Site icon Vistara News

Diabetes Diet: ಮಧುಮೇಹಿಗಳೇ, ಈ ಐದು ಆಹಾರ ಚಳಿಗಾಲದಲ್ಲಿ ನಿಮ್ಮ ತಟ್ಟೆಯಲ್ಲಿರಲಿ!

Diabetes Diet

ಇತ್ತೀಚೆಗೆ ಮಧುಮೇಹದ ತೊಂದರೆಯಿರುವ ಮಂದಿ ಹೆಚ್ಚುತ್ತಿದ್ದಾರೆ. ಆಹಾರಕ್ರಮ, ಜೀವನಶೈಲಿ ಇತ್ಯಾದಿ ಇದರ ಕಾರಣಗಳು. ಹೃದಯದ ಕಾಯಿಲೆ, ಕಣ್ಣು ಹಾಗೂ ಕಾಲಿಗೆ ಸಂಬಂಧಿಸಿದ ತೊಂದರೆಗಳು, ಕಿಡ್ನಿ ಸಮಸ್ಯೆ ಇತ್ಯಾದಿ ತೊಂದರೆಗಳೆಲ್ಲವೂ ಮಧುಮೇಹದಿಂದಾಗಿ ಆರಂಭವಾಗುತ್ತದೆ. ಹಾಗಾಗಿ ಮಧುಮೇಹಿಗಳು ತಿನ್ನುವ ಆಹಾರ ಹಾಗೂ ಔಷಧಿಗಳಿಂದ ಇದನ್ನು ಹತೋಟಿಯಲ್ಲಿಡುವುದು ಅತ್ಯಂತ ಅಗತ್ಯ ಕೂಡಾ.

ಹವಾಮಾನ ಕೂಡಾ ಮಧುಮೇಹಿಗಳ ದೇಹದಲ್ಲಿರುವ ಸಕ್ಕರೆಯ ಪ್ರಮಾಣದ ಏರಿಳಿತಕ್ಕೆ ಕಾರಣವಾಗುತ್ತದೆ. ಮುಖ್ಯವಾಗಿ ಚಳಿಗಾಲ ಹಾಗೂ ಬೇಸಿಗೆ ಮಧುಮೇಹಿಗಳ ಪಾಲಿಗೆ ಕಷ್ಟದ ದಿನಗಳು. ಸದ್ಯ ಚಳಿಗಾಲದಲ್ಲಿ ಮಧುಮೇಹಿಗಳು ಕೆಲವು  ಆಹಾರಗಳನ್ನು ನಿತ್ಯ ಆಹಾರದ ಕ್ರಮದಲ್ಲಿ ಸೇರಿಸಿಕೊಳ್ಳುವ ಮೂಲಕ ಈ ತೊಂದರೆಗೆ ಕೊಂಚ ಮಟ್ಟಿನ ಪರಿಹಾರ ಕಂಡುಕೊಳ್ಳಬಹುದು. ಹಾಗಾದರೆ ಮಧುಮೇಹಿಗಳು ಸೇವಿಸಬಹುದಾದ ಚಳಿಗಾಲದ ಆಹಾರಗಳ್ಯಾವುವು ನೋಡೋಣ.

೧. ಕಿತ್ತಳೆ: ಕಿತ್ತಳೆಯಂಥಾ ಸಿಟ್ರಸ್‌ ಹಣ್ಣುಗಳು ಪೊಟಾಶಿಯಂ, ಹಾಗೂ ವಿಟಮಿನ್‌ ಸಿಯ ಜೊತೆಗೆ ಸಾಕಷ್ಟು ನಾರಿನಂಶವನ್ನೂ ಹೊಂದಿರುವ ಹಣ್ಣುಗಳು. ಇದು ಕಡಿಮೆ ಗ್ಲಿಸಮಿಕ್‌ ಇಂಡೆಕ್ಸ್‌ ಹೊಂದಿದ್ದು ಇದರಿಂದಾಗಿ ಇದನ್ನು ತಿನ್ನುವುದರಿಂದ ಕೂಡಲೇ ರಕ್ತದಲ್ಲಿನ ಸಕ್ಕರೆಯ ಪ್ರಮಾಣ ಇದ್ದಕ್ಕಿದ್ದಂತೆ ಏರುವುದಿಲ್ಲ. ಮಧುಮೇಹಿಗಳಿಗೆ, ವಿಟಮಿನ್‌ ಸಿ ಬಹಳ ಅಗತ್ಯ ಯಾಕೆಂದರೆ ಇದಕ್ಕೆ ರಕ್ತದಲ್ಲಿನ ಗ್ಲುಕೋಸನ್ನು ಕಡಿಮೆ ಮಾಡುವ ತಾಕತ್ತಿದೆ. ಟೈಪ್‌ ೨ ಮಧುಮೇಹಿಗಳು ದಿನಕ್ಕೆ ೧೦೦೦ ಎಂಜಿ ವಿಟಮಿನ್‌ ಸಿ ಸೇವಿಸದರೆ ರಕ್ತದ ಗ್ಲುಕೋಸ್‌ ಮಟ್ಟ ಕಡಿಮೆ ಇರುತ್ತದೆ ಎಂದು ಸಂಶೋಧನೆಗಳೂ ಹೇಳಿವೆ. ವಿಟಮಿನ್‌ ಸಿ ಗಾಯಗೊಂಡ ಅಂಗಾಂಶಗಳನ್ನೂ ಸರಿಪಡಿಸುವ ಕೆಲಸವನ್ನು ಮಾಡುತ್ತದೆ.

೨. ಸಿಹಿಗೆಣಸು: ಆಲೂಗಡ್ಡೆಯ ಕೊಂಚ ಸಿಹಿ ವರ್ಷನ್‌ ಆಗಿರುವ ಸಿಹಿಗೆಣಸು ಸಾಕಷ್ಟು ಪೋಷಕಾಂಶಗಳಿರುವ ಗಡ್ಡೆ. ಇದರ ಸೇವನೆಯಿಂದ ರಕ್ತದಲ್ಲಿ ಸಕ್ಕರೆಯ ಪ್ರಮಾಣದಲ್ಲಿ ಕೊಂಚ ಏರಿಕೆಯಾಗಬಹುದಾದರೂ, ಸಾಮಾನ್ಯ ಆಲೂಗಡ್ಡೆಗಿಂತ ಮಧುಮೇಹಿಗಳಿಗೆ ಸಿಹಿಗೆಣಸು ಒಳ್ಳೆಯದು. ಆದರೂ ಇದರಲ್ಲಿರುವ ಪೋಷಕಾಂಶಗಳ ಕಾರಣದಿದಂದಾಗಿ ಆಲೂಗಡ್ಡೆಯ ಬದಲಾಗಿ ಸಿಹಿಗೆಣಸನ್ನೇ ಬಳಸುವುದು ಒಳ್ಳೆಯದು.

೩. ಕ್ಯಾರೆಟ್‌: ಚಳಿಗಾಲದ ತರಕಾರಿಗಳ ಪೈಕಿ ಎಲ್ಲರ ಮನಸೆಳೆಯುವುದು ಕ್ಯಾರೆಟ್‌. ಸಿಹಿಯಾಗಿರುವುದರಿಂದ ಹಾಗೂ ಹಸಿಯಾಗಿಯೇ ತಿನ್ನಬಹುದಾದ್ದರಿಂದ ಕ್ಯಾರೆಟ್ಟನ್ನು ಎಲ್ಲರೂ ಚಳಿಗಾಲದಲ್ಲಿ ಯಥೇಚ್ಛವಾಗಿ ಬಳಸುತ್ತಾರೆ ಕೂಡಾ. ಅತ್ಯಂತ ಉತ್ತಮ ಪೋಷಕಾಂಶಗಳಿರುವ ಕಡಿಮೆ ಗ್ಲಿಸಮಿಕ್‌ ಇಂಡೆಕ್ಸ್‌ ಹೊಂದಿರುವ ಕಾರಣ ಕ್ಯಾರೆಟ್ಟನ್ನು ಮಧುಮೇಹಿಗಳೂ ಕೂಡಾ ಯಾವುದೇ ಭಯವಿಲ್ಲದೆ ತಿನ್ನಬಹುದು. ಇದರಲ್ಲಿ ಹೇರಳವಾಗಿ ವಿಟಮಿನ್‌ ಎ ಹಾಗೂ ಸಿ ಇರುವುದರಿಂದ ಹಾಗೂ ರೋಗ ನಿರೋಧಕ ಸಾಮರ್ಥ್ಯ ಹೆಚ್ಚಿಸುವುದರಿಂದ ಎಲ್ಲೂ ಚಳಿಗಾಲದಲ್ಲಿ ಅತ್ಯಗತ್ಯವಾಗಿ ತಿನ್ನಲೇಬೇಕಾದ ತರಕಾರಿಯಿದು.

ಇದನ್ನೂ ಓದಿ: Diabetes: ಮಧುಮೇಹದ ಪ್ರಾರಂಭಿಕ ಲಕ್ಷಣಗಳು ಗೊತ್ತೇ?

೪. ಚೆಕ್ಕೆ(ದಾಲ್ಚಿನಿ): ನೈಸರ್ಗಿಕವಾದ ಮಸಾಲೆಗಳ ಪೈಕಿ ದಾಲ್ಚಿನಿ ಅಥವಾ ಚೆಕ್ಕೆ ಅತ್ಯಂತ ಮುಖ್ಯವಾದುದು. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ, ತೂಕವನ್ನು ಸಮತೋಲನದಲ್ಲಿ ಇಡಲು, ಕೊಲೆಸ್ಟೆರಾಲ್‌ ಮಟ್ಟವನ್ನು ತಗ್ಗಿಸಲು ನೆರವಾಗುವ ಗುಣಗಳು ಇದರಲ್ಲಿವೆ. ಅದಕ್ಕಾಗಿಯೇ ಇದು ಹೃದಯದ ಕಾಯಿಲೆ ಇರುವ ಮಂದಿಗೂ ಅತ್ಯಂತ ಸೂಕ್ತ. ಚೆಕ್ಕೆಯ ನಿತ್ಯ ಬಳಕೆಯಿಂದ ಕೇವಲ ಇಷ್ಟೇ ಅಲ್ಲ, ಮಧುಮೇಹಿಗಳೂ ಕೂಡಾ ಸಕ್ಕರೆ ಮಟ್ಟವನ್ನು ಸಮತೋಲನದಲ್ಲಿಡಬಹುದು.

೫. ಸೇಬು: ದಿನಕ್ಕೊಂದು ಸೇಬು ತಿಂದು ವೈದ್ಯರಿಂದ ದೂರವಿರಿ ಎಂಬ ಪ್ರಖ್ಯಾತ ಮಾತೊಂದಿದೆ. ಅದು ನಿಜವೂ ಕೂಡಾ. ಸೇಬು ಕಾರ್ಬೋಹೈಡ್ರೇಟು, ನಾರಿನಂಶ ಹಾಗೂ ಸಾಕಷ್ಟು ವಿಟಮಿನ್‌ಗಳನ್ನು ಹೊಂದಿರುವ ಹಣ್ಣು. ಚಳಿಗಾಲದಲ್ಲಿ ಸೇಬು ಹಣ್ಣನ್ನು ತಿನ್ನುವ ಮೂಲಕ ಮಧುಮೇಹಿಗಳು ತಮಗೆ ಅಗತ್ಯವಾಗಿ ಬೇಕಾದ ಪೋಷಕಾಂಶಗಳನ್ನು ಪಡೆಯಬಹುದು. ಇದರಲ್ಲಿಯೂ ಅತ್ಯಂತ ಕಡಿಮೆ ಗ್ಲಿಸಮಿಕ್‌ ಇಂಡೆಕ್ಸ್‌ ಇರುವುದರಿಂದ ಮಧಿಮೇಹಿಗಳಿಗೆ ಇದನ್ನು ತಿನ್ನುವುದರಿಂದ ಭಯವೂ ಪಡಬೇಕಾಗಿಲ್ಲ. ಈ ಎಲ್ಲಾ ಕಾರಣಗಳಿಂದ ಈ ಐದೂ ಆಹಾರವನ್ನು ಮಧುಮೇಹಿಗಳು ಚಳಿಗಾಲದಲ್ಲಿ ತಮ್ಮ ಆಹಾರಕ್ರಮದಲ್ಲಿ ಸೇರಿಸಬಹುದು. ಹೆಚ್ಚಿನ ಸಲಹೆ ಸೂಚನೆಗಳಿಗೆ ಆಹಾರಕ್ರಮಕ್ಕೆ ವೈದ್ಯರ ಸಲಹೆ ಅತ್ಯಗತ್ಯ.

ಇದನ್ನೂ ಓದಿ: Tips to Control Diabetes | BP ಕಡಿಮೆ ಮಾಡಲು ಇಲ್ಲಿದೆ ಸಿಂಪಲ್ ಟಿಪ್ಸ್

Exit mobile version