ಆರೋಗ್ಯ
Curd Usage: ಮೊಸರು ಸೇವನೆ: ಯಾವಾಗ, ಎಲ್ಲಿ, ಎಷ್ಟು? ಆಯುರ್ವೇದ ಏನು ಹೇಳುತ್ತೆ?
ಜೀರ್ಣಕ್ರಿಯೆಯಲ್ಲಿ ಸಮಸ್ಯೆ ಇರುವವರು, ಜೀರ್ಣಾಂಗ ವ್ಯವಸ್ಥೆ ದುರ್ಬಲವಾಗಿರುವವರು, ಅಸಿಡಿಟಿ, ಆಸಿಡ್ ರಿಫ್ಲಕ್ಸ್, ಅಜೀರ್ಣದಂತಹ ಸಮಸ್ಯೆಗಳಿಗೆ ಆಗಾಗ ಒಳಗಾಗುವವರೂ ರಾತ್ರಿ ಮೊಸರಿನಿಂದ (curd usage) ದೂರ ಇರುವುದು ಒಳ್ಳೆಯದು.
ಬಹುತೇಕರಿಗೆ ಹೀಗೊಂದು ಸಂದೇಹವಿದೆ. ರಾತ್ರಿ ಮೊಸರು ಉಣ್ಣಬಾರದು (Curd Usage) ಎಂದು ಹಿರಿಯರು ಹೇಳುವದನ್ನು ಕೇಳಿರುತ್ತಾರೆ. ಸಾಮಾನ್ಯವಾಗಿ ಉತ್ತರ ಭಾರತದಲ್ಲಿ ರಾತ್ರಿಯಾದ ಮೇಲೆ ಮೊಸರನ್ನು ಊಟದೊಂದಿಗೆ ಯಾರೂ ಕೊಡುವುದೇ ಇಲ್ಲ. ಬೇಕೆಂದು ಕೇಳಿದರೂ ಇರುವುದೂ ಇಲ್ಲ. ಚಳಿಗಾಲದಲ್ಲಂತೂ ಚಳಿಯೂರುಗಳಲ್ಲಿ ಈ ನಂಬಿಕೆಯನ್ನು ಚಾಚೂ ತಪ್ಪದೆ ಖಡಾಖಂಡಿತವಾಗಿ ಬಹುತೇಕರು ಪಾಲಿಸುತ್ತಾರೆ. ಆದರೆ, ದಕ್ಷಿಣ ಭಾರತದಲ್ಲಿ ಇದರ ಪಾಲನೆ ಅಷ್ಟಾಗಿ ಮಾಡುವುದಿಲ್ಲ. ಬಹುಶಃ ಇಲ್ಲಿನ ಹವಾಮಾನವೂ ಇದಕ್ಕೆ ಕಾರಣವಿರಬಹುದು. ಮೊಸರಿಲ್ಲದೆ ಎಂಥಾ ಊಟವಯ್ಯಾ ಎಂದು ಎಲ್ಲ ಹೊತ್ತಿನಲ್ಲೂ ಅನ್ನ ಮೊಸರು ಕಲಸಿಕೊಂಡು ಉಂಡು ಕೈತೊಳೆಯುತ್ತಾರೆ. ಹಾಗಾಗಿಯೇ ರಾತ್ರಿ ಮೊಸರು ತಿನ್ನಬಹುದೋ, ಬಾರದೋ ಎಂಬ ಪ್ರಶ್ನೆ ಹಲವರಲ್ಲಿ ಪ್ರಶ್ನೆಯಾಗಿಯೇ ಉಳಿಯುತ್ತದೆ.
ಆಯುರ್ವೇದದ (Ayurveda) ಪ್ರಕಾರ ಮೊಸರು ಕಫಕ್ಕೆ ಮೂಲ. ರಾತ್ರಿಯ ಸಮಯದಲ್ಲಿ ಕಫ ಕೂರುವ ಸಾಧ್ಯತೆಗಳು ಹೆಚ್ಚು ಇರುವುದರಿಂದ ಮೊಸರು ಉಣ್ಣುವ ಮೂಲಕ ಶೀತ ಪ್ರಕೃತಿಯ ದೇಹವುಳ್ಳವರಿಗೆ ಆರೋಗ್ಯ ಸಮಸ್ಯೆಗಳು ಕಾಣಿಸಬಹುದು ಎಂಬುದು ಈ ನಂಬಿಕೆಗೆ ಕಾರಣ. ಹಾಗಾಗಿ ಆಯುರ್ವೇದದ ಪ್ರಕಾರ, ರಾತ್ರಿ ಮೊಸರಿನ ಸೇವನೆ ಒಳ್ಳೆಯದಲ್ಲ.
ಹಾಗಾದರೆ, ರಾತ್ರಿ ಮೊಸರು ಸೇವಿಸಿದರೆ, ಬೆಳಗ್ಗೆ ನೆಗಡಿ ಗ್ಯಾರೆಂಟಿ ಅಂತ ಅಂದುಕೊಂಡೀರಾದರೆ ಅದು ಶುದ್ಧ ಮೂರ್ಖತನ. ಅಷ್ಟೇ ಅಲ್ಲ, ನಾನು ಪ್ರತಿದಿನ ಮೊಸರಿನಲ್ಲೇ ಅನ್ನ ಕಲೆಸಿಕೊಂಡು ರಾತ್ರಿ ಉಣ್ಣುತ್ತೇನಲ್ಲ, ನನಗ್ಯಾವ ಸಮಸ್ಯೆಯೂ ಈವರೆಗೆ ಆಗಿಲ್ಲವಲ್ಲ ಎಂದು ವಾದ ಮಾಡುವ ಮಂದಿಯೂ ಸಿಕ್ಕಾರು. ಅಂದರೆ, ಎಲ್ಲರಿಗೂ ಈ ಆಯುರ್ವೇದದ ಸೂತ್ರ ಅನ್ವಯಿಸುವುದಿಲ್ಲ. ಯಾವಾಗಲೂ, ಶೀತ, ಕೆಮ್ಮು ನೆಗಡಿ, ಉಸಿರಾಟದ ತೊಂದರೆ ಅನುಭವಿಸುವ ಮಂದಿಗೆ ಇದು ಖಂಡಿತ ಅನ್ವಯಿಸುತ್ತದೆ. ಅಂಥ ಮಂದಿ ರಾತ್ರಿ ಮೊಸರು ತಿನ್ನುವುದನ್ನು ಬಿಟ್ಟರೆ ಖಂಡಿತ ಅವರ ಆರೋಗ್ಯದಲ್ಲಿ ಬದಲಾವಣೆ ಕಾಣಬಹುದು. ದೇಹ ಶೀತ ಪ್ರಕೃತಿಯಲ್ಲದವರು ಯಾವುದೇ ಹಿಂಜರಿಕೆಯಿಲ್ಲದೆ ರಾತ್ರಿಯೂಟಕ್ಕೂ ಮೊಸರು ಬೆರೆಸಿ ತಿನ್ನಬಹುದು.
ಜೀರ್ಣಕ್ರಿಯೆಯಲ್ಲಿ ಸಮಸ್ಯೆ ಇರುವವರು, ಜೀರ್ಣಾಂಗ ವ್ಯವಸ್ಥೆ ದುರ್ಬಲವಾಗಿರುವವರು, ಅಸಿಡಿಟಿ, ಆಸಿಡ್ ರಿಫ್ಲಕ್ಸ್, ಅಜೀರ್ಣದಂತಹ ಸಮಸ್ಯೆಗಳಿಗೆ ಆಗಾಗ ಒಳಗಾಗುವವರೂ ರಾತ್ರಿ ಮೊಸರಿನಿಂದ ದೂರ ಇರುವುದು ಒಳ್ಳೆಯದು. ಸಾಮಾನ್ಯವಾಗಿ ರಾತ್ರಿ ಊಟವಾದ ನಂತರ ಮಲಗುವುದರಿಂದ ಜೀರ್ಣಕ್ರಿಯೆ ಹಗಲಿನಷ್ಟು ಚುರುಕಾಗಿ ಇರುವುದಿಲ್ಲವಾದ್ದರಿಂದ, ಇಂಥವರಲ್ಲಿ ಇದು ಮಲಬದ್ಧತೆಯನ್ನೂ ಉಂಟುಮಾಡುತ್ತದೆ. ಆದರೆ, ಹಗಲಿನ ಹೊತ್ತಿನಲ್ಲಿ ದೇಹ ಚುರುಕಾಗಿರುವ ಕಾರಣ ಜೀರ್ಣಕ್ರಿಯೆ ಸರಾಗವಾಗಿ ಆಗುವುದರಿಂದ ಹಗಲು ಹೊತ್ತು ಮೊಸರು ತಿನ್ನಲು ಇಂಥವರಿಗೆ ಪ್ರಶಸ್ತ ಸಮಯ.
ಕೆಲವು ವಿಚಾರಗಳನ್ನು ಹೊರತುಪಡಿಸಿದರೆ, ಮೊಸರು ದೇಹಕ್ಕೆ ಒಳ್ಳೆಯದು. ಇದು ದೇಹಕ್ಕೆ ಪ್ರತಿನಿತ್ಯ ಬೇಕಾದ ಕ್ಯಾಲ್ಶಿಯಂ ಹಾಗೂ ಪ್ರೋಟೀನನ್ನು ಒದಗಿಸುವಲ್ಲಿ ಇದರ ಪಾತ್ರ ದೊಡ್ಡದು. ಪಚನಕ್ರಿಯೆಯ ವೇಗವನ್ನು ಹೆಚ್ಚಿಸಿ, ದೇಹಕ್ಕೆ ಬೇಕಾದ ಆರೋಗ್ಯಕರವಾದ ಬ್ಯಾಕ್ಟೀರಿಯಾಗಳನ್ನು ನೀಡಿ, ದೇಹವನ್ನು ಸದಾ ಆರೋಗ್ಯದಲ್ಲಿರುವಂತೆ ಕಾಪಾಡುವ ಆಹಾರವಿದು. ದೇಹಕ್ಕೆ ಅಗತ್ಯವಾಗಿ ಬೇಕಾಗುವ ಕಾರ್ಬೋಹೈಡ್ರೇಟ್, ಪ್ರೋಟೀನ್ ಹಾಗೂ ಕೊಬ್ಬನ್ನೂ ಒದಗಿಸುವುದಲ್ಲದೆ, ದೇಹ ವಿಟಮಿನ್ ಬಿ೧೨ನ್ನು ಹೆಚ್ಚು ಹೀರಿಕೊಳ್ಳಲು ಸಹಾಯ ಮಾಡುತ್ತದೆ.
ಆಹಾರ ಎಂಬುದು ಔಷಧಿ. ನಾವು ಆಹಾರವನ್ನು ಸರಿಯಾದ ಕ್ರಮದಲ್ಲಿ, ಸರಿಯಾದ ಸಮಯಕ್ಕೆ ಉಂಡರೆ ಮಾತ್ರವೇ ಅದು ಔಷಧಿಯಾಗಿ ಕೆಲಸ ಮಾಡುತ್ತದೆ. ಆಹಾರವೆಂಬುದರ ಸೌಂದರ್ಯವೇ ಅಡಗಿರುವುದು ಇಲ್ಲಿ. ನಮಗೆ ಯಾವುದು ಹಿಡಿಯುತ್ತದೆ ಎಂಬುದನ್ನು ತಿಳಿದುಕೊಂಡು ಅದರಂತೆ ನಡೆಯುವುದು ಜಾಣ್ಮೆ ಹಾಗೂ ಆರೋಗ್ಯದ ಕೀಲಿಕೈ. ಎಲ್ಲರೂ ತಿನ್ನುತ್ತಾರೆ ಅಂದುಕೊಂಡು ತಿನ್ನುವ ಮೊದಲು ನಮ್ಮ ದೇಹಕ್ಕೆ ಒಗ್ಗುತ್ತದೋ ಎಂಬುದೂ ಮುಖ್ಯ. ಕೆಲವರಿಗೆ ಯಾವ ತೊಂದರೆಯೂ ಮಾಡದ ಆಹಾರ ಇನ್ನೂ ಕೆಲವರಿಗೆ ವೈರುಧ್ಯ ಪರಿಣಾಮ ಬೀರಬಹುದು. ಯಾಕೆಂದರೆ, ಪ್ರತಿಯೊಬ್ಬರ ದೇಹ ಪ್ರಕೃತಿಯೂ ಭಿನ್ನ. ಜೊತೆಗೆ ಪ್ರತಿಯೊಬ್ಬ ಇರುವ ವಾತಾವರಣ, ಹವಾಮಾನವೂ ಇಲ್ಲಿ ಮುಖ್ಯಪಾತ್ರ ವಹಿಸುತ್ತದೆ ಎಂಬುದನ್ನೂ ನೆನಪಿಡಬೇಕು. ಉದಾಹರಣೆಗೆ ನಾವು ಹುಟ್ಟಿ ಬೆಳೆದ ಊರಿನಲ್ಲಿ ನಮ್ಮ ದೇಹಕ್ಕೆ ಸರಿಹೊಂದಿದ ಒಂದು ಆಹಾರ, ನಾವೆಲ್ಲೋ ವಲಸೆ ಹೋದ ಊರಿನ ಬೇರೆ ಹವಾಮಾನದಲ್ಲಿ ಅದು ಒಗ್ಗಲಿಕ್ಕಿಲ್ಲ ಎಂಬ ಸತ್ಯವನ್ನು ಜಾಣ್ಮೆಯಿಂದ ಅರಿತುಕೊಳ್ಳುವುದೂ ಕೂಡಾ ಮುಖ್ಯ.
ಇದನ್ನೂ ಓದಿ: Benefits Of Eating Yogurt: ಮೊಸರು ತಿನ್ನುವ ಲಾಭಗಳೇನು ಗೊತ್ತೇ?
ಆರೋಗ್ಯ
Side Effects Of Bananas: ಬಾಳೆಹಣ್ಣು ಹೆಚ್ಚು ತಿಂದರೆ ಏನಾಗುತ್ತದೆ?
ಪೌಷ್ಟಿಕವಾದ, ಹೆಚ್ಚು ದುಬಾರಿಯಲ್ಲದೆ, ಎಲ್ಲರ ಕೈಗೆಟುಕುವಂಥ ಆಹಾರ ಎನಿಸಿಕೊಂಡಿರುವ ಬಾಳೆ ಹಣ್ಣು ಎಲ್ಲರಿಗೂ ಅಚ್ಚುಮೆಚ್ಚು. ಶರ್ಕಪಿಷ್ಟ, ನಾರು, ವಿಟಮಿನ್‌ಗಳು, ಖನಿಜಗಳು ಎಲ್ಲವೂ ಇರುವಂಥ ಈ ಹಣ್ಣು ತಿಂದಿದ್ದು ಅತಿಯಾದರೆ (Side Effects Of Bananas) ಸಮಸ್ಯೆಗಳು ಕಾಡಬಹುದೇ? ಈ ಲೇಖನ ಓದಿ.
ಬಾಳೆಯ ಹಣ್ಣನ್ನು ಬಯಸದವರು ಅಪರೂಪ. ಇದನ್ನು ತಿನ್ನುವುದಕ್ಕೆ (Side Effects Of Bananas) ಇಂಥದ್ದೇ ಕಾರಣ ಎಂಬುದೂ ಬೇಕಿಲ್ಲ. ದೇವರ ಪ್ರಸಾದದ್ದು, ತಾಂಬೂಲದ ಜೊತೆಗಿನದ್ದು, ತಮ್ಮದೇ ತೋಟದ್ದೆಂದು ಯಾರೋ ಕೊಟ್ಟಿದ್ದು, ನಾವೇ ಅಂಗಡಿಯಿಂದ ತಂದಿದ್ದು, ಇಷ್ಟವೆಂದು ಮೆಂದಿದ್ದು, ಹಸಿವು ತಣಿಸಲು ತಿಂದಿದ್ದು, ಕ್ರೀಡೆಯ ನಡುವಿನ ಬ್ರೇಕ್‌ನಲ್ಲಿ, ಬೆಳಗಿನ ವ್ಯಾಯಾಮದ ಮೊದಲಿನ ಶಕ್ತಿ ಸಂಚಯನಕ್ಕೆ, ಮ್ಯಾರಥಾನ್ ಓಡುವಾಗ ಕಾಲಿಗೆ ಬಲ ನೀಡಲು, ಮಲಬದ್ಧತೆ ನಿವಾರಣೆಗೆ… ಕಾರಣಗಳು ಏನು ಬೇಕಿದ್ದರೂ ಆಗಬಹುದು.
ತಪ್ಪೇನಿಲ್ಲ ಬಿಡಿ. ಮಧುಮೇಹದ ಕಾಟವಿಲ್ಲ ಎಂದಾದರೆ ದಿನಕ್ಕೆ ಒಂದೆರಡು ಬಾಳೆಹಣ್ಣು ಮೆಲ್ಲುವುದು ವಿಷಯವೇ ಅಲ್ಲ. ಅಷ್ಟೊಂದು ಪೌಷ್ಟಿಕವಾದ, ಹೆಚ್ಚು ದುಬಾರಿಯಲ್ಲದೆ, ಎಲ್ಲರ ಕೈಗೆಟುಕುವಂಥ ಆಹಾರ ಎನಿಸಿಕೊಂಡಿರುವ ಬಾಳೆ ಹಣ್ಣು ಎಲ್ಲರಿಗೂ ಅಚ್ಚುಮೆಚ್ಚಾಗಿರುವುದರಲ್ಲಿ ಅಚ್ಚರಿಯೇನಿಲ್ಲ. ಶರ್ಕಪಿಷ್ಟ, ನಾರು, ವಿಟಮಿನ್‌ಗಳು, ಖನಿಜಗಳು ಎಲ್ಲವೂ ಇರುವಂಥ ಈ ಹಣ್ಣು ತಿಂದಿದ್ದು ಅತಿಯಾದರೆ ಸಮಸ್ಯೆಗಳು ಕಾಡಬಹುದೇ? ಅತಿಯಾದರೆ ಅಮೃತವೂ ವಿಷ ಎಂಬಂತೆ, ಅತಿಯಾಗಿ ತಿಂದರೆ (eating too many bananas) ಬಾಳೆಯೂ ಬವಣೆ ತರಬಹುದೇ? ಅದಕ್ಕೂ ಮೊದಲು ಬಾಳೆಯ ವಿವರಗಳನ್ನು ಗಮನಿಸೋಣ.
ಏನಿವೆ ಪೌಷ್ಟಿಕಾಂಶಗಳು?
ಸತ್ವಗಳ ಖನಿ ಎಂದೇ ಕರೆಸಿಕೊಂಡಿದೆ ಬಾಳೆಯ ಹಣ್ಣು. ಫ್ಲೆವನಾಯ್ಡ್, ಕೆರೊಟಿನಾಯ್ಡ್ ಸೇರಿದಂತೆ ಹಲವು ರೀತಿಯ ಉತ್ಕರ್ಷಣ ನಿರೋಧಕಗಳು ಬಾಳೆಹಣ್ಣಿನಲ್ಲಿವೆ. ಹಾಗಾಗಿ ಮೊದಲ ಸುತ್ತಿಗೇ ಇದು ಆರೋಗ್ಯಕ್ಕೆ ಉಪಕಾರಿ ಎನಿಸಿಬಿಡುತ್ತದೆ. ವಿಟಮಿನ್ ಸಿ, ವಿಟಮಿನ್ ಬಿ೬ ನಂಥ ಜೀವಸತ್ವಗಳು ಜೀವಕ್ಕೆ ಹಿತ ಎನಿಸಿದರೆ, ನಾರು ಜೀರ್ಣಾಂಗಗಳ ದೇಖರೇಖಿ ನೋಡಿಕೊಳ್ಳುತ್ತದೆ. ಪೊಟಾಶಿಯಂ ಸಹ ಹೇರಳವಾಗಿ ಇರುವುದರಿಂದ ರಕ್ತದೊತ್ತಡ ಏರಿಳಿಯದಂತೆ ನಿರ್ವಹಣೆಗೂ ಇದು ನೆರವು ನೀಡುತ್ತದೆ. ಹಾಗಾಗಿ ಹೃದಯದ ಆರೋಗ್ಯಕ್ಕೂ ಇದು ಒಳ್ಳೆಯದು. ಸಕ್ಕರೆ ಮತ್ತು ಪಿಷ್ಟದ ಅಂಶಗಳು ಇದ್ದರೂ, ನಾರು ಸಾಕಷ್ಟು ಇರುವುದರಿಂದ ಹೆಚ್ಚು ಕಾಲ ಹೊಟ್ಟೆ ತುಂಬಿದಂತಿರುವ ಭಾವನೆ ಮೂಡಿಸಬಹುದು ಈ ಹಣ್ಣು. ಇಷ್ಟಲ್ಲಾ ಸದ್ಗುಣಗಳು ಇದರಲ್ಲಿ ಇದ್ದ ಮೇಲೆ, ಸ್ವಲ್ಪ ಹೆಚ್ಚು ತಿಂದರೆ ತಪ್ಪೇನು ಎಂಬ ಪ್ರಶ್ನೆ ಮೂಡಿದರೆ- ಅದು ಸಹಜ. ಆದರೆ…
ತೊಂದರೆಗಳಿವೆ!
ಒಳ್ಳೆಯದೆಂಬ ಕಾರಣಕ್ಕೆ ಬಾಳೆಹಣ್ಣನ್ನು ಅತಿಯಾಗಿ ತಿಂದರೆ, ಅದರಿಂದ ತೊಂದರೆಗಳು ಅಮರಿಕೊಳ್ಳಬಹುದು ಎನ್ನುತ್ತಾರೆ ತಜ್ಞರು. ಇದೀಗ ಒಂದೆರಡು ಹಣ್ಣುಗಳಿಗೆ ತೊಂದರೆಯಿಲ್ಲ, ಆದರೆ ದಿನವೂ ನಾಲ್ಕಾರು ಹಣ್ಣುಗಳನ್ನು ಗುಳುಂ ಮಾಡಿದರೆ… ಕೆಲವೊಂದು ಸಣ್ಣ ತೊಂದರೆಗಳಿಂದ ಹಿಡಿದು, ದೊಡ್ಡ ಸಮಸ್ಯೆಗಳವರೆಗೂ ಬರುವ ಸಾಧ್ಯತೆಗಳನ್ನು ಪೌಷ್ಟಿಕಾಂಶ ಪರಿಣತರು ತಳ್ಳಿ ಹಾಕುವುದಿಲ್ಲ
ಮೈಗ್ರೇನ್
ಅತಿಯಾದ ಮೈಗ್ರೇನ್ ತಲೆನೋವಿನ ಸಮಸ್ಯೆ ಇರುವವರಿಗೆ ವಿಪರೀತ ಬಾಳೆಹಣ್ಣು ತಿನ್ನುವುದು ಇನ್ನಷ್ಟು ತಲೆನೋವಿಗೆ ಕಾರಣವಾಗುತ್ತದೆ. ಅದರಲ್ಲೂ, ಸರಿಯಾಗಿ ಸಿಪ್ಪೆ ಸುಲಿಯದಿದ್ದರೆ, ಅದರಲ್ಲಿರುವ ಟೈರಮಿನ್ ಅಂಶವು ಹೊಟ್ಟೆ ಸೇರುತ್ತದೆ. ಇದರಿಂದ ಮೈಗ್ರೇನ್ ಕೆದರುವ ಸಾಧ್ಯತೆ ಹೆಚ್ಚು. ಈ ಟೈರಮಿನ್ ಅಂಶವನ್ನು ವಿಘಟಿಸಿ, ದೇಹದಿಂದ ಹೊರಗೆ ದಾಟಿಸುವ ರಾಸಾಯನಿಕಗಳು ಮೈಗ್ರೇನ್ ಸಮಸ್ಯೆ ಇರುವವರಲ್ಲಿ ಕಡಿಮೆಯಾದ್ದರಿಂದ, ಈ ಬಗ್ಗೆ ಎಚ್ಚರ ವಹಿಸುವುದು ಒಳಿತು.
ತೂಕ ಹೆಚ್ಚಳ
ಮಿತವಾಗಿ ಬಾಳೆಹಣ್ಣು ತಿನ್ನುವುದು ತೂಕ ಇಳಿಸುವವರಿಗೂ ಕ್ಷೇಮ. ಇದರಲ್ಲಿರುವ ನಾರಿನಿಂದಾಗಿ ಹೆಚ್ಚು ಸಮಯ ಹಸಿವಾಗದಂತೆ ಇದು ತಡೆಯುತ್ತದೆ. ಆದರೆ ಮದ್ದಿನ ಬದಲು ಮದ್ದಿನ ಮರವನ್ನೇ ತಿನ್ನಬಾರದಲ್ಲ! ಅತಿಯಾಗಿ ತಿಂದರೆ ತೂಕ ಏರುವುದರಲ್ಲಿ ಸಂಶಯವಿಲ್ಲ. ಇದರಲ್ಲಿರುವ ಸಕ್ಕರೆ ಮತ್ತು ಕಾರ್ಬ್ ಅಂಶಗಳೇ ಹೀಗೆ ತೂಕ ಏರುವುದಕ್ಕೆ ಕಾರಣವಾಗುತ್ತವೆ.
ಜೀರ್ಣಾಂಗಗಳ ಸಮಸ್ಯೆ
ಇದರಲ್ಲಿ ನಾರು ಇದ್ದರೂ ನೀರಿಲ್ಲ. ಇರುವುದರಲ್ಲಿ ಹೆಚ್ಚಿನಾಂಶ ಕರಗಬಲ್ಲ ನಾರು. ಇದನ್ನು ಮಿತವಾಗಿ ತಿಂದರೆ ಮಲಬದ್ಧತೆ ನಿವಾರಣೆ ಮಾಡುತ್ತದೆ. ಆದರೆ ಅತಿಯಾಗಿ ತಿಂದರೆ ಮಲಬದ್ಧತೆಗೆ ಕಾರಣವಾಗುತ್ತದೆ. ಜೊತೆಗೆ, ಆಸಿಡಿಟಿ, ಹೊಟ್ಟೆಯುಬ್ಬರ, ಅಜೀರ್ಣವನ್ನೂ ತರಬಹುದು. ಹಾಗಾಗಿ ಮಿತಿಮೀರಿದರೆ ತೊಂದರೆ ತಪ್ಪಿದ್ದಲ್ಲ.
ನಿದ್ದೆಗೆ ದಾರಿ!
ಹೊಟ್ಟೆ ಭಾರವಾಗುವಷ್ಟು ಬಾಳೆಹಣ್ಣು ತಿಂದು ಕೆಲಸಕ್ಕೆ ಕುಳಿತು ತೂಕಡಿಸುವವರನ್ನು ನೋಡಿರಬಹುದು. ಒಂದೆರಡು ಹಣ್ಣಿಗೆ ಹೀಗಾಗದಿರಬಹುದು. ಆದರೆ ಒಟ್ಟಾರೆಯಾಗಿ ಬಾಳೆಹಣ್ಣಿನ ಸತ್ವಗಳು ಅತಿಯಾಗಿ ರಕ್ತ ಸೇರುತ್ತಿದ್ದರೆ, ಮೆದುಳನ್ನು ಮಂಕಾಗಿಸುವುದು ನಿಜ. ತೂಕಡಿಕೆ, ಚುರುಕಿಲ್ಲದೆ ಮಬ್ಬಾಗಿರುವುದು ಮುಂತಾದವು ಸಾಮಾನ್ಯವಾಗಬಹುದು. ಈ ಹಣ್ಣಿನಲ್ಲಿರುವ ಟ್ರಿಪ್ಟೊಫ್ಯಾನ್ ಅಂಶ ಇದಕ್ಕೆ ಕಾರಣ ಎನ್ನಲಾಗುತ್ತದೆ.
ಹಲ್ಲುಗಳ ಸಮಸ್ಯೆ
ಸಿಹಿ ಹೆಚ್ಚಿರುವ ಇದನ್ನು ಸಿಕ್ಕಾಪಟ್ಟೆ ತಿನ್ನುವುದು, ಆನಂತರ ಬಾಯಿ ಶುಚಿ ಮಾಡದಿರುವುದು ಹಲ್ಲುಗಳ ಸಮಸ್ಯೆಗೂ ಮೂಲವಾಗಬಹುದು. ಇದರಲ್ಲಿ ಹೆಚ್ಚಿರುವ ಪಿಷ್ಟದ ಅಂಶವನ್ನು ಬಾಯಲ್ಲಿರುವ ಬ್ಯಾಕ್ಟೀರಿಯಾಗಳು ವಿಘಟಿಸಿದಾಗ ಆಮ್ಲಗಳು ಬಿಡುಗಡೆಗೊಳ್ಳುತ್ತವೆ. ಅವು ದೀರ್ಘಕಾಲ ಬಾಯಲ್ಲೇ ಇದ್ದರೆ ಹಲ್ಲುಗಳ ಎನಾಮಲ್ ಕವಚ ದುರ್ಬಲವಾಗುತ್ತದೆ.
ಮಧುಮೇಹ
ಗ್ಲೂಕೋಸ್, ಫ್ರಕ್ಟೋಸ್‌ನಂಥ ಪಿಷ್ಟಗಳು ಇದರಲ್ಲಿ ಹೆಚ್ಚಿರುವುದರಿಂದ ಇದನ್ನು ಮಧುಮೇಹಿಗಳು ಹೆಚ್ಚು ತಿನ್ನುವಂತಿಲ್ಲ. ಇದು ಹೊಟ್ಟೆಗೆ ಹೋಗುತ್ತಿದ್ದಂತೆ ತ್ವರಿತವಾಗಿ ರಕ್ತ ಸೇರಿ, ಅಲ್ಲಿನ ಸಕ್ಕರೆಯ ಮಟ್ಟವನ್ನು ಏರಿಸುತ್ತದೆ. ಹಾಗಾಗಿ ಮಧುಮೇಹ-ಪೂರ್ವದ ಸ್ಥಿತಿಯಲ್ಲಿ ಇದ್ದವರಿಗೂ ಇದನ್ನು ತೀರಾ ಮಿತವಾಗಿಯೇ ತಿನ್ನುವುದಕ್ಕೆ ವೈದ್ಯರು ಸೂಚಿಸುತ್ತಾರೆ.
ಇದನ್ನೂ ಓದಿ: Cinnamon Health Benefits: ದಾಲ್ಚಿನ್ನಿಯಲ್ಲಿದೆ ಚಿನ್ನದಂಥಾ ಆರೋಗ್ಯಕಾರಿ ಗುಣ!
ಆರೋಗ್ಯ
Cinnamon Health Benefits: ದಾಲ್ಚಿನ್ನಿಯಲ್ಲಿದೆ ಚಿನ್ನದಂಥಾ ಆರೋಗ್ಯಕಾರಿ ಗುಣ!
ತೂಕ ಇಳಿಕೆ, ಹೃದಯದ ಆರೋಗ್ಯದಂತಹ ಹಲವು ಆರೋಗ್ಯಕಾರಿ ಪ್ರಯೋಜನಗಳನ್ನು (Cinnamon Health Benefits) ದಾಲ್ಚಿನ್ನಿ ಮೂಲಕ ಪಡೆಯಬಹುದು. ಅವು ಯಾವುವು ಅಂತ ನೋಡೋಣ ಬನ್ನಿ.
ದಾಲ್ಚಿನ್ನಿ ಅಥವಾ ಚಕ್ಕೆ (Cinnamon) ಎಲ್ಲರ ಅಡುಗೆಮನೆಯಲ್ಲಿರುತ್ತದೆ. ಆದರೆ ಇದನ್ನು ಬಿರಿಯಾನಿ ಹಾಗೂ ಪಲಾವ್ ಮಾಡುವಾಗ ಉಪಯೋಗಿಸುವುದು (Cinnamon uses) ಬಿಟ್ಟರೆ ಇದರ ಇತರ ಆರೋಗ್ಯ ಲಾಭಗಳನ್ನು (Cinnamon benefits) ತಿಳಿದವರು ವಿರಳ. ದಾಲ್ಚಿನ್ನಿ ಅಥವಾ ಚಕ್ಕೆಯನ್ನು ಸಾಂಪ್ರದಾಯಿಕ ಚೈನೀಸ್ ಔಷಧ ಹಾಗೂ ಆಯುರ್ವೇದದಲ್ಲೂ ವಿವಿಧ ರೀತಿಯ ರೋಗಗಳನ್ನು ನಿವಾರಿಸಲು ಬಳಸಲಾಗುತ್ತದೆ. ಒಣ ದಾಲ್ಚಿನ್ನಿ ಎಲೆಗಳು ಮತ್ತು ತೊಗಟೆ ಮಸಾಲೆಗಳ ರೂಪದಲ್ಲಿ ಆಹಾರದ ರುಚಿಯನ್ನು ಹೆಚ್ಚಿಸುತ್ತದೆ. ಆಹಾರದಲ್ಲಿ ದಾಲ್ಚಿನ್ನಿ ಬಳಕೆಯು ರಕ್ತವನ್ನು ಸ್ವಚ್ಛಗೊಳಿಸುತ್ತದೆ, ತೂಕವನ್ನು ಕಡಿಮೆ ಮಾಡುತ್ತದೆ. ಹಾಗೆಯೇ ಅನೇಕ ರೋಗಗಳಿಂದ ದೂರವಿರಿಸುತ್ತದೆ. ಇಷ್ಟೇ ಅಲ್ಲದೆ ಮೈಗ್ರೇನ್ನಂತಹ ತಲೆನೋವಿಗೂ ಪರಿಹಾರವನ್ನು ನೀಡುತ್ತದೆ. ಇದಲ್ಲದೆ ಇನ್ನೂ ಹಲವು ಆರೋಗ್ಯಕಾರಿ ಪ್ರಯೋಜನಗಳನ್ನು (Cinnamon Health Benefits) ದಾಲ್ಚಿನ್ನಿ ಮೂಲಕ ಪಡೆಯಬಹುದು. ಅವು ಯಾವುವು ಅಂತ ನೋಡೋಣ ಬನ್ನಿ.
ನೆನಪಿನ ಶಕ್ತಿ ಹೆಚ್ಚಳ
ಚಕ್ಕೆ ಅಥವಾ ದಾಲ್ಚಿನ್ನಿಯ ಪರಿಮಳ ನಮ್ಮ ಜ್ಞಾನಗ್ರಹಣ ಕ್ರಿಯೆ ಮತ್ತು ಸ್ಮರಣೆಯನ್ನು ಹೆಚ್ಚಿಸುತ್ತದೆ ಎಂದು ಸೈಂಟಿಫಿಕ್ ಅಧ್ಯಯನಗಳಲ್ಲಿ ತಿಳಿದುಬಂದಿದೆ. ಅಷ್ಟೇ ಅಲ್ಲದೇ ಮ್ಯಾಂಗನೀಸ್, ಫೈಬರ್, ಐರನ್ ಹಾಗೂ ಕ್ಯಾಲ್ಶಿಯಂ ಅಂಶವನ್ನು ದಾಲ್ಚಿನ್ನಿ ಅಥವಾ ಚಕ್ಕೆ ಅಧಿಕ ಪ್ರಮಾಣದಲ್ಲಿ ಹೊಂದಿರುತ್ತದೆ.
ಸಂಧಿವಾತದ ನೋವಿಗೆ ಔಷಧ
ಪ್ರತಿದಿನ ಅರ್ಧ ಟೀ ಸ್ಪೂನ್ ಚಕ್ಕೆಯನ್ನು ಒಂದು ಟೇಬಲ್ ಸ್ಪೂನ್ ಜೇನುತುಪ್ಪದ ಜತೆಗೆ ಸೇರಿಸಿ ಪ್ರತಿದಿನ ಬೆಳಗ್ಗೆ ತಿಂಡಿಗೂ ಮುನ್ನ ಸೇವಿಸಿದರೆ ಒಂದು ವಾರದ ಬಳಿಕ ಆರ್ಥೈಟಿಸ್ ನೋವಿಗೆ ಗಮನಾರ್ಹ ಪರಿಹಾರವನ್ನು ನೀಡುತ್ತದೆ ಎಂದು ಕೋಪೆನ್‌ಹೇಗನ್ ವಿವಿಯಲ್ಲಿ ರೋಗಿಗಳ ಮೇಲೆ ನಡೆಸಿದ ಅಧ್ಯಯನದಲ್ಲಿ ತಿಳಿದುಬಂದಿದೆ.
ಮಧುಮೇಹ ನಿಯಂತ್ರಣ
ರಕ್ತದಲ್ಲಿನ ಸಕ್ಕರೆ ಮಟ್ಟ ಸಮತೋಲನದಲ್ಲಿ ಇಡಬೇಕಾದರೆ ದಾಲ್ಚಿನ್ನಿ ಎಣ್ಣೆ ಬಳಕೆ ಮಾಡಬಹುದು. ಇದರಲ್ಲಿರುವ ಹಲವಾರು ಅಂಶಗಳು ಮಧುಮೇಹ ನಿಯಂತ್ರಿಸಲು ಸಹಕಾರಿ. ದಾಲ್ಚಿನ್ನಿ ಎಣ್ಣೆಯು ಗ್ಲೂಕೋಸ್ ಸಹಿಷ್ಣುತೆಯನ್ನು ಸುಧಾರಣೆ ಮಾಡುತ್ತದೆ. ಟೈಪ್ 2 ಮಧುಮೇಹಕ್ಕೆ ಇದು ಒಳ್ಳೆಯದು.
ಜೀರ್ಣ ಸಮಸ್ಯೆ
ಜೀರ್ಣಾಂಗ ವ್ಯವಸ್ಥೆಯ ಸಮಸ್ಯೆಗಳು ಕಂಡು ಬರುತ್ತಿದ್ದರೆ, ಸ್ವಲ್ಪ ದಾಲ್ಚಿನ್ನಿ ಪುಡಿಯನ್ನು ಒಂದು ಚಮಚ ಜೇನುತುಪ್ಪದೊಂದಿಗೆ ಬೆರೆಸಿ ತಿನ್ನಿರಿ. ಇದರಿಂದ ಹೊಟ್ಟೆಯ ಆಮ್ಲೀಯತೆ ನಿವಾರಣೆಯಾಗುತ್ತದೆ. ಅಲ್ಲದೆ, ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.
ತೂಕ ಇಳಿಕೆ
ದಾಲ್ಚಿನ್ನಿ ನಿಮ್ಮ ಹೆಚ್ಚುತ್ತಿರುವ ತೂಕವನ್ನು ಕಡಿಮೆ ಸಹಾಯ ಮಾಡುತ್ತದೆ. ಇದಕ್ಕಾಗಿ, ಉಪಾಹಾರಕ್ಕೆ ಅರ್ಧ ಘಂಟೆಯ ಮೊದಲು ಒಂದು ಟೀ ಚಮಚ ದಾಲ್ಚಿನ್ನಿ ಪುಡಿಯನ್ನು ಬೆರೆಸಿ ಕುದಿಸಿ. ನಂತರ ಅದನ್ನು ಒಂದು ಕಪ್‌ನಲ್ಲಿ ಹಾಕಿ ಮತ್ತು ಎರಡು ಚಮಚ ಜೇನುತುಪ್ಪವನ್ನು ಬೆರೆಸಿ ಕುಡಿಯಿರಿ. ರಾತ್ರಿಯಲ್ಲಿ ಮಲಗುವ ಮೊದಲೇ ಈ ಪ್ರಕ್ರಿಯೆಯನ್ನು ಪುನರಾವರ್ತಿಸಿ. ದಾಲ್ಚಿನ್ನಿ ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹ ಸಹಾಯ ಮಾಡುತ್ತದೆ.
ಹೃದಯದ ಆರೋಗ್ಯ
ದಾಲ್ಚಿನ್ನಿ ನಿಮ್ಮ ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. ಇದಕ್ಕಾಗಿ ದಾಲ್ಚಿನ್ನಿ ಪುಡಿ ಮತ್ತು ಜೇನು ಪೇಸ್ಟ್ ತಯಾರಿಸಿ ರೊಟ್ಟಿ ಜೊತೆ ತಿನ್ನಿರಿ. ಇದು ಅಪಧಮನಿಗಳಲ್ಲಿ ಕೊಲೆಸ್ಟ್ರಾಲ್ ಅನ್ನು ಸಂಗ್ರಹಿಸುವುದಿಲ್ಲ. ಹಾಗೆಯೇ ಇದು ಹೃದಯ ಸಂಬಂಧಿತ ಕಾಯಿಲೆಗಳ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಹೃದ್ರೋಗ ಹೊಂದಿರುವ ಜನರಿಗೆ, ಈ ಪರಿಹಾರ ರಾಮಬಾಣವಾಗಿದೆ.
ಚರ್ಮದ ಸಮಸ್ಯೆ ನಿವಾರಣೆ
ಚರ್ಮದಲ್ಲಿ ತುರಿಕೆ ಮುಂತಾದ ಸಮಸ್ಯೆಗಳು ಉಂಟಾದರೆ, ದಾಲ್ಚಿನ್ನಿ ಪುಡಿಯಲ್ಲಿ ಜೇನುತುಪ್ಪವನ್ನು ಬೆರೆಸಿ ಪೇಸ್ಟ್ ಮಾಡಿ ತುರಿಕೆ ಇರುವಲ್ಲಿ ಹಚ್ಚಿ. ಒಣಗಿದ ಬಳಿಕ ತೊಳೆಯಿರಿ.
ಇದನ್ನೂ ಓದಿ: Clove Health Benefits: ಲವಂಗದಲ್ಲಿ ನಿಮ್ಮ ದೇಹದ ಪ್ರತಿ ಅಂಗಕ್ಕೂ ಆರೋಗ್ಯವಿದೆ!
ಆರೋಗ್ಯ
Ridge Gourd Benefits: ಹೀರೆಕಾಯಿ ರುಚಿಕರ ಮಾತ್ರವಲ್ಲ, ಪೋಷಕಾಂಶಗಳ ಮೂಲವೂ ಹೌದು
ಹಲವಾರು ರೀತಿಯ ಖನಿಜಗಳು, ಸೂಕ್ಷ್ಮ ಪೋಷಕಾಂಶಗಳು, ನಾರು ಸೇರಿದಂತೆ ಬಗೆಬಗೆಯ ಸತ್ವಗಳು ಹೀರೆಕಾಯಿ (Ridge Gourd benefits) ತಿನ್ನುವುದರಿಂದ ದೊರೆಯುತ್ತದೆ. ಆರೋಗ್ಯಕರ ಅಂಶಗಳು ಬಹಳಷ್ಟಿವೆ ಹೀರೆಕಾಯಿಯಲ್ಲಿ.
ಹೀರೆಕಾಯಿ, ಸೋರೆಕಾಯಿ, ಗೋರಿಕಾಯಿ ಮುಂತಾದ ಹತ್ತು ಹಲವು ದೇಸಿ ತರಕಾರಿಗಳು ಭಾರತೀಯ ಅಡುಗೆಗಳ ರುಚಿ, ಘಮ ಹಾಗೂ ಆರೋಗ್ಯವನ್ನು ಹೆಚ್ಚಿಸುತ್ತಿವೆ. ಸಮೀಪದ ಯಾವುದೇ ತರಕಾರಿ ಅಂಗಡಿಗಳಲ್ಲಿ ಲಭ್ಯವಾಗುವ ಇವು ಗ್ರಾಹಕರ ಇಷ್ಟದ ಆಲ್‌ಲೈನ್ ಆರ್ಡರ್‌ಗಳ ಮೂಲಕವೂ ಮನೆ ಬಾಗಿಲು ತಲುಪುತ್ತವೆ. ಹೀರೆಕಾಯಿಯ (Ridge Gourd benefits) ಉದಾಹರಣೆಯನ್ನೇ ತೆಗೆದುಕೊಂಡರೆ, ತೊವ್ವೆ, ಗೊಜ್ಜು, ಪಲ್ಯ, ಕೂಟುಗಳಿಂದ ಹಿಡಿದು, ಹೀರೆ ಸಿಪ್ಪೆಯ ಚಟ್ನಿ, ಹೀರೆಕಾಯಿ ಬೋಂಡಾ ಸೇರಿದಂತೆ ಬಗೆಬಗೆಯ ವ್ಯಂಜನಗಳಿಗೆ ಒದಗಿ ಬರುವ ಈ ತರಕಾರಿ ಪಾಕಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ.
ಇದರ ರುಚಿ, ಘಮಗಳು ಬರೀ ಜಿಹ್ವೆಯನ್ನು ತಣಿಸಿದರೆ ಸಾಕೇ? ತಿಂದಿದ್ದಕ್ಕೆ ಆರೋಗ್ಯಕ್ಕೂ ಏನಾದರೂ ಲಾಭವಾಗಬೇಕಲ್ಲ. ಅಂಥ ಸದ್ಗುಣಗಳು ಏನಿವೆ ಹೀರೆ ಕಾಯಿಯಲ್ಲಿ? ಆರೋಗ್ಯಕರ ಅಂಶಗಳು ಬಹಳಷ್ಟಿವೆ ಹೀರೆಕಾಯಿಯಲ್ಲಿ. ಹಲವಾರು ರೀತಿಯ ಖನಿಜಗಳು, ಸೂಕ್ಷ್ಮ ಪೋಷಕಾಂಶಗಳು, ನಾರು ಸೇರಿದಂತೆ ಹಲವಾರು ಸತ್ವಗಳು ಹೀರೆಕಾಯಿ (Ridge Gourd benefits) ತಿನ್ನುವುದರಿಂದ ದೊರೆಯುತ್ತದೆ. ಏನೇನಿವೆ ಇದರಲ್ಲಿ ಎಂದು ನೋಡಿದರೆ-
ವಿಟಮಿನ್‌ಗಳು
ಇದರಲ್ಲಿರುವ ವಿಟಮಿನ್ ಎ ಅಂಶಗಳು ಕಣ್ಣು ಮತ್ತು ಚರ್ಮದ ಆರೋಗ್ಯಕ್ಕೆ ಒಳ್ಳೆಯದು. ಇದರಲ್ಲಿ ಸಿ ವಿಟಮಿನ್ ಸಹ ಹೇರಳವಾಗಿದ್ದು, ದೇಹದ ರೋಗ ನಿರೋಧಕ ಶಕ್ತಿಯನ್ನು ಚುರುಕುಗೊಳಿಸುತ್ತದೆ. ಹೀರೆಕಾಯಿಯಲ್ಲಿ ಫೋಲೇಟ್ ಸೇರಿದಂತೆ ಹಲವು ರೀತಿಯ ಬಿ ವಿಟಮಿನ್‌ಗಳಿವೆ. ಭ್ರೂಣದ ಮೆದುಳು ಹಾಗೂ ಬೆನ್ನು ಮೂಳೆಗಳ ಬೆಳವಣಿಗೆಗೆ ಅಗತ್ಯವಾಗಿ ಬೇಕಾದ ಅಂಶ ಫೋಲೇಟ್. ಹಾಗಾಗಿ ಗರ್ಭಿಣಿಯರಿಗೂ ಹಿತ-ಮಿತವಾಗಿ ಹೀರೆಕಾಯಿ ಸೇವನೆ ಒಳ್ಳೆಯದು
ಕ್ಯಾಲರಿ ಕಡಿಮೆ
ದೇಹಕ್ಕೆ ಹೆಚ್ಚಿನ ಕ್ಯಾಲರಿ ತುರುಕದೆ, ಕಡಿಮೆ ಕ್ಯಾಲರಿಯಲ್ಲಿ ಹೆಚ್ಚಿನ ಸತ್ವಗಳನ್ನು ನೀಡುವಂಥ ತರಕಾರಿಯಿದು. ನಾರಿನಂಶ ಹೇರಳವಾಗಿ ಇರುವುದರಿಂದ, ಬೇಗನೆ ಹೊಟ್ಟೆ ತುಂಬಿದ ಭಾವನೆ ನೀಡುತ್ತದೆ ಮತ್ತು ದೀರ್ಘಕಾಲದವರೆಗೆ ಹಸಿವಾಗದಂತೆ ತಡೆಯುತ್ತದೆ. ಹಾಗಾಗಿ ತೂಕ ಇಳಿಸುವವರಿಗೆ ಅನುಕೂಲಕರವಾದ ತರಕಾರಿಯಿದು. ಮಾತ್ರವಲ್ಲ, ನಾರು ಸಾಕಷ್ಟು ಇರುವುದರಿಂದ ಜೀರ್ಣಾಂಗಗಳ ಸಾಮರ್ಥ್ಯವನ್ನು ಹೆಚ್ಚಿಸಿ, ಮಲಬದ್ಧತೆಯನ್ನು ದೂರ ಮಾಡುತ್ತದೆ.
ಹೃದಯಕ್ಕೆ ಪೂರಕ
ನಾರಿನಂಶ ಹೆಚ್ಚಿರುವ ತರಕಾರಿಗಳು ರಕ್ತದಲ್ಲಿ ಕೊಬ್ಬು ಶೇಖರವಾಗದಂತೆ ತಡೆಯುತ್ತವೆ. ಈ ಕೆಲಸದಲ್ಲಿ ಹೀರೆಕಾಯಿ ಸಹ ಮುಂದು. ಜೊತೆಗೆ, ಇದರಲ್ಲಿರುವ ಪೊಟಾಶಿಯಂ ಅಂಶವು ರಕ್ತದೊತ್ತಡ ಏರದಂತೆ ಕಾಪಾಡುವಲ್ಲಿ ಸಹಕಾರಿ. ಹಾಗಾಗಿ ಒಟ್ಟಾರೆ ಹೃದಯದ ಆರೋಗ್ಯಕ್ಕೆ ಪೂರಕವಾದ ಅಂಶಗಳು ಹೀರೆಕಾಯಿಯಲ್ಲಿವೆ.
ಉತ್ಕರ್ಷಣ ನಿರೋಧಕಗಳು
ದೇಹದಲ್ಲಿ ಉರಿಯೂತ ಹೆಚ್ಚಿದರೆ ರೋಗಗಳೂ ಹೆಚ್ಚಾದಂತೆ. ಇವುಗಳನ್ನು ತಡೆಯಲು ಉತ್ಕರ್ಷಣ ನಿರೋಧಕಗಳು ಬೇಕು. ಉರಿಯೂತ ನಿವಾರಕ ಫ್ಲೆವನಾಯ್ಡ್‌ಗಳು ಹೀರೆಕಾಯಿಯಲ್ಲಿ ಸಾಕಷ್ಟಿವೆ. ಬೀಟಾ ಕ್ಯಾರೊಟಿನ್ ಸಹ ಇದ್ದು ದೇಹದ ಒಟ್ಟಾರೆ ಸ್ವಾಸ್ಥ್ಯ ಸುಧಾರಣೆಗೆ ಈ ತರಕಾರಿ ಪೂರಕವಾಗಿದೆ
ಮಧುಮೇಹಿಗಳಿಗೆ ಒಳ್ಳೆಯದು
ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಈ ತರಕಾರಿ ನೆರವು ನೀಡುತ್ತದೆ. ಹಾಗಾಗಿ ಮಧುಮೇಹದಿಂದ ಬಳಲುವವರಿಗೂ ಹೀರೆಕಾಯಿ ಸೇವನೆ ನಿಷೇಧವೇನಿಲ್ಲ. ಇದರ ಗ್ಲೈಸೆಮಿಕ್ ಸೂಚ್ಯಂಕ ಕಡಿಮೆ ಇರುವುದರಿಂದ ಇದನ್ನು ತಿಂದ ಬಳಿಕ, ರಕ್ತದಲ್ಲಿ ಸಕ್ಕರೆಯ ಮಟ್ಟದಲ್ಲಿ ಏರಿಳಿತ ಆಗುವುದಿಲ್ಲ.
ನೀರಿನಿಂದ ಕೂಡಿದೆ
ಕೆಲವು ಹಣ್ಣು ತರಕಾರಿಗಳಲ್ಲಿ ನೀರಿನಂಶ ಭರಪೂರ ಇರುತ್ತದೆ. ಅಂಥವುಗಳಲ್ಲಿ ಹೀರೆಕಾಯಿಯೂ ಒಂದು. ಹೀಗೆ ನೀರಿರುವ ತರಕಾರಿಗಳು ಸಾಮಾನ್ಯವಾಗಿ ಜೀರ್ಣಾಂಗಗಳನ್ನು ಉದ್ದೀಪಿಸುತ್ತವೆ. ಜೊತೆಗೆ ನಾರೂ ಇರುವುದರಿಂದ, ದೇಹಕ್ಕೆ ಬೇಕಾದಂತೆ ನೀರನ್ನೊದಗಿಸಿ, ಪಚನ ಕ್ರಿಯೆಯನ್ನು ಸರಾಗವಾಗಿಸಿ, ದೇಹದ ಉಷ್ಣತೆಯನ್ನು ನಿಯಂತ್ರಿಸಿ, ರಕ್ತ ಪರಿಚಲನೆಗೂ ನೆರವಾಗುತ್ತವೆ
ಮೂಳೆಗಳಿಗೆ ಬಲ
ನಮ್ಮ ಮೂಳೆಗಳು ಮತ್ತು ಹಲ್ಲುಗಳನ್ನು ಸದೃಢಗೊಳಿಸಲು ಅಗತ್ಯವಾದ ಕ್ಯಾಲ್ಶಿಯಂ ಮತ್ತು ಫಾಸ್ಫರಸ್ ಖನಿಜಗಳು ಹೀರೆಕಾಯಿಯಲ್ಲಿವೆ. ಹಾಗಾಗಿ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲಾ ವಯೋಮಾನದವರಿಗೂ ಬೇಕಾದಂಥ ತರಕಾರಿಯಿದು. ಅದರಲ್ಲೂ ಮೂಳೆ ಸಾಂದ್ರತೆ ಕಡಿಮೆ ಇರುವವರಿಗೆ ಇದು ಅಗತ್ಯವಾಗಿ ಬೇಕು.
ಇದನ್ನೂ ಓದಿ: Brinjal Health Benefits: ಬದನೆ ಅಂತ ಮೂಗು ಮುರಿಯಬೇಡಿ, ಆರೋಗ್ಯ ಲಾಭ ತಿಳಿದು ನೋಡಿ!
ಆರೋಗ್ಯ
Brinjal Health Benefits: ಬದನೆ ಅಂತ ಮೂಗು ಮುರಿಯಬೇಡಿ, ಆರೋಗ್ಯ ಲಾಭ ತಿಳಿದು ನೋಡಿ!
ಬದನೆ ಎಂದರೆ ಮೂಗು ಮುರಿಯುವವರೇ ಹೆಚ್ಚು. ಆದರೆ ಇದರ ಆರೋಗ್ಯಕಾರಿ ಪ್ರಯೋಜನಗಳನ್ನು (brinjal health benefits) ತಿಳಿದರೆ ನೀವು ಮುಂದೆಂದೂ ಇದನ್ನು ಸೇವಿಸದೇ ಇರಲಾರಿರಿ.
ತುಂಬಾ ಮಂದಿ ಬದನೆಕಾಯಿಯನ್ನು (brinjal) ಇಷ್ಟಪಡುವುದಿಲ್ಲ. ಅದ್ಯಾಕೋ ಗೊತ್ತಿಲ್ಲ. ಬದನೆ ಸಾಂಬಾರ್ ಎಂದರೆ ಊಟ ಮಾಡದೇ ಇರುವವರೂ ಇದ್ದಾರೆ. ಆದರೆ ಬದನೆಕಾಯಿಯ ಸೇವನೆಯಿಂದ ಆಗುವ ಆರೋಗ್ಯ ಲಾಭಗಳು ಒಂದೆರಡಲ್ಲ. ಅತ್ಯಗತ್ಯವಾಗಿರುವ ಖನಿಜಗಳು, ಜೀವಸತ್ವಗಳು ಮತ್ತು ನಾರಿನಾಂಶ ಬದನೆಯಲ್ಲಿದೆ. ಇದು ನಿಮ್ಮ ತ್ವಚೆಯನ್ನು ಬಲವಾಗಿಡುತ್ತದೆ. ಹಾಗೂ ವಯಸ್ಸಿನ ಕಳೆಯನ್ನು ತೆಗೆಯಲು ನಿಮ್ಮ ಆಹಾರದಲ್ಲಿ ನಿಯಮಿತವಾಗಿ ಸೇವಿಸಬಹುದು. ನೀವು ಬದನೆಯ ಆರೋಗ್ಯ ಪ್ರಯೋಜನಗಳನ್ನು (brinjal health benefits) ತಿಳಿದರೆ ಬದನೆ ಆರೋಗ್ಯಕರವೇ ಅಲ್ಲವೇ ಎನ್ನುವ ಪ್ರಶ್ನೆಗೆ ನೀವೇ ಉತ್ತರ ಕಂಡುಕೊಳ್ಳಬಹುದು.
ಹೃದಯದ ಆರೋಗ್ಯ ಕಾಪಾಡುತ್ತದೆ
ಕೊಲೆಸ್ಟ್ರಾಲ್ ಮಟ್ಟವನ್ನು ನಿಯಮಿತವಾಗಿ ಬದನೆ ಸೇವನೆಯ ಮೂಲಕ ಕಡಿಮೆ ಮಾಡಬಹುದು. ಇದು ನಿಮ್ಮ ರಕ್ತದೊತ್ತಡ ನಿರ್ವಹಿಸಲು ಸಹ ಸಹಾಯ ಮಾಡುತ್ತದೆ. ಸಾಧಾರಣ ಕೊಲೆಸ್ಟ್ರಾಲ್ ಮಟ್ಟ ಮತ್ತು ರಕ್ತದೊತ್ತಡ ನಿಯಂತ್ರಣ ಹೃದಯ ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತವೆ.
ಮಿದುಳಿನ ಕಾರ್ಯ ಚುರುಕು
ಇದು ಬದನೆ ಸೇವನೆಯ ಪ್ರಮುಖ ಆರೋಗ್ಯ ಪ್ರಯೋಜನಗಳಲ್ಲಿ ಒಂದಾಗಿದೆ. ಬದನೆ, ಯಾವುದೇ ಹಾನಿಯಿಂದ ಸುರಕ್ಷಿತವಾಗಿ ಕೋಶಪೊರೆಯನ್ನು ರಕ್ಷಿಸಲು ಸಹಾಯ ಮಾಡುವ ಫೈ ಟೋನ್ಯೂಟ್ರಿಯೆಂಟ್ಸ್ ಅನ್ನು ಹೊಂದಿದೆ. ಇದು ಆರೋಗ್ಯಕರ ನೆನಪಿನ ಶಕ್ತಿಯನ್ನು ಸುಧಾರಿಸಲೂ ಸಹಾಯ ಮಾಡುತ್ತದೆ.
ಫ್ರೀ ರಾಡಿಕಲ್ ಜೊತೆ ಹೋರಾಡುತ್ತದೆ
ರಾಡಿಕಲ್‌ಗಳು ದೇಹದಲ್ಲಿರುವ ಜೀವಕೋಶಗಳನ್ನು ಹಾನಿಗೊಳಗಾಗಿಸುತ್ತವೆ. ಬದನೆ ಆಂಟಿ ಆಕ್ಸಿಡೆಂಟ್ ಅಂಶಗಳನ್ನು ಹೊಂದಿರುವುದರಿಂದ ರಾಡಿಕಲ್ಸ್ ವಿರುದ್ಧ ಹೋರಾಡುತ್ತದೆ. ಕ್ಲೊರೋಜೆನಿಕ್ (Chlorogenic) ಆಮ್ಲ, ಬದನೆಯಲ್ಲಿರುವ ಪ್ರಮುಖ ಆಂಟಿ ಆಕ್ಸಿಡೆಂಟ್ ಎಂದು ಪರಿಗಣಿಸಲಾಗುತ್ತದೆ. ಇದು ರಾಡಿಕಲ್ಸ್ ಅನ್ನು ಹೋಗಲಾಡಿಸಿ ರೋಗದಿಂದ ಮುಕ್ತರಾಗಲು ಸಹಾಯ ಮಾಡುತ್ತದೆ.
ಮಿತಿಮೀರಿದ ಕಬ್ಬಿಣಾಂಶ ತೆಗೆದುಹಾಕುತ್ತದೆ
ನಿಯಮಿತವಾಗಿ ಬದನೆ ಸೇವಿಸುವುದರಿಂದ ಇದು ದೇಹದಲ್ಲಿ ಹೆಚ್ಚುವರಿ ಕಬ್ಬಿಣದ ಅಂಶವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಇದು ಪಾಲಿಸಿಥಿಮಿಯಾ ರೋಗಿಗಳಿಗೆ ಹೆಚ್ಚು ಉಪಯುಕ್ತ. ಬದನೆಯಲ್ಲಿರುವ ನಸುನಿನ್ (Nasunin) ಎಂಬ ಒಂದು ಸಂಯುಕ್ತ ಪ್ರಸ್ತುತ ದೇಹದ ಅತಿಯಾದ ಕಬ್ಬಿಣದ ಅಂಶವನ್ನು ತೆಗೆದುಹಾಕುವಲ್ಲಿ ಸಹಾಯ ಮಾಡುತ್ತದೆ.
ಸೋಂಕುಗಳಿಂದ ಮುಕ್ತಿ
ಸೋಂಕುಗಳಿಂದ ನಿಮ್ಮನ್ನು ದೂರ ಇರಿಸುವ ಸಾಮರ್ಥ್ಯ ಬದನೆಯ ಪ್ರಮುಖ ಆರೋಗ್ಯ ಪ್ರಯೋಜನಗಳಲ್ಲಿ ಒಂದಾಗಿದೆ. ಬದನೆಯಲ್ಲಿ ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುವ ವಿಟಮಿನ್ ಸಿ ಅಂಶ ಅಧಿಕ ಪ್ರಮಾಣದಲ್ಲಿದೆ. ಈ ಪ್ರಯೋಜನವನ್ನು ಅನುಭವಿಸಲು ನಿಮ್ಮ ಆಹಾರದ ಒಂದು ಭಾಗವಾಗಿ ಬದನೆಯನ್ನು ಸೇವಿಸಿ.
ರೋಗ ನಿರೋಧಕತೆ ಸುಧಾರಣೆ
ಬದನೆ ನಿಮ್ಮ ರೋಗ ನಿರೋಧಕ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ಸಹಾಯ ಮಾಡುತ್ತದೆ. ನಿಮ್ಮನ್ನು ಆರೋಗ್ಯಕರ ಮತ್ತು ಸದೃಢರಾಗಿರುವಂತೆ ಮಾಡುತ್ತದೆ. ಆಂಟಿ ಆಕ್ಸಿಡೆಂಟ್, ಪೋಷಕಾಂಶಗಳು ಮತ್ತು ಸಿ ಜೀವಸತ್ವದ ಉಪಸ್ಥಿತಿ ಬದನೆಯನ್ನು ಇನ್ನಷ್ಟು ಪ್ರಯೋಜನಕಾರಿಯನ್ನಾಗಿಸಿವೆ.
ಇದನ್ನೂ ಓದಿ: Health Tips: ಶೀತ, ನೆಗಡಿಯಾದಾಗ ಈ ಎಲ್ಲ ಹಣ್ಣುಗಳಿಂದ ದೂರವಿರುವುದು ಒಳ್ಳೆಯದು!
ಧೂಮಪಾನ ತ್ಯಜಿಸಲು ಸಹಾಯ
ನೀವು ಧೂಮಪಾನ ಬಿಡಲು ನಿಕೊಟೀನ್ ಬದಲಾವಣೆಯ ಚಿಕಿತ್ಸೆಯ ನೈಸರ್ಗಿಕ ವಿಧಾನವನ್ನು ಹುಡುಕುತ್ತಿದ್ದರೆ, ಬದನೆ ಅತ್ಯುತ್ತಮ ಆಯ್ಕೆ. ಈ ಏಕೆಂದರೆ ಬದನೆಯಲ್ಲಿ ನಿಕೋಟಿನ್ ಅಂಶ ಹೇರಳವಾಗಿದೆ.
ಕೂದಲಿನ ಆರೈಕೆ
ಬದನೆ ಸೇವಿಸುವುದರಿಂದ ನಿಮ್ಮ ನೆತ್ತಿ ತೇವಾಂಶದಿಂದ ಕೂಡಿರಲು ಸಹಾಯ ಮಾಡುತ್ತದೆ. ಬದನೆಯಲ್ಲಿರುವ ಕೆಲವು ಕಿಣ್ವಗಳು ಕೂದಲಿನ ರಕ್ಷಕರಂತೆ ಕೆಲಸ ಮಾಡುತ್ತವೆ. ಈ ಕೂದಲು ಬೆಳವಣಿಗೆ ಉಂಟು ಮಾಡುತ್ತದೆ ಮತ್ತು ನಿಮ್ಮ ಕೂದಲಿನ ಆರೋಗ್ಯಕರ ವಿನ್ಯಾಸ ನಿರ್ವಹಿಸಲು ಸಹಾಯಕವಾಗಿದೆ.
ಚರ್ಮದಲ್ಲಿ ತೇವಾಂಶ
ಇದು ಬದನೆಯ ಆರೋಗ್ಯ ಪ್ರಯೋಜನಗಳಲ್ಲಿ ಒಂದಾಗಿದೆ. ಬದನೆಯಲ್ಲಿ ಗಣನೀಯ ಪ್ರಮಾಣದಲ್ಲಿ ನೀರಿನ ಅಂಶವಿದೆ. ಇದು ನಿಮ್ಮ ತ್ವಚೆಯನ್ನು ಅಗತ್ಯದಷ್ಟು ತೇವಾಂಶಯುಕ್ತವಾಗಿಡಲು ಸಹಾಯ ಮಾಡುತ್ತದೆ. ಇದು ನಿಮ್ಮ ಶುಷ್ಕ ತ್ವಚೆಯಿಂದ ಮುಕ್ತಿ ನೀಡುತ್ತದೆ ಮತ್ತು ಆ ಸಂಬಂಧಿತ ಸಮಸ್ಯೆಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: Health Tips: ಎಳನೀರು ಒಳ್ಳೆಯದೆಂದು ಕುಡಿಯುವ ಮೊದಲು ಅದರ ಅವಗುಣಗಳೂ ಗೊತ್ತಿರಲಿ!
-
ಪ್ರಮುಖ ಸುದ್ದಿ24 hours ago
Dina Bhavishya : ಈ ರಾಶಿಯವರಿಗೆ ಮಾತೇ ಮುತ್ತು, ಮಾತೇ ಮೃತ್ಯು!
-
ಕಿರುತೆರೆ14 hours ago
BBK Season 10 : ಅಕ್ಟೋಬರ್ 8 ರಿಂದ ಬಿಗ್ ಬಾಸ್ ಆಟ; ಚಾರ್ಲಿ ಎಂಟ್ರಿ ಕನ್ಫರ್ಮ್, ಉಳಿದವರು ಯಾರು ?
-
ದೇಶ19 hours ago
Raid On NewsClick: ನ್ಯೂಸ್ಕ್ಲಿಕ್ನ 30 ಪತ್ರಕರ್ತರ ಮನೆಗಳ ಮೇಲೆ ಪೊಲೀಸರ ದಾಳಿ, ಏನಿದು ಕೇಸ್?
-
ಕರ್ನಾಟಕ15 hours ago
Namma Metro: ಮೆಟ್ರೋ ಟ್ರ್ಯಾಕ್ನಲ್ಲಿ ಲಾಕ್ ಆದ ಮೆಂಟೈನ್ಸ್ ವೆಹಿಕಲ್! ಮೇಲೆತ್ತಲು ಕ್ರೇನ್ ಬಳಕೆ
-
ಕ್ರೈಂ20 hours ago
4 ವರ್ಷದಿಂದ ಇಬ್ಬರು ಪುತ್ರಿಯರ ಮೇಲೆಯೇ ಅತ್ಯಾಚಾರ ಎಸಗಿದ ಪಾಪಿಯ ಬಂಧನ; ಇವನೆಂಥಾ ತಂದೆ?
-
ಕರ್ನಾಟಕ13 hours ago
Namma Metro : ಕೊನೆಗೂ ಲಿಫ್ಟ್ ಆಯ್ತು ಮೆಂಟೈನ್ಸ್ ವೆಹಿಕಲ್; ಎಂದಿನಂತೆ ಮೆಟ್ರೋ ಓಡಾಟ
-
ಉತ್ತರ ಕನ್ನಡ15 hours ago
Karwar Tunnel Route : ಕಾರವಾರ ರಾಷ್ಟ್ರೀಯ ಹೆದ್ದಾರಿ 66ರ ಸುರಂಗ ಮಾರ್ಗ ಕೊನೆಗೂ ಸಂಚಾರ ಮುಕ್ತ!
-
ಕರ್ನಾಟಕ11 hours ago
Lecturer Death : ಬಿಜಿಎಸ್ ಕಾಲೇಜಿನ ಉಪನ್ಯಾಸಕ ನೇಣಿಗೆ ಶರಣು; ಸಾವಿನ ಸುತ್ತ ಅನುಮಾನದ ಹುತ್ತ