Site icon Vistara News

Cow Milk‌ For Baby: ಶಿಶುಗಳಿಗೆ ಯಾವಾಗಿನಿಂದ ಹಸುವಿನ ಹಾಲು ನೀಡಬಹುದು?

Cow Milk‌ For Baby

ಎಳೆಯ ಮಕ್ಕಳಿಗೆ ಸರಿಯಾದ ಪೋಷಣೆ ನೀಡುವುದು ಹೆತ್ತವರಿಗೆ ಮಹತ್ವದ ಕಾರ್ಯ. ಅದರಲ್ಲೂ ಮೊದಲ ವರ್ಷದಲ್ಲಿ ಶಿಶುಗಳಿಗೆ ಯಾವುದು ಕೊಡುವುದು ಸರಿ, ಯಾವುದು ತಪ್ಪು ಎನ್ನುವ ಗೊಂದಲಗಳು ಪಾಲಕರಿಗೆ ಇದ್ದೇಇರುತ್ತವೆ. ಪುಟಾಣಿಗಳಿಗೆ ಮೊದಲಾರು ತಿಂಗಳು ತಾಯಿಯ ಹಾಲು ಮಾತ್ರವೇ ಸೂಕ್ತ ಎಂಬುದು ಲೋಕವೇ ಒಪ್ಪುವ ಮಾತು. ಆರು ತಿಂಗಳ ನಂತರ ಘನ ಆಹಾರ ಪ್ರಾರಂಭಿಸಿದ ಮೇಲೆ, ಹಸುವಿನ ಹಾಲನ್ನು ಎಂದಿನಿಂದ ಪ್ರಾರಂಭಿಸಬೇಕು, ಫಾರ್ಮುಲಾ ನೀಡುತ್ತಿದ್ದರೆ ಅದನ್ನು ಎಲ್ಲಿಯವರೆಗೆ ಮುಂದುವರಿಸಬೇಕು- ಇಂಥ ಗೊಂದಲಗಳು ಸಹ. ಈ ಬಗ್ಗೆ ವೈದ್ಯರ ಮಾತು ಪಾಲಿಸಬೇಕೋ, ಅನುಭವಸ್ಥರ ನುಡಿಗಳೋ ಎಂಬುದೇ ಕೆಲವು ಬಾರಿ ಅರ್ಥವಾಗುವುದಿಲ್ಲ. ಆದರೆ ವಿಶ್ವ ಆರೋಗ್ಯ ಸಂಸ್ಥೆ ಈ ಬಗ್ಗೆ ನಿಗದಿತ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದೆ. ಏನಿದೆ (Cow Milk‌ For Baby) ಅದರಲ್ಲಿ?

ಆರು ತಿಂಗಳಿಂದ

ವಿಶ್ವ ಆರೋಗ್ಯ ಸಂಸ್ಥೆಯ ಇತ್ತೀಚಿನ ಮಾರ್ಗದರ್ಶನದ ಪ್ರಕಾರ, ಆರು ತಿಂಗಳ ಪ್ರಾಯದಿಂದಲೇ ಎಳೆಕೂಸುಗಳಿಗೆ ಶುದ್ಧ, ತಾಜಾ ಹಸುವಿನ ಹಾಲನ್ನು ನೀಡಬಹುದು. ಈ ನಿರ್ದೇಶನ ಅನ್ವಯವಾಗುವುದು ಸಂಪೂರ್ಣ ಅಥವಾ ಸ್ವಲ್ಪ ಭಾಗ ಫಾರ್ಮುಲಾಗಳ ಮೇಲೆಯೇ ಬೆಳೆಯುತ್ತಿರುವ ಶಿಶುಗಳಿಗೆ. ಈ ಪುಟಾಣಿಗಳು ಆರು ತಿಂಗಳ ಪ್ರಾಯದಿಂದಲೇ ಪೂರ್ಣ ಪ್ರಮಾಣದಲ್ಲಿ ಹಸುವಿನ ಹಾಲನ್ನು ಕುಡಿಯಬಹುದು ಎಂದು ಸ್ಪಷ್ಟಪಡಿಸಲಾಗಿದೆ. ಚೆನ್ನಾಗಿ ಕಾಯಿಸಿದ ಅಥವಾ ಪ್ಯಾಶ್ಚರೀಕರಿಸಿದ ಹಸುವಿನ ಹಾಲು ಕುಡಿಯುವ ಮಕ್ಕಳ ಮತ್ತು ಫಾರ್ಮುಲಾ ಪೋಷಣೆಯಿಂದ ಬೆಳೆದ ಮಕ್ಕಳ ಆರೋಗ್ಯ ಮತ್ತು ಬೆಳವಣಿಗೆಯಲ್ಲಿ ಹೇಳಿಕೊಳ್ಳುವಂಥ ವ್ಯತ್ಯಾಸವೇನು ಕಂಡುಬಂದಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಈ ಕುರಿತಾದ ವ್ಯವಸ್ಥಿತ ಅಧ್ಯಯನದ ನಂತರ ಈ ಮಾರ್ಗದರ್ಶನವನ್ನು ಬಿಡುಗಡೆ ಮಾಡಲಾಗಿದೆ.

ಬದಲಾವಣೆ ಇಲ್ಲ

ಇದರರ್ಥ ಮಕ್ಕಳೆಲ್ಲರೂ ಫಾರ್ಮುಲಾ ಅಥವಾ ಹಸುವಿನ ಹಾಲಿನಲ್ಲೇ ಬೆಳೆಯಬೇಕೆಂದಲ್ಲ. ಆರು ತಿಂಗಳವರೆಗೆ ತಾಯಿಯ ಹಾಲೇ ಸೂಕ್ತ ಎಂಬ ತತ್ವದಲ್ಲಿ ಯಾವುದೇ ಬದಲಾವಣೆ ಇಲ್ಲ. ಆರು ತಿಂಗಳ ನಂತರ ಉಳಿದೆಲ್ಲ ಘನ ಆಹಾರಗಳ ಜೊತೆಗೆ, ಎರಡು ವರ್ಷಗಳವರೆಗೆ (ಹೆಚ್ಚಾದರೂ ತೊಂದರೆಯಿಲ್ಲ) ತಾಯಿಯ ಹಾಲನ್ನು ಮುಂದುವರಿಸುವುದು ಒಳ್ಳೆಯದು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಇವುಗಳ ಜೊತೆಗೆ ಹಸುವಿನ ಹಾಲನ್ನೂ ಪೋಷಣೆಯ ರೂಪದಲ್ಲಿ ಮುಂದುವರಿಸುವ ಬಗ್ಗೆ ಈ ಹೊಸ ಸಲಹೆ ನೀಡಲಾಗಿದೆ.

ಗೊಂದಲ ಏಕೆ?

ಹೌದು. ಕೆಲವು ದೇಶಗಳಲ್ಲಿ, ಅದರಲ್ಲೂ ಪ್ರಮುಖವಾಗಿ ಆಸ್ಟ್ರೇಲಿಯದಲ್ಲಿ, ೧೨ ತಿಂಗಳವರೆಗೆ ಹಸುವಿನ ಹಾಲು ಮಕ್ಕಳಿಗೆ ನೀಡುವುದು ಬೇಡವೆಂದೇ ಆರೋಗ್ಯ ತಜ್ಞರು ಹೇಳುತ್ತಾರೆ. ಮಕ್ಕಳಲ್ಲಿ ಹಾಲಿನ ಅಲರ್ಜಿ ತಲೆದೋರಬಹುದು ಎಂಬ ಕಾರಣಕ್ಕಾಗಿ ಈ ಸಲಹೆಯನ್ನು ನೀಡುತ್ತಾರಾದರೂ, ಕ್ಷೀರಜನ್ಯ ಫಾರ್ಮುಲಾಗಳನ್ನೇ ನೀಡುವುದಾದರೆ, ಅದಕ್ಕೂ ಹಾಲಿಗೂ ವ್ಯತ್ಯಾಸವಿಲ್ಲ. ಬದಲಿಗೆ, ನೇರವಾಗಿ ತಾಜಾ ಹಾಲನ್ನೇ ಬಳಸಬಹುದು ಎನ್ನುವುದು ಈ ಹೊಸ ಮಾರ್ಗದರ್ಶನ ತಿರುಳು. ಆದರೆ ಈ ಸಲಹೆಯನ್ನು ನೇರವಾಗಿ ಪಾಲಕರಿಗೆ ಉದ್ದೇಶಿಸಿ ನೀಡುವ ಬದಲು, ಸರಕಾರಗಳು ಮತ್ತು ಆರೋಗ್ಯ ತಜ್ಞರಿಗೆ ನೀಡಲಾಗಿದೆ.

ಆಹಾರ ದುಬಾರಿ

ಈ ಸಲಹೆ ಹಲವಾರು ದೇಶಗಳಲ್ಲಿ ಪಾಲಕರಿಗೆ ನೆಮ್ಮದಿಯನ್ನು ತಂದಿರುವ ಸಾಧ್ಯತೆಯಿದೆ. ಕೆಲವು ದೇಶಗಳಲ್ಲಿ ಒಂದು ವರ್ಷದವರೆಗಿನ ಮಕ್ಕಳಿಗೆ ತಾಜಾ ಹಾಲಿನ ಬದಲು ಫಾರ್ಮುಲಾಗಳನ್ನು ನೀಡುವುದಕ್ಕೆ ಮಾತ್ರವೇ ಸೂಚಿಸಲಾಗುತ್ತಿತ್ತು. ಆದರೆ ತಾಜಾ ಹಾಲಿಗಿಂತ ಏನಿಲ್ಲವೆಂದರೂ ಐದು ಪಟ್ಟು ದುಬಾರಿಯಾಗಿರುವ ಫಾರ್ಮುಲಾಗಳು ಭರಿಸುವುದಕ್ಕೆ ಕಷ್ಟವಾಗುವ ಸಂದರ್ಭಗಳೂ ಇದ್ದವು. ಈಗ ಅದಕ್ಕಿಂತ ಎಷ್ಟೋ ಕಡಿಮೆ ಬೆಲೆಯಲ್ಲಿ, ತಾಜಾ ಮತ್ತು ಪೌಷ್ಟಿಕವಾದ ಹಸುವಿನ ಹಾಲನ್ನು ನೀಡಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆಯೇ ಸೂಚಿಸಿದೆ.

ಕೊರತೆಯಾಗಬಹುದು

ಫಾರ್ಮುಲಾಗಳನ್ನು ಕುಡಿಯುವ ಮಕ್ಕಳಿಗಿಂತ ತಾಜಾ ಹಾಲು ಕುಡಿಯುವ ಮಕ್ಕಳಲ್ಲಿ ಕಬ್ಬಿಣಾಂಶದ ಕೊರತೆಯಾಗಬಹುದು ಎಂದು ಎಚ್ಚರಿಸಿರುವ ಜಾಗತಿಕ ಆರೋಗ್ಯ ಸಂಸ್ಥೆ, ಈ ಕೊರತೆಯನ್ನು ಘನ ಆಹಾರಗಳಲ್ಲಿ ತುಂಬಬಹುದು ಎಂದು ಸೂಚಿಸಿದೆ. ಫಾರ್ಮುಲಾಗಳು ಸಾಮಾನ್ಯವಾಗಿ ಫಾರ್ಟಿಫೈಡ್‌ ಆಗಿದ್ದು, ಅಗತ್ಯ ಪೋಷಕಾಂಶಗಳನ್ನೆಲ್ಲ ಸೇರಿಸಲಾಗಿರುತ್ತದೆ ಆ ಹಾಲಿನ ಪುಡಿಗಳಲ್ಲಿ. ಹಾಗಾಗಿ ಮಕ್ಕಳ ಒಟ್ಟಾರೆ ಬೆಳವಣಿಗೆಗೆ ಪೂರಕವಾದ ಕಬ್ಬಿಣದಂಥ ಖನಿಜಗಳ ಕೊರತೆ ತಲೆದೋರುವುದಿಲ್ಲ. ಆದರೆ ತಾಜಾ ಹಾಲು ಕುಡಿಯುವ ಮಕ್ಕಳಿಗೆ ಈ ಅನುಕೂಲವಿಲ್ಲ. ಗರ್ಭಾವಸ್ಥೆಯ ಕೊನೆಯ ಕೆಲವು ವಾರಗಳಲ್ಲಿ ಹೆಚ್ಚಿನ ಪ್ರಮಾಣದ ಕಬ್ಬಿಣಾಂಶವನ್ನು ಶಿಶುವಿನ ದೇಹ ಶೇಖರಿಸಿ ಇರಿಸಿಕೊಳ್ಳುತ್ತದೆ. ಹುಟ್ಟಿದ ನಾಲ್ಕಾರು ತಿಂಗಳವರೆಗೂ ಇದು ಸಾಕಾಗಬಹುದು. ಆದರೆ ಅವಧಿಗೆ ಮುನ್ನ ಮಕ್ಕಳು ಜನಿಸಿದರೆ, ಗರ್ಭಿಣಿಗೇ ಕಬ್ಬಿಣಾಂಶದ ಕೊರತೆಯಿದ್ದರೆ ಇದು ಸಾಧ್ಯವಾಗದು. ಹಾಗಾಗಿ ಘನ ಆಹಾರ ಪ್ರಾರಂಭಿಸಿದ ಮೇಲೆ ಶಿಶುಗಳಿಗೆ ಸೂಕ್ತ ಪ್ರಮಾಣದಲ್ಲಿ ಕಬ್ಬಿಣಾಂಶ ಹೆಚ್ಚಿಸಬೇಕಾದ ಅಗತ್ಯವಿರುತ್ತದೆ.

ಏನು ಕೊಡಬಹುದು?

ಹಾಗಾದರೆ ಘನ ಆಹಾರಗಳಲ್ಲಿ ಮಕ್ಕಳಿಗೆ ಏನಿರಬೇಕು? ಮೊದಲಿಗೆ, ಅಕ್ಕಿ, ರಾಗಿ, ಗೋದಿಯಂಥ ಧಾನ್ಯಗಳನ್ನೂ ಒಂದೊಂದಾಗಿ ಪ್ರಾರಂಭಿಸಬಹುದು. ಮೆತ್ತಗೆ ಬೇಯಿಸಿದ ಬೇಳೆ ಮತ್ತು ಕಾಳುಗಳು, ಪಾಲಕ್‌ನಂಥ ಹಸಿರು ಸೊಪ್ಪುಗಳು, ಹುರುಳಿಕಾಯಿಯಂಥ ಹಸಿರು ತರಕಾರಿಗಳು, ಕ್ಯಾರೆಟ್‌, ಬೀಟ್‌ರೂಟ್‌ನಂಥವು, ಶೇಂಗಾ ಮತ್ತು ಬಾದಾಮಿಯಂಥ ಬೀಜಗಳು ಮತ್ತು ಅವುಗಳ ಬೆಣ್ಣೆಗಳು, ಮೊಟ್ಟೆಯ ಹಳದಿ ಭಾಗ ಮುಂತಾದವು ಪುಟ್ಟ ಮಕ್ಕಳ ಆಹಾರದಲ್ಲಿರಲಿ.

ಇದನ್ನೂ ಓದಿ: Watermelon: ಕಲ್ಲಂಗಡಿ ಹಣ್ಣನ್ನು ಸಂಜೆ ಏಳರ ನಂತರ ತಿನ್ನಬಾರದು ಏಕೆ ಗೊತ್ತೇ?

Exit mobile version