Site icon Vistara News

Dengue Prevention: ರಾಜ್ಯದಲ್ಲಿ 6000ಕ್ಕೂ ಡೆಂಗ್ಯೂ ಪ್ರಕರಣ; ಇದರಿಂದ ಪಾರಾಗಲು ಹೀಗೆ ಮಾಡಿ

Dengue Prevention

ಮಳೆಗಾಲವೆಂದರೆ (Dengue prevention) ಹುಲ್ಲಿನಿಂದ ಹಿಡಿದು ಹುಳು-ಹುಪ್ಪಡಿಗಳವರೆಗೆ ಸರ್ವತ್ರ ಚಿಗುರುವ ಕಾಲ. ಜೊತೆಗೆ ಸೊಳ್ಳೆಗಳಿಗೆ ಸಂತಾನೋತ್ಪತ್ತಿಯ ದಿನಗಳು. ವಿಶ್ವಮಟ್ಟದಲ್ಲಿ ಶೇ. 34ರಷ್ಟು ಡೆಂಗೂ ಪ್ರಕರಣಗಳಿಗೆ ಭಾರತವೇ ತವರು. ಈ ಬಾರಿಯ ಮಳೆಗಾಲದಲ್ಲೂ ಎಂದಿನಂತರ ಡೆಂಗೂ ಪ್ರಕರಣಗಳು ಎಲ್ಲ ಕಡೆಗಳಲ್ಲಿ ಹೆಚ್ಚುತ್ತಿದ್ದು, ಈ ಬಗ್ಗೆ ಎಚ್ಚರ ವಹಿಸಬೇಕಾದ್ದು ಅಗತ್ಯ. ಹಾಗಾಗಿ ಈ ರೋಗ ಪ್ರವರಗಳು, ಹರಡುವುದು ಹೇಗೆ ಮತ್ತು ತಡೆ ಹೇಗೆ ಎನ್ನುವ ಬಗ್ಗೆ ಒಂದಿಷ್ಟು ವಿವರಗಳನ್ನು ಗಮನಿಸೋಣ. ಏಡಿಸ್‌ ಹೆಣ್ಣು ಸೊಳ್ಳೆಯಿಂದ ಹರಡುವ ವೈರಸ್‌ ಸೋಂಕಿದು. ಸೊಳ್ಳೆ ಕಚ್ಚಿದ ನಾಲ್ಕಾರು ದಿನಗಳ ನಂತರ ರೋಗದ ಚಿಹ್ನೆಗಳು ಕಾಣಿಸಿಕೊಳ್ಳುತ್ತವೆ. ಸಾಮಾನ್ಯವಾಗಿ ಫ್ಲೂ ಮಾದರಿಯಲ್ಲಿ ಪ್ರಾರಂಭವಾಗುವ ಈ ಕಾಯಿಲೆಯಲ್ಲಿ ಕೆಲವೊಮ್ಮೆ ರಕ್ತದಲ್ಲಿ ಪ್ಲೇಟ್‌ಲೆಟ್‌ಗಳು ಕುಸಿದು ಜೀವಕ್ಕೆ ಎರವಾಗುವ ಸಾಧ್ಯತೆಯಿದೆ.

ಲಕ್ಷಣಗಳು

ಸಾಮಾನ್ಯ ಲಕ್ಷಣಗಳ ಬಗ್ಗೆ ಹೇಳುವುದಾದರೆ- ತೀವ್ರ ಜ್ವರ, ಕಣ್ಣುಗಳ ಹಿಂದೆ ನೋವು, ಸ್ನಾಯು, ಕೀಲು ಮತ್ತು ಮೂಳೆಗಳಲ್ಲಿ ವಿಪರೀತ ನೋವು, ಅತೀವ ತಲೆನೋವು, ಮೈಮೇಲೆ ದದ್ದುಗಳು, ಮೂಗು ಅಥವಾ ದಂತದಲ್ಲಿ ಸ್ವಲ್ಪ ರಕ್ತಸ್ರಾವ, ವಾಂತಿ ಇತ್ಯಾದಿಗಳು ಕಾಣಿಸಿಕೊಳ್ಳಬಹುದು. ಮೊದಲಿಗೆ ಫ್ಲೂ ಮಾದರಿಯಲ್ಲಿ ಕಾಣಿಸಿಕೊಳ್ಳುವ ಈ ಜ್ವರಕ್ಕೆ ಸುಸ್ತಾಗಿ ಹೈರಾಣಾಗುವುದು, ಕಿರಿಕಿರಿ, ಮೈಯೆಲ್ಲಾ ತುರಿಕೆ ಮುಂತಾದವುಗಳು ಮೊದಲ ಎಚ್ಚರಿಕೆ ಗಂಟೆ. ಚರ್ಮದಡಿಯಲ್ಲಿ ರಕ್ತಸ್ರಾವ ಆಗುತ್ತಿದ್ದರೆ (ತರಚಿದಂತೆ ಕಾಣಬಹುದು), ಉಸಿರಾಟಕ್ಕೆ ಕಷ್ಟವಾದರೆ, ಅತೀವ ಹೊಟ್ಟೆ ನೋವು ಮತ್ತು ವಾಂತಿ, ಮಲಮೂತ್ರಗಳಲ್ಲಿ ರಕ್ತ ಮುಂತಾದ ಲಕ್ಷಣಗಳು ಕಂಡುಬಂದರೆ ಡೆಂಗು ಲಕ್ಷಣಗಳು ತೀವ್ರವಾಗಿದ್ದು, ಆಸ್ಪತ್ರೆಗೆ ದಾಖಲಿಸಬೇಕಾಗಬಹುದು. ಈ ಹೊತ್ತಿನಲ್ಲಿ ಕಾಳಜಿ ತಪ್ಪಿದರೆ ಜೀವಕ್ಕೆ ಆಪತ್ತು. ಹಾಗೆಂದು ಸೌಮ್ಯ ಲಕ್ಷಣಗಳಿದ್ದರೆ ವೈದ್ಯರು ಮನೆಯಲ್ಲೇ ಚಿಕಿತ್ಸೆ ನೀಡುತ್ತಾರೆ.
ಒಮ್ಮೆ ಜ್ವರ ಆರಂಭವಾದ ಮೇಲೆ 2ರಿಂದ 7 ದಿನಗಳವರೆಗೆ ಇರಬಹುದು. ಜ್ವರ ಬಿಟ್ಟ ನಂತರವೇ ಹೆಚ್ಚಿನವರಲ್ಲಿ ಸಮಸ್ಯೆಗಳು ದ್ವಿಗುಣಗೊಳ್ಳುತ್ತವೆ. ಅವರಿಗೆ ಇನ್ನಷ್ಟು ಆರೈಕೆಯ ಅಗತ್ಯವಿರುತ್ತದೆ. ಹೊಟ್ಟೆನೋವು, ವಾಂತಿ, ಉಸಿರಾಟ ಸಮಸ್ಯೆಗಳು, ತೀವ್ರ ತೆರನಾದ ಸ್ನಾಯು ಅಥವಾ ಮೂಳೆ ನೋವು, ನಿರ್ಜಲೀಕರಣ, ರಕ್ತದೊತ್ತಡ ಇಳಿಯುವುದು ಮುಂತಾದ ಹಲವರು ರೀತಿಯ ತೊಂದರೆಗಳು ಕಾಣಿಸಿಕೊಳ್ಳಬಹುದು. ಹಾಗಾಗಿ ಈ ದಿನಗಳಲ್ಲಿ ಸರಿಯಾದ ನಿದ್ದೆ, ಪೌಷ್ಟಿಕ ಆಹಾರ, ಧಾರಾಳವಾಗಿ ದ್ರವಾಹಾರದಂಥ ಆರೈಕೆಗಳು ಕಡ್ಡಾಯವಾಗಿ ಬೇಕು.

ತಡೆ ಹೇಗೆ?

ಸೊಳ್ಳೆಯಿಂದ ಹರಡುವ ಯಾವುದೇ ರೋಗವಾದರೂ, ಅದನ್ನು ತಡೆಯುವ ಕ್ರಮದಲ್ಲಿ ವಿಶೇಷ ವ್ಯತ್ಯಾಸವಿಲ್ಲ. ಮನೆಯ ಸುತ್ತಲೂ ನೀರು ನಿಲ್ಲದಂತೆ ನಿಗಾ ವಹಿಸಿ. ತೆರೆದ ಚರಂಡಿಯೇ ಬೇಕೆಂದಿಲ್ಲ, ಎಳನೀರಿನ ಚಿಪ್ಪುಗಳು, ರಸ್ತೆಗುಂಡಿಗಳಿಂದ ಹಿಡಿದು, ಎಲ್ಲೆಲ್ಲಿ ನೀರಿನ ಪಸೆಯಿದ್ದರೂ ಸೊಳ್ಳೆಗಳು ಸೃಷ್ಟಿ ಕಾರ್ಯ ನಡೆಸುತ್ತವೆ. ಮನೆಯಲ್ಲಿ ನೀರಿರಬಹುದಾದ ಕೂಲರ್‌ಗಳು, ಬಕೆಟ್‌ ಇತ್ಯಾದಿಗಳ ಬಗ್ಗೆ ಗಮನಕೊಡಿ. ನೀರು ತುಂಬಿಸಿಸುವ ಎಲ್ಲವನ್ನೂ ಮುಚ್ಚಿಡಿ. ನೀರು ನಿಲ್ಲುವಂಥ ಜಾಗಗಳಿದ್ದರೆ ಅವುಗಳ ಮೇಲೆ ಕೀಟನಾಶಕ ಸಿಂಪಡಿಸಿ.
ಬೆಳಗ್ಗೆ ಮತ್ತು ಸಂಜೆ ಸೊಳ್ಳೆಗಳು ಹೆಚ್ಚು ಸಕ್ರಿಯವಾಗಿರುವ ಸಮಯಗಳಲ್ಲಿ ಹೊರಗೆ ಹೋಗಬೇಡಿ; ಮಕ್ಕಳನ್ನೂ ಹೊರಗೆ ಬಿಡಬೇಡಿ. ಅನಗತ್ಯ ಪ್ರಯಾಣಗಳನ್ನು ತಪ್ಪಿಸಿ. ಮೈ ತುಂಬಾ ವಸ್ತ್ರಗಳನ್ನು ಧರಿಸಿದರೆ, ಸೊಳ್ಳೆಗಳು ಕಚ್ಚುವುದರಿಂದ ತಪ್ಪಿಸಿಕೊಳ್ಳಬಹುದು. ಸೊಳ್ಳೆ ನಿರೋಧಕ ಕ್ರೀಮ್‌, ಸ್ಪ್ರೇ ಅಥವಾ ಪ್ಯಾಚ್‌ಗಳು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ. ಸೊಳ್ಳೆಗಳ ಉಪಟಳಕ್ಕೆ ಕೆಲವು ನೈಸರ್ಗಿಕ ಉಪಾಯಗಳೂ ಚಾಲ್ತಿಯಲ್ಲಿವೆ. ನಿಮಗೆ ಸರಿಹೊಂದುವಂಥ ಯಾವುದನ್ನಾದರೂ ಬಳಸಿ. ರಾತ್ರಿ ಮಲಗುವಾಗ ಕಡ್ಡಾಯವಾಗಿ ಸೊಳ್ಳೆ ಪರದೆ ಉಪಯೋಗಿಸಿ. ಚಿಕ್ಕ ಮಕ್ಕಳಿದ್ದರೆ ಎಲ್ಲಕ್ಕಿಂತ ಹೆಚ್ಚು ಅಪಾಯ ಅವರಿಗೇ ಆಗಬಹುದು, ಎಚ್ಚರವಹಿಸಿ.

ಇದನ್ನೂ ಓದಿ: Seeds For Weight Loss: ತೂಕ ಇಳಿಸಿಕೊಳ್ಳಬೇಕೆ? ಈ 7 ಬೀಜಗಳನ್ನು ನಿಯಮಿತವಾಗಿ ಸೇವಿಸಿ

ಆಹಾರ

ದ್ರವಾಹಾರವನ್ನು ಸೋಂಕಿತರಿಗೆ ಧಾರಾಳವಾಗಿ ನೀಡಿ. ದಿನಕ್ಕೆ ಮೂರಲ್ಲದೆ, ಐದು ಲೀ. ಪಾನೀಯಗಳು ಹೊಟ್ಟೆಗೆ ಹೋದರೂ ಹೆಚ್ಚಲ್ಲ. ನಿಂಬೆ ಪಾನಕ, ಮಜ್ಜಿಗೆ, ಎಳನೀರು, ಸೂಪ್‌, ಅಂಬಲಿ, ಹರ್ಬಲ್‌ ಚಹಾಗಳು, ಕಷಾಯಗಳು ಮುಂತಾದ ಯಾವುದೇ ರೂಪದಲ್ಲಿ ದ್ರವಾಹಾರ ಹೊಟ್ಟೆಗೆ ಹೋಗಲಿ. ಇದರಿಂದ ರೋಗನಿರೋಧಕ ಶಕ್ತಿ ಹೆಚ್ಚಿ, ಶರೀರ ಡಿಟಾಕ್ಸ್‌ ಆಗುವುದಕ್ಕೆ ನೆರವಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ರಕ್ತದೊತ್ತಡ ಕುಸಿಯದಂತೆ ನೋಡಿಕೊಳ್ಳುತ್ತದೆ.
ಋತುಮಾನದ ಹಣ್ಣುಗಳು ಬೇಕು. ಅದರಲ್ಲೂ ಪಪ್ಪಾಯ, ಕಿವಿ, ನೇರಳೆ, ದಾಳಿಂಬೆ, ಬೆರ್ರಿಗಳು, ಮರಸೇಬು ಮುಂತಾದ ಹಣ್ಣುಗಳನ್ನು ಯಾವುದೇ ರೂಪದಲ್ಲಿ ಸೋಂಕಿತರಿಗೆ ನೀಡಬಹುದು. ಹಲವು ಬಣ್ಣದ ತರಕಾರಿಗಳು ಅವರಿಗೆ ಅಗತ್ಯ. ಹಸಿರು, ಹಳದಿ, ಕೇಸರಿ, ಕೆಂಪು, ಬಿಳಿ, ನೇರಳೆ ಮುಂತಾದ ಬಣ್ಣದ ತರಕಾರಿಗಳು ಜೀರ್ಣಕ್ರಿಯೆಯನ್ನು ಸುಗಮಗೊಳಿಸಿ, ಕರುಳಿನ ಒಳ್ಳೆಯ ಬ್ಯಾಕ್ಟೀರಿಯಗಳನ್ನು ಹೆಚ್ಚಿಸುತ್ತವೆ. ಇವೆಲ್ಲ ಒಟ್ಟಾಗಿ ರಕ್ತದಲ್ಲಿ ಪ್ಲೇಟ್‌ಲೆಟ್‌ ಕೆಳಗಿಳಿಯದಂತೆ ಕಾಪಾಡಿಕೊಳ್ಳಲು ನೆರವಾಗುತ್ತವೆ.

Exit mobile version