Site icon Vistara News

Dental Health: ಹಲ್ಲುಗಳ ಆರೋಗ್ಯ ರಕ್ಷಣೆಗಾಗಿ ಇಲ್ಲಿವೆ ಕೆಲವು ಸಲಹೆಗಳು

Dental Health

ಆರೋಗ್ಯದ ವಿಷಯದಲ್ಲಿ ಬಹಳಷ್ಟು ಕಾಳಜಿ ಮಾಡುವ ಮಂದಿಯೂ ಕೆಲವೊಮ್ಮೆ ಬಾಯಿಯ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರುವುದಿದೆ. ಆದರೆ ದೇಹದ ಸಂಪೂರ್ಣ ಸ್ವಾಸ್ಥ್ಯದಲ್ಲಿ ಬಾಯಿಯ ಆರೋಗ್ಯ ಮುಖ್ಯ ಪಾತ್ರ ವಹಿಸುತ್ತದೆ. ಸಣ್ಣ ಕಿರಿಕಿರಿಯಿಂದ ಆರಂಭವಾಗಿ, ತಡೆಯಲಾರದ ನೋವಿನವರೆಗೆ ಹಲವು ರೀತಿಯಲ್ಲಿ ಹಲ್ಲು ಮತ್ತು ಒಸಡುಗಳ ಸಮಸ್ಯೆಗಳು ಕಾಡಬಲ್ಲವು. ದಂತಾರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಜನಜಾಗೃತಿ ಮೂಡಿಸುವ ಉದ್ದೇಶದಿಂದ, ಫೆಬ್ರವರಿ ತಿಂಗಳ ೯ನೇ ದಿನವನ್ನು ರಾಷ್ಟ್ರೀಯ ಹಲ್ಲುನೋವು ದಿನ ಎಂದು ಗುರುತಿಸಲಾಗಿದೆ.

ದಂತಾರೋಗ್ಯ ಹಾಳಾಗುವುದಕ್ಕೆ ಕಾರಣಗಳು ಹಲವಾರು. ಹೆಚ್ಚಿನ ಬಾರಿ ಇವು ನಮ್ಮ ಅಲಕ್ಷ್ಯದಿಂದಲೇ ಬರುವಂಥವು. ಹಲ್ಲು ನೋವು, ಹುಳುಕು, ಹಲ್ಲಿನಾಳದ ಸೂಕ್ಷ್ಮ ಸಂವೇದನೆ, ಬಾಯಿಯ ದುರ್ಗಂಧ, ಒಸಡುಗಳ ರಕ್ತ ಬರುವುದು ಮುಂತಾದ ಹಲವಾರು ರೀತಿಯ ಸಮಸ್ಯೆಗಳು ಕಾಡಬಹುದು. ಇವುಗಳಿಗೆ ಕಾರಣವೇನು ಮತ್ತು ಬಾರದಂತೆ ಏನು ಮಾಡಬೇಕು ಎಂಬ ಬಗ್ಗೆ ಕೆಲವು ಮಾಹಿತಿಗಳು ಇಲ್ಲಿವೆ. ಇದೇನು ಒಂದು ದಿನ ಮಾಡಿದರಾಯಿತು ಎಂದಲ್ಲ, ಬದುಕಿಡೀ ಪಾಲಿಸಲೇಬೇಕಾದ ಕ್ರಮಗಳಿವು.

ಹುಳುಕು: ಹಲ್ಲುಗಳ ಮೇಲಿನ ಬ್ಯಾಕ್ಟೀರಿಯಾ ದಾಳಿಯಿಂದಾಗಿ ದಂತಗಳ ಎನಾಮಲ್‌ ಹೊದಿಕೆ ಹಾಳಾಗಿ ಕುಳಿಗಳು ಉಂಟಾಗುತ್ತವೆ. ಸಹಿಸಲು ಕಷ್ಟವಾಗುವ ಹಲ್ಲು ನೋವಿನಿಂದ ವೈದ್ಯರ ಬಳಿಗೆ ಹೋಗುವುದು ಅನಿವಾರ್ಯವಾಗುತ್ತದೆ. ದಿನಕ್ಕೆರಡು ಬಾರಿ ಹಲ್ಲುಜ್ಜುವುದರ ಜೊತೆಗೆ, ಹಲ್ಲುಗಳ ನಡುವೆ ಫ್ಲೋಸ್‌ ಮಾಡುವುದರಿಂದ ದಂತ ಸ್ವಚ್ಛತೆಯಲ್ಲಿ ಒಂದು ಹೆಜ್ಜೆ ಮುಂದಿರಿಸಿದಂತಾಗುತ್ತದೆ. ಪ್ಲೂರೈಡ್‌ ಇರುವ ಟೂತ್‌ಪೇಸ್ಟ್‌ ಬಳಕೆಯಿಂದ ಹಲ್ಲುಗಳ ಎನಾಮಲ್‌ ಕವಚವನ್ನು ರಕ್ಷಿಸಿಕೊಳ್ಳಬಹುದು. ಸಕ್ಕರೆ ಮತ್ತು ಹುಳಿ ಆಹಾರಗಳನ್ನು ಸ್ವಲ್ಪ ಕಡಿಮೆ ಮಾಡುವುದು ಹಲ್ಲುಗಳ ದೃಷ್ಟಿಯಿಂದ ಒಳಿತು.

ಒಸಡುಗಳ ಸಮಸ್ಯೆ: ಹಲ್ಲಿನ ಸುತ್ತಲಿನ ಒಸಡಿನ ಭಾಗದಲ್ಲಿ ಉಂಟಾಗುವ ಸೋಂಕಿನಿಂದ ಊದಿಕೊಂಡು, ಕೆಂಪಾಗಿ ನೋವುಂಟಾಗಬಹುದು. ಬಾಯಿಯ ದುರ್ಗಂಧಕ್ಕೂ ಕಾರಣವಾಗಬಹುದು. ಬೆಚ್ಚಗಿನ ಉಪ್ಪು ನೀರಿನಲ್ಲಿ ಬಾಯಿ ಮುಕ್ಕಳಿಸುವುದು ಸರಳ ಪರಿಹಾರ. ಇದರಲ್ಲಿ ಕಡಿಮೆಯಾಗದಿದ್ದರೆ ವೈದ್ಯದರ್ಶನ ಅನಿವಾರ್ಯ. ದಿನವೂ ಹಲ್ಲುಜ್ಜುವಾಗ, ಒಸಡಿನ ಭಾಗವನ್ನು ಬೆರಳುಗಳಿಂದ ಮಸಾಜ್‌ ಮಾಡುವುದರಿಂದ ಅವುಗಳ ಬಲವರ್ಧನೆ ಮಾಡಬಹುದು.

ಹಲ್ಲು ಕಡಿಯುವುದು: ಹೆಚ್ಚಾಗಿ ಮಕ್ಕಳಲ್ಲಿ ಕಾಣುವ ಸಮಸ್ಯೆಯಿದು. ಹೀಗೆ ಹಲ್ಲು ಕಡಿಯುವುದರಿಂದ ದವಡೆಗಳಲ್ಲಿ ನೋವು, ತಲೆನೋವು, ಹಲ್ಲುಗಳಲ್ಲಿ ಸಂವೇದನೆಯಂಥ ಸಮಸ್ಯೆಗಳು ಬರಬಹುದು. ನಿದ್ದೆಯಲ್ಲಿ ಹಲ್ಲು ಕಡಿಯುವ ಅಭ್ಯಾಸವಿದ್ದರೆ, ಅದಕ್ಕೇನು ಕಾರಣ ಎಂಬುದನ್ನು ಮೊದಲು ಕಂಡುಕೊಳ್ಳಬೇಕು. ಎಪ್ನಿಯದಂಥ ತೊಂದರೆಯಿದ್ದರೆ ಪರಿಹರಿಸಿಕೊಳ್ಳುವುದರಿಂದ, ಹಲ್ಲು ಕಡಿಯುವುದನ್ನು ತಪ್ಪಿಸಬಹುದು.

ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವವರು ಮೌತ್‌ಗಾರ್ಡ್‌ ಅಗತ್ಯವಿದ್ದರೆ ತಪ್ಪದೆ ಬಳಸಬೇಕು. ಅಪಘಾತಗಳಲ್ಲಿ ಹಲ್ಲು ತುಂಡಾಗಿದ್ದರೆ, ವೈದ್ಯರಲ್ಲಿ ಅದಕ್ಕೆ ಪರಿಹಾರವಿದೆ. ಧೂಮಪಾನ ಮಾಡುವುದು ದಂತಾರೋಗ್ಯ ಕೆಡುವುದಕ್ಕೆ ರಹದಾರಿಯಿದ್ದಂತೆ. ಪ್ರತಿದಿನ ಹಲ್ಲುಗಳ ಸ್ವಚ್ಛತೆಯ ಜೊತೆಗೆ, ನಿಯಮಿತವಾಗಿ ವೈದ್ಯರಲ್ಲಿ ತಪಾಸಣೆ ಅಗತ್ಯ.

ಇದನ್ನೂ ಓದಿ: Health Benefits of Cereals: ಸಿರಿ ಧಾನ್ಯಗಳನ್ನೇಕೆ ತಿನ್ನಬೇಕು ಗೊತ್ತೇ?

Exit mobile version