ಬಹುತೇಕರಿಗೆ ಹೀಗೊಂದು ಸಂದೇಹವಿದೆ. ರಾತ್ರಿ ಮೊಸರು ಉಣ್ಣಬಾರದು (Curd Usage) ಎಂದು ಹಿರಿಯರು ಹೇಳುವದನ್ನು ಕೇಳಿರುತ್ತಾರೆ. ಸಾಮಾನ್ಯವಾಗಿ ಉತ್ತರ ಭಾರತದಲ್ಲಿ ರಾತ್ರಿಯಾದ ಮೇಲೆ ಮೊಸರನ್ನು ಊಟದೊಂದಿಗೆ ಯಾರೂ ಕೊಡುವುದೇ ಇಲ್ಲ. ಬೇಕೆಂದು ಕೇಳಿದರೂ ಇರುವುದೂ ಇಲ್ಲ. ಚಳಿಗಾಲದಲ್ಲಂತೂ ಚಳಿಯೂರುಗಳಲ್ಲಿ ಈ ನಂಬಿಕೆಯನ್ನು ಚಾಚೂ ತಪ್ಪದೆ ಖಡಾಖಂಡಿತವಾಗಿ ಬಹುತೇಕರು ಪಾಲಿಸುತ್ತಾರೆ. ಆದರೆ, ದಕ್ಷಿಣ ಭಾರತದಲ್ಲಿ ಇದರ ಪಾಲನೆ ಅಷ್ಟಾಗಿ ಮಾಡುವುದಿಲ್ಲ. ಬಹುಶಃ ಇಲ್ಲಿನ ಹವಾಮಾನವೂ ಇದಕ್ಕೆ ಕಾರಣವಿರಬಹುದು. ಮೊಸರಿಲ್ಲದೆ ಎಂಥಾ ಊಟವಯ್ಯಾ ಎಂದು ಎಲ್ಲ ಹೊತ್ತಿನಲ್ಲೂ ಅನ್ನ ಮೊಸರು ಕಲಸಿಕೊಂಡು ಉಂಡು ಕೈತೊಳೆಯುತ್ತಾರೆ. ಹಾಗಾಗಿಯೇ ರಾತ್ರಿ ಮೊಸರು ತಿನ್ನಬಹುದೋ, ಬಾರದೋ ಎಂಬ ಪ್ರಶ್ನೆ ಹಲವರಲ್ಲಿ ಪ್ರಶ್ನೆಯಾಗಿಯೇ ಉಳಿಯುತ್ತದೆ.
ಆಯುರ್ವೇದದ (Ayurveda) ಪ್ರಕಾರ ಮೊಸರು ಕಫಕ್ಕೆ ಮೂಲ. ರಾತ್ರಿಯ ಸಮಯದಲ್ಲಿ ಕಫ ಕೂರುವ ಸಾಧ್ಯತೆಗಳು ಹೆಚ್ಚು ಇರುವುದರಿಂದ ಮೊಸರು ಉಣ್ಣುವ ಮೂಲಕ ಶೀತ ಪ್ರಕೃತಿಯ ದೇಹವುಳ್ಳವರಿಗೆ ಆರೋಗ್ಯ ಸಮಸ್ಯೆಗಳು ಕಾಣಿಸಬಹುದು ಎಂಬುದು ಈ ನಂಬಿಕೆಗೆ ಕಾರಣ. ಹಾಗಾಗಿ ಆಯುರ್ವೇದದ ಪ್ರಕಾರ, ರಾತ್ರಿ ಮೊಸರಿನ ಸೇವನೆ ಒಳ್ಳೆಯದಲ್ಲ.
ಹಾಗಾದರೆ, ರಾತ್ರಿ ಮೊಸರು ಸೇವಿಸಿದರೆ, ಬೆಳಗ್ಗೆ ನೆಗಡಿ ಗ್ಯಾರೆಂಟಿ ಅಂತ ಅಂದುಕೊಂಡೀರಾದರೆ ಅದು ಶುದ್ಧ ಮೂರ್ಖತನ. ಅಷ್ಟೇ ಅಲ್ಲ, ನಾನು ಪ್ರತಿದಿನ ಮೊಸರಿನಲ್ಲೇ ಅನ್ನ ಕಲೆಸಿಕೊಂಡು ರಾತ್ರಿ ಉಣ್ಣುತ್ತೇನಲ್ಲ, ನನಗ್ಯಾವ ಸಮಸ್ಯೆಯೂ ಈವರೆಗೆ ಆಗಿಲ್ಲವಲ್ಲ ಎಂದು ವಾದ ಮಾಡುವ ಮಂದಿಯೂ ಸಿಕ್ಕಾರು. ಅಂದರೆ, ಎಲ್ಲರಿಗೂ ಈ ಆಯುರ್ವೇದದ ಸೂತ್ರ ಅನ್ವಯಿಸುವುದಿಲ್ಲ. ಯಾವಾಗಲೂ, ಶೀತ, ಕೆಮ್ಮು ನೆಗಡಿ, ಉಸಿರಾಟದ ತೊಂದರೆ ಅನುಭವಿಸುವ ಮಂದಿಗೆ ಇದು ಖಂಡಿತ ಅನ್ವಯಿಸುತ್ತದೆ. ಅಂಥ ಮಂದಿ ರಾತ್ರಿ ಮೊಸರು ತಿನ್ನುವುದನ್ನು ಬಿಟ್ಟರೆ ಖಂಡಿತ ಅವರ ಆರೋಗ್ಯದಲ್ಲಿ ಬದಲಾವಣೆ ಕಾಣಬಹುದು. ದೇಹ ಶೀತ ಪ್ರಕೃತಿಯಲ್ಲದವರು ಯಾವುದೇ ಹಿಂಜರಿಕೆಯಿಲ್ಲದೆ ರಾತ್ರಿಯೂಟಕ್ಕೂ ಮೊಸರು ಬೆರೆಸಿ ತಿನ್ನಬಹುದು.
ಜೀರ್ಣಕ್ರಿಯೆಯಲ್ಲಿ ಸಮಸ್ಯೆ ಇರುವವರು, ಜೀರ್ಣಾಂಗ ವ್ಯವಸ್ಥೆ ದುರ್ಬಲವಾಗಿರುವವರು, ಅಸಿಡಿಟಿ, ಆಸಿಡ್ ರಿಫ್ಲಕ್ಸ್, ಅಜೀರ್ಣದಂತಹ ಸಮಸ್ಯೆಗಳಿಗೆ ಆಗಾಗ ಒಳಗಾಗುವವರೂ ರಾತ್ರಿ ಮೊಸರಿನಿಂದ ದೂರ ಇರುವುದು ಒಳ್ಳೆಯದು. ಸಾಮಾನ್ಯವಾಗಿ ರಾತ್ರಿ ಊಟವಾದ ನಂತರ ಮಲಗುವುದರಿಂದ ಜೀರ್ಣಕ್ರಿಯೆ ಹಗಲಿನಷ್ಟು ಚುರುಕಾಗಿ ಇರುವುದಿಲ್ಲವಾದ್ದರಿಂದ, ಇಂಥವರಲ್ಲಿ ಇದು ಮಲಬದ್ಧತೆಯನ್ನೂ ಉಂಟುಮಾಡುತ್ತದೆ. ಆದರೆ, ಹಗಲಿನ ಹೊತ್ತಿನಲ್ಲಿ ದೇಹ ಚುರುಕಾಗಿರುವ ಕಾರಣ ಜೀರ್ಣಕ್ರಿಯೆ ಸರಾಗವಾಗಿ ಆಗುವುದರಿಂದ ಹಗಲು ಹೊತ್ತು ಮೊಸರು ತಿನ್ನಲು ಇಂಥವರಿಗೆ ಪ್ರಶಸ್ತ ಸಮಯ.
ಕೆಲವು ವಿಚಾರಗಳನ್ನು ಹೊರತುಪಡಿಸಿದರೆ, ಮೊಸರು ದೇಹಕ್ಕೆ ಒಳ್ಳೆಯದು. ಇದು ದೇಹಕ್ಕೆ ಪ್ರತಿನಿತ್ಯ ಬೇಕಾದ ಕ್ಯಾಲ್ಶಿಯಂ ಹಾಗೂ ಪ್ರೋಟೀನನ್ನು ಒದಗಿಸುವಲ್ಲಿ ಇದರ ಪಾತ್ರ ದೊಡ್ಡದು. ಪಚನಕ್ರಿಯೆಯ ವೇಗವನ್ನು ಹೆಚ್ಚಿಸಿ, ದೇಹಕ್ಕೆ ಬೇಕಾದ ಆರೋಗ್ಯಕರವಾದ ಬ್ಯಾಕ್ಟೀರಿಯಾಗಳನ್ನು ನೀಡಿ, ದೇಹವನ್ನು ಸದಾ ಆರೋಗ್ಯದಲ್ಲಿರುವಂತೆ ಕಾಪಾಡುವ ಆಹಾರವಿದು. ದೇಹಕ್ಕೆ ಅಗತ್ಯವಾಗಿ ಬೇಕಾಗುವ ಕಾರ್ಬೋಹೈಡ್ರೇಟ್, ಪ್ರೋಟೀನ್ ಹಾಗೂ ಕೊಬ್ಬನ್ನೂ ಒದಗಿಸುವುದಲ್ಲದೆ, ದೇಹ ವಿಟಮಿನ್ ಬಿ೧೨ನ್ನು ಹೆಚ್ಚು ಹೀರಿಕೊಳ್ಳಲು ಸಹಾಯ ಮಾಡುತ್ತದೆ.
ಆಹಾರ ಎಂಬುದು ಔಷಧಿ. ನಾವು ಆಹಾರವನ್ನು ಸರಿಯಾದ ಕ್ರಮದಲ್ಲಿ, ಸರಿಯಾದ ಸಮಯಕ್ಕೆ ಉಂಡರೆ ಮಾತ್ರವೇ ಅದು ಔಷಧಿಯಾಗಿ ಕೆಲಸ ಮಾಡುತ್ತದೆ. ಆಹಾರವೆಂಬುದರ ಸೌಂದರ್ಯವೇ ಅಡಗಿರುವುದು ಇಲ್ಲಿ. ನಮಗೆ ಯಾವುದು ಹಿಡಿಯುತ್ತದೆ ಎಂಬುದನ್ನು ತಿಳಿದುಕೊಂಡು ಅದರಂತೆ ನಡೆಯುವುದು ಜಾಣ್ಮೆ ಹಾಗೂ ಆರೋಗ್ಯದ ಕೀಲಿಕೈ. ಎಲ್ಲರೂ ತಿನ್ನುತ್ತಾರೆ ಅಂದುಕೊಂಡು ತಿನ್ನುವ ಮೊದಲು ನಮ್ಮ ದೇಹಕ್ಕೆ ಒಗ್ಗುತ್ತದೋ ಎಂಬುದೂ ಮುಖ್ಯ. ಕೆಲವರಿಗೆ ಯಾವ ತೊಂದರೆಯೂ ಮಾಡದ ಆಹಾರ ಇನ್ನೂ ಕೆಲವರಿಗೆ ವೈರುಧ್ಯ ಪರಿಣಾಮ ಬೀರಬಹುದು. ಯಾಕೆಂದರೆ, ಪ್ರತಿಯೊಬ್ಬರ ದೇಹ ಪ್ರಕೃತಿಯೂ ಭಿನ್ನ. ಜೊತೆಗೆ ಪ್ರತಿಯೊಬ್ಬ ಇರುವ ವಾತಾವರಣ, ಹವಾಮಾನವೂ ಇಲ್ಲಿ ಮುಖ್ಯಪಾತ್ರ ವಹಿಸುತ್ತದೆ ಎಂಬುದನ್ನೂ ನೆನಪಿಡಬೇಕು. ಉದಾಹರಣೆಗೆ ನಾವು ಹುಟ್ಟಿ ಬೆಳೆದ ಊರಿನಲ್ಲಿ ನಮ್ಮ ದೇಹಕ್ಕೆ ಸರಿಹೊಂದಿದ ಒಂದು ಆಹಾರ, ನಾವೆಲ್ಲೋ ವಲಸೆ ಹೋದ ಊರಿನ ಬೇರೆ ಹವಾಮಾನದಲ್ಲಿ ಅದು ಒಗ್ಗಲಿಕ್ಕಿಲ್ಲ ಎಂಬ ಸತ್ಯವನ್ನು ಜಾಣ್ಮೆಯಿಂದ ಅರಿತುಕೊಳ್ಳುವುದೂ ಕೂಡಾ ಮುಖ್ಯ.
ಇದನ್ನೂ ಓದಿ: Benefits Of Eating Yogurt: ಮೊಸರು ತಿನ್ನುವ ಲಾಭಗಳೇನು ಗೊತ್ತೇ?