ಬೆಂಗಳೂರು: ಡೆಂಗ್ಯೂ ಜ್ವರವನ್ನು (Dengue Fever) ಸಾಂಕ್ರಾಮಿಕ ರೋಗ (Epidemic Diseases) ಎಂದು ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ಸಾಂಕ್ರಾಮಿಕ ರೋಗಗಳ ಕಾಯಿದೆ 2020 ತಿದ್ದುಪಡಿ ಮಾಡಿ ಅಧಿಸೂಚನೆ ಹೊರಡಿಸಲಾಗಿದೆ. ಅಧಿಸೂಚನೆ ಉಲ್ಲಂಘನೆಗೂ ದಂಡ ನಿಗದಿ ಮಾಡಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಸೂಚನೆ ನೀಡಿದೆ. ಡೆಂಗ್ಯೂ ನಿಯಂತ್ರಣಕ್ಕೆ ಆರೋಗ್ಯ ಇಲಾಖೆಯ ಕ್ರಮವಹಿಸಲಾಗಿದೆ. ಸೊಳ್ಳೆಗಳ ನಿಯಂತ್ರಣ ಮಾಡದಿದ್ದರೆ ದಂಡಾಸ್ತ್ರ ಪ್ರಯೋಗ ಮಾಡಲಾಗುತ್ತದೆ.
ಡಿಸಿಗಳಿಗೆ ಅಧಿಕಾರ
ಡೆಂಗ್ಯೂ ರೋಗವನ್ನು ಸಾಂಕ್ರಾಮಿಕ ರೋಗ ಪಟ್ಟಿಗೆ ಸೇರಿಸಿದ್ದೇವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಜನರಿಗೆ ಇದುವರೆಗೆ ಜಾಗೃತಿ ಮೂಡಿಸಿ, ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ತಿಳಿಸಿದ್ದವಿ. ಆದರೆ ಇದುವರೆಗೆ ನಮಗೆ ಯಾವ ಕ್ರಮ ಕೈಗೊಳ್ಳಲು ಸಾಧ್ಯವಾಗಿಲ್ಲ. ಮಂಗಳೂರು, ಬೆಂಗಳೂರಿನಲ್ಲಿ ಮಾತ್ರ ಪಾಲಿಕೆಗಳು ಕೆಲ ಕ್ರಮ ತೆಗೆದುಕೊಳ್ಳುವ ಅವಕಾಶ ಇತ್ತು, ಬೇರೆ ಕಡೆ ಇರಲಿಲ್ಲ. ಇದೀಗ ಡೆಪ್ಯುಟಿ ಕಮೀಷನರ್, ಡಿಸಿಗಳು ಇನ್ನು ಮುಂದೆ ಕ್ರಮ ತೆಗೆದುಕೊಳ್ಳುವ ಅಧಿಕಾರ ನೀಡಿದ್ದೇವೆ. ಮನೆ, ಸಂಸ್ಥೆ, ಕಟ್ಟಡಗಳು, ನಿರ್ಮಾಣ ಹಂತದ ಸೈಟ್, ಹೋಟೆಲ್ ಹೀಗೆ ಹಲವು ಸ್ಥಳಗಳ ಸುತ್ತಮುತ್ತ ಸರಿಯಾದ ನಿರ್ವಹಣೆ ಮಾಡದಿದ್ದರೆ ದಂಡ ವಿಧಿಸಲಾಗುತ್ತದೆ.
ಆ ಪ್ರಕಾರ ಗ್ರಾಮೀಣ ಪ್ರದೇಶಗಳ ಮನೆಗಳಿಗೆ 200 ರೂ. ದಂಡ, ನಗರ ಪ್ರದೇಶಗಳ ಮನೆಗಳಿಗೆ 400 ರೂ., ನಗರ ಪ್ರದೇಶದ ವಾಣಿಜ್ಯ ಪ್ರದೇಶ, ಮಾಲ್, ಮಾರುಕಟ್ಟೆಗಳಿಗೆ 1 ಸಾವಿರ ರೂ, ಗ್ರಾಮೀಣ ಪ್ರದೇಶಗಳಲ್ಲಿ 500 ರೂವರೆಗೆ ದಂಡ ಇರಲಿದೆ. ಖಾಲಿ ಸ್ಥಳ, construction ಸೈಟ್ ( ನಗರ ಪ್ರದೇಶ) 2 ಸಾವಿರ ರೂ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 1 ಸಾವಿರ ರೂ ದಂಡ ಇರಲಿದೆ.
ಡೆಂಗ್ಯೂ ಹೇಗೆ ಹರಡುತ್ತದೆ?
ಡೆಂಗ್ಯೂ ಜ್ವರ ಸೊಳ್ಳೆಯಿಂದ ಹರಡುವ ವೈರಲ್ ಸೋಂಕು ಆಗಿದೆ. ಇದು ಈಡಿಪಸ್ ಎಂಬ ಹೆಣ್ಣು ಸೊಳ್ಳೆಗಳ ಕಡಿತದಿಂದ ಹರಡುತ್ತದೆ. ಸೊಳ್ಳೆ ಕಚ್ಚಿದ 4-7 ದಿನಗಳ ನಂತರ ರೋಗ ಲಕ್ಷಣಗಳು ಸಾಮಾನ್ಯವಾಗಿ ಕಂಡು ಬರುತ್ತವೆ. ಇದರ ಪ್ರಭಾವ 10 ದಿನಗಳವರೆಗೆ ಇರುತ್ತದೆ. ಹೀಗಾಗಿ ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳುವುದು, ಸ್ವಚ್ಛತೆಗೆ ಆದ್ಯತೆ ನೀಡುವುದು ಉತ್ತಮವಾಗಿದೆ.
ಡೆಂಗ್ಯೂ ಜ್ವರ ತಲೆನೋವಿನಂತಹ ರೋಗಲಕ್ಷಣಗಳನ್ನು ಉಂಟು ಮಾಡಬಹುದು. ಡೆಂಗ್ಯೂವನ್ನು ಹೆಮರಾಜಿಕ್ ಜ್ವರ ಎಂದೂ ಕರೆಯಲಾಗುತ್ತದೆ. ಡೆಂಗ್ಯೂ ಜ್ವರದ ತೀವ್ರ ಸ್ವರೂಪವು ತೀವ್ರ ರಕ್ತಸ್ರಾವ, ರಕ್ತದೊತ್ತಡ ಹಾಗೂ ರಕ್ತಕಣಗಳ ಸಂಖ್ಯೆಯಲ್ಲಿ ಭಾರಿ ಕುಸಿತವಾಗಿ ವ್ಯಕ್ತಿಯ ಸಾವಿಗೂ ಕಾರಣವಾಗಬಹುದು. ಅಧಿಕ ಜ್ವರ, ತೀವ್ರ ತಲೆನೋವು, ವಾಂತಿ, ದೇಹದ ವಿವಿಧ ಭಾಗಗಳಲ್ಲಿ ದದ್ದುಗಳು, ಗ್ರಂಥಿಗಳಲ್ಲಿ ಊತ, ಮೂಳೆ ಮತ್ತು ಕೀಲು ನೋವು, ರಕ್ತಸ್ರಾವವಾಗವುದು ರೋಗ ಲಕ್ಷಣಗಳಾಗಿವೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ