Site icon Vistara News

Dengue vaccine | ಶೀಘ್ರವೇ ಡೆಂಗೆ ಲಸಿಕೆ! ಅನುಮತಿ ಕೋರಿದ ಔಷಧ ಕಂಪನಿಗಳು

Dengue vaccine @ India

ವಿಶ್ವದ ಹಲವು ದೇಶಗಳಲ್ಲಿ ಡೆಂಗೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಹಲವಾರು ಸಂಸ್ಥೆಗಳು ಸಿದ್ಧಪಡಿಸುತ್ತಿರುವ ಲಸಿಕೆಗಳು (Dengue vaccine) ಪ್ರಾಯೋಗಿಕವಾಗಿ ಎರಡು ಮತ್ತು ಮೂರನೇ ಹಂತವನ್ನು ತಲುಪಿವೆ. ಸದ್ಯದಲ್ಲೇ ಡೆಂಗೆ ವಿರುದ್ಧ ಜಗತ್ತು ಮೇಲುಗೈ ಸಾಧಿಸುವ ಸಾಧ್ಯತೆ ನಿಚ್ಚಳವಾಗಿದೆ. ಎರಡು ಫಾರ್ಮಾಸೂಟಿಕಲ್ ಕಂಪನಿಗಳು ಮೂರನೇ ಹಂತದ ಪ್ರಯೋಗಕ್ಕೆ ಭಾರತದಲ್ಲಿ ಸಿದ್ಧತೆ ನಡೆಸಿದ್ದು, ಇನ್ನೆರಡು ಕಂಪನಿಗಳು ನೇರ ಅನುಮತಿಯತ್ತ ಆಸಕ್ತಿ ತೋರಿವೆ. ಟೋಕಿಯೋ ಮೂಲದ ಟಕೇಡ ಫಾರ್ಮಸೂಟಿಕಲ್‌ (takeda pharmaceutical) ಕಂಪನಿ ಎಲ್ಲಕ್ಕಿಂತ ಮುಂದಿದ್ದು, ಅಮೆರಿಕದ ಎಫ್‌ಡಿಎ(FDA) ಕಳೆದ ವಾರವಷ್ಟೇ ಆದ್ಯತೆಯ ಪರಾಮರ್ಶೆಗೆ ಅವಕಾಶ ನೀಡಿದೆ. ಈ ಲಸಿಕೆಗೆ ಇಂಡೋನೇಷ್ಯಾದಲ್ಲಿ ಕಳೆದ ಆಗಸ್ಟ್‌ನಲ್ಲಿ ಅನುಮತಿ ದೊರೆತಿದ್ದು, ೪-೬೫ ವರ್ಷದವರಿಗೆ ಇದನ್ನು ನೀಡಲಾಗುವುದು. ಕಳೆದ ಅಕ್ಟೋಬರ್‌ನಲ್ಲಿ ಯುರೋಪ್‌ ಔಷಧೀಯ ಸಂಸ್ಥೆಯೂ ಅನುಮತಿಗೆ ಶಿಫಾರಸು ಮಾಡಿದೆ.

ಇದೀಗ ಭಾರತದಲ್ಲೂ ಟಕೇಡ ಅನುಮತಿ ಕೋರಿದೆ. ಇದಲ್ಲದೆ, ಕೆಲವು ದೇಶಗಳಲ್ಲಿ ಈಗಾಗಲೇ ʻಡೆಂಗ್ವಾಕ್ಸಿಯʼ ಎಂಬ ಲಸಿಕೆ ಪೂರೈಸುತ್ತಿರುವ ಸನೋಫಿ ಸಂಸ್ಥೆ ನೇರ ಅನುಮತಿಯನ್ನು ಭಾರತದಲ್ಲಿ ಕೋರಿದೆ. ಭಾರತವೂ ಸೇರಿದಂತೆ ಬೇರೆಬೇರೆ ದೇಶಗಳ ಔಷಧೀಯ ಸಂಸ್ಥೆಗಳು ಈ ನಿಟ್ಟಿನಲ್ಲಿ ಪ್ರಯೋಗನಿರತವಾಗಿವೆ. ಪೆನೆಶಿಯ ಬಯೋಟೆಕ್‌, ಇಂಡಿಯನ್‌ ಇಮ್ಯುನೋಲಾಜಿಕಲ್ಸ್‌ ಲಿಮಿಟೆಡ್‌ ಮತ್ತು ಸೆರಂ ಸಂಸ್ಥೆಗಳು ಈ ಪಟ್ಟಿಯಲ್ಲಿವೆ. ಪೆನೆಶಿಯ ಸಂಸ್ಥೆಯು ಮೊದಲೆರಡು ಪ್ರಾಯೋಗಿನ ಹಂತಗಳನ್ನು ಪೂರ್ಣಗೊಳಿಸಿದ್ದು, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಜೊತೆಗೂಡಿ ಮೂರನೇ ಹಂತದಕ್ಕೆ ಸನ್ನದ್ಧವಾಗಿದೆ. ಉಳಿದೆರಡು ಸಂಸ್ಥೆಗಳ ಮೊದಲ ಮತ್ತು ಎರಡನೇ ಹಂತವನ್ನು ಪೂರ್ಣಗೊಳಿಸಿವೆ.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಕಳೆದೆರಡು ದಶಕಗಳಲ್ಲಿ ಡೆಂಗೆ ಪ್ರಕರಣಗಳು ಎಂಟು ಪಟ್ಟು ಹೆಚ್ಚಾಗಿವೆ. ಇದರಲ್ಲಿ ಏಷ್ಯಾ ದೇಶಗಳದ್ದೇ ಸಿಂಹಪಾಲು. ಮೊದಲಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಡೆಂಗೆ ಪ್ರಕರಣಗಳು ವರದಿಯಾಗುತ್ತಿರುವುದು ಒಂದು ಕಾರಣವಾದರೆ, ಜಾಗತಿಕ ಹವಾಮಾನ ತೀವ್ರವಾಗಿ ಏರುಪೇರಾಗುತ್ತಿರುವುದು ಇದಕ್ಕೆ ಇನ್ನೊಂದು ಕಾರಣ. ಹಾಗಾಗಿ ಡೆಂಗೆ ಮಾರಿಗೆ ನಿರೋಧಕತೆ ಮತ್ತು ಚಿಕಿತ್ಸೆ- ಈ ಎರಡೂ ತುರ್ತಾಗಿ ಅಭಿವೃದ್ಧಿ ಪಡಿಸಲೇಬೇಕಿದೆ ಎಂಬುದು ಪರಿಣತರ ಅಭಿಮತ.

ತಡವೇಕೆ?
ಡೆಂಗೆ ರೋಗವೇನು ಇಂದು-ನಿನ್ನೆಯದಲ್ಲ. ಹಲವಾರು ವರ್ಷಗಳಿಂದ ಚಾಲ್ತಿಯಲ್ಲಿರುವ ಈ ರೋಗಕ್ಕೆ ಲಸಿಕೆ ಬರುವುದಕ್ಕೆ ಇಷ್ಟೊಂದು ತಡವೇಕೆ? ಕೋವಿಡ್‌ ಲಸಿಕೆ ಇಷ್ಟು ತ್ವರಿತವಾಗಿ ಬಂದ ಉದಾಹರಣೆ ಕಣ್ಮುಂದೆ ಇರುವಾಗ ಕೇಳಬಹುದಾದ ಸಹಜ ಪ್ರಶ್ನೆಯಿದು. ಶ್ರೀಮಂತ ರಾಷ್ಟ್ರಗಳನ್ನು ಅಷ್ಟಾಗಿ ಬಾಧಿಸದ ಈ ರೋಗ ಬಡ ರಾಷ್ಟ್ರಗಳನ್ನೇ ಕಾಡುತ್ತಿದೆ ಎಂಬುದೇ ಲಸಿಕೆಯ ಹಿನ್ನಡೆಗೆ ಕಾರಣ. ಈ ಬಗೆಗಿನ ಪ್ರಯೋಗ, ಸಂಶೋಧನೆಗಳಿಗೆ ಸೂಕ್ತ ಆರ್ಥಿಕ ಬಲ ದೊರೆಯುತ್ತಿಲ್ಲ ಎಂಬುದು ಸಂಶೋಧಕರ ಬೇಸರ.

ಡೆಂಗು ರೋಗದಲ್ಲಿ ನಾಲ್ಕು ವಿಧದ ಸೆರೋಟೈಪ್‌ಗಳನ್ನು ಗುರತಿಸಲಾಗಿದೆ. ಬರುವಂಥ ಲಸಿಕೆ ಈ ನಾಲ್ಕೂ ಬಗೆಗಳ ವಿರುದ್ಧ ರಕ್ಷಣೆ ನೀಡುವಷ್ಟು ಸಮರ್ಥವಾಗಿರಬೇಕು. ಕೋವಿಡ್‌ನಲ್ಲಿ ಆಗಾಗ ಬರುತ್ತಿರುವ ಹೊಸ ವೇರಿಯೆಂಟ್‌ಗಳು ಲಸಿಕೆಯ ಭದ್ರಕವಚವನ್ನು ನುಸುಳಿ ಹೋಗುವ ರೀತಿಯಲ್ಲಿ ಡೆಂಗೆ ವಿಷಯದಲ್ಲೂ ಆದರೆ ಲಸಿಕೆ ಹೆಚ್ಚಿನ ಪ್ರಯೋಜನಕ್ಕೆ ಬರುವುದಿಲ್ಲ ಎಂಬುದು ತಜ್ಞರ ಕಳಕಳಿ. ಆದರೆ ತಾನು ಅಭಿವೃದ್ಧಿ ಪಡಿಸುತ್ತಿರುವ ವ್ಯಾಕ್ಸೀನ್‌ ನಾಲ್ಕೂ ವಿಧಗಳ ಡೆಂಗೆ ವಿರುದ್ಧ ಪರಿಣಾಮಕಾರಿ. ಲಸಿಕೆ ಪಡೆದ ಒಂದು ವರ್ಷದ ನಂತರವೂ ಶೇ.೮೦ರಷ್ಟು ಪರಿಣಾಮವನ್ನು ಈ ವ್ಯಾಕ್ಸೀನ್‌ ನೀಡುತ್ತದೆ ಎಂದು ಜಪಾನ್‌ನ ಟಕೇಡ ಸಂಸ್ಥೆ ಹೇಳಿಕೊಂಡಿದೆ.

ಸನೋಫಿ ಸಂಸ್ಥೆ ಅಭಿವೃದ್ಧಿ ಪಡಿಸಿದ್ದ ಡೆಂಗ್ವಾಕ್ಸಿಯ ಲಸಿಕೆಯನ್ನು ೨೦೧೬ರಲ್ಲಿ ಫಿಲಿಪ್ಪೀನ್ಸ್‌ನಲ್ಲಿ ಶಾಲಾ ಮಕ್ಕಳಿಗೆ ನೀಡಲಾಗಿತ್ತು. ಆದರೆ ಈ ಮೊದಲು ಡೆಂಗೆ ಬಾರದ ಮಕ್ಕಳಲ್ಲಿ ಈ ಲಸಿಕೆಯಿಂದಾಗಿ ಆಸ್ಪತ್ರೆಗೆ ಸೇರಿದ ನಿದರ್ಶನಗಳು ಹೆಚ್ಚಾದ ಹಿನ್ನೆಲೆಯಲ್ಲಿ, ಲಸಿಕಾಕರಣ ಕಾರ್ಯಕ್ರಮವನ್ನೇ ನಿಲ್ಲಿಸಲಾಗಿತ್ತು. ಹಾಗಾಗಿ ಸೂಕ್ತ ಸಂಶೋಧನೆ ಮತ್ತು ಪ್ರಯೋಗಗಳಿಲ್ಲದೆ ಲಸಿಕೆಗಳಿಗೆ ಅನುಮತಿ ನೀಡಲು ಸಾಧ್ಯವಿಲ್ಲದಿರುವುದರಿಂದ, ಈಗಿರುವ ಡೆಂಗೆ ಔಷಧವನ್ನೇ ಚಿಕಿತ್ಸೆಯಲ್ಲಿ ಮುಂದುವರಿಸಲಾಗುತ್ತಿದೆ.

ಇದನ್ನೂ ಓದಿ | Dengue news | ಕೊರೊನಾ ಭೀತಿಯ ನಡುವೆ ಕಾಡುತ್ತಿದೆ ಡೆಂಗೆ ಜ್ವರ, ಕಳೆದ ವರ್ಷಕ್ಕಿಂತ ದುಪ್ಪಟ್ಟು

Exit mobile version