪ್ರಕರಣಗಳು / ಹೆಚ್ಚು ಪ್ರಕರಣಗಳು ಮತ್ತು ಹಾಗೂ ಅಥವಾ ಮರಣಗಳು ವರದಿಯಾಗುವ ಫೋಕಲ್ ಔಟ್ ಬ್ರೇಕ್ ಗಳ ಸಂದರ್ಭದಲ್ಲಿ ಅಗತ್ಯ ಸಂಖ್ಯೆಯ ಮಾದರಿಗಳನ್ನು WGS ಪರೀಕ್ಷೆಗೆ ಕಳುಹಿಸಬೇಕು.
- ತೀವ್ರ ಸ್ವರೂಪದ ರೋಗಲಕ್ಷಣಗಳನ್ನು ಹೊಂದಿದವರು, ಆಸ್ಪತ್ರೆಗೆ ದಾಖಲಾದ ಪ್ರಕರಣಗಳು, SARI ಪ್ರಕರಣಗಳು ಹಾಗೂ ಸುದೀರ್ಘ ಅವಧಿಯವರೆಗೆ ಆಸ್ಪತ್ರೆಯಲ್ಲಿ ದಾಖಲಾದ ಪ್ರಕರಣಗಳಿದ್ದರೆ ಕಳುಹಿಸುವುದು
- ಕೋವಿಡ್ – 19 ನ ಮರು ಸೋಂಕಿಗೆ ಒಳಗಾದವರು
- ಕೋವಿಡ್ 19 ಲಸಿಕೆಯ ಎರಡು ಡೋಸ್ ವ್ಯಾಕ್ಸಿನ್ ಪಡೆದ ನಂತರವೂ ಕೋವಿಡ್ 19ನ ಸೋಂಕು ದೃಢಪಟ್ಟವರು.
- ಕೋವಿಡ್ 19 ಮರಣ ಪ್ರಕರಣಗಳು ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ವರದಿಯಾಗುವ 25 ಕ್ಕಿಂತ ಕಡಿಮೆ Ct value ಇರುವ ಮಾದರಿಗಳನ್ನು (ಅಂತರ ರಾಷ್ಟ್ರೀಯ ಪ್ರಯಾಣ ಹಿನ್ನೆಲೆಯುಳ್ಳವರನ್ನು ಹೊರತು ಪಡಿಸಿ) BMC&RJ ಬೆಂಗಳೂರು, ಇಲ್ಲಿಗೆ WGS ಪರೀಕ್ಷೆಗೆ ಕಳುಹಿಸುವ ನಿಟ್ಟಿನಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು ಅಗತ್ಯ ಸಮನ್ವಯವನ್ನು ವಹಿಸಬೇಕು
ಸಾರ್ವಜನಿಕರಿಗೆ ಸಲಹಾ ಮಾರ್ಗಸೂಚಿ
ಸಾರ್ವಜನಿಕರಿಗೆ ಸಲಹಾ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗಿದ್ದು, ಸೂಚನೆಯನ್ನು ಪಾಲಿಸುವಂತೆ ಮನವಿ ಮಾಡಲಾಗಿದೆ.
- ಎಲ್ಲ ಹಿರಿಯ ನಾಗರಿಕರು (60 ವರ್ಷ ಹಾಗೂ ಮೇಲ್ಪಟ್ಟವರು), ಇತರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು (ವಿಶೇಷವಾಗಿ ಕಿಡ್ನಿ, ಹೃದಯ, ಲಿವರ್ ಸಮಸ್ಯೆಗಳು), ಗರ್ಭಿಣಿಯರು, ಎದೆ ಹಾಲುಣಿಸುವ ತಾಯಂದಿರು, ಹೊರಾಂಗಣ ಪ್ರದೇಶಗಳಿಗೆ ತೆರಳಿದಾಗ ಮಾಸ್ಕ್ ಧರಿಸಬೇಕು
- ಅಗತ್ಯ ಗಾಳಿ-ಬೆಳಕಿನ ವ್ಯವಸ್ಥೆಯಿಲ್ಲದ ಮತ್ತು ಹೆಚ್ಚು ಜನಸಂದಣಿಯಿರುವ ಪ್ರದೇಶಗಳಿಗೆ ತೆರಳದಿರುವುದು ಸೂಕ್ತವಾಗಿದೆ
- ಜ್ವರ, ಕೆಮ್ಮು, ನೆಗಡಿ, ಇತ್ಯಾದಿ ಉಸಿರಾಟದ ಸೋಂಕಿನ ಲಕ್ಷಣಗಳನ್ನು ಹೊಂದಿದವರು ತಕ್ಷಣವೇ ಅಗತ್ಯ ವೈದ್ಯಕೀಯ ಸಲಹೆಯನ್ನು ಪಡೆಯಬೇಕು.
- ಮೂಗು ಹಾಗೂ ಬಾಯಿ ಮುಚ್ಚುವಂತೆ ಮಾಸ್ಕ್ ಧರಿಸುವುದು, ಅಗತ್ಯ ಗಾಳಿ-ಬೆಳಕಿನ ವ್ಯವಸ್ಥೆಯಿಲ್ಲದ ಮತ್ತು ಹೆಚ್ಚು ಜನಸಂದಣಿಯಿರುವ ಪ್ರದೇಶಗಳಿಗೆ ಭೇಟಿ ನೀಡದಿರುವುದು ಸೂಕ್ತವಾಗಿದೆ.
- ಉತ್ತಮ ವೈಯಕ್ತಿಕ ಸ್ವಚ್ಛತೆ, ಆಗಾಗ್ಗೆ ಕೈಗಳನ್ನು ಸೋಪು ಹಾಗೂ ನೀರಿನಿಂದ ತೊಳೆದುಕೊಳ್ಳುವುದು, ಇತ್ಯಾದಿಗಳ ಪಾಲನೆಯು ಅಗತ್ಯವಾಗಿದೆ
- ಆರೋಗ್ಯ ಸಮಸ್ಯೆಗಳು ಕಂಡುಬಂದಲ್ಲಿ, ಮನೆಯಲ್ಲಿರುವುದು ಸೂಕ್ತ. ಇತರ ವ್ಯಕ್ತಿಗಳೊಂದಿಗೆ, ವಿಶೇಷವಾಗಿ ಹಿರಿಯ ನಾಗರಿಕರು / ದುರ್ಬಲರನ್ನು (vulnerable) ಅವಶ್ಯವಿದ್ದಲ್ಲಿ, ಮಾತ್ರವೇ ಭೇಟಿ ಮಾಡುವುದು.
- ಆರೋಗ್ಯ ಸಮಸ್ಯೆಗಳನ್ನು ಹೊಂದಿದವರು, ಜನಸಂದಣಿಯ ಪ್ರದೇಶಗಳಿಗೆ ಭೇಟಿ ನೀಡಬೇಕಾದ ಸಂದರ್ಭದಲ್ಲಿ ಮಾಸ್ಕ್ ಧರಿಸುವಂತೆ ಸಲಹೆ
- ಅಂತಾರಾಷ್ಟ್ರೀಯ ಪ್ರಯಾಣದ ಸಂದರ್ಭದಲ್ಲಿ ಎಚ್ಚರಿಕೆಯಿಂದಿದ್ದು, ವಿಮಾನ ನಿಲ್ದಾಣದಲ್ಲಿ ಹಾಗೂ ವಿಮಾನದ ಒಳಗೆ ಮಾಸ್ ಧರಿಸುವುದು ಹೆಚ್ಚಿನ ಗಾಳಿ-ಬೆಳಕು ಇಲ್ಲದ ಮತ್ತು ಜನದಟ್ಟಣೆ ಇರುವ ಸ್ಥಳಗಳಿಗೆ ತೆರಳದಿರುವುದೂ ಸೇರಿದಂತೆ ಇತರ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಪಾಲಿಸುವುದು ಸೂಕ್ತವಾಗಿದೆ.
ಇದನ್ನೂ ಓದಿ: Yettinahole Project: ಅಕ್ರಮದ ಹೊಳೆಯಾದ ಎತ್ತಿನಹೊಳೆ ಪ್ರಾಜೆಕ್ಟ್; ಭ್ರಷ್ಟಾಚಾರದ ಹಿಂದಿದೆಯಾ ಮಾಫಿಯಾ?
ಈ ಎಲ್ಲ ನಿಯಮಗಳನ್ನು ಪಾಲನೆ ಮಾಡುವಂತೆ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ವಿಶೇಷವಾಗಿ ಸಾರ್ವಜನಿಕರು ಮನೆಯಲ್ಲಿ ಹಾಗೂ ಹೊರಗಡೆ ಹೇಗೆ ಇರಬೇಕು ಎಂಬ ಬಗ್ಗೆ ಕೆಲವು ಸೂಚನೆಗಳನ್ನು ನೀಡಲಾಗಿದ್ದು, ಅದನ್ನು ಪಾಲನೆ ಮಾಡುವಂತೆ ಹೇಳಲಾಗಿದೆ.