Site icon Vistara News

Diet To Prevent Period Cramps: ಮುಟ್ಟಿನ ದಿನಗಳ ಹೊಟ್ಟೆ ನೋವಿಗೆ ಹೀಗಿದೆ ಪರಿಹಾರ

Girl lying on the bed, period, stomach pain, menstrual cycle

ತಿಂಗಳ ಆ ಮೂರು ದಿನಗಳನ್ನು ಕಳೆಯುವುದೆಂದರೆ ಹಲವಾರು ಮಹಿಳೆಯರಿಗೆ ಯುದ್ಧ ಗೆದ್ದ ಅನುಭವ ನೀಡುತ್ತದೆ. ಕಾರಣ, ಮುಟ್ಟಿನ ದಿನಗಳಲ್ಲಿ ಕಾಡುವ ಜೀವ ಹಿಂಡುವ ಹೊಟ್ಟೆ ನೋವು. ಇದಕ್ಕೆ ಎಲ್ಲರಿಗೂ ಆಗುವಂಥ ಒಂದು ಪರಿಹಾರ ನೀಡುವುದು ಕಷ್ಟ. ಆದರೆ ಆಹಾರವನ್ನು ಮಾರ್ಪಾಡು ಮಾಡಿಕೊಂಡರೆ ಆ ದಿನಗಳು ಸ್ವಲ್ಪ ಸರಾಗ (Diet To Prevent Period Cramps) ಕಳೆಯುವಂತೆ ಮಾಡಬಹುದು ಎನ್ನುತ್ತಾರೆ ಪೋಷಕಾಂಶ ತಜ್ಞರು. ಏನವರ ಮಾತಿನರ್ಥ? ಏನು ಮಾಡಬೇಕು?

ಇವು ಅಗತ್ಯ

ಮುಟ್ಟಿನ ದಿನಗಳಲ್ಲಿ ಕಾಡುವ ಕಬ್ಬಿಣದ ಕೊರತೆಯೂ ಕೆಲವೊಮ್ಮೆ ಸಮಸ್ಯೆಯ ತೀವ್ರತೆಯನ್ನು ಹೆಚ್ಚಿಸುತ್ತದೆ. ಹಾಗಾಗಿ ಕಬ್ಬಿಣದಂಶ ಹೆಚ್ಚಿರುವ ದಾಳಿಂಬೆ, ಬೀಟ್‌ರೂಟ್‌, ಪಾಲಕ್‌ನಂಥ ಸೊಪ್ಪುಗಳು, ಬ್ರೊಕೊಲಿ ಮುಂತಾದವು ಈ ಕೊರತೆಯನ್ನು ನೀಗಿಸುತ್ತವೆ. ಸಿಟ್ರಸ್‌ ಹಣ್ಣುಗಳು, ನೆಲ್ಲಿಕಾಯಿ, ಬೆರ್ರಿಗಳಲ್ಲಿ ವಿಟಮಿನ್‌ ಸಿ ಹೆಚ್ಚಿದ್ದು, ಉತ್ಕರ್ಷಣ ನಿರೋಧಕಗಳಂತೆ ಕೆಲಸ ಮಾಡುತ್ತವೆ. ಈ ಎಲ್ಲವುಗಳ ಹಿನ್ನೆಲೆಯಲ್ಲಿ ನೋವು ಕಡಿಮೆ ಮಾಡಿಕೊಳ್ಳಲು ಸಾಧ್ಯವಾಗಬಹುದು.

ಒಮೇಗಾ 2 ಕೊಬ್ಬಿನಾಮ್ಲ

ಪ್ರಬಲ ಉತ್ಕರ್ಷಣ ನಿರೋಧಕಗಳೆಂದೇ ಕರೆಯಲಾಗುವ ಒಮೇಗಾ ೩ ಕೊಬ್ಬಿನಾಮ್ಲಗಳ ಸೇವನೆಯಿಂದಲೂ ನೋವಿನ ತೀವ್ರತೆ ಕಡಿಮೆಯಾಗಬಹುದು. ಕೊಬ್ಬಿನ ಮೀನುಗಳು, ಬೀಜಗಳು, ಅವಕಾಡೊ ಇತ್ಯಾದಿ ಒಳ್ಳೆಯ ಕೊಬ್ಬಿನ ಆಹಾರಗಳ ಸೇವನೆಯನ್ನು ಖಂಡಿತಾ ಪ್ರಯತ್ನಿಸಬಹುದು.

ಮೆಗ್ನೀಶಿಯಂ-ಭರಿತ ಆಹಾರಗಳು

ಸ್ನಾಯುಗಳ ಬಿಗಿತವನ್ನು ಶಮನ ಮಾಡುವ ಸಾಮರ್ಥ್ಯವನ್ನು ಮೆಗ್ನೀಶಿಯಂ ಹೊಂದಿದೆ. ಹೊಟ್ಟೆಯ ಭಾಗದಲ್ಲಿರುವ ಸ್ನಾಯುಗಳನ್ನು ಸಡಿಲ ಮಾಡುವ ಮೂಲಕ ನೋವು ಕಡಿಮೆ ಮಾಡಲು ಯತ್ನಿಸಬಹುದು. ಈ ನಿಟ್ಟಿನಲ್ಲಿ ಹಸಿರು ಸೊಪ್ಪು- ತರಕಾರಿಗಳು, ಇಡಿ ಧಾನ್ಯಗಳು ಮತ್ತು ಬೀಜಗಳನ್ನು ಹೆಚ್ಚಾಗಿ ಸೇವಿಸುವುದು ಲಾಭದಾಯಕ.

ನೀರು

ಆದಷ್ಟು ಹೆಚ್ಚಿನ ಪ್ರಮಾಣದಲ್ಲಿ ನೀರು ದೇಹಕ್ಕೆ ಬೇಕು. ಇದಕ್ಕಾಗಿ ಎಳನೀರು, ಗ್ರೀನ್‌ ಟೀ, ಹರ್ಬಲ್‌ ಚಹಾಗಳನ್ನು, ಶುಂಠಿ, ಜೀರಿಗೆ, ಕೊತ್ತಂಬರಿಯಂಥ ಕಷಾಯಗಳನ್ನು ಪ್ರಯತ್ನಿಸಬಹುದು. ಇವು ಹೊಟ್ಟೆಯುಬ್ಬರನ್ನು ಹೋಗಲಾಡಿಸುವುದಕ್ಕೂ ಸಹಕಾರ ನೀಡಿ, ಸ್ನಾಯುಗಳ ಸಂಕೋಚನವನ್ನು ದೂರ ಮಾಡುತ್ತವೆ.

ಕ್ಯಾಲ್ಶಿಯಂ ಬೇಕು

ಅಂದಿನ ದಿನಗಳಲ್ಲಿ ದೇಹಕ್ಕೆ ಅಗತ್ಯವಾದ ಖನಿಜಗಳಲ್ಲಿ ಕ್ಯಾಲ್ಶಿಯಂ ಸಹ ಒಂದು. ಸ್ನಾಯುಗಳ ಸಂಕೋಚವನ್ನು ಕಡಿಮೆ ಮಾಡಿ, ಒತ್ತಡ ಶಮನ ಮಾಡುವುದಕ್ಕೆ ಇವು ನೆರವಾಗುತ್ತವೆ. ಹಾಗಾಗಿ ಡೈರಿ ಉತ್ಪನ್ನಗಳು ಆಹಾರದಲ್ಲಿರಲಿ. ಅದೂ ಸಾಕಾಗದು ಎನಿಸಿದರೆ, ಪೂರಕಗಳನ್ನು ಪ್ರಯತ್ನಿಸಬಹುದು.

ಕೆಫೇನ್‌, ಉಪ್ಪು ಮಿತಿ

ಕೆಫೇನ್‌ ಸೇವನೆ ಹೆಚ್ಚಾದಂತೆ, ಈಗಾಗಲೇ ಸ್ನಾಯುಗಳು ಸಂಕೋಚಗೊಂಡಿದ್ದರೆ ನೋವು ಮತ್ತಷ್ಟು ಹೆಚ್ಚುತ್ತದೆ. ಹಾಗಾಗಿ ಚಹಾ, ಕಾಫಿ, ಸೋಡಾದಂಥವು ಈ ದಿನಗಳಲ್ಲಿ ಬೇಡ ಅಥವಾ ಮಿತವಾಗಿರಲಿ. ಉಪ್ಪು ದೇಹದಲ್ಲಿ ಹೆಚ್ಚಾದರೆ ನೀರೂ ಅಧಿಕವಾಗುತ್ತದೆ. ಹಾಗಾಗಿ ಹೊಟ್ಟೆಯ ಸಮಸ್ಯೆಗಳನ್ನು ದೂರ ಮಾಡಲು ಇವೆರಡನ್ನೂ ಮುಟ್ಟಿನ ದಿನಗಳಲ್ಲಿ ಕಡಿಮೆ ಮಾಡಿ.

ಪ್ರೊಬಯಾಟಿಕ್

ಈ ಆಹಾರಗಳು ಜೀರ್ಣಾಂಗಗಳ ಸಂಕಟವನ್ನು ದೂರ ಮಾಡಬಲ್ಲವು. ಋತುವಿನ ದಿನಗಳಲ್ಲಿ ಹೊಟ್ಟೆಯುಬ್ಬರ, ಎದೆಯುರಿಯಂಥವು ಗಂಟು ಬೀಳದಂತೆ ಮಾಡುವಲ್ಲಿ ಇವು ಸಹಕಾರಿ. ಇದರಿಂದ ಹೊಟ್ಟೆನೋವಿನ ಒಂದಿಷ್ಟು ಕಾರಣಗಳನ್ನು ನಿಶ್ಚಿತವಾಗಿ ದೂರ ಮಾಡಬಹುದು.

ಇವು ಬೇಡ

ಅತಿಯಾದ ಸಿಹಿ, ಕೊಬ್ಬಿನ ಆಹಾರಗಳು, ಕರಿದ ತಿಂಡಿಗಳು, ಮಸಾಲೆ ಅಥವಾ ಖಾರದ ತಿನಿಸುಗಳು ಇರುವ ತೊಂದರೆಯನ್ನು ಹೆಚ್ಚಿಸಬಹುದು. ಹಾಗಾಗಿ ಸೌಮ್ಯ ಆಹಾರದತ್ತ ಗಮನ ನೀಡಿ. ಲಘು ವ್ಯಾಯಾಮ ಮಾಡಿದರೆ ಆಹಾರ ದೊರೆಯುತ್ತದೆ. ವಾಕಿಂಗ್‌, ಸೈಕ್ಲಿಂಗ್‌ ಮುಂತಾದ ಯಾವುದೂ ಈ ನಿಟ್ಟಿನಲ್ಲಿ ಬೇಕಾದಂಥ ನೆರವು ನೀಡುತ್ತವೆ.

ಇದನ್ನೂ ಓದಿ: Migraine Control: ಮೈಗ್ರೇನ್‌ನಿಂದ ಪಾರಾಗುವುದು ಹೇಗೆ?

Exit mobile version