Site icon Vistara News

World Hearing Day: ಹೇಳಿದ್ದು ಕೇಳಿಸ್ತಾ… ಇವತ್ತು ವಿಶ್ವ ಶ್ರವಣ ದಿನ!

World Hearing Day

ಕಿವಿಯಲ್ಲಿ ಏನೋ ಆಗುತ್ತಿದೆ ಎನ್ನುತ್ತಾ ಕಡ್ಡಿ ಹಾಕಿ ಕುಕ್ಕುವುದು, ಬೆಚ್ಚಗಿನ ಎಣ್ಣೆಗಳನ್ನು ಬಿಡುವುದು, ಏನೇನೊ ಮನೆಮದ್ದು ಮಾಡುವುದು ಸಾಮಾನ್ಯ. ʻಕಿವಿ ತಾನೆ, ಹೇಗಾದರೂ ಸರಿ!ʼ ಎನ್ನುವ ಬೀಡುಬೀಸಾದ ಧೋರಣೆ ಹೆಚ್ಚಿನವರಲ್ಲಿದೆ. ಆದರೆ ದೇಹದ ಉಳಿದೆಲ್ಲ ಅಂಗಗಳ ಕಾಳಜಿ ಮಾಡಿದಂತೆಯೇ ನಮ್ಮ ಶ್ರವಣೇಂದ್ರಿಯಗಳ ಕಾಳಜಿಯನ್ನೂ ಮಾಡಬೇಕಾದ್ದು ಅಗತ್ಯ. ನಮ್ಮ ಕಿವಿ ಮತ್ತು ಕೇಳುವ ಸಾಧ್ಯತೆಯನ್ನು ಜೋಪಾನ ಮಾಡುವ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಮಾರ್ಚ್‌ 3ರಂದು ವಿಶ್ವ ಶ್ರವಣ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷದ ಘೋಷವಾಕ್ಯ- ಕಿವಿ ಮತ್ತು ಕೇಳುವ ಬಗೆಗಿನ (World Hearing Day) ಕಾಳಜಿ ಎಲ್ಲರಿಗಾಗಿʼ .

ಬಾಲ್ಯದಲ್ಲಿ

ಮಕ್ಕಳಿಗೆ ಬಾಲ್ಯದಲ್ಲೇ ಶ್ರವಣ ದೋಷವನ್ನು ಪತ್ತೆ ಮಾಡಿ, ಚಿಕಿತ್ಸೆ ನೀಡಿದರೆ ಅವರ ಭಾಷೆ ಮತ್ತು ಮಾತು ಕುಂಠಿತವಾಗದಂತೆ ಅಭಿವೃದ್ಧಿ ಹೊಂದುವಂತೆ ಮಾಡಬಹುದು ಎನ್ನುತ್ತಾರೆ ತಜ್ಞರು. ಕೆಲವೊಮ್ಮೆ ಮಕ್ಕಳಿಗೆ ಹುಟ್ಟುವಾಗಲೇ ಶ್ರವಣ ದೋಷ ಬಂದಿರಬಹುದು. ಹಾಗಲ್ಲದೆ, ಯಾವುದಾದರೂ ಸೋಂಕಿನಿಂದಲೂ ಈ ದೋಷ ಕಾಣಿಸಿಕೊಳ್ಳುವ ಸಾಧ್ಯತೆಯಿದೆ; ಅಥವಾ ಕಿವಿಯ ಸಂರಚನೆಯಲ್ಲಿ ಸಮಸ್ಯೆಗಳಿದ್ದರೆ ಅದರಿಂದಲೂ ಕೇಳುವ ಸಾಮರ್ಥ್ಯ ಕುಂಠಿತಗೊಳ್ಳಬಹುದು. ಇದನ್ನು ಶೀಘ್ರ ಪತ್ತೆ ಮಾಡಿ ಚಿಕಿತ್ಸೆ ಕೊಡಿಸಿದರೆ, ಎಳೆಯರ ಭವಿಷ್ಯ ಮಸುಕಾಗುವುದಿಲ್ಲ. ಕೆಲವೊಂದು ದೋಷಗಳನ್ನು ಭ್ರೂಣಾವಸ್ಥೆಯಲ್ಲೂ ಪತ್ತೆ ಮಾಡಬಹುದು ಎನ್ನುತ್ತಾರೆ ತಜ್ಞರು.

ಇತರ ಕಾರಣಗಳು

ಕೆಲವು ತೀವ್ರ ತೆರನಾದ ಸೋಂಕುಗಳು, ನೆಗಡಿ-ಕೆಮ್ಮಿನ ನಂತರ ಕಿವಿಯಲ್ಲಿ ಕಾಣಿಸಿಕೊಳ್ಳುವ ವಿಪರೀತ ನೋವಿಗೆ ಚಿಕಿತ್ಸೆ ದೊರೆಯದಿದ್ದರೆ, ಬಿಪಿ-ಮಧುಮೇಹದಂಥ ತೊಂದರೆಗಳು, ಗಾಯಗಳು, ಥೈರಾಯ್ಡ್‌ ಸಮಸ್ಯೆಗಳಿಂದಲೂ ಕೇಳುವ ಸಾಮರ್ಥ್ಯ ಕಡಿಮೆಯಾಗಬಹುದು. ಸದಾ ಕಾಲ‌ ದೊಡ್ಡ ದನಿಯಲ್ಲಿ ಇಯರ್‌ಫೋನ್ ಬಳಸುವುದು, ಗಿರಣಿ ಅಥವಾ ಕಾರ್ಖಾನೆಗಳ ದೊಡ್ಡ ಶಬ್ದಕ್ಕೆ ಸದಾ ಒಡ್ಡಿಕೊಳ್ಳುವುದು, ಕಿವಿ ಸ್ವಚ್ಛತೆಯ ನೆವದಲ್ಲಿ ಪೊರೆಗೆ ಹಾನಿ ಮಾಡಿಕೊಳ್ಳುವುದು- ಇವೆಲ್ಲವೂ ಶ್ರವಣೇಂದ್ರಿಯಕ್ಕೆ ಹಾನಿ ಮಾಡಬಲ್ಲವು. ಇನ್ನು ಸಿಗರೇಟ್‌ ಚಟವಿದ್ದರಂತೂ ಕಿವಿಗೆ ಅಪಾಯ ಕಟ್ಟಿಟ್ಟಿದ್ದು.

ಏನು ಮಾಡಬಹುದು?

ಬಾಲ್ಯದಲ್ಲಿ ಅಗತ್ಯವಾದ ಲಸಿಕೆಗಳನ್ನೆಲ್ಲ ಮಕ್ಕಳಿಗೆ ತಪ್ಪದೆ ಹಾಕಿಸುವುದು ಮುಖ್ಯ. ಎಂಎಂಆರ್‌, ನ್ಯುಮೊಕೋಕಲ್‌ನಂಥ ಚುಚ್ಚುಮದ್ದುಗಳು ಕಿವಿಗೆ ಆಯಾ ಸೋಂಕಿನಿಂದ ಆಗಬಹುದಾದ ಹಾನಿಯನ್ನು ತಪ್ಪಿಸಬಲ್ಲವು. ಕಣ್ಣು, ಕಿವಿ ಅಥವಾ ಮೂಗಿನಲ್ಲಿ ಯಾವುದೇ ಸೋಂಕಿದ್ದರೆ, ಅದನ್ನು ಆದಷ್ಟೂ ಶೀಘ್ರ ವೈದ್ಯರಲ್ಲಿ ತೋರಿಸಿ. ಇಂಥ ಸೋಂಕುಗಳು ನೇರವಾಗಿ ಕೇಳುವ ಸಾಧ್ಯತೆಯ ಮೇಲೆ ಪರಿಣಾಮ ಬೀರುತ್ತವೆ.

ಸದಾ ಇಯರ್‌ಫೋನ್‌ ಬಳಸದಿರಿ. ಅದನ್ನು ಬಳಸುವುದು ಅನಿವಾರ್ಯವೇ ಆದರೆ, ಆಗಾಗ ಬಿಡುವು ನೀಡಿ. ತಾಸಿಗೊಮ್ಮೆ ಇಯರ್‌ ಫೋನ್‌ ತೆಗೆದು ಕೆಲವು ನಿಮಿಷಗಳವರೆಗೆ ಕಿವಿಗೆ ವಿಶ್ರಾಂತಿ ನೀಡಿ. ಕೆಲಸ ಮಾಡುವ ಸ್ಥಳದಲ್ಲಿ ಸಿಕ್ಕಾಪಟ್ಟೆ ಗದ್ದಲ ಇದ್ದರೆ, ಅಲ್ಲಿಂದ ಹೊರಗೆ ಹೋದ ಮೇಲೆ ಮತ್ತೆ ಇಯರ್‌ಫೋನ್‌ ಬಳಸಬೇಡಿ. ಪಾಪದ ಕಿವಿಯ ಮೇಲೆ ಕರುಣೆ ಇರಲಿ!

ನಿಯಮಿತವಾಗಿ ವ್ಯಾಯಾಮ ಮಾಡುವುದು ಶ್ರವಣೇಂದ್ರಿಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರಬಲ್ಲದು. ವ್ಯಾಯಾಮದಿಂದ ದೇಹದೆಲ್ಲೆಡೆ ರಕ್ತ ಸಂಚಲನೆ ಸರಾಗವಾಗಿ, ದೇಹದೆಲ್ಲೆಡೆ ಆಮ್ಲಜನಕದ ಮಟ್ಟ ಹೆಚ್ಚಿದಂತೆ ಕಿವಿಗೂ ಆಗುತ್ತದೆ. ಅದರಲ್ಲೂ ಹೆಚ್ಚಿನ ಗದ್ದಲವಿಲ್ಲದೆ ಮಾಡುವ ಯೋಗ-ಧ್ಯಾನದಂಥವು ಕಿವಿಯ ಆರೋಗ್ಯಕ್ಕೂ ಒಳ್ಳೆಯದು.

ಹಾಗೆಯೇ, ಸಿಕ್ಕಿದ ಯಾವುದೋ ಡ್ರಾಪ್‌ ಕಿವಿಗೆ ಹಾಕುವುದು ಅಥವಾ ಕಡ್ಡಿ, ಪೆನ್ನು, ಪೆನ್ಸಿಲ್‌ನಂಥ ಏನನ್ನೂ ಕಿವಿಯೊಳಗೆ ಹಾಕಿ ಶುಚಿ ಮಾಡುವ ಸಾಹಸ ಸಲ್ಲದು. ಮಧುಮೇಹ, ರಕ್ತದೊತ್ತಡ ಮತ್ತು ಹೃದ್ರೋಗಗಳು ಸಹ ಕಿವಿಯ ಮೇಲೆ ಘೋರ ಪರಿಣಾಮ ಬೀರಬಲ್ಲವು. ಕಿವಿಯ ಸಮಸ್ಯೆಗಳನ್ನು ನಿರ್ಲಕ್ಷ್ಯ ಮಾಡಬೇಡಿ. ಪ್ರಾರಂಭದಲ್ಲೇ ಅದನ್ನು ಪತ್ತೆ ಮಾಡುವುದರಿಂದ ಕಿವುಡುತನವನ್ನು ತಡೆಗಟ್ಟಿ, ಬದುಕನ್ನು ಕೇಳಿ ಖುಷಿ ಪಡಬಹುದು.

ಇದನ್ನೂ ಓದಿ: Stress can cause neck pain: ಕುತ್ತಿಗೆ ನೋವೇ?‌ ಮಾನಸಿಕ ಒತ್ತಡವೂ ಕಾರಣವಾಗಿರಬಹುದು!

Exit mobile version