Site icon Vistara News

Dark chocolate v/s Milk chocolate: ಯಾವ ಚಾಕೊಲೇಟ್‌ ಆರೋಗ್ಯಕ್ಕೆ ಸೂಕ್ತ?

Dark chocolate v/s Milk chocolate

ಹಲವು ಬಗೆಯ ಚಾಕೊಲೇಟ್‌ಗಳು ನಿಮ್ಮೆದುರಿಗಿವೆ. ಇಲ್ಲದಿದ್ದರೂ… ಒಮ್ಮೆ ಹಾಗೆ ಊಹಿಸಿಕೊಳ್ಳಿ. ಬಿಳಿಯ ಬಣ್ಣದ ಮಿಲ್ಕ್‌ ಚಾಕೊಲೇಟ್‌, ಚಾಕೊಲೇಟ್‌ ಬಣ್ಣದ್ದೊಂದು, ಕಡುಕಪ್ಪು ಬಣ್ಣದ ಚಾಕೊಲೇಟ್‌… ಹೀಗೆ. ಯಾವುದನ್ನು ಕೈಗೆತ್ತಿಕೊಳ್ಳಬೇಕು ಎಂಬ ಗೊಂದಲಕ್ಕೆ ಬಿದ್ದರೆ, ತಿಂದಿದ್ದರ ರುಚಿಯೇ ನಾಲಿಗೆಗೆ ಹತ್ತುವುದಿಲ್ಲ. ಕಾರಣ, ಇದಕ್ಕಿಂತ ಆ ಮತ್ತೊಂದು ರುಚಿಯಿತ್ತೇನೊ ಎಂಬ ಭ್ರಮೆಗೆ ಬೀಳುತ್ತೇವೆ. ಅಲ್ಲಿಗೆ ಕೆಲಸ ಕೆಡುತ್ತದೆ. ಬದಲಿಗೆ, ಬಿಳಿ ಮತ್ತು ಕಪ್ಪು ಚಾಕಲೇಟ್‌ಗಳಲ್ಲಿ ಯಾವುದು ಉತ್ತಮ (Dark chocolate vs milk chocolate) ಎಂಬುದು ತಿಳಿದಿದ್ದರೆ, ಯಾವುದರ ಗುಣಾವಗುಣಗಳು ಏನು ಎಂಬುದು ಗೊತ್ತಿದ್ದರೆ ಒಳ್ಳೆಯದಲ್ಲವೇ?

ಕಪ್ಪು ಚಾಕೊಲೇಟ್‌

ಲೋಕದಲ್ಲಿ ಡಾರ್ಕ್‌ ಚಾಕೊಲೇಟ್‌ ಎಂದೇ ಕರೆಸಿಕೊಳ್ಳುವ ಈ ಜಾತಿಯ ಚಾಕೊಲೇಟ್‌ ಪ್ರಿಯರು ಬೇರೆಯದನ್ನು ಮೆಚ್ಚುವುದು ಕಡಿಮೆ. ಇದಕ್ಕೆ ಕಾರಣಗಳೂ ಇಲ್ಲದಿಲ್ಲ. ಇದರಲ್ಲಿ ಶೇ. 70ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಶುದ್ಧ ಕೊಕೊ ಮಿಶ್ರಣವಿರುತ್ತದೆ. ಸ್ವಲ್ಪ ಕಹಿ ರುಚಿಯನ್ನೇ ನೀಡುವ ಇದರಲ್ಲಿ ಕೊಬ್ಬು ಮತ್ತು ಸಕ್ಕರೆ- ಎರಡೂ ಕಡಿಮೆ ಇರುತ್ತದೆ. ಹಾಗಲಕಾಯಿ ಗೊಜ್ಜನ್ನು ಚಪ್ಪರಿಸಿ ತಿನ್ನುವವರನ್ನು ನೋಡಿಲ್ಲವೇ? ಹಾಗೆ ಲಘುವಾದ ಕಹಿಯು ಒಳ್ಳೆಯ ರುಚಿಯನ್ನೇ ನೀಡುತ್ತದೆ.

ಹೃದಯಕ್ಕೆ ಪೂರಕ

ಹಾಗೆನ್ನುತ್ತವೆ ಅಧ್ಯಯನಗಳು. ಹೆಚ್ಚಿನ ಕೊಕೊ ಹೊಂದಿರುವ ಕಪ್ಪು ಚಾಕೊಲೇಟ್‌ಗಳಲ್ಲಿ ಉತ್ಕರ್ಷಣ ನಿರೋಧಕ ಫ್ಲೆವನಾಯ್ಡ್‌ಗಳ ಸಾಂದ್ರತೆಯೂ ಹೆಚ್ಚಿರುತ್ತದೆ. ಇವುಗಳು ಹಲವು ರೀತಿಯಲ್ಲಿ ದೇಹಕ್ಕೆ ಉಪಕಾರಿ. ಶುದ್ಧ ಕೊಕೊ ಅಂಶಗಳು ದೇಹದಲ್ಲಿ ಕೆಟ್ಟ ಕೊಬ್ಬು ಮತ್ತು ಅತಿತೂಕವನ್ನು ನಿಯಂತ್ರಿಸಬಲ್ಲವು ಎನ್ನುತ್ತಾರೆ ಅಧ್ಯಯನಕಾರರು.

ಮೆದುಳಿನ ಮಿತ್ರ

ಇದನ್ನು ತಿನ್ನುವುದರಿಂದ ಹ್ಯಾಪಿ ಹಾರ್ಮೋನುಗಳಾದ ಎಂಡಾರ್ಫಿನ್‌ ಮತ್ತು ಸೆರೊಟೋನಿನ್‌ ಬಿಡುಗಡೆಯಾಗುತ್ತವೆ ದೇಹದಲ್ಲಿ. ಇದರಿಂದ ಮೂಡ್‌ ಸುಧಾರಣೆಯಾಗುತ್ತದೆ. ಒತ್ತರ, ಕಿರಿಕಿರಿಗಳು ಕಡಿಮೆಯಾಗುತ್ತವೆ. ಮೆದುಳಿನ ಕ್ಷಮತೆಯೂ ಹೆಚ್ಚುತ್ತದೆ. ವಯಸ್ಸಾದಂತೆ ಮರೆವೆಗೆ ಜಾರುವ ಸಾಧ್ಯತೆಯನ್ನು ಕೊಕೊದಲ್ಲಿರುವ ಉತ್ಕರ್ಷಣ ನಿರೋಧಕಗಳು ನಿಯಂತ್ರಿಸುತ್ತವೆ.

ತೂಕ ಇಳಿಕೆ

ಚಾಕೊಲೇಟ್‌ ತಿಂದೂ ತೂಕ ಇಳಿಸಿಕೊಳ್ಳುವ ಬಗ್ಗೆ ಮಾತಾಡಿದರೆ ಯಾರಾದರೂ ನಕ್ಕಾರು. ವಿಷಯವೇನೆಂದರೆ, ಕೊಬ್ಬಿನ ಅಂಶ ಮತ್ತು ಸಕ್ಕರೆಯ ಪ್ರಮಾಣ ಕಪ್ಪು ಚಾಕೊಲೇಟ್‌ನಲ್ಲಿ ಕಡಿಮೆ ಇರುತ್ತದೆ. ಆದಾಗ್ಯೂ ತಿಂದರೆ ತೃಪ್ತಿಯಾಗುವ ಪರಿಣಾಮವನ್ನೇ ಬೀರುತ್ತದೆ. ಹಾಗಾಗಿ ತೂಕ ಇಳಿಸುವ ಸನ್ನಾಹದಲ್ಲಿದ್ದು ಸಿಹಿಯನ್ನು ಬಿಡುವುದಕ್ಕಾಗದೆ ಒದ್ದಾಡುತ್ತಿದ್ದರೆ, ಡಾರ್ಕ್‌ ಚಾಕೊಲೇಟ್‌ಗಳು ಒಳ್ಳೆಯ ಪರಿಹಾರ ನೀಡಬಲ್ಲವು. ಹಾಗೆಂದು ಇದನ್ನೂ ಮಿತವಾಗಿಯೇ ಸೇರಿಸಬೇಕು. ಕೊಕೊ ಅಂಶ ಹೆಚ್ಚಾದರೆ ನಿದ್ರಾಹೀನತೆ, ಚರ್ಮದ ಅಲರ್ಜಿಗಳು, ಅಜೀರ್ಣ, ತಲೆನೋವು, ಹೆಚ್ಚಿನ ಪ್ರಮಾಣದಲ್ಲಿ ಮೂತ್ರ… ಇಂಥವೆಲ್ಲ ಅಡ್ಡ ಪರಿಣಾಮಗಳಾಗುತ್ತವೆ.

ಬಿಳಿ ಚಾಕಲೇಟ್‌

ಇದರಲ್ಲಿ ಕೊಕೊ ಪ್ರಮಾಣ ಕಪ್ಪು ಚಾಕೊಲೇಟ್‌ಗಿಂತ ಬಹಳಷ್ಟು ಕಡಿಮೆ ಇರುತ್ತದೆ. ಬದಲಿಗೆ ಹಾಲಿನ ಕೊಬ್ಬು ಮತ್ತು ಸಕ್ಕರೆ ಸೇರಿರುತ್ತವೆ. ಹಾಗಾಗಿ ಇದು ಬಾಯಿಗೆ ರುಚಿ. ಸುಮ್ಮನೆ ಬಾಯಿಗೆಸೆದು ಕಣ್ಣು-ಬಾಯಿ ಮುಚ್ಚಿದರೂ ಸಾಕು, ತಾನಾಗಿ ಕರಗಿ ಹೊಟ್ಟೆ ಸೇರುತ್ತದೆ. ಇದರಲ್ಲಿ ಕಡಿಮೆ ಪ್ರಮಾಣದಲ್ಲಾದರೂ ಕೊಕೊ ಅಂಶ ಇರುವುದರಿಂದ ಎಂಡಾರ್ಫಿನ್‌ ಮತ್ತು ಸೆರೊಟೋನಿನ್‌ ಚೋದಕಗಳು ಬಿಡುಗಡೆಯಾಗುವುದು ಹೌದು. ಜೊತೆಗೆ, ಅಲ್ಪ ಪ್ರಮಾಣದಲ್ಲಿ ಕ್ಯಾಲ್ಶಿಯಂ, ಮೆಗ್ನೀಶಿಯಂ ಮತ್ತು ಫಾಸ್ಫರಸ್‌ ಅಂಶಗಳು ಸಹ ದೊರೆಯುತ್ತವೆ. ಆದರೆ ಕೊಬ್ಬು ಮತ್ತು ಸಕ್ಕರೆಯಂಶ ಅಗತ್ಯಕ್ಕಿಂತ ಹೆಚ್ಚಿರುವುದರಿಂದ, ತೀರಾ ಮಿತವಾಗಿ ತಿನ್ನುವುದು ಸೂಕ್ತ.

ಹೋಲಿಕೆ ಮಾಡಿದರೆ

ಈಗ ಎರಡನ್ನೂ ಹೋಲಿಕೆ ಮಾಡಿದರೆ, ಕೊಕೊ ಅಂಶ ಎರಡರಲ್ಲೂ ಇದೆ. ಕಪ್ಪು ಚಾಕಲೇಟ್‌ನಲ್ಲಿ ಹೆಚ್ಚು, ಬಿಳಿಯಲ್ಲಿ ಕಡಿಮೆ. ಹಾಗಾಗಿ ಡಾರ್ಕ್‌ ಚಾಕಲೇಟ್‌ನಲ್ಲಿ ಫ್ಲೆವನಾಯ್ಡ್‌ಗಳ ಪ್ರಮಾಣವೂ ಹೆಚ್ಚು. ಹಾಲು ಮತ್ತು ಸಕ್ಕರೆ ಬಿಳಿ ಚಾಕೊಲೇಟ್‌ನಲ್ಲಿ ಹೆಚ್ಚಿರುವುದರಿಂದ ರುಚಿಯೂ ಹೆಚ್ಚು. ಆದರೆ ಬೇಡದ್ದೊಂದಿಷ್ಟು ಅಂಶಗಳು ದೇಹವನ್ನು ಸೇರುವುದೂ ಅಧಿಕ. ಲ್ಯಾಕ್ಟೋಸ್‌ ಅಲರ್ಜಿ ಇರುವವರೂ ಡಾರ್ಕ್‌ ಚಾಕಲೇಟ್‌ ಸವಿಯಬಹುದು. ಆದರೆ ಮಿಲ್ಕ್‌ ಚಾಕಲೇಟ್‌ ತಿನ್ನುವುದು ಅಲರ್ಜಿಯನ್ನು ಹೆಚ್ಚಿಸಬಹುದು. ತೂಕ ಇಳಿಸುವ ಗುರಿ ಹೊಂದಿದ್ದರೆ ಬಿಳಿ ಚಾಕೊಲೇಟ್‌ ಸಂಕಷ್ಟವನ್ನೇ ತಂದೊಡ್ಡುತ್ತದೆ. ಕಾರಣ ಇದರಲ್ಲಿ ಕ್ಯಾಲರಿಗಳು ಹೆಚ್ಚು, ಸತ್ವಗಳು ಕಡಿಮೆ. ಯಾವ ಚಾಕಲೇಟ್‌ಗೆ ಕೈ ಹಾಕುತ್ತೀರಿ ಎನ್ನುವ ನಿರ್ಧಾರವೀಗ ಸುಲಭವಲ್ಲವೇ!

ಇದನ್ನೂ ಓದಿ: Barley Water For Lowering Cholesterol: ಕೊಲೆಸ್ಟ್ರಾಲ್‌ ಕಡಿಮೆ ಮಾಡಲು ಬಾರ್ಲಿ ನೀರು ನೆರವಾಗುವುದೇ?

Exit mobile version