Site icon Vistara News

Diet Awareness: ಖಯಾಲಿ ಡಯಟ್‌ಗಳು ನಮಗೆ ಅಗತ್ಯವೇ?

Diet Awareness

ತೂಕ ಇಳಿಸುವ ಉತ್ಸಾಹಿಗಳಲ್ಲಿ ನಾನಾ ರೀತಿಯ ಡಯಟ್‌ ಯೋಜನೆಗಳ ಬಗ್ಗೆ ಮಾತು ಸಾಮಾನ್ಯ. ಅಲ್ಕನೈನ್‌ ಡಯಟ್‌, ಮೆಡಿಟರೇನಿಯನ್‌ ಡಯಟ್‌, ಅಟ್‌ಕಿನ್ಸ್‌ ಡಯಟ್‌, ಕೀಟೊ ಡಯಟ್‌, ಮಧ್ಯಂತರ ಉಪವಾಸ ಇತ್ಯಾದಿ ಬಹಳಷ್ಟು ಆಹಾರ ಪದ್ಧತಿಗಳ ಹೆಸರು ಕೇಳುವುದು ಇದ್ದಿದ್ದೇ. ಇವುಗಳ ಹೆಸರು ಏನೇ ಆದರೂ ಉದ್ದೇಶ ಒಂದೇ- ಎಷ್ಟು ತ್ವರಿತವಾಗಿ ತೂಕ ಇಳಿಸುತ್ತವೆ ಇವು ಎಂಬುದು! ಇಂಥ ಎಲ್ಲಾ ಡಯಟ್‌ಗಳನ್ನೂ ಒಟ್ಟಾರೆಯಾಗಿ ಖಯಾಲಿ ಡಯಟ್‌ (Fad diet) ಎನ್ನಲಾಗುತ್ತದೆ. ಸಾಮಾಜಿಕ ಮಾಧ್ಯಮಗಳಲ್ಲಿ ಈ ಬಗ್ಗೆ ಟಾಂಟಾಂ ಮಾಡುವುದು ಒಂದೆಡೆಯಾದರೆ, ಸೆಲೆಬ್ರಿಟಿಗಳ ಅನುಮೋದನೆಗಳು ಇನ್ನೊಂದೆಡೆ. ಇವೆಲ್ಲವುಗಳ ನಡುವೆ ಇವುಗಳನ್ನು ನಾವೂ ಅನುಸರಿಸಬೇಕೆ ಎಂಬ ಗೊಂದಲ ಮೂಡಿದರೆ ಅಚ್ಚರಿಯಿಲ್ಲ.

ಮೂಲತಃ ಈ ಯಾವುದೇ ಖಯಾಲಿ ಆಹಾರ ಕ್ರಮಗಳು ತೂಕ ಇಳಿಸುವ ಶಾರ್ಟ್‌ಕಟ್‌ ಇದ್ದಂತೆ. ಅವುಗಳ ‍ಪ್ರಯೋಜನ, ಪರಿಣಾಮಗಳು ಏನೇ ಇದ್ದರೂ, ದೂರಗಾಮಿಯಾಗಿ ದೇಹದ ಮೇಲೆ ಏನೆಲ್ಲಾ ಆಟಾಟೋಪ ನಡೆಸಬಹುದು ಎಂಬ ಬಗ್ಗೆ ಸ್ಪಷ್ಟವಾದ ಅಧ್ಯಯನಗಳು ಲಭ್ಯವಿಲ್ಲ. ಇಳಿಸಿದಂಥ ತೂಕ ಎಷ್ಟು ದಿನ ಸುಸ್ಥಿರವಾಗಿ ಉಳಿಯುತ್ತದೆ ಎಂಬುದಕ್ಕೂ ಸೂಕ್ತ ಆಧಾರಗಳಿಲ್ಲ. ಹೆಚ್ಚಿನ ಬಾರಿ, ಎಷ್ಟು ಕ್ಷಿಪ್ರವಾಗಿ ತೂಕ ಇಳಿಯುತ್ತದೋ ಅದಕ್ಕಿಂತ ತ್ವರಿತವಾಗಿ ತೂಕ ಹೆಚ್ಚಾಗಿರುತ್ತದೆ. ಈ ಮಾತು ಖಂಡಿತಾಗಿ ನಿರಾಧಾರವಲ್ಲ!

ಎಂಥಾ ಆಹಾರ ಕ್ರಮಗಳಿವು?

ಹೆಸರು ಏನೇ ಇದ್ದರೂ, ಈ ಆಹಾರ ಕ್ರಮಗಳ ಸ್ವರೂಪದಲ್ಲಿ ಹೆಚ್ಚಿನ ವ್ಯತ್ಯಾಸವಿಲ್ಲ. ಅಂದರೆ, ಪ್ರಯೋಗಿಕವಾಗಿ ಬೇರೆಬೇರೆ ಹೆಸರುಗಳಲ್ಲಿ ಉಪವಾಸವಿದ್ದು, ತಿಂದಾಗಲೂ ಅರೆ ಹೊಟ್ಟೆಯೇ ತಿನ್ನುವುದು! ಇದರಿಂದ ತೂಕ ದಿಢೀರ್ ಇಳಿಯುವುದೇನೋ ಹೌದು. ಹಾಗೆಂದು ಜೀವನವಿಡೀ ಅರೆಹೊಟ್ಟೆಯಲ್ಲೇ ಇರಲಾಗುತ್ತದೆಯೇ? ಇರುವುದು ಸರಿಯೇ? ದೇಹಕ್ಕೆ ಅಗತ್ಯವಾದ ಸತ್ವಗಳು ದೊರೆಯದೆ ಹೋದಾಗ, ಮುಂದೆ ಸಿಕ್ಕಿದ ಊಟವನ್ನು ಹೊಟ್ಟೆ ಬಿರಿ ತಿನ್ನುವ ಅಥವಾ ಕೈಗೆ ಸಿಕ್ಕಿದ ಕುರುಕಲು ತಿನ್ನುವ ಸಾಧ್ಯತೆಗಳೇ ಹೆಚ್ಚು. ಇದರಿಂದ ಅಗತ್ಯ ಕ್ಯಾಲರಿಗಳು ನಷ್ಟವಾಗಿ ಬೇಡದ ಕಸ ಹೊಟ್ಟೆ ಸೇರಬಹುದು ಅಥವಾ ಅನಗತ್ಯ ಎಂಬಷ್ಟು ಕ್ಯಾಲರಿ ಹೊಟ್ಟೆ ಸೇರಬಹುದು. ಈ ಪುರುಷಾರ್ಥಕ್ಕೆ ಡಯಟ್‌ ಬೇಕೆ? ಚರ್ಮ, ಉಗುರು, ಕೂದಲುಗಳನ್ನು ನೋಡಿದಾಗಲೇ ನಮ್ಮ ಊಟ ಎಷ್ಟು ಸಂತುಲಿತವಾಗಿದೆ ಎಂಬುದು ಅರ್ಥವಾಗುತ್ತದೆ.

ಪಿಷ್ಟ ಅಥವಾ ಕಾರ್ಬ್‌ ನಮ್ಮ ದೇಹದ ಶತ್ರುಗಳು ಎಂಬಂತೆ ಭ್ರಮೆ ಹುಟ್ಟಿಸುವ ಡಯಟ್‌ಗಳೂ ಇವೆ. ನಿಜಕ್ಕೂ ಹಾಗಲ್ಲ. ದೇಹಕ್ಕೆ ಸಾಕಷ್ಟು ಕಾರ್ಬ್‌ ದೊರೆಯದಿದ್ದರೆ ಆಯಾಸ, ಸುಸ್ತು, ತಲೆನೋವು, ಇನ್ನಷ್ಟು ತಿನ್ನುವ ಬಯಕೆ- ಹೀಗೆಲ್ಲ ಪ್ರಾರಂಭವಾಗುತ್ತದೆ. ಇನ್ನು ಪ್ರೊಟೀನ್‌ ಕಡಿಮೆಯಾದರೆ ಸಮಸ್ಯೆ ಕಟ್ಟಿಟ್ಟ ಬುತ್ತಿ. ನಾರು, ಕೊಬ್ಬು, ಖನಿಜಗಳು- ಎಲ್ಲವಕ್ಕೂ ಅದರದರದ್ದೇ ಆದ ನಿಶ್ಚಿತ ಪಾತ್ರಗಳಿವೆ ನಮ್ಮ ಆರೋಗ್ಯ ಕಾಪಾಡುವಲ್ಲಿ. ಯಾವುದೂ ದೇಹಕ್ಕೆ ಬೇಡದಿರುವುದಲ್ಲ.

ಪ್ರತಿಯೊಬ್ಬರ ದೇಹವೂ ವಿಭಿನ್ನ. ಹಾಗಾಗಿ ಒಬ್ಬೊಬ್ಬರ ಅಗತ್ಯಗಳೂ ಭಿನ್ನವಾಗಿಯೇ ಇರುತ್ತವೆ. ನಮಗೇನು ಬೇಕು ಎಂಬುದು ಮೊದಲು ನಮಗೆ ಅರ್ಥವಾಗಬೇಕು. ಇದಕ್ಕೆ ನೆರವು ಬೇಕಾದರೆ ವೈದ್ಯರು, ಆಹಾರ ತಜ್ಞರು, ಫಿಟ್‌ನೆಟ್‌ ಟ್ರೇನರ್‌ಗಳಿದ್ದಾರೆ. ಅವರಲ್ಲಿ ಸಲಹೆ ಪಡೆಯಿರಿ. ಶಾರ್ಟ್‌ಕಟ್‌ಗಳು ನಮ್ಮನ್ನು ಆರೋಗ್ಯದ ಹಾದಿಯಲ್ಲಿ ಹಿಂದಕ್ಕೆಳೆಯುತ್ತವೆಯೇ ಹೊರತು ಮುಂದಕ್ಕಲ್ಲ. ವಾಸ್ತವಕ್ಕೆ ಹತ್ತಿರವಾದ ಗುರಿಗಳನ್ನು ಇರಿಸಿಕೊಂಡರೆ ಉತ್ತಮ ಆರೋಗ್ಯ ಪಡೆಯುವುದು ಕಷ್ಟವಲ್ಲ.

ಇದನ್ನೂ ಓದಿ: Dental Health: ಹಲ್ಲುಗಳ ಆರೋಗ್ಯ ರಕ್ಷಣೆಗಾಗಿ ಇಲ್ಲಿವೆ ಕೆಲವು ಸಲಹೆಗಳು

Exit mobile version