Site icon Vistara News

Dark lips | ಮಾದಕ ಚೆಂದುಟಿ ಕಪ್ಪಗಾಗಲು ಕಾರಣವೇನು?

dark lips

ಮನುಷ್ಯನ ಸೌಂದರ್ಯದಲ್ಲಿ ಮುಖ್ಯ ಪಾತ್ರ ತುಟಿಗಳಿಗಿವೆ. ಅದರಲ್ಲೂ ಸುಂದರಿಯರ ತುಟಿಗಳನ್ನು ಕಂಡು ಕವಿಗಳು ಬರೆಯದ ಕವಿತೆಗಳಿಲ್ಲ, ಹಾಡದ ಹಾಡುಗಳಿಲ್ಲ. ಪ್ರತಿಯೊಬ್ಬರಿಗೂ ಚೆಂದುಟಿಯ ಬಗ್ಗೆ ಸದಾ ಚಿಂತೆ. ತುಟಿ ತೊಂಡೆ ಹಣ್ಣಿನಂತೆ, ಕಮಲದ ಎಸಳಿನಂತೆ, ಗುಲಾಬಿಯ ಪಕಳೆಯಂತೆ ಮೃದುವಾಗಿಯೂ, ಗುಲಾಬಿ ಬಣ್ಣದಲ್ಲೂ ಇರಲಿ ಎಂಬ ಬಯಕೆ ಕನಸು ಹೆಚ್ಚು ಕಮ್ಮಿ ಎಲ್ಲರದ್ದೂ. ಅದಕ್ಕೇ, ಮಾರುಕಟ್ಟೆಯಲ್ಲಿ ಸುಂದರಿಯರ ತುಟಿಗಳಿಗೆ ರಂಗುರಂಗಿನ ಬಣ್ಣಗಳು ಸಾಲುಗಟ್ಟಿ ನಿಲ್ಲುತ್ತವೆ. ಎಷ್ಟೇ ಕೃತಕ ಬಣ್ಣಗಳು ತುಟಿಗಳ ಮೇಲೆ ಮೆತ್ತಿಕೊಂಡರೂ, ನೈಸರ್ಗಿಕ ತುಟಿಗಳ ಬಣ್ಣದ ಮಾದಕತೆಯ ಹಿಂದೆ ಬೀಳದವರಿಲ್ಲ.

ಹಾಗೆ ನೋಡಿದರೆ, ತುಟಿಗಳ ಬಣ್ಣ ಇಂಥದ್ದೇ ಎಂದು ಎಲ್ಲರಿಗೂ ಗೊತ್ತಿದ್ದರೂ, ಪ್ರತಿಯೊಬ್ಬರಿಗೂ ಅವರವರದೇ ಆದ ತುಟಿಯ ಬಣ್ಣವಿದೆ. ಮುಖ್ಯವಾಗಿ ಒಂದೇ ಬಣ್ಣವಾದರೂ ಶೇಡ್‌ ಬೇರೆಬೇರೆಯದ್ದೇ ಆಗಿರುತ್ತದೆ. ಚರ್ಮದ ಬಣ್ಣವೂ ಸೇರಿದಂತೆ, ಬಳಸುವ ಬ್ಯೂಟಿ ಪ್ರಾಡಕ್ಟ್‌ಗಳು, ನಿತ್ಯದ ಆರೈಕೆ ಕಾಳಜಿಗಳು, ಲೈಫ್‌ಸ್ಟೈಲ್‌ ಹೀಗೆ ಹಲವು ವಿಷಯಗಳು ಪ್ರತಿಯೊಬ್ಬರ ಈ ತುಟಿಗಳ ಬಣ್ಣವನ್ನು ನಿರ್ಧರಿಸುತ್ತವೆ. ಆದರೂ ಬಹುತೇಕ ಮಂದಿಗೆ ತಮ್ಮ ತುಟಿಗಳ ಮೇಲೆ ಎಲ್ಲಿಲ್ಲದ ಕಾಳಜಿ ಇರುತ್ತದೆ. ತುಟಿ ಕಪ್ಪಗಾದರೆ ಚಿಂತೆಯಾಗಿಬಿಡುತ್ತದೆ. ಮೊದಲು ಭೇಟಿಯಾದಾಗ ಕಾಣುವ ತುಟಿಗಳು ಕೆಟ್ಟದಾಗಿ ಕಂಡು ಬಿಟ್ಟರೆ ಎಂಬ ಅಳುಕು ಬಹುತೇಕ ಎಲ್ಲರದ್ದೂ. ತನಗೆ ಬೀಡಿ ಸಿಗರೇಟಿನ ಚಟ ಇಲ್ಲದಿದ್ದರೂ ತುಟಿಯೇಕೆ ಹೀಗೆ ಕಪ್ಪಗಾಗಿದೆ ಎಂಬ ಅಳಲು ಇನ್ನೂ ಕೆಲವರದ್ದು.

ಹಾಗಾದರೆ, ಸರಿಯಿದ್ದ ತುಟಿ ಕಪ್ಪಗಾಗಿ ಬದಲಾಗಲು ಕಾರಣವೇನು? ಚೆಂದುಟಿಗಳು ಕಳಾಹೀನವಾಗಿ ಯಾಕೆ ಬದಲಾಗುತ್ತದೆ  ಎಂಬುದು ನಿಮಗೆ ಮಿಲಿಯನ್‌ ಡಾಲರ್‌ ಪ್ರಶ್ನೆಯಾಗಿ ಕಂಡಿದ್ದರೆ ಅದಕ್ಕಿ ಸಿಂಪಲ್‌ ಉತ್ತರ ಇಲ್ಲಿದೆ.

೧. ತುಟಿ ನೆಕ್ಕುವುದು: ನಿಮಗೆ ನಿಮ್ಮ ತುಟಿಗಳನ್ನು ಆಗಾಗ ನೆಕ್ಕುವ ಅಭ್ಯಾಸವಿದೆಯೇ? ಹಾಗಾದರೆ ಇಲ್ಲಿ ಕೇಳಿ. ಇದರಷ್ಟು ಕೆಟ್ಟ ಅಭ್ಯಾಸ ಇನ್ನೊಂದಿಲ್ಲ. ಉಗುರು ಕಚ್ಚುವುದನ್ನು, ಮೂಗಿನ ಹೊಳ್ಳೆಯಲ್ಲಿ ಬೆರಳಾಡಿಸುವುದನ್ನು ಕೆಟ್ಟ ಅಭ್ಯಾಸವೆಂದು ಹೇಳಿದ ಹಾಗೆಯೇ ತುಟಿ ನೆಕ್ಕಿಕೊಳ್ಳುವುದೂ ಕೆಟ್ಟ ಅಭ್ಯಾಸವೇ. ಇದರಿಂದ ನಿಮ್ಮ ತುಟಿಗಳು ಬಣ್ಣ ಕಳೆದುಕೊಂಡು ಕಪ್ಪಾಗಬಹುದು ಎಂದರೆ ನಂಬುತ್ತೀರಾ? ನಂಬಲೇಬೇಕು.

೨. ಧೂಮಪಾನ: ಇದು ಎಲ್ಲರಿಗೂ ಗೊತ್ತಿರುವ ಹಾಗೆ ತುಟಿ ಕಪ್ಪಾಗಲು ಇರುವ ಪ್ರಮುಖ ಕಾರಣ. ಧೂಮಪಾನದಿಂದ ತುಟಿಯ ಚರ್ಮದ ವಯಸ್ಸಾಗುವಿಕೆ ಪ್ರಕ್ರಿಯೆ ಹೆಚ್ಚಾಗಿ ಬಹುಬೇಗನೆ ತುಟಿಯ ಚರ್ಮ ಸುಕ್ಕುಸುಕ್ಕಾಗಿ, ಕಪ್ಪಾಗಿ ಕಳಾಹೀನವಾಗುತ್ತದೆ.

೩. ಲಿಪ್‌ಸ್ಟಿಕ್‌ಗಳ ಜೊತೆ ಇರುವ ಅಲರ್ಜಿ: ನೀವು ಬಳಸುವ ಕಾಸ್ಮೆಟಿಕ್‌ಗಳು ನಿಮಗೆ ಹೊಂದುತ್ತವೆಯೋ ಎಂಬುದನ್ನು ಪರೀಕ್ಷಿಸಿ. ಯಾಕೆಂದರೆ, ಬಹಳ ಸಾರಿ ನೀವು ಬಳಸುವ ಲಿಪ್‌ಸ್ಟಿಕ್‌, ಲಿಪ್‌ ಗ್ಲಾಸ್‌, ಲಿಪ್‌ ಪ್ಲಮ್ಮರ್‌ಗಳು ನಿಮಗೆ ಹೊಂದುವುದಿಲ್ಲ. ಇದರಿಂದ ತುಟಿ ನಿಧಾನವಾಗಿ ಕಪ್ಪಾಗಬಹುದು.

೪. ಬಿಸಿಲು: ನಿಮ್ಮ ಉದ್ಯೋಗ ಸೂರ್ಯನ ಬಿಸಿಲಿನಲ್ಲಿ ನಿಲ್ಲುವಂಥದ್ದಿದ್ದರೆ ಖಂಡಿತವಾಗಿಯೂ ತುಟಿಯೂ ಚರ್ಮದಂತೆ ಕಪ್ಪಾಗುವ ಸಂಭವವಿದೆ. ದಿನವೂ ಹೆಚ್ಚು ಹೊತ್ತು ಬಿಸಿಲಿಗೆ ತುಟಿಯ ಚರ್ಮ ಒಡ್ಡಿಕೊಳ್ಳುವುದರಿಂದ ತುಟಿಗಳೂ ಸನ್‌ಬರ್ನ್‌ಗೆ ಒಳಗಾಗಬಹುದು.

ಇದನ್ನೂ ಓದಿ | Ear buzzing | ಕಿವಿಯಲ್ಲಿ ಏನೇನೊ ಶಬ್ದ ಕೇಳಿಸುತ್ತಿದೆಯಾ? ಇಲ್ಲಿದೆ ಕಾರಣ

೫. ಸಿಲ್ವರ್‌ ಕೋಟೆಡ್‌ ಮೌತ್‌ ಫ್ರೆಶ್‌ನರ್‌: ಸಿಲ್ವರ್‌ ಕೋಟೆಡ್‌ ಮೌತ್‌ ಫ್ರೆಶ್‌ನರ್‌ಗಳನ್ನು ಬಳಸುತ್ತಿದ್ದರೆ ಅದರಿಂದಲೂ ಅಲರ್ಜಿಯಾಗಬಹುದು. ಇದರಿಂದ ತುಟಿಗಳು ಸಹಜ ಬಣ್ಣ ಕಳೆದುಕೊಳ್ಳಬಹುದು.

೬. ಹಲ್ಲು ಬಿಳಿಯಾಗಿಸುವ ಟೂತ್‌ಪೇಸ್ಟ್‌ಗಳು: ಹಲ್ಲು ಬಿಳಿಯಾಗಿಸುವ, ಥಳಥಳಿಸುವ ಟೂತ್‌ಪೇಸ್ಟ್‌ಗಳನ್ನು ಬಳಸುತ್ತಿದೀರಾ? ಇದರಿಂದಲೂ ನಿಮ್ಮ ತುಟಿ ಬಣ್ಣ ಕಳೆದುಕೊಳ್ಳಬಹುದು.

೭. ವಂಶವಾಹಿನಿ: ಕೆಲವರಿಗೆ ಜನ್ಮತಃ ತುಟಿಗಳು ಕಪ್ಪಾಗಿಯೇ ಇರುತ್ತವೆ. ಇದು ವಂಶವಾಹಿನಿಗಳ ಪ್ರಭಾವ. ಅಂಥವರು ಹೆಚ್ಚು ತಲೆಕೆಡಿಸಬೇಕಾಗಿಲ್ಲ.

ಮೇಲೆ ಹೇಳಿದ ತೊಂದರೆಗಳನ್ನು ನೀವು ಅನುಭವಿಸುತ್ತಿದ್ದರೆ, ನಿಮ್ಮ ತುಟಿ ಕಳಾಹೀನವಾಗಲು ಅವು ಕಾರಣವಿದೆಯೋ ಎಂಬುದನ್ನು ಖಚಿತಪಡಿಸಿಕೊಂಡು, ಇದರಿಂದ ಪರಿಹಾರ ಹೇಗೆ ಪಡೆಯಬಹುದು ಎಂಬುದರ ಮೇಲೆ ಗಮನ ಹರಿಸಬಹುದು. ಮುಖ್ಯವಾಗಿ ತುಟಿಗಳು ಆರೋಗ್ಯವಾಗಿರಲು ದೇಹಕ್ಕೆ ಸರಿಯಾದ ನೀರು ಪೂರೈಕೆಯಾಗಬೇಕು. ಹಾಗಾಗಿ ಹೆಚ್ಚು ನೀರು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ. ಇದು ಚರ್ಮಕ್ಕೂ ತುಟಿಗೂ, ಒಟ್ಟಾರೆ ಆರೋಗ್ಯಕ್ಕೂ ಒಳ್ಳೆಯದೇ. ತುಟಿಗಳಿಗೆ ಆಗಾಗ ಬಾದಾಮಿ ಎಣ್ಣೆ, ಬೆಣ್ಣೆ, ತುಪ್ಪವನ್ನು ಹಚ್ಚಿಕೊಳ್ಳಬಹುದು. ಆದಷ್ಟು ಪರಿಮಳ ರಹಿತ ಲಿಪ್‌ಸ್ಟಿಕ್‌, ಲಿಪ್‌ಬಾಮ್‌ಗಳನ್ನು ಬಳಸಿ. ಯಾಕೆಂದರೆ, ಪರಿಮಳ ಹೊಂದಿದ ಲಿಪ್‌ಸ್ಟಿಕ್‌ಗಳಲ್ಲಿ, ಸುವಾಸನೆಯ ಹೆಚ್ಚುವರಿ ರಾಸಾಯನಿಕವೂ ಇರುವುದರಿಂದ ಇದು ಅಲರ್ಜಿಗೆ ಕಾರಣವೂ ಆಗಬಹುದು. ಇವೆಲ್ಲ ಸಾಮಾನ್ಯ ಪ್ರಯತ್ನಗಳ ನಂತರವೂ ತುಟಿಗಳಿಗೆ ಸಂಬಂಧಿಸಿ, ಗಂಭೀರ ಸಮಸ್ಯೆಗಳಿದ್ದರೆ, ಚರ್ಮದ ತಜ್ಞರನ್ನು ಭೇಟಿಯಾಗಿ ಸಲಹೆ ಪಡೆಯುವುದು ಒಳ್ಳೆಯದು.

ಇದನ್ನೂ ಓದಿ | Health tips | ದಿನವಿಡೀ ಕಂಪ್ಯೂಟರ್‌ ಸ್ಕ್ರೀನ್‌ ನೋಡಿ ಕಣ್-ಕೆಟ್ಟಂತಾಗಿದ್ದೀರೇ? ಆಗಾಗ ಈ ಕಣ್ಣಿನ ವ್ಯಾಯಾಮ ಮಾಡಿ

Exit mobile version