ಹಣ್ಣು ಹಂಪಲುಗಳು ನಮ್ಮ ನಿತ್ಯಾಹಾರವಾಗಿದ್ದು, ಇವುಗಳಿಂದ ದೂರವಿರುವುದು ಅಸಾಧ್ಯ. ಬಗೆಬಗೆಯ ಹಣ್ಣುಗಳು ಕಂಡಾಗ ತಿನ್ನಬೇಕೆಂದು ಅನಿಸುವುದು ಸಹಜ. ಆದರೆ, ಮಧುಮೇಹಿಗಳಿಗೆ ಹಣ್ಣುಗಳಿಂದ ದೂರವಿರಲು ಹೇಳುವುದು ಸಾಮಾನ್ಯ. ಹಣ್ಣು ತಿನ್ನದೆ ಇರುವುದಕ್ಕಿಂತಲೂ ಯಾವ ಹಣ್ಣುಗಳನ್ನು ಎಷ್ಟು ಪ್ರಮಾಣದಲ್ಲಿ ತಿನ್ನಬಹುದು (Diabetes Diet) ಎಂಬುದನ್ನು ಅರಿತುಕೊಂಡು ಮುನ್ನಡೆಯುವುದರಿಂದ ಅಪಾಯಗಳಾಗುವುದು ತಪ್ಪುತ್ತದೆ. ತಜ್ಞರ ಸಲಹೆಯಂತೆ ಕಡಿಮೆ ಗ್ಲಿಸೆಮಿಕ್ ಇಂಡೆಕ್ಸ್ ಇರುವ ಹಣ್ಣುಗಳನ್ನು ಮಧುಮೇಹಿಗಳು (diabetics) ಹಿತಮಿತವಾಗಿ ಸೇವನೆ ಮಾಡಬಹುದು. ವೈದ್ಯರ ಸಲಹೆಯೊಂದಿಗೆ ಈ ಕೆಳಗಿನ ಹಣ್ಣುಗಳನ್ನು ತಿನ್ನುವುದರಿಂದ ಸಕ್ಕರೆಯ ಮಟ್ಟ್ವನ್ನು ಸಮತೋಲನದಲ್ಲಿ (blood sugar) ಕಾಯ್ದುಕೊಳ್ಳಬಹುದು. ಬನ್ನಿ, ಸಕ್ಕರೆ ಕಾಯಿಲೆ ಇರುವವರು ಯಾವೆಲ್ಲ ಹಣ್ಣುಗಳನ್ನು ಸೇವನೆ ಮಾಡಬಹುದು ಎಂಬುದನ್ನು ನೋಡೋಣ.
1. ಚೆರ್ರಿ: ಚೆರ್ರಿ ಹಣ್ಣಿಗಳಲ್ಲಿ ಅತ್ಯಂತ ಕಡಿಮೆ ಗ್ಲಿಸೆಮಿಕ್ ಇಂಡೆಕ್ಸ್ ಇರುವುದರಿಂದ ಮಧುಮೇಹಿಗಳು ಭಯವಿಲ್ಲದೆ ಸೇವಿಸಬಹುದು. ಇದರ ಗ್ಲಿಸೆಮಿಕ್ ಇಂಡೆಕ್ಸ್ 20. ಇದರಲ್ಲಿ ಹೇರಳವಾಗಿ ವಿಟಮಿನ್ ಸಿ, ನಾರಿನಂಶ, ಪೊಟಾಶಿಯಂ ಹಾಗೂ ಆಂಟಿ ಆಕ್ಸಿಡೆಂಟ್ ಇದೆ. ಕಡಿಮೆ ಕ್ಯಾಲರಿ ಇರುವ ಈ ಹಣ್ಣು ತೂಕ ಕಡಿಮೆ ಮಾಡಲಿಚ್ಛಿಸುವ ಮಂದಿಗೂ ಒಳ್ಳೆಯದು.
2. ಒಣ ಆಪ್ರಿಕಾಟ್: ಮಧುಮೇಹಿಗಳು ಒಣ ಹಣ್ಣುಗಳನ್ನು ತಿನ್ನಬೇಕೆಂದಿದ್ದರೆ, ಒಣ ಆಪ್ರಿಕಾಟ್ ಅತ್ಯಂತ ಒಳ್ಳೆಯದು. ಇದರ ಗ್ಲಿಸೆಮಿಕ್ ಇಂಡೆಕ್ಸ್ 32. ಆಪ್ರಿಕಾಟ್ ಹಣ್ಣಿನಲ್ಲಿ ಕಬ್ಬಿಣಾಂಶ, ತಾಮ್ರ, ವಿಟಮಿನ್ ಎ ಹಾಗೂ ಇ ಇರುವುದರಿಂದ ಮಧುಮೇಹಿಗಳು ತಿನ್ನಬಹುದು.
3. ಕಿತ್ತಳೆ: ವಿಟಮಿನ್ ಸಿ ಹೇರಳವಾಗಿರುವ ಕಿತ್ತಳೆ ಹಣ್ಣೂ ಕೂಡಾ ಮಧುಮೇಹಿಗಳನ್ನು ಅಷ್ಟಾಗಿ ಬಾಧಿಸದು. ಇದರಲ್ಲಿರುವ ಗ್ಲಿಸಮಿಕ್ ಇಂಡೆಕ್ಸ್ 40. ಅಷ್ಟೇ ಅಲ್ಲ. ಇದು ರಕ್ತದೊತ್ತಡ ಸಮಸ್ಯೆಯಿದ್ದರೂ ಅದಕ್ಕೂ ಒಳ್ಳೆಯದು. ಕಡಿಮೆ ಸಕ್ಕರೆ ಹಾಗೂ ಕ್ಯಾಲರಿ ಹೊಂದಿರುವ ಈ ಹಣ್ಣನ್ನು ಮಧುಮೇಹಿಗಳು ವೈದ್ಯರ ಸಲಹೆಯನ್ನು ಕೇಳಿ ತಿನ್ನಬಹುದು.
4. ಪೀರ್ ಹಣ್ಣು: ಪೀರ್ ಹಣ್ಣಿನ ಗ್ಲಿಸೆಮಿಕ್ ಇಂಡೆಕ್ಸ್ ೩೮. ಅತ್ಯಂತ ಹೆಚ್ಚು ನಾರಿನಂಶ ಇರುವುದರಿಂದ ಈ ಹಣ್ಣು ತಿನ್ನುವ ಮೂಲಕ ತೂಕವನ್ನು ಸಮತೋಲನದಲ್ಲಿಯೂ ಇರಿಸಿಕೊಳ್ಳಬಹುದು. ವಿಟಮಿನ್ ಸಿ, ಕೆ, ಪೊಟಾಶಿಯಂ, ತಾಮ್ರ ಹಾಗೂ ಇತರ ಪೋಷಕಾಂಶಗಳನ್ನೂ ಹೇರಳವಾಗಿ ಹೊಂದಿರುವ ಈ ಹಣ್ಣನ್ನು ಸಿಪ್ಪೆ ಸಮೇತ ತಿನ್ನುವ ಮೂಲಕ ಈ ಹಣ್ಣಿನ ಆರೋಗ್ಯಕರ ಲಾಭಗಳನ್ನು ಪೂರ್ಣವಾಗಿ ಪಡೆಯಬಹುದು.
5. ಸೇಬು: ದಿನಕ್ಕೊಂದು ಸೇಬು ತಿನ್ನುವುದು ವೈದ್ಯರಿಂದ ದೂರವಿರಿಸುತ್ತದೆ ಎಂಬ ಗಾದೆಯ ಮಾತಿನಂತೆ, ಸೇಬು ತಿನ್ನುವ ಬಗೆಗೆ ಮಧುಮೇಹಿಗಳು ಗಾಬರಿಪಡಬೇಕಿಲ್ಲ. ಸೇಬಿನಲ್ಲಿ ೪೦ ಗ್ಲಿಸೆಮಿಕ್ ಇಂಡೆಕ್ಸ್ ಇದ್ದು, ಮಧುಮೇಹಿಗಳು ಹಿತಮಿತವಾಗಿ ತಿನ್ನಬಹುದಾಗಿದೆ. ಇದರಲ್ಲಿ ಹೆಚ್ಚು ನಾರಿನಂಶವಿದ್ದು, ಜೀರ್ಣಕ್ರಿಯೆಗೂ ಸಹಾಯ ಮಾಡುತ್ತದೆ. ಪಚನಶಕ್ತಿಯನ್ನು ಚುರುಕುಗೊಳಿಸುತ್ತದೆ.
6. ಪೇರಳೆ: ಪೇರಳೆಯಲ್ಲಿ ವಿಟಮಿನ್ ಸಿ ಹೆಚ್ಚಿದ್ದು ನಾರಿನಂಶದಿಂದಲೂ ಸಮೃದ್ಧವಾಗಿದೆ. ಪೊಟಾಶಿಯಂ ಹೆಚ್ಚಿದ್ದು ಕಡಿಮೆ ಕ್ಯಾಲರಿ6ಯಿದ್ದು, ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ. ತೂಕ ಇಳಿಸುವ ಮಂದಿಯೂ ತಿನ್ನಬಹುದಾದ ಹಣ್ಣು ಇದಾಗಿದ್ದು ಮಧುಮೇಹಿಗಳು ಹಿತಮಿತವಾಗಿ ತಿನ್ನಬಹುದು.
7. ಪ್ಲಮ್: ಪ್ಲಮ್ ಹಣ್ಣೂ ಕೂಡಾ ಮಧುಮೇಹಿಗಳು ಸೇವಿಸಬಹುದಾಗಿದ್ದು ಕಡಿಮೆ ಗ್ಲಿಸೆಮಿಕ್ ಇಂಡೆಕ್ಸ್ ಹೊಂದಿದೆ. ಅಷ್ಟೇ ಅಲ್ಲ, ದೇಹದಲ್ಲಿರುವ ಸಕ್ಕರೆಯ ಅಂಶದ ಸಮತೋಲನ ಕಾಯ್ದುಕೊಳ್ಳುವಲ್ಲಿ ಇದು ನೆರವಾಗುತ್ತದೆ.
8. ಪೀಚ್: ಗ್ಲಿಸೆಮಿಕ್ ಇಂಡೆಕ್ಸ್ 42 ಆಗಿರುವ ಪೀಚ್ ಕೂಡಾ ಮಧುಮೇಹಿಗಳು ಸೇವಿಸಬಹುದಾದ ಹಣ್ಣು. ಜೀರ್ಣಕ್ರಿಯೆಗೆ ಸಹಾಯ ಮಾಡುವ ಹೆಚ್ಚು ಆಂಟಿ ಆಕ್ಸಿಡೆಂಟ್‌ಗಳಿರುವ ಹಣ್ಣು ಇದಾಗಿದೆ.
9. ಸ್ಟ್ರಾಬೆರಿ: ಸ್ಟ್ರಾಬೆರಿಯೂ ಕೂಡಾ ವಿಟಮಿನ್ ಸಿಯಿಂದ ಸಮೃದ್ಧವಾಗಿರುವ ಹಣ್ಣಾಗಿದ್ದು ಇದರ ಗ್ಲಿಸೆಮಿಕ್ ಇಂಡೆಕ್ಸ್ 41. ರೋಗ ನಿರೋಧಕತೆ ಹೆಚ್ಚಿಸುವಲ್ಲಿ ಇದು ಸಹಾಯ ಮಾಡುತ್ತದೆ. ಕಡಿಮೆ ಕ್ಯಾಲರಿಯ, ಹೆಚ್ಚು ನಾರಿನಂಶವಿರುವ ಹಲವು ಬಗೆಯ ಖನಿಜಾಂಶಗಳಿಂದ ಕೂಡಿರುವ ಹಣ್ಣು ಇದಾಗಿದೆ. ಈ ಎಲ್ಲ ಹಣ್ಣುಗಳನ್ನು ಸೇವಿಸುವ ಮೊದಲು ವೈದ್ಯರ ಸಲಹೆ ಅವಶ್ಯವಾಗಿ ಪಡೆದುಕೊಳ್ಳಿ.
ಇದನ್ನೂ ಓದಿ: Diabetes Diet | ಮಧುಮೇಹದ ನಿಯಂತ್ರಣ ಹೇಗೆ? ಇಲ್ಲಿದೆ ಸರಳ ಸೂತ್ರ