ಕೆಲವು ಸಮಸ್ಯೆಗಳು ಇರುವುದು ಗೊತ್ತಾಗುವುದೇ ಅದು ಉಲ್ಬಣಿಸಿದಾಗ. ಉದಾಹರಣೆಗೆ, ಖಿನ್ನತೆಯನ್ನೇ ಗಮನಿಸಿ. ತಾವು ಆರೋಗ್ಯವಂತರು ಎಂದು ಭಾವಿಸಿದವರಲ್ಲೂ ಮಾನಸಿಕ ತೊಂದರೆಗಳಿದ್ದು, ಅದು ಆ ವ್ಯಕ್ತಿಯ ಅರಿವಿಗೆ ಬಾರದೇ ಹೋಗುವ ಎಲ್ಲಾ ಸಾಧ್ಯತೆಗಳೂ ಇವೆಯಲ್ಲವೇ. ಆದರೆ ಆರಂಭಿಕ ಹಂತದಲ್ಲಿ ಇದನ್ನು (Depression) ಗುರುತಿಸಿ, ಸರಿಯಾದ ಚಿಕಿತ್ಸೆ ನೀಡಿದರೆ ಸಂಪೂರ್ಣವಾಗಿ ಗುಣಪಡಿಸಬಹುದಾದ ಮಾನಸಿಕ ಸಮಸ್ಯೆಯಿದು. ಅಧ್ಯಯನಗಳ ಪ್ರಕಾರ, 20 ಮಂದಿ ವಯಸ್ಕರಲ್ಲಿ ಒಬ್ಬರಿಗೆ ಖಿನ್ನತೆಯಿದೆ! ಇಷ್ಟೊಂದು ಸರ್ವವ್ಯಾಪಿಯಾಗಿರುವ ಈ ಸಮಸ್ಯೆಯ ಬಗ್ಗೆ ನಮಗೆಷ್ಟು ಗೊತ್ತು? ಕೊನೆಯಿರದ ಬೇಸರ, ವಿಷಾದ ಮತ್ತು ಅನಾಸಕ್ತಿಯ ಭಾವಗಳನ್ನು ಖಿನ್ನತೆಯು (Depression) ರೋಗಿಯಲ್ಲಿ ಮೂಡಿಸುತ್ತದೆ. ದಿನದ ಸರಳ ಕೆಲಸಗಳಲ್ಲೂ ಆಸಕ್ತಿ ಇರುವುದಿಲ್ಲ. ಸ್ವರೂಪ ಜ್ಞಾನವಿರದವರಂತೆ ಹಲ್ಲುಜ್ಜುವುದು, ಸ್ನಾನ ಮಾಡುವುದಕ್ಕೂ ಉದಾಸೀನತೆ, ಮುಗಿಯದ ಸುಸ್ತು-ಆಯಾಸ, ಎಲ್ಲದಕ್ಕೂ ದಣಿವು, ಸಿಟ್ಟು-ಸಿಡುಕು ಇಂಥವೆಲ್ಲಾ ಅನುಭವಕ್ಕೆ ಬಂದಾಗಲೂ ತಾವು ಖಿನ್ನತೆಗೆ ಒಳಗಾಗಿರಬಹುದು ಎಂಬುದು ಆ ವ್ಯಕ್ತಿಗೆ ತಿಳಿದಿರುವುದಿಲ್ಲ. ಮಾತ್ರವಲ್ಲ, ಅವರ ಆಪ್ತರಿಗೂ ಇವರ ವರ್ತನೆಯಲ್ಲಿ ಕಾಣುವ ವೈಪರೀತ್ಯಗಳಿಗೆ ಕಾರಣ ತಿಳಿಯುವುದಿಲ್ಲ.
ಯಾರಿಗೆಲ್ಲಾ ಆಗಬಹುದು?
ಸಾಮಾನ್ಯವಾಗಿ ಹದಿಹರೆಯದವರಿಂದ ಹಿಡಿದು ವೃದ್ಧರವರೆಗೆ ಇದು ಯಾರನ್ನೂ ಕಾಡಬಹುದು. ಆದರೆ ಹಲವು ಸಂದರ್ಭಗಳಲ್ಲಿ ಪುರುಷರಿಗಿಂತ ಮಹಿಳೆಯರನ್ನು ಈ ಸಮಸ್ಯೆ ಕಾಡುವುದು ಹೆಚ್ಚು. ಅಂದರೆ ಪ್ರಸವಾನಂತರ ಅಥವಾ ರಜೋನಿವೃತ್ತಿಯ ಬಳಿಕ- ಇಂಥಾ ಸೂಕ್ಷ್ಮ ಸಂದರ್ಭಗಳಲ್ಲಿ ಖಿನ್ನತೆ ಕಾಡಬಹುದು ಎನ್ನುತ್ತಾರೆ ತಜ್ಞರು. ಒಂದಿಷ್ಟು ದಿನ ಇದ್ದು ತನ್ನಷ್ಟಕ್ಕೇ ಹೊರಟುಹೋಗುವ ಸಮಸ್ಯೆಯಲ್ಲವಿದು. ವಾರಗಟ್ಟಲೆ, ತಿಂಗಳುಗಳ ಕಾಲ, ಕೆಲವೊಮ್ಮೆ ವರ್ಷಗಳವರೆಗೂ ಇದು ಕಾಡುತ್ತದೆ. ಹಾಗಾಗಿ ಮಾನಸಿಕ ತಜ್ಞರಲ್ಲಿ ಸರಿಯಾದ ಚಿಕಿತ್ಸೆ ತೆಗೆದುಕೊಳ್ಳುವುದು ಅಗತ್ಯ.
ಲಕ್ಷಣಗಳೇನು?
ಸದಾ ಕಾಲ ಏನೋ ತಲೆ ಮೇಲೆ ಬಿದ್ದ ಭಾವ, ಪ್ರಿಯವಾಗಿದ್ದ ವಸ್ತು ವಿಷಯಗಳಲ್ಲೂ ಅನಾಸಕ್ತಿ, ಹಸಿವಿಲ್ಲದಿರುವುದು, ತಿನ್ನುವುದಕ್ಕೂ ಉದಾಸೀನ, ತೂಕ ಇಳಿಕೆ ಅಥವಾ ಹೆಚ್ಚಳ, ಸಿಕ್ಕಾಪಟ್ಟೆ ನಿದ್ದೆ ಅಥವಾ ನಿದ್ದೆಯೇ ಇಲ್ಲದಿರುವುದು, ಪದೇಪದೆ ಕಾಡುವ ತಪ್ಪಿತಸ್ಥ ಭಾವ, ತಾನು ಯಾರಿಗೂ, ಯಾವುದಕ್ಕೂ ಬೇಡ ಎಂಬ ವಿಷಾದ, ಮುಗಿಯದ ದಣಿವು- ಆಯಾಸ, ಏಕಾಗ್ರತೆಯ ಕೊರತೆ, ಸರಿಯಾದ ನಿರ್ಧಾರ ತೆಗೆದುಕೊಳ್ಳುವಲ್ಲಿ ಕಷ್ಟಪಡುವುದು, ಮಾತುಗಳಲ್ಲಿ ಹಿಂಜರಿತ, ಸಾವಿನ ಬಗ್ಗೆ ಆಸಕ್ತಿ, ಆತ್ಮಹತ್ಯೆಯಂಥಾ ಮಾತುಗಳು- ಇವೆಲ್ಲಾ ಖಿನ್ನತೆಯ ಲಕ್ಷಣಗಳು.
ಕಾರಣಗಳೇನು?
ಹಲವಾರು ಕಾರಣಗಳು ಇರಬಹುದು. ದೈಹಿಕ ಮತ್ತು ಮಾನಸಿಕ ಕಾರಣಗಳು, ಬದುಕಿನ ಸನ್ನಿವೇಶಗಳು, ಭಾವನಾತ್ಮಕ ಸ್ಥಿತಿಗತಿಗಳು- ಇಂಥ ಯಾವುದೂ ಖಿನ್ನತೆಯನ್ನು ತರಬಹುದು. ಅಂಥ ಕೆಲವು ಕಾರಣಗಳನ್ನು ಪಟ್ಟಿ ಮಾಡುವುದಾದರೆ-
ಕೌಟುಂಬಿಕ ಇತಿಹಾಸ
ರಕ್ತ ಸಂಬಂಧಿಗಳಲ್ಲಿ ಯಾರಿಗಾದರೂ ಖಿನ್ನತೆಯ ಚರಿತ್ರೆಯಿದ್ದರೆ ಸ್ವಲ್ಪ ಎಚ್ಚರ ಬೇಕು. ಉದಾ, ತಾಯಿಗೆ ಒಂದು ವಯಸ್ಸಿನಲ್ಲಿ ಖಿನ್ನತೆ ಕಾಣಿಸಿದರೆ, ಮಗಳಿಗೆ ಅದೇ ವಯಸ್ಸಿನಲ್ಲಿ ಖಿನ್ನತೆ ಕಾಣುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ.
ಆರೋಗ್ಯ
ಕೆಲವು ಮಾರಕ ಆರೋಗ್ಯ ಸಮಸ್ಯೆಗಳು, ಅಂದರೆ ಕ್ಯಾನ್ಸರ್, ಹೃದ್ರೋಗದಂಥವು, ಖಿನ್ನತೆಯನ್ನು ತರಬಲ್ಲವು. ಕೆಲವೊಂದು ರೋಗಗಳಿಗೆ ನೀಡಲಾಗುವ ಔಷಧಗಳೂ ಮಾನಸಿಕ ಸಮಸ್ಯೆಗಳನ್ನು ಹುಟ್ಟುಹಾಕಬಲ್ಲವು
ವ್ಯಸನಗಳು
ಕುಡಿತ, ಮಾದಕ ವಸ್ತುಗಳ ಚಟದಂಥವು ಹದಿಹರೆಯದವರಿಂದ ಹಿಡಿದು ಯಾರಲ್ಲೂ ಮಾನಸಿಕ ಅಸ್ಥಿರತೆಯನ್ನು ತರಬಲ್ಲವು. ಅದರಲ್ಲೂ, ವ್ಯಸನವನ್ನು ಬಿಡುವ ಪ್ರಯತ್ನದಲ್ಲಿದ್ದಾಗ ಖಿನ್ನತೆಗೆ ಜಾರುವುದನ್ನು ಸಾಮಾನ್ಯವಾಗಿ ಕಾಣಬಹುದು
ಬದುಕಿನ ಸನ್ನಿವೇಶಗಳು
ಸದಾ ಕಾಲ ಬಡತನ, ಶೋಷಣೆ, ನಿರ್ಲಕ್ಷ್ಯ, ಹಿಂಸೆಗೆ ತುತ್ತಾದವರಲ್ಲಿ ಖಿನ್ನತೆ ಕಾಣಿಸಬಹುದು. ಬದುಕಿನಲ್ಲಿ ಕಷ್ಟ, ನಿರಾಸೆಯ ಹೊರತಾಗಿ ಬೇರೇನಿಲ್ಲ ಎನಿಸಬಹುದು
ವ್ಯಕ್ತಿತ್ವದ ದೋಷಗಳು
ನಕಾರಾತ್ಮಕ ಧೋರಣೆ ಉಳ್ಳವರು, ಆತ್ಮವಿಶ್ವಾಸ, ಆತ್ಮಾಭಿಮಾನದ ಅತೀವ ಕೊರತೆ ಇರುವವರು, ಒತ್ತಡಗಳಿಗೆ ಸುಲಭವಾಗಿ ಬಲಿಯಾಗುವವರು ಖಿನ್ನತೆಗೆ ಜಾರುವ ಸಾಧ್ಯತೆಯಿದೆ.
ಚಿಕಿತ್ಸೆ ಇದೆಯೇ?
ಖಂಡಿತ. ಕೆಲವು ಖಿನ್ನತೆ ನಿವಾರಕ ಔಷಧಗಳು ಮತ್ತು ಆಪ್ತ ಸಮಾಲೋಚನೆಯಿಂದ ಈ ಸಮಸ್ಯೆಯನ್ನು ಸಂಪೂರ್ಣ ಗುಣಪಡಿಸಲು ಸಾಧ್ಯವಿದೆ. ಆದರೆ ಚಿಕಿತ್ಸೆ ಇಲ್ಲದೆ ಬಿಟ್ಟರೆ ಅಥವೂ ಸರಿಯಾದ ಚಿಕಿತ್ಸೆ ತೆಗೆದುಕೊಳ್ಳದಿದ್ದರೆ, ರೋಗಿಗಳು ತಮ್ಮ ಬದುಕನ್ನು ಅಪಾಯಕ್ಕೆ ದೂಡಿಕೊಳ್ಳಬಹುದು. ಹಾಗಾಗಿ ಖಿನ್ನತೆಯ ಆರಂಭಿಕ ಲಕ್ಷಣಗಳು ಕಾಣುತ್ತಿದ್ದಂತೆಯೇ ಕುಟುಂಬದ ವೈದ್ಯರನ್ನು ಅಥವಾ ಮಾನಸಿಕ ತಜ್ಞರನ್ನು ಭೇಟಿ ಮಾಡಿ.
FAQ
ಖಿನ್ನತೆ ಬಂದರೇನಾಗುತ್ತದೆ?
ಬದುಕಿನ ಸರಳ ಕಾರ್ಯಗಳಾದ ಊಟ, ನಿದ್ದೆ. ಕೆಲಸ, ಆಲೋಚನೆ- ಎಲ್ಲದಕ್ಕೂ ತೊಂದರೆಯಾಗುತ್ತದೆ. ಸಮಸ್ಯೆ ಮಾನಸಿಕ ಸ್ಥರದಲ್ಲಿರುವುದು ಹೌದಾದರೂ ಅದರ ಪರಿಣಾಮಗಳು ದೇಹದ ಮೇಲೂ ತೀವ್ರವಾಗಿ ಕಾಣುತ್ತದೆ
ಮಾನಸಿಕ ಆರೋಗ್ಯ ಸುಧಾರಿಸುವುದು ಹೇಗೆ?
ಒತ್ತಡ ನಿವಾರಣೆ, ಹೊಸದನ್ನು ಕಲಿಯುವುದರಲ್ಲಿ ಆಸಕ್ತಿ, ನಿಸರ್ಗದೊಂದಿಗೆ ಸಮಯ ಕಳೆಯುವುದು, ಆಪ್ತರಿಗೆ ಸಮಯ ನೀಡುವುದು, ಕಷ್ಟ-ಸುಖಗಳನ್ನು ಹಂಚಿಕೊಳ್ಳುವುದು, ಚೆನ್ನಾಗಿ ನಿದ್ದೆ ಮಾಡುವುದು- ಇಂಥವುಗಳು ಮನಸ್ಸಿನ ಭಾರ ಇಳಿಸಲು ನೆರವಾಗುತ್ತವೆ
ಇದನ್ನೂ ಓದಿ: Health Benefits Of Rice Water: ಅಕ್ಕಿ ತಿಳಿಯ ಲಾಭಗಳು ಬಹಳಷ್ಟಿವೆ!