Site icon Vistara News

Dental Health: ಸದಾ ಜಗಿಯುತ್ತಿರುವುದರಿಂದ ಹಲ್ಲುಗಳು ಗಟ್ಟಿಯಾಗುತ್ತವೆ ಅನ್ನೋದು ನಿಜವೆ?

Dental Health

ಸದಾ ಕಾಲ ಏನಾದರೊಂದು ಜಗಿಯುತ್ತಿದ್ದರೆ ಹಲ್ಲುಗಳು ಗಟ್ಟಿಯಾಗಿರುತ್ತವೆ ಎಂಬ ಮಾತು ಪ್ರಚಲಿತವಿದೆ. ಇದಕ್ಕಾಗಿ ಎಲೆ-ಅಡಿಕೆ ಹಾಕುವುದರಿಂದ ಹಿಡಿದು ಶುಗರ್‌-ಫ್ರೀ ಗಮ್‌ ಜಗಿಯುವವರವರೆಗೆ ಏನೇನೆಲ್ಲಾ ಮಾಡುವವರಿದ್ದಾರೆ ಹಲ್ಲುಗಳನ್ನು (dental health) ಗಟ್ಟಿ ಇರಿಸಿಕೊಳ್ಳುವುದಕ್ಕೆ. ಆದರೆ ಇಂಥ ಕೆಲವು ಜನಪ್ರಿಯ ನಂಬಿಕೆಗಳು ನಿಜವಾಗಲೇಬೇಕೆಂದಿಲ್ಲ ಎನ್ನುತ್ತಾರೆ ತಜ್ಞರು. ಸದಾ ಕಾಲ ಒಂದಿಲ್ಲೊಂದು ಅಗಿಯುತ್ತಲೇ ಇದ್ದರೆ ಹಲ್ಲು ಗಟ್ಟಿಯಾಗುವ ಬದಲು ಹಾಳಾಗಲೂಬಹುದು.

ಸತತವಾಗಿ ಬಾಯಾಡುತ್ತಲೇ ಇದ್ದರೆ, ಆ ಘರ್ಷಣೆಗೆ ಹಲ್ಲುಗಳ (dental health) ಎನಾಮಲ್‌ ಸವೆದು ದಂತಗಳಿಗೆ ಇನ್ನಷ್ಟು ಹಾನಿಯೇ ಆಗಬಹುದು ಎನ್ನುತ್ತಾರೆ ಪರಿಣತರು. ಅದರರ್ಥ ಯಾವುದನ್ನೂ ತಿನ್ನಬಾರದೇ? ತಿನ್ನುವುದಾದರೆ ಅಗಿಯಲೇ ಬೇಕಲ್ಲ. ಅಗಿಯುವುದರಿಂದಲೇ ಆಹಾರದ ನೈಸರ್ಗಿಕ ಪಚನಕ್ರಿಯೆ ಪ್ರಾರಂಭವಾಗುವುದು. ಜೀರ್ಣಕ್ರಿಯೆಯ ಆರಂಭದ ಸ್ಥಳವೇ ಬಾಯಿ, ನಂತರ ಹೊಟ್ಟೆ. ಹೀಗಿರುವಾಗ ಏನು ಮಾಡಬೇಕು? ಜಗಿಯುವುದರಿಂದ ಹಲ್ಲು ಮತ್ತು ಒಸಡುಗಳ ಆರೋಗ್ಯ ಸುಧಾರಿಸುತ್ತದೆ ಎಂಬ ನಂಬಿಕೆ ಪೂರ್ಣ ಸುಳ್ಳೆ? ಸತ್ಯ ಯಾವುದು?

ಇದೇನು ಪೂರ್ಣ ಸುಳ್ಳಲ್ಲ! ಅಗಿಯುವ ಕ್ರಿಯೆಯಲ್ಲಿಯೇ ಬಾಯಲ್ಲಿ ಹೆಚ್ಚಿನ ಲಾಲಾ ರಸ ಉತ್ಪತ್ತಿಯಾಗುತ್ತದೆ. ಈ ರಸ ಹಲ್ಲು ಮತ್ತು ಒಸಡುಗಳ ಆರೋಗ್ಯ ರಕ್ಷಕವೂ ಹೌದು. ಹಾಗಾಗಿ ಸಾಮಾನ್ಯವಾಗಿ ತಿನ್ನುವಾಗ ಜಗಿದೇ ತಿನ್ನಬೇಕೆಂಬ ನಿಯಮದಲ್ಲಿ ಯಾವ ತಪ್ಪೂ ಇಲ್ಲ. ಹಾಗೆ ತಿನ್ನುವುದೇ ಸರಿಯಾದ ಕ್ರಮ. ಆದರೆ… ಹಲ್ಲುಗಳ ರಕ್ಷಣೆಗೆ ನೆವದಲ್ಲಿ ದಿನವಿಡೀ ಪ್ರಾಣಿಗಳಂತೆ ಮೆಲುಕು ಹಾಕುತ್ತಲೇ ಇರಬೇಕಾದ ಅಗತ್ಯವಿಲ್ಲ. ಸಮಸ್ಯೆ ಉಂಟಾಗುವುದು ಈ ಸಂದರ್ಭದಲ್ಲಿ.

ಸದಾ ಅಗಿಯುತ್ತಿರುವುದರಿಂದ ದವಡೆಯ ಸ್ನಾಯುಗಳು ಮತ್ತು ಕೀಲುಗಳ ಮೇಲಿನ ಒತ್ತಡ ಹೆಚ್ಚುತ್ತದೆ. ದವಡೆಯಲ್ಲಿ ನೋವು, ತಲೆನೋವು, ಬಅಯಿ ತೆರೆದು-ಮುಚ್ಚಿ ಮಾಡುವುದಕ್ಕೂ ಕಷ್ಟವಾಗುವ ಸ್ಥಿತಿ ಉಂಟಾಗುತ್ತದೆ. ಎಷ್ಟೋ ಬಾರಿ ಮಾನಸಿಕ ಒತ್ತಡ ಶಮನಕ್ಕೆ ಏನನ್ನಾದರೂ ಅಗಿಯುವ ಅಭ್ಯಾಸವನ್ನು ಹಲವರು ಇರಿಸಿಕೊಂಡಿರುತ್ತಾರೆ. ಅದರಲ್ಲೂ ಗಟ್ಟಿಯಾದ ವಸ್ತುಗಳನ್ನು ಜಗಿಯುವುದರಿಂದ ಸಮಸ್ಯೆ ಬಿಗಡಾಯಿಸುತ್ತದೆ. ಉದಾ, ಗಟ್ಟಿ ಕ್ಯಾಂಡಿ, ತಣ್ಣನೆಯ ಐಸ್‌ ಇಂತಹವು ಕ್ರಮೇಣ ದವಡೆಯ ಸ್ನಾಯುಗಳ ಮೇಲಿನ ಒತ್ತಡ ಹೆಚ್ಚಿಸುತ್ತದೆ.

ಇದಿಷ್ಟೇ ಅಲ್ಲ. ಈ ಘರ್ಷಣೆಯು ಹಲ್ಲುಗಳ ರಕ್ಷಾಕವಚವಾದ ಎನಾಮಲ್‌ ಮೇಲೂ ಒತ್ತಡ ಹಾಕುತ್ತದೆ. ಕ್ರಮೇಣ ಎನಾಮಲ್‌ ಹೊದಿಕೆ ಸವೆಯಲಾರಂಭಿಸುತ್ತದೆ. ಒಮ್ಮೆ ಎನಾಮಲ್‌ ಸವೆಯಿತೊ, ಹಲ್ಲುಗಳಲ್ಲಿ ಸಂವೇದನೆ, ಹುಳುಕು, ಕುಳಿಗಳ ಸಮಸ್ಯೆ ಆರಂಭವಾಗುತ್ತದೆ. ಅದರಲ್ಲೂ ಹಲ್ಲುಗಳಿಗೆ ಬ್ರೇಸಸ್‌ ಹಾಕಿರುವವರಿಗೆ ಹೀಗೆ ಅಗಿಯುತ್ತಿರುವ ಅಭ್ಯಾಸವಿದ್ದರೆ ಇನ್ನೂ ಕಷ್ಟ. ಗಟ್ಟಿ ಅಥವಾ ಅಂಟು ಪದಾರ್ಥಗಳ ನಂಟು ಬ್ರೇಸಸ್‌ಗೆ ಹೆಚ್ಚಾದರೆ, ಅವು ಮುರಿಯಲಾರಂಭಿಸುತ್ತವೆ. ಹಾಕಿದ ವೈರ್‌ಗಳು ತುಂಡಾಗುತ್ತವೆ. ಇದರಿಂದ ಚಿಕಿತ್ಸೆಯ ಅವಧಿ ಹೆಚ್ಚಾಗಿ, ಹಲ್ಲುಗಳ ಕಷ್ಟ ಹೆಚ್ಚುತ್ತದೆ.

ಸಿಹಿಯಾದ ಅಥವಾ ಹುಳಿಯಾದ ತಿನಿಸುಗಳನ್ನು ಜಗಿಯುತ್ತಿರುವುದರಿಂದ ಹಲ್ಲುಗಳು ಬೇಗನೇ ಹಾಳಾಗುತ್ತವೆ. ಜೊತೆಗೆ, ಇಂಥ ಸಕ್ಕರೆಭರಿತ ತಿನಿಸುಗಳನ್ನು ಬಾಯಾಡುವುದರಿಂದ ದೇಹದ ತೂಕವೂ ಹೆಚ್ಚಬಹುದು. ಹಲ್ಲುಗಳನ್ನು ತುಂಬಿಸಿದ್ದರೆ, ಕ್ರೌನ್‌ ಹಾಕಿದ್ದರೆ ಅಥವಾ ಬ್ರಿಜ್‌ ಮಾಡಿದ್ದರೆ ಅವುಗಳಿಗೂ ಹಾನಿಯಾಗುತ್ತದೆ. ತುಂಬಿದ ಹಲ್ಲುಗಳು ಮುರಿಯಬಹುದು, ತುಂಬಿದ್ದು ಕಿತ್ತು ಹೋಗಬಹುದು. ಹಾಗಾಗಿ ಸದಾ ಕಾಲ ಚ್ಯುಯಿಂಗ್‌ ಗಮ್‌ ಅಥವಾ ಮತ್ತೇನಾದರೂ ಅಗಿಯುವ ಮುನ್ನ ಈ ಬಗ್ಗೆ ಸರಿಯಾದ ಮಾಹಿತಿ ಹೊಂದುವುದು ಅಗತ್ಯ.

ಆದರೆ ಮನೆಯಿಂದ ಹೊರಗಿರುವಾಗ ಊಟವೊ ತಿಂಡಿಯೊ ತಿಂದಾಗ, ಬಾಯಿ ಶುಚಿ ಮಾಡಲಾಗದಿದ್ದೇನು ಮಾಡುವುದು? ಅಂಥ ಸಂದರ್ಭಗಳಲ್ಲಿ ಸಕ್ಕರೆ-ರಹಿತ ಗಮ್‌ಗಳನ್ನು ಜಗಿಯಬಹುದು. ಇದರಿಂದ ಲಾಲಾ ರಸವೂ ಉತ್ಪತ್ತಿಯಾಗಿ ಹಲ್ಲುಗಳು ಸ್ವಚ್ಛವಾಗುತ್ತವೆ. ಆದರೆ ಇಂಥ ಗಮ್‌ಗಳನ್ನಾದರೂ ಅತಿಯಾಗಿ ಅಗಿಯುತ್ತಿದ್ದರೆ ಸಮಸ್ಯೆಗೆ ಆಹ್ವಾನ ನೀಡಿದಂತೆ. ಹಾಗಾಗಿ ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರವೇ ಬಳಸಿ. ಇದಲ್ಲದೆ, ನಿಯಮಿತವಾಗಿ ಹಲ್ಲುಜ್ಜುವುದು, ಪ್ಲೋಸಿಂಗ್‌ ಮುಂತಾದ ವೈಯಕ್ತಿಕ ಶುಚಿತ್ವದ ಬಗ್ಗೆ ಗಮನ ನೀಡಲೇಬೇಕು. ಅಷ್ಟೇ ಮಹತ್ವದ ಇನ್ನೊಂದು ಅಂಶವೆಂದರೆ ಆಹಾರ. ಅತಿಯಾದ ಸಿಹಿ ಮತ್ತು ಹುಳಿ ಪದಾರ್ಥಗಳು ಹಲ್ಲುಗಳ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತವೆ. ಜೊತೆಗೆ ಸೋಡಾ, ಕ್ಯಾಂಡಿಯಂಥವು ಬಾಯಿಯ ಬ್ಯಾಕ್ಟೀರಿಯಾಗಳಿಗೆ ಆಹ್ವಾನ ನೀಡುತ್ತವೆ.

FAQ

ಚ್ಯುಯಿಂಗ್‌ ಗಮ್ ಅಗಿಯುವುದು‌ ನನಗಿಷ್ಟ. ಏನು ಮಾಡಲಿ?

ಆದರೆ ಹಲ್ಲು, ದವಡೆಗಳಿಗೆ ಕಷ್ಟ! ಅವುಗಳನ್ನು ದಿನವೂ ಅಗಿದರೆ ಬಾಯಲ್ಲಿ ಜಮೆಯಾಗುವ ಆಸಿಡ್‌ ಪ್ರಮಾಣ ಹೆಚ್ಚಿ ಎನಾಮಲ್‌ ಹಾಳಾಗುತ್ತದೆ

ಹಲ್ಲುಗಳನ್ನು ನೈಸರ್ಗಿಕವಾಗಿ ಗಟ್ಟಿ ಮಾಡುವುದು ಹೇಗೆ?

ಕ್ಯಾಲ್ಶಿಯಂ ಮತ್ತು ವಿಟಮಿನ್‌ ಡಿ ಹೆಚ್ಚಿರುವ ಆಹಾರಗಳನ್ನು ಸೇವಿಸಿ. ಚೆನ್ನಾಗಿ ನೀರು ಕುಡಿಯುವುದರಿಂದ ಬಾಯಿಯ ಲಾಲಾ ರಸ ಹೆಚ್ಚಿ ಹಲ್ಲುಗಳು ಶುಚಿಯಾಗುತ್ತವೆ. ಹಲ್ಲು ಮತ್ತು ಬಾಯಿಯ ಸ್ವಚ್ಛತೆಯನ್ನು ಕಾಪಾಡಿಕೊಳ್ಳಿ

ಇದನ್ನೂ ಓದಿ: Pumpkin Seeds Benefits: 9 Health Benefits Of Pumpkin Seeds

Exit mobile version