ಐಸ್‌ಕ್ರೀಂ ಯಾರಿಗಿಷ್ಟವಿಲ್ಲ ಹೇಳಿ? ಬೇಸಿಗೆ ಬಂದ ತಕ್ಷಣ ಎಲ್ಲರಿಗೂ ನೆನಪಾಗುವುದು ಐಸ್‌ಕ್ರೀಂ. ಐಸ್‌ಕ್ರೀಂ ಅಂಗಡಿಗಳಲ್ಲಿ ಜನವೋ ಜನ. ಮಕ್ಕಳಾದಿಯಾಗಿ ಮುದುಕರವರೆಗೆ ಐಸ್‌ಕ್ರೀಂ ಇಷ್ಟಪಡದವರು ಯಾರೂ ಇಲ್ಲ. ಬಗೆಬಗೆಯ ರುಚಿಯ, ಬಗೆಬಗೆಯ ಬಣ್ಣಗಳ, ಥರಹೇವಾರಿ ನಮೂನೆಯ ನಾನಾ ಸ್ವರೂಪಗಳಲ್ಲಿ ಇಂದು ಐಸ್‌ಕ್ರೀಂ ಲಭ್ಯವಿವೆ. ಬಾಯಲ್ಲಿಟ್ಟರೆ ಕರಗುವ, ತಂಪಾದ ಅನುಭವ ನೀಡುವ ಐಸ್‌ಕ್ರೀಂ ನಿಜವಾಗಿಯೂ ದೇಹಕ್ಕೆ ತಂಪು ನೀಡುವ ಆಹಾರವೇ? ʻಐಸ್‌ಕ್ರೀಂ ತಂಪು, ಬೇಸಿಗೆಗೆ ಇದು ಪರ್ಫೆಕ್ಟ್ʼ ಎಂದು ಅಂದುಕೊಳ್ಳುವ ಎಲ್ಲರಿಗೂ ಇಲ್ಲಿರುವ ಶಾಕಿಂಗ್ ಸತ್ಯವೇ. ಯಾಕೆಂದರೆ, ಐಸ್‌ಕ್ರೀಂ ಬಾಯಲ್ಲಿಟ್ಟರೆ, ತಂಪು ಅನುಭವ ನೀಡಬಹುದಾದರೂ, ನಮ್ಮ ದೇಹಕ್ಕೆ ಇದು ತಂಪು ಖಂಡಿತಾ ಅಲ್ಲ. ಬದಲಾಗಿ ನಮ್ಮ ದೇಹದ ಉಷ್ಣತೆಯನ್ನು ಹೆಚ್ಚು ಮಾಡುತ್ತವೆ ಎನ್ನುತ್ತವೆ (Eating Ice Cream In Summer) ಸಂಶೋಧನೆಗಳು!
ಕೊಬ್ಬಿನ ಅಂಶ
ಸಂಶೋಧನೆಗಳ ಪ್ರಕಾರ, ಐಸ್‌ಕ್ರೀಂನಲ್ಲಿ ಶೇ. 10ಕ್ಕೂ ಹೆಚ್ಚು ಹಾಲಿನ ಕೊಬ್ಬಿನ ಅಂಶವಿದೆ. ಜೊತೆಗೆ ಸಕ್ಕರೆಯೂ ಬೇಕಾದಷ್ಟಿದೆ. ಈ ಕೊಬ್ಬು ದೇಹಕ್ಕೆ ಸೇರಿ ಕರಗುವ ಸಮಯದಲ್ಲಿ ದು ಶಾಖವನ್ನು ಬಿಡುಗಡೆ ಮಾಡುತ್ತದೆ. ಆಹಾರಕ್ಕೆ ಸಂಬಂಧಿಸಿದ ಉಷ್ಣತೆ ಇದಾಗಿದ್ದು ಇದನ್ನು ಡಯಟ್ ಇನ್‌ಡ್ಯೂಸ್ಡ್ ಥರ್ಮೋಜೆನೆಸಿಸ್ ಎನ್ನುತ್ತಾರೆ.
ಪೋಷಕಾಂಶಗಳ ಪೈಕಿ ಕೊಬ್ಬಿನಲ್ಲಿ ಎಲ್ಲಕ್ಕಿಂತ ಹೆಚ್ಚು ಶಕ್ತಿ ಇರುವುದರಿಂದ ಇದಕ್ಕೆ ಎಲ್ಲಕ್ಕಿಂತ ಹೆಚ್ಚು ಶಾಖ ಬಿಡುಗಡೆ ಮಾಡುವ ಸಾಮರ್ಥ್ಯವೂ ಇರುತ್ತದೆ. ಆರಂಭದಲ್ಲಿ ಐಸ್‌ಕ್ರೀಂ ತಿನ್ನುವ ಸಂದರ್ಭದಲ್ಲಿ ನಾಲಿಗೆಗೆ ಹಾಗೂ, ಗಂಟಲಲ್ಲಿ ಇಳಿಯುವಾಗ ತಂಪೆನಿಸಿದರೂ ನಂತರ ದೇಹದೊಳಕ್ಕೆ ಸೇರಿದ ಮೇಲೆ, ನಿಮಗೆ ಇನ್ನಷ್ಟು ಸೆಖೆಯಾಗುತ್ತದೆ. ಕೇವಲ ನಿಮ್ಮ ಇಂದ್ರಿಯ ಮಾತ್ರ ತಂಪನ್ನು ಗುರುತಿಸುತ್ತದೆ. ಆದರೆ, ಈ ಐಸ್‌ಕ್ರೀಂ ದೇಹದೊಳಗೆ ಕರಗಲು ಆರಂಭಿಸಿದ ತಕ್ಷಣ ದೇಹದಲ್ಲಿ ಶಾಖ ಬಿಡುಗಡೆಯಾಗುತ್ತದೆ. ಹೀಗಾಘಿ ಐಸ್‌ಕ್ರೀಂ ತಿಂದು ಸ್ವಲ್ಪ ಹೊತ್ತಿನ ನಂತರ ದೇಹ ತಂಪಾಗುವ ಬದಲು, ಸಾಮಾನ್ಯಕ್ಕಿಂತ ನಿಮಗೆ ಹೆಚ್ಚೇ ಸೆಖೆಯಾಗಲು ಆರಂಭವಾಗುತ್ತದೆ.
ಐಸ್ ಕ್ರೀಮ್‌ಗೆ ಮಾತ್ರ ಸೀಮಿತವಲ್ಲ
ಇದು ಕೇವಲ ಐಸ್‌ಕ್ರೀಂಗೆ ಮಾತ್ರ ಸೀಮಿತವಾಗಿಲ್ಲ. ಎಲ್ಲ ಬಗೆಯ ತಂಪು ಆಹಾರಗಳಿಗೂ ಅನ್ವಯಿಸುತ್ತದೆ. ಐಸ್ಡ್ ಕಾಫಿ, ಐಸ್ಡ್ ಟೀ, ಐಸ್ ಕ್ಯಾಂಡಿಗಳು ಸೇರಿದಂತೆ ಬಹುತೇಕ ಎಲ್ಲ ಕೂಲ್ ಕೂಲ್ ಆಹಾರಗಳು ನಿಮ್ಮ ದೇಹದಲ್ಲಿ ವಿರುದ್ಧವಾದ ಅನುಭವವನ್ನೇ ನೀಡಬಹುದು. ಜಾಹಿರಾತುಗಳಲ್ಲಿ ಬರುವ ಕೂಲಿಂಗ್ ಡ್ರಿಂಕ್‌ಗಳೂ ಅಷ್ಟೇ, ಕೇವಲ ನಿಮ್ಮ ನಾಲಿಗೆಯನ್ನಷ್ಟೇ ಒಮ್ಮೆ ಕೂಲ್ ಮಾಡುತ್ತದೆ. ದೇಹದ ಉಷ್ಣತೆಯನ್ನು ಹೆಚ್ಚಿಸುತ್ತದೆ. ಹಾಗಾಗಿ, ಐಸ್‌ಕ್ರೀಂ ಅನ್ನು ಸುಮ್ಮನೆ ಯಾಔಆಗಲಾದರೊಮ್ಮೆ ಚಪ್ಪರಿಸಬಹುದಷ್ಟೇ ಹೊರತು ಅದು ಬೇಸಗೆಯ ನಿತ್ಯದ ಆಹಾರವಾಗಲಾರದು. ಬದಲಾಗಿ, ಪ್ರಕೃತಿಯೇ ನಮ್ಮ ದೇಹಪ್ರಕೃತಿಗೆ ಅನುಗುಣವಾಗಿ ನೀಡಿದ ಬೇಸಿಗೆ ತಂಪು ಹಣ್ಣುಗಳನ್ನು ಸೇವಿಸುವುದು ಎಲ್ಲಕ್ಕಿಂತ ಒಳ್ಳೆಯದು.
ಬೆವರಲು ಬಿಡಿ
ಬೇಸಿಗೆಯಲ್ಲಿ ಬೆವರಿದರೆ ಒಳ್ಳೆಯದು. ಬೆವರುವುದು ಯಾರಿಗೂ ಇಷ್ಟವಾಗದಿದ್ದರೂ, ಅದು ನಮ್ಮ ದೇಹವನ್ನು ತಂಪಾಗಿಡುತ್ತದೆ. ದೇಹದ ಉಷ್ಣತೆ ಏರಿದಾಗ, ಬೆವರು ಸುರಿದರೆ, ಮತ್ತೆ ದೇಹ ಕೊಂಚ ಉಷ್ಣತೆಯನ್ನು ತಗ್ಗಿಸುತ್ತದೆ. ಹಾಗಾಗಿ, ಉಷ್ಣತೆ ಏರಿ, ಆ ಮೂಲಕ ಬೆವರಿದರೆ, ಸಂತೋಷ ಪಡಿ. ನಿಮ್ಮ ದೇಹ ತಣ್ಣಗಡಲು ಇದು ನೈಸರ್ಗಿಕವಾಗಿ ಸಹಾಯ ಮಾಡುತ್ತದೆ.
ಇದನ್ನೂ ಓದಿ: Sleep In The Winter: ಚಳಿಗಾಲದಲ್ಲಿ ನಿದ್ದೆ ಮುಗಿಯುವುದೇ ಇಲ್ಲವೇಕೆ?