Site icon Vistara News

Dates Health Benefits: ಸಮೃದ್ಧ ಹಣ್ಣು ಖರ್ಜೂರವನ್ನು ನಾವು ಏಕೆ ಬೆಳಗ್ಗೆ ತಿನ್ನಬೇಕು ಗೊತ್ತೇ?

dates

ಖರ್ಜೂರವು (Dates) ಅತ್ಯಂತ ಪುರಾತನವಾದ ಸಮೃದ್ಧ ಆಹಾರಗಳಲ್ಲಿ (Heathy food) ಒಂದು. ಕ್ರಿಸ್ತಪೂರ್ವ 5320ಕ್ಕೂ ಮೊದಲೇ ಖರ್ಜೂರವನ್ನು ನಮ್ಮ ಪೂರ್ವಜರು ನಿತ್ಯಾಹಾರದಲ್ಲಿ (daily food) ಬಳಕೆ ಮಾಡುತ್ತಿದ್ದರು ಎಂಬುದಕ್ಕೆ ಆಧಾರಗಳಿವೆ. ಹೆಚ್ಚು ಕ್ಯಾಲರಿ (Calorie food) ಇರುವ, ಹೆಚ್ಚು ನೈಸರ್ಗಿಕ ಸಕ್ಕರೆಯಿಂದ (Natural sugar) ಸಮೃದ್ಧವಾಗಿರುವ ಈ ಹಣ್ಣನ್ನು ಹಾಗೆಯೇ ಹಾಗೂ ಒಣಗಿಸಿಯೂ ತಿನ್ನುವ ಅಭ್ಯಾಸವು ಮೊದಲಿನಿಂದಲೂ ಬಳಕೆಯಲ್ಲಿದೆ. ಆದರೆ, ಈ ಗುಣದಿಂದಾಗಿಯೇ ಬಹುತೇಕ ತೂಕ ಇಳಿಸುವ (Weight loss) ಕಾಳಜಿ ಹೊಂದಿದ ಮಂದಿ ಖರ್ಜೂರವನ್ನು ತಿನ್ನುವುದರಿಂದ ತಪ್ಪಿಸಿಕೊಳ್ಳುತ್ತಾರೆ. ಆದರೆ, ಕಬ್ಬಿಣಾಂಶವೂ ಅಧಿಕವಾಗಿರುವ, ಬಹುತೇಕ ಎಲ್ಲ ಪೋಷಕಾಂಶಗಳಿಂದಲೂ (Nutrient rich) ಸಮೃದ್ಧವಾಗಿರುವ ಖರ್ಜೂರವನ್ನು ಕೊಂಚ ಪ್ರಮಾಣದಲ್ಲಿ ನಿಯಮಿತವಾಗಿ ಸೇವನೆ ಮಾಡುವುದರಿಂದ ಶಕ್ತಿ ವರ್ಧನೆಯ (energy booster) ಜೊತೆಗೆ ಆರೋಗ್ಯದಲ್ಲಿ ಸಾಕಷ್ಟು ಪ್ರಗತಿಯನ್ನು ಕಾಣಬಹುದು (Dates Health Benefits) ಎಂಬುದೂ ನಿಜ.

ಖರ್ಜೂರವು ಸಾಕಷ್ಟು ಕ್ಯಾಲರಿಯನ್ನು ಹೊಂದಿರುವ ಆಹಾರವಾದ್ದರಿಂದ ಇದನ್ನು ತಿನ್ನುವಾಗ ಹಿತಮಿತವಾಗಿ ತಿನ್ನಬೇಕೆಂಬ ಎಚ್ಚರಿಕೆಯನ್ನು ಸದಾ ಇಟ್ಟುಕೊಳ್ಳುವುದು ಒಳ್ಳೆಯದು. ಹೆಚ್ಚು ಖರ್ಜೂರವನ್ನು ಸೇವಿಸಿದರೆ ಖಂಡಿತವಾಗಿಯೂ ನಿಮ್ಮ ತೂಕ ಏರಿಕೆಯ ಭಯ ಇದ್ದೇ ಇದೆ. ಬನ್ನಿ, ಬೆಳಗ್ಗೆ ಎದ್ದ ಕೂಡಲೇ ಖರ್ಜೂರ ತಿನ್ನುವುದರಿಂದ ಯಾವೆಲ್ಲ ಆರೋಗ್ಯಕರ ಲಾಭಗಳಿವೆ ಎಂಬುದನ್ನು ನೋಡೋಣ.

1. ಖರ್ಜೂರವು ತನ್ನಲ್ಲಿ ನೈಸರ್ಗಿಕವಾಗಿ ಸಾಕಷ್ಟು ಕಾರ್ಬೋಹೈಡ್ರೇಟನ್ನೂ, ಸಕ್ಕರೆಯನ್ನೂ ಹೊಂದಿದೆ. ನೈಸರ್ಗಿಕ ಸಕ್ಕರೆಯ ಮೂಲಗಳಲ್ಲಿ ಮುಖ್ಯವಾದವುಗಳು ಇವು. ಇದರಲ್ಲಿ ನೈಸರ್ಗಿಕ ಸುಕ್ರೋಸ್‌, ಫ್ರಕ್ಟೋಸ್‌ ಹಾಗೂ ಗ್ಲೂಕೋಸ್‌ ಇವೆ. ಬೆಳಗ್ಗಿನ ಹೊತ್ತು ಎದ್ದ ಕೂಡಲೇ ಈ ಖರ್ಜೂರವನ್ನು ತಿನ್ನುವುದರಿಂದ ದೇಹಕ್ಕೆ ದಿಢೀರ್‌ ಶಕ್ತಿ ದೊರಕಿ, ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ. ವಿಶ್ರಾಂತಿ ಪಡೆದುಕೊಂಡ ಜೀರ್ಣಾಂಗವ್ಯೂಹವು ಬೆಳಗ್ಗೆ ಚುರುಕಾಗಿ ಕೆಲಸ ಆರಂಭಿಸಲು ಖರ್ಜೂರ ಒಳ್ಳೆಯ ಆಹಾರ.

2. ಖರ್ಜೂರದಲ್ಲಿ ಸಾಕಷ್ಟು ನಾರಿನಂಶವೂ ಇರುವುದರಿಂದ ಜೀರ್ಣಾಂಗವ್ಯೂಹವು ಸರಿಯಾಗಿ ಕೆಲಸ ಮಾಡಲು, ಜೀರ್ಣಕ್ರಿಯೆಗೆ ಸಹಕಾರಿಯಾಗಿ ಹೆಗಲು ಕೊಡುವ ಆಹಾರಗಳ ಪೈಕಿ ಇದಕ್ಕೆ ಉನ್ನತ ಸ್ಥಾನವಿದೆ. ಬೆಳಗ್ಗಿನ ಹೊತ್ತು ನಾರಿನಂಶವಿರುವ ಈ ಆಹಾರ ಸೇವನೆಯಿಂದ ಹೊಟ್ಟೆ ತುಂಬಿದ ಭಾವ ಸಿಕ್ಕಿ, ಅತಿಯಾಗಿ ತಿನ್ನುವುದೂ ಕೂಡಾ ಕಡಿಮೆಯಾಗುತ್ತದೆ. ಇದರಿಂದ ಜೀರ್ಣಾಂಗವ್ಯೂಹಕ್ಕೆ ಹೆಚ್ಚು ಒತ್ತಡ ಬೀಳುವುದೂ ಕೂಡಾ ಕಡಿಮೆಯಾಗುತ್ತದೆ.

3. ಖರ್ಜೂರದಲ್ಲಿ ಎಲ್ಲ ಬಗೆಯ ಪೋಷಕಾಂಶಗಳೂ ಶ್ರೀಮಂತವಾಗಿವೆ. ಇದೊಂದು ಸಂಪೂರ್ಣ ಆಹಾರ. ತತ್‌ಕ್ಷಣಕ್ಕೆ ಬೇಕಾಗುವ ಶಕ್ತಿಯನ್ನು ದೀಢೀರ್‌ ನೀಡಿ ನಮ್ಮ ದೇಹವನ್ನು ಪುನಶ್ಚೇತನಗೊಳಿಸುವ ಶಕ್ತಿ ಇದಕ್ಕಿದೆ. ವಿಟಮಿನ್ಗಳು, ಖನಿಜಾಂಶಗಳು ಹಾಗೂ ಪೋಷಕಾಂಶಗಳಾದ ಪೊಟಾಶಿಯಂ, ಮೆಗ್ನೀಶಿಯಂ, ವಿಟಮಿನ್‌ ಬಿ6, ಹಾಗೂ ಕಬ್ಬಿಣಾಂಶ ಇದರಲ್ಲಿ ಹೇರಳವಾಗಿದೆ. ದೇಹ ಆರೋಗ್ಯವಾಗಿರಲು ಬೇಕಾಗುವ ಎಲ್ಲ ಬಗೆಯ ಪೋಷಣೆಯೂ ಇದರಲ್ಲಿರುವುದು ವಿಶೇಷ.

4. ಸಿಹಿ ತಿನ್ನಬೇಕೆನ್ನುವ ಬಯಕೆಗೂ ಕೂಡಾ ಖರ್ಜೂರ ಒಳ್ಳೆಯ ಉತ್ತರ. ಸಿಹಿ ತಿನ್ನಬಾರದು ಎಂಬ ವೈದ್ಯರ ಸಲಹೆಗೆ ಅಥವಾ ಆರೋಗ್ಯದ ಕಾರಣಗಳಿಗಾಗಿ ಸಿಹಿತಿಂಡಿಗಳನು ದೂರವಿಟ್ಟಿರುವ ಎಷ್ಟೋ ಮಂದಿಗೆ ಇದ್ದಕ್ಕಿದ್ದಂತೆ ಉದ್ಭವಿಸುವ ಸಿಹಿ ಬಯಕೆಯನ್ನು ತಣಿಸಲು ಆಪತ್ಪಾಂಧವನಂತೆ ಪ್ರತ್ಯಕ್ಷವಾಗುವ ಆರೋಗ್ಯಕರ ಸಿಹಿಯೆಂದರೆ ಈ ಖರ್ಜೂರ. ಬೆಳಗ್ಗೆ ಏನಾದರೊಂದು ಸಿಹಿ ತಿನ್ನಬೇಕೆನಿಸದರೆ ಅಥವಾ ಬೆಳಗ್ಗಿನ ತಿಂಡಿ ಹಾಗೂ ಮಧ್ಯಾಹ್ನದೂಟದ ಮಧ್ಯದ ಸ್ನ್ಯಾಕ್‌ಟೈಮ್‌ಗೆ ತಿನ್ನಬಹುದಾದ ಸಿಹಿಯಿದು.

5. ಖರ್ಜೂರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಆಂಟಿ ಆಕ್ಸಿಡೆಂಟ್‌ಗಳಿವೆ. ಫ್ಲೇವನಾಯ್ಡ್‌ಗಳು, ಕೆರೋಟಿನಾಯ್ಡ್‌ಗಳು, ಗೂ ಫಿನೋಲಿಕ್‌ ಆಸಿಡ್‌ಗಳೂ ಇರುವುದರಿಂದ ಇವು ಅಪಾಯಕಾರಿ ರೋಗಗಳು ದೇಹವನ್ನು ಆಕ್ರಮಿಸುವುದನ್ನು ತಪ್ಪಿಸುತ್ತವೆ. ಹಾಗಾಗಿ ಬೆಳಗ್ಗೆ ನಿತ್ಯವೂ ಒಂದು ಅಥವಾ ಎರಡು ಖರ್ಜೂರವನ್ನು ತಿನ್ನುವುದರಿಂದ ಸಾಕಷ್ಟು ಆರೋಗ್ಯಕರ ಲಾಭಗಳನ್ನು ಪಡೆಯಬಹುದು.

ಇದನ್ನೂ ಓದಿ: Ghee Health Benefits: ಮಳೆಗಾಲದಲ್ಲಿ ಜಾಸ್ತಿ ತುಪ್ಪ ತಿನ್ನಿ; ಏಕೆಂದರೆ

Exit mobile version