ಹಬ್ಬಗಳ ರಾಜ ದೀಪಾವಳಿ (Deepavali 2023) ಇದೀಗ. ನಿತ್ಯವೂ ಸಿಹಿತಿಂಡಿ (diwali sweets) ಮಾಡುವ, ಕೊಳ್ಳುವ, ಕೊಂಡದ್ದನ್ನು ಸ್ನೇಹಿತರಿಗೆ ಹಿತೈಷಿಗಳಿಗೆ ಹಂಚುವ, ಅವರು ಬಂದು ನಮಗೆ ಹಂಚಿದ್ದನ್ನು ತಿಂದು ಸಂಭ್ರಮಿಸುವ ಖುಷಿಯೂ ಹಬ್ಬದಲ್ಲಿದೆ. ಹಬ್ಬ ಎಂದರೆ ನಮ್ಮ ಬಂಧು ಬಾಂಧವರ ಜೊತೆ ಬೆರೆತು ಖುಷಿಪಡುವ ಅಪರೂಪದ ಗಳಿಗೆಯೂ ಹೌದು. ಹೀಗಾಗಿ ಏನೇ ಡಯಟ್, ಆರೋಗ್ಯದ ಕಾಳಜಿ ಮಾಡುವವರೂ ಸಹ, ದೀಪಾವಳಿಯ ಸಂದರ್ಭ ಸಿಹಿತಿಂಡಿಗಳ ಮೋಹಕ್ಕೆ ಮಾರುಹೋಗದೆ ಇರರು. ಸಹಜ ಕೂಡಾ. ವರ್ಷದಲ್ಲೊಮ್ಮೆ ಬರುವ ಹಬ್ಬವನ್ನು ಸಂಭ್ರಮಿಸದಿದ್ದರೆ, ಬದುಕು ಬದುಕೇ ಅಂತ ಅನಿಸಿದರೆ ತಪ್ಪಲ್ಲ.
ಇತ್ತೀಚೆಗಿನ ದಿನಗಳಲ್ಲಿ, ಮನೆಯಲ್ಲೇ ಸಿಹಿತಿಂಡಿ ಕುರುಕಲುಗಳನ್ನು ಮಾಡುವ ಅಭ್ಯಾಸವೇ ನಮ್ಮಿಂದ ತಪ್ಪಿ ಹೋಗಿದೆ. ಹಬ್ಬ ಹರಿದಿನ ಬಂದರೆ ಸಾಕು, ಮಾರುಕಟ್ಟೆಯಿಂದ ಬಗೆಬಗೆಯ ಸಿಹಿತಿಂಡಿಗಳನ್ನು ನಾವೇ ಕೊಂಡು ತರುತ್ತೇವೆ. ಸ್ನೇಹಿತರಿಗೆ ನೆಂಟರಿಷ್ಟರಿಗೆ ಹಂಚುತ್ತೇವೆ. ಕಚೇರಿಯಿಂದ, ನಮ್ಮ ಬಂಧು ಬಾಂಧವರಿಂದ ಹೀಗೆ ಹಲವಾರು ಮೂಲಗಳಿಂದ ಹಬ್ಬದ ಸಂದರ್ಭ ನಮ್ಮ ಬಳಿಗೆ ಸಿಹಿತಿಂಡಿಗಳು ಬರುತ್ತವೆ. ಮನೆಯಲ್ಲೇ ಸಾಕಷ್ಟು ಸಿಹಿತಿಂಡಿಗಳು ಕಣ್ಣೆದುರೇ ಇರುವಾಗ ತಿನ್ನದೆ ಇರಲು ಹೇಗೆ ಸಾಧ್ಯವಾದೀತು. ಸಿಹಿತಿಂಡಿ ಖಾಲಿಯಾಗುವವರೆಗೆ ತಿನ್ನುತ್ತೇವೆ!
ಹಾಗಾದರೆ ಬನ್ನಿ, ಮಾರುಕಟ್ಟೆಯಲ್ಲಿ ಸಿಹಿ ಖರೀದಿಸುವಾಗ ಆರೋಗ್ಯದ ಕಾಳಜಿಯಿಟ್ಟುಕೊಂಡು (health guide, health tips) ನಾವು ಹೇಗೆ ಖರೀದಿ ಮಾಡಬಹುದು ಎಂಬುದನ್ನು ತಿಳಿಯೋಣ.
1. ಇಂದು ಮಾರುಕಟ್ಟೆಯಲ್ಲಿ ಲಭ್ಯವಿರುವ ಸಿಹಿತಿಂಡಿ ಯಾವೆಲ್ಲ ವಸ್ತುಗಳನ್ನು ತನ್ನೊಳಗೆ ಹೊಂದಿದೆ ಎಂಬ ಬಗ್ಗೆ ನಮಗೆ ಗೊತ್ತೇ? ಬಹಳ ಮಂದಿ ಕ್ಯಾಲರಿ ಕಡಿಮೆ ಇರುವ ಸಿಹಿತಿಂಡಿಗಳೆಂಬ ಹಣೆಪಟ್ಟಿಯ ತಿಂಡಿಗಳಿಗೆ ಹೆಚ್ಚು ದರ ತೆತ್ತು ತರುತ್ತಾರೆ. ಕಡಿಮೆ ಕ್ಯಾಲರಿಯ ಸಿಹಿತಿಂಡಿ ತಿನ್ನುತ್ತೇವೆಂಬ ಸಮಾಧಾನ ಅವರಿಗೆ. ಆದರೆ, ನಿಜವಾಗಿ ಹೇಳಬೇಕೆಂದರೆ, ಸಾಮಾನ್ಯ ಸಿಹಿತಿಂಡಿಗಿಂತಲೂ ದೇಹಕ್ಕೆ ಹಾಳು ಇದು ಎಂಬ ಸತ್ಯವೇ ತಿಳಿಯದು. ಇದರಲ್ಲಿರುವ ಕೃತಕ ಸಿಹಿಕಾರಕಗಳಿಂದ ಜೀರ್ಣಾಂಗ ವ್ಯವಸ್ಥೆಗೇ ಪೆಟ್ಟು ಬೀಳುತ್ತದೆ. ಗ್ಯಾಸ್, ಹೊಟ್ಟೆಯುಬ್ಬರ, ಮಲಬದ್ಧತೆಯಂಥ ಸಮಸ್ಯೆಗಳೂ ಬರಬಹುದು. ಮತ್ತಷ್ಟು ಸಿಹಿ ತಿನ್ನಬೇಕೆಂಬ ಬಯಕೆ ಹೆಚ್ಚಾಗಬಹುದು. ಇದರಿಂದ ರಕ್ತದಲ್ಲಿ ಸಕ್ಕರೆಯ ಪ್ರಮಾಣ ಒಮ್ಮೆಲೆ ಏರಬಹುದು. ಅದಕ್ಕಾಗಿ, ಬೆಲ್ಲದಿಂದ ಮಾಡಿದ, ಖರ್ಜೂರದ, ಒಣ ಹಣ್ಣುಗಳ ಸಿಹಿತಿಂಡಿ ಇತ್ಯಾದಿಗಳನ್ನು ಪರ್ಯಾಯವಾಗಿ ತರಬಹುದು. ಆದಷ್ಟೂ ನೈಸರ್ಗಿಕ ಮೂಲಗಳ ಸಿಹಿಯನ್ನೇ ಬಳಸಿದ ಸಿಹಿತಿಂಡಿ ತನ್ನಿ. ಇದು ಸಾಧ್ಯವಾಗದಿದ್ದರೆ ಸಾಮಾನ್ಯ ಸಿಹಿತಿಂಡಿಯನ್ನೇ ಹಿತಮಿತವಾಗಿ ತಿನ್ನಿ.
2. ನೀವು ಖರೀದಿಸುವ ಸಿಹಿತಿಂಡಿಯಲ್ಲಿ ರುಚಿ ಹೆಚ್ಚಿಸುವ ಕೃತಕ ಫ್ಲೇವರ್‌ಗಳು, ಬಣ್ಣಗಳು ಇರುವ ಸಾಧ್ಯತೆಗಳಿವೆ. ಬಣ್ಣಬಣ್ಣದ, ಆಕಾರದ ಸಿಹಿತಿಂಡಿಗಳು ನಿಮ್ಮ ಕಣ್ಣಿಗೆ ಸುಂದರವಾಗಿ ಕಾಣಬಹುದು. ಆದರೆ ಆರೋಗ್ಯಕ್ಕೆ ಒಳ್ಳೆಯದೇ? ಖಂಡಿತವಾಗಿ ಯೋಚನೆ ಮಾಡಬೇಕಾದ ವಿಚಾರ ಇದು. ಮೋನೋಸೋಡಿಯಂ ಗ್ಲುಟಮೇಟ್ (ಎಂಎಸ್‌ಜಿ) ಎಂಬ ಹೈಡ್ರೋಲೈಸ್ಡ್ ವೆಜಿಟೇಬಲ್ ಪ್ರೊಟೀನ್ ಕೆಲವು ಸಿಹಿತಿಂಡಿಗಳ ಅಂದ ಹಾಗೂ ರುಚಿ ಹೆಚ್ಚಲು ಬಳಸಿರಬಹುದು. ಇವು ಜೀರ್ಣಾಂಗವ್ಯೂಹಕ್ಕೆ ಒಳ್ಳೆಯದು ಮಾಡಲಾರವು. ಸಿಂಥೆಟಿಕ್ ವೆನಿಲ್ಲಾ, ಸ್ಟ್ರಾಬೆರ್ರಿ ಫ್ಲೇವರ್‌ಗಳ ಸಿಹಿತಿನಿಸುಗಳೂ ಕೂಡಾ, ಹೊಟ್ಟೆಗೆ ಹಾಳು ಬಗೆಯಬಹುದು.
3. ಬಹುತೇಕ ಸಿಹಿತಿಂಡಿ ಅಥವಾ ತಿನಿಸುಗಳಲ್ಲಿ, ಹೆಚ್ಚು ಕಾಲ ಉಳಿಯಲಿ ಎಂಬ ಕಾರಣದಿಂದ ಸಿಂಥೆಟಿಕ್ ಪ್ರಿಸರ್ವೇಟಿವ್‌ಗಳನ್ನು ಸೇರಿಸುತ್ತಾರೆ. ಕೆಲವು ಪ್ರಿಸರ್ವೇಟಿವ್‌ಗಳಾದ ಸೋಡಿಯಂ ಬೆಂಜೋಯೇಟ್, ಸೋಡಿಯಂ ನೈಟ್ರೇಟ್ ಇತ್ಯಾದಿಗಳಿಂದ ಹಲವರಿಗೆ ಅಲರ್ಜಿಗಳು, ತಲೆನೋವು, ವಾಂತಿಬೇದಿ ಇತ್ಯಾದಿಗಳೂ ಬರಬಹುದು. ಹೊಟ್ಟೆಯ ಆರೋಗ್ಯವನ್ನು ದುರ್ಬಲಗೊಳಿಸಬಹುದು. ಹಾಗಾಗಿ ಪ್ರಿಸರ್ವೇಟಿವ್‌ಗಳನ್ನು ಬಳಸದ ಸಿಹಿತಿಂಡಿಗಳನ್ನು ನೋಡಿ ಆಯ್ಕೆ ಮಾಡಿ.
4. ಸಿಹಿತಿಂಡಿಗಳಲ್ಲಿ ಉಪ್ಪನ್ನು ಬಳಸದಿದ್ದರೂ, ಸೋಡಿಯಂನ ಅಂಶ ನಾನಾ ರೂಪದಲ್ಲಿ ಸಿಹಿತಿಂಡಿಯೊಳಗೆ ಗೊತ್ತೇ ಆಗದಂತೆ ಇರಬಹುದು. ಹಿಟ್ಟನ್ನು ಕಂಡೀಷನ್ ಮಾಡುವ ವಸ್ತುವಾಗಿ ಸೇರಿಸಿರಬಹುದು, ಎಮಲ್ಸಿಫೈಯರ್ ಆಗಿ ಅಥವಾ ಕೃತಕ ಪ್ರಿಸರ್ವೇಟಿವ್ ಆಗಿ ಬಳಸಿರಲೂಬಹುದು. ಆದರಿದು ಗೊತ್ತೇ ಆಗದು. ಹಾಗಾಗಿ ಸಿಹಿತಿಂಡಿ ಖರೀದಿಸುವಾಗ ಇವುಗಳ ಬಗೆಗೂ ಗಮನ ಇರಲಿ.
ಹೀಗಾಗಿ, ಸಿಹಿತಿಂಡಿಗಳನ್ನು ಖರೀದಿಸುವಾಗ, ತಿನ್ನುವಾಗ, ನೋಡಿಕೊಂಡು ನಿಮ್ಮ ಆರೋಗ್ಯದ ಕಾಳಜಿ ತೆಗೆದುಕೊಂಡು ಆದಷ್ಟೂ ಈ ಎಲ್ಲ ವಿಚಾರಗಳನ್ನೂ ಗಮನದಲ್ಲಿಟ್ಟುಕೊಂಡು ಖರೀದಿಸಿ. ಹಬ್ಬದ ಸಂದರ್ಭ ಸಾಕಷ್ಟು ನೀರು ಕುಡಿಯಿರಿ. ಮೊಸರು, ಮಜ್ಜಿಗೆಯಂತಹ ಪ್ರೊಬಯಾಟಿಕ್‌ಗಳನ್ನು ಸೇವಿಸಿ. ಹೊಟ್ಟೆ ಕೆಡುವ ಮೊದಲೇ ಜೀರಿಗೆ ಕಷಾಯ, ಶುಂಠಿ ಚಹಾ ಇತ್ಯಾದಿಗಳ ನೆನಪೂ ಇರಲಿ. ಆ ಮೂಲಕ ನಿಮ್ಮ ಹೊಟ್ಟೆಯನ್ನು ಸಂತೋಷವಾಗಿಡುವ ಜೊತೆಗೆ ಕಾಳಜಿಯನ್ನೂ ಮಾಡಿ ಆರೋಗ್ಯವಾಗಿರಿಸಿಕೊಳ್ಳಿ.
ಇದನ್ನೂ ಓದಿ: Deepavali 2023: ಭಾರತದ ಈ ಊರುಗಳ ದೀಪಾವಳಿಯ ಸಂಭ್ರಮ ಒಮ್ಮೆಯಾದರೂ ಕಣ್ತುಂಬಿಕೊಳ್ಳಲೇಬೇಕು!