Site icon Vistara News

Health Tips: ಮೊಸರು, ಲಸ್ಸಿ, ಮಜ್ಜಿಗೆ; ಇವುಗಳಲ್ಲಿ ಯಾವುದು ಒಳ್ಳೆಯದು?

Curd, lassi, buttermilk

ದೇಹ ಹೆಚ್ಚಾಗಿ ಸೇವಿಸ ಬಯಸುವ ವಸ್ತುಗಳ ಪೈಕಿ ಮೊಸರು, ಮಜ್ಜಿಗೆ ಅಥವಾ ಚಾಸ್ , ಲಸ್ಸಿ ಸಹ ಹೌದು. ಬಿಸಿಲು ಮೇಲೇರಿದ ಹೊತ್ತಿನಲ್ಲಿ, ದೇಹದ ಉಷ್ಣತೆಯೂ ನೆತ್ತಿಗೇರಿದ ಹೊತ್ತಿನಲ್ಲಿ ಒಂದೊಂದು ಲೋಟ ತಂಪಾದ ಮಜ್ಜಿಗೆ ಅಥವಾ ಲಸ್ಸಿಯನ್ನು ಹೊಟ್ಟೆಗಿಳಿಸಿದರೆ ಜೀವಕ್ಕೆ ತಂಪೆನಿಸುವುದು ಹೌದು. ಮೊಸರು, ಮಜ್ಜಿಗೆ, ಲಸ್ಸಿ- ಎಲ್ಲವೂ ಒಂದೇ ಮರದ ಕೊಂಬೆಗಳಲ್ಲವೇ? ಯಾವುದನ್ನು ಸೇವಿಸಿದರೂ ಒಂದೇ ಎಂದು ಯೋಚಿಸಿದರೆ ಅದು ಸಹಜವೇ. ಆದರೆ ನಿಜಕ್ಕೂ ಈ ಎಲ್ಲದರ ಗುಣಧರ್ಮಗಳೂ ಒಂದೇ ಅಲ್ಲ. ಅವುಗಳ ಸೇವನೆಯಿಂದ ದೇಹದ ಮೇಲಾಗುವ ಪರಿಣಾಮಗಳೂ ಒಂದೇ ಅಲ್ಲ. ಹಾಗಾದರೆ (Health Tips) ಏನು ಸಾಮ್ಯತೆ ಹಾಗೂ ವ್ಯತ್ಯಾಸಗಳಿವೆ ಮೊಸರು, ಮಜ್ಜಿಗೆ ಮತ್ತು ಲಸ್ಸಿಗಳಲ್ಲಿ?

ಸಾಮ್ಯತೆ

ಇವೆಲ್ಲವೂ ಅತ್ತ್ಯುತ್ತಮವಾದ ಪ್ರೊಬಯಾಟಿಕ್ ಆಹಾರಗಳು. ಎಲ್ಲದರಲ್ಲೂ ಪ್ರೊಟೀನ್ ಮತ್ತು ಕ್ಯಾಲ್ಶಿಯಂ ಧಾರಾಳವಾಗಿದ್ದು, ಮಾಂಸಖಂಡಗಳನ್ನು ಹಾಗೂ ಮೂಳೆಗಳನ್ನು ಸಶಕ್ತಗೊಳಿಸುತ್ತವೆ. ಎಲ್ಲದರಲ್ಲೂ ಲ್ಯಾಕ್ಟಿಕ್ ಆಮ್ಲ ಮತ್ತು ವಿಟಮಿನ್ ಡಿ ಅಂಶಗಳು ಸಾಕಷ್ಟಿದ್ದು, ದೇಹದ ಪ್ರತಿರೋಧಕ ಶಕ್ತಿಯನ್ನು ಬಲಪಡಿಸುತ್ತವೆ. ಎಲ್ಲದರಲ್ಲಿ ಇರುವ ಖನಿಜದ ಅಂಶಗಳಲ್ಲೂ ಹೆಚ್ಚಿನ ಭಿನ್ನತೆಯಿಲ್ಲ.

ಭಿನ್ನತೆ ಏನು?

ಮೊದಲಿಗೆ, ಲಸ್ಸಿ ಮತ್ತು ಮಜ್ಜಿಗೆಯಲ್ಲಿರುವ ಭಿನ್ನತೆಗಳನ್ನು ಗಮನಿಸೋಣ. (Health Tips) ಇವೆರಡರ ಮೂಲವೂ ಮೊಸರೇ. ಮೊಸರನ್ನು ಕಡೆದು ಮಾಡಿರುವುದರಿಂದ, ಚಾಸ್ ಅಥವಾ ಮಜ್ಜಿಗೆಯಲ್ಲಿ ಕೆನೆ ಅಂಶವಿರುವುದಿಲ್ಲ, ಅಂದರೆ ಕೊಬ್ಬಿನಂಶ ಅತಿ ಕಡಿಮೆ ಇರುತ್ತದೆ. ಆದರೆ ಲಸ್ಸಿ ಕೆನೆಭರಿತ, ಅಂದರೆ ಮಜ್ಜಿಗೆಗಿಂತ ಅಧಿಕ ಪ್ರಮಾಣದಲ್ಲಿ ಲಸ್ಸಿಯಲ್ಲಿ ಕೊಬ್ಬಿನಂಶ ಇರುತ್ತದೆ. ಉಳಿದಂತೆ ಪೌಷ್ಟಿಕಾಂಶದಲ್ಲಿ ಇವೆರಡಕ್ಕೆ ಹೆಚ್ಚಿನ ವ್ಯತ್ಯಾಸವಿಲ್ಲ.

ರುಚಿಯಲ್ಲೂ ಎರಡರ ನಡುವೆ ಸಾಕಷ್ಟು ಭಿನ್ನತೆಯಿದೆ. ಲಸ್ಸಿಯ ರುಚಿ ಸಿಹಿ. ಅಂದರೆ ಇದರಲ್ಲಿ ಹೆಚ್ಚಿನದಾಗಿ ಸಕ್ಕರೆ ಸೇರಿರುತ್ತದೆ. ಮಜ್ಜಿಗೆ ಅಥವಾ ಚಾಸ್ ಸ್ವಲ್ಪ ಉಪ್ಪು ಮತ್ತು ಖಾರದ ಜೊತೆಗೆ ಹೊಟ್ಟೆ ಸೇರುವಂಥದ್ದು. ಲಸ್ಸಿಗೆ ಸಿಹಿಯ ಜೊತೆಗೆ ಹೊಂದುವಂಥ ಹಣ್ಣುಗಳು ಸೇರಿದರೆ, ಮಜ್ಜಿಗೆಗೆ ಶುಂಠಿ, ಪುದೀನಾದಂಥ ಉಪ್ಪು-ಖಾರಕ್ಕೆ ಹೊಂದುವಂಥವು ಜೊತೆ ಸೇರುತ್ತದೆ.

ಇನ್ನೀಗ ಕ್ಯಾಲರಿಯ ವಿಷಯಕ್ಕೆ ಬಂದರೆ, ನಿಸ್ಸಂಶಯವಾಗಿ ಲಸ್ಸಿಯಲ್ಲಿ ಮಜ್ಜಿಗೆಗಿಂತ ಕಾಲರಿ ಹೆಚ್ಚು. ಸಕ್ಕರೆಯಂಶ ಹೆಚ್ಚು, ಕೊಬ್ಬೂ ಅಧಿಕ. ಹಾಗಾಗಿ ತೂಕ ಇಳಿಸುವ ಉದ್ದೇಶವಿದ್ದರೆ ಲಸ್ಸಿಗಿಂತಲೂ ಮಜ್ಜಿಗೆಯ ಸೇವನೆ ಉಪಯುಕ್ತ. ದೇಹದ ಚಯಾಪಚಯಕ್ಕೂ ಹೆಚ್ಚು ಸಕ್ಕರೆ, ಕೊಬ್ಬು ಮತ್ತಿತರ ರುಚಿಗಳನ್ನು ಸೇರಿಸಿದ ಲಸ್ಸಿ ಸ್ವಲ್ಪ ಹೊರೆ ಎನಿಸುತ್ತದೆ. ಬದಲಿಗೆ, ಪುದೀನಾ, ಜೀರಿಗೆ, ಇಂಗು, ಕೊತ್ತಂಬರಿ ಸೊಪ್ಪು, ಶುಂಠಿ ಮುಂತಾದ ಜೀರ್ಣಕಾರಕ ವಸ್ತುಗಳನ್ನು ಸೇರಿಸಿದ ಮಜ್ಜಿಗೆಯ ಸೇವನೆ ಅನುಕೂಲಕರ.

ಮಜ್ಜಿಗೆ ಮತ್ತು ಮೊಸರಿಗೆ ಇರುವ ಭಿನ್ನತೆಯೇನು?

ಮೊಸರು ಕೆನೆ ಸಹಿತವಾಗಿಯೇ ಇರುವುದರಿಂದ ಕೆಲವು ಅನನುಕೂಲತೆಗಳು ಇರುವುದು ಹೌದು. ಹೆಪ್ಪುಗಟ್ಟಿದ ಮೊಸರಿಗೆ ಹುಳಿಯಾಗುತ್ತಲೇ ಹೋಗುವ ಗುಣವಿದೆ. ಹೊಟ್ಟೆಗೆ ಹೋದಮೇಲೂ ಕೆಲವೊಮ್ಮೆ ತನ್ನ ಅತಿಯಾದ ಕ್ಯಾಲರಿಯಿಂದಾಗಿ ಮತ್ತು ಹೆಚ್ಚುವ ಹುಳಿಯಿಂದಾಗಿ ಉಷ್ಣದ ಪ್ರಕೋಪಗಳನ್ನು ತೋರುತ್ತದೆ. ಕೆಲವೊಮ್ಮೆ ಉರಿಯೂತಗಳನ್ನೂ ಹೆಚ್ಚಿಸುತ್ತದೆ. ಇದೇ ಕಾರಣದಿಂದಾಗಿ ಬೊಜ್ಜು, ಆರ್ಥರೈಟಿಸ್ ಮುಂತಾದ ಸಮಸ್ಯೆ ಇರುವವರಿಗೆ ಮೊಸರಿಗಿಂತ ಮಜ್ಜಿಗೆ ಸೂಕ್ತ ಎನ್ನುತ್ತಾರೆ ಆಹಾರ ಪರಿಣಿತರು. ಹಾಗಾಗಿ ಬೇಸಿಗೆಯಲ್ಲಿ ಮೊಸರು ಸೇವಿಸುವುದಕ್ಕಿಂತ ಮಜ್ಜಿಗೆ ಅನುಕೂಲಕರ.

ಕೆಮ್ಮು, ಕಫ, ಸೈನಸ್ ಸಮಸ್ಯೆ ಇರುವವರು ಮೊಸರಿನ ಸೇವನೆಯನ್ನು ರಾತ್ರಿಯ ಹೊತ್ತು ಮಾಡದಿರುವುದು ಒಳ್ಳೆಯದು ಎನ್ನುತ್ತಾರೆ ತಜ್ಞರು. ಪರಂಪರಾಗತವಾಗಿ, ತಲೆನೋವು, ಚರ್ಮದ ತೊಂದರೆಗಳು, ನಿದ್ರಾಹೀನತೆಯಂಥ ಸಮಸ್ಯೆಯಿದ್ದರೆ ಮೊಸರಿನ ಸೇವನೆಯಿಂದ ದೂರ ಇರುವಂತೆಯೇ ಹೇಳಲಾಗುತ್ತದೆ.

ಮಜ್ಜಿಗೆಗೆ ಅಂಥ ಯಾವುದೇ ದೋಷವನ್ನೂ ಆಹಾರ ತಜ್ಞರು ಹೇಳುವುದಿಲ್ಲ. ತೂಕ ಇಳಿಸಲು ಬಯಸುವವರು, ಅನೀಮಿಯದಿಂದ ಬಳಲುವವರು, ಆಸಿಡಿಟಿ, ಹುಳಿತೇಗು ಮುಂತಾದ ಜೀರ್ಣಾಂಗದ ತೊಂದರೆಗಳನ್ನು ಎದುರಿಸುತ್ತಿರುವವರು, ಮಲಬದ್ಧತೆಯಿಂದ ಒದ್ದಾಡುತ್ತಿರುವವರು ಎಲ್ಲರಿಗೂ ಮಜ್ಜಿಗೆ ಸೇವಿಸುವುದು ಅನುಕೂಲಕರ. ಬೇಸಿಗೆಯಲ್ಲಿ ದೇಹವನ್ನು ತಂಪಾಗಿಡುವುದರ ಜೊತೆಜೊತೆಗೆ ಆರೋಗ್ಯಕ್ಕೂ ಬಹಳಷ್ಟು ಹೆಚ್ಚುವರಿ ಉಪಯೋಗಗಳನ್ನು ತರುತ್ತದೆ ಈ ಮಜ್ಜಿಗೆಯೆಂಬ ಪೇಯ.

ಇದನ್ನೂ ಓದಿ: Health Update: ಮಕ್ಕಳಲ್ಲಿ ಹೆಚ್ಚುತ್ತಿದೆ ಜ್ವರ ಬಾಧೆ; ಮುನ್ನೆಚ್ಚರಿಕೆ ಇರಲಿ, ಆತಂಕ ಬೇಡ

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version