Site icon Vistara News

Digestion Tips: ಜೀರ್ಣಾಂಗಗಳ ಕ್ಷಮತೆ ಹೆಚ್ಚಿಸುವುದು ಹೇಗೆ?

Digestion Tips

ನಮ್ಮ ಜೀರ್ಣಾಂಗಗಳ ಕ್ಷಮತೆಯನ್ನು ಹೆಚ್ಚಿಸುವುದಕ್ಕೆ ಸಾಧ್ಯವೇ? ತಿಂದಿದ್ದು ಅರಗುವುದೇ ಇಲ್ಲ ಎನ್ನುವ ದೂರು ಹೇಳುವವರು ಬಹಳ ಮಂದಿ ಇದ್ದಾರು ಲೋಕದಲ್ಲಿ. ಇದರಿಂದ ಅಜೀರ್ಣದ ಸಮಸ್ಯೆ ಮಾತ್ರವಲ್ಲ, ಸರಣಿ ಸಮಸ್ಯೆಗಳು ಬೆನ್ನು ಹತ್ತುತ್ತವೆ. ಹಸಿವಿಲ್ಲದಿರುವುದು, ವಾಯು ಪ್ರಕೋಪ, ಆಸಿಡಿಟಿ, ಮಲಬದ್ಧತೆ… ಇವೆಲ್ಲ ಸೇರಿ ಜೀವವನ್ನು ಹೈರಾಣಾಗಿಸುತ್ತವೆ. ಮಾತ್ರವಲ್ಲ, ಟಾಕ್ಸಿನ್‌ಗಳ ಗುಡಾಣವಾಗುತ್ತದೆ ದೇಹ. ಹಾಗಾದರೆ ಇವುಗಳನ್ನು ದೂರ ಮಾಡಲು ಇರುವ ದಾರಿ ಯಾವುದು? ಜೀರ್ಣಾಂಗಗಳ ದಕ್ಷತೆಯನ್ನು ಹೆಚ್ಚಿಸುವುದರಿಂದ ಇಂಥ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದೇ? ಹೌದಾದರೆ (Digestion Tips) ಏನು ಮಾಡಬೇಕು?

ಡಿಟಾಕ್ಸ್‌ ಮಾಡಿ

ದೇಹವನ್ನು ಕಾಲಕಾಲಕ್ಕೆ ವಿಷಮುಕ್ತ ಮಾಡುವುದು ಅಗತ್ಯ. ಬೇಡದ್ದನ್ನೇ ದೇಹದಲ್ಲಿ ತುಂಬಿಕೊಂಡಿದ್ದರೆ, ಲಿವರ್‌ ಅತಿಯಾಗಿ ಕೆಲಸ ಮಾಡುವುದು ಹೌದು. ಆದರೆ ಪ್ರಯೋಜನ ದೊರೆಯುವುದಿಲ್ಲ. ಇಂಥ ಸಂದರ್ಭದಲ್ಲಿ ಏಕಾದಶಿ ಅಥವಾ ಸಂಕಷ್ಟಿಯ ನೆವದಲ್ಲಿ ಉಪವಾಸ, ಇನ್ಯಾವುದೋ ವ್ರತದ ಹೆಸರಿನಲ್ಲಿ ದ್ರವಾಹಾರ ಮುಂತಾದ ಕ್ರಮಗಳು ಜೀರ್ಣಾಂಗಗಳಿಗೆ ಬೇಕಾದ ವಿಶ್ರಾಂತಿಯನ್ನು ನೀಡುತ್ತವೆ. ಒಂದೊಮ್ಮೆ ಉಪವಾಸ ಕಷ್ಟ ಎಂದೆನಿಸಿದರೆ ಜ್ಯೂಸ್‌ಫಾಸ್ಟ್‌ ನಿಯಮಗಳನ್ನೂ ಅನುಸರಿಸಬಹುದು. ಇದರಿಂದ ಶರೀರವನ್ನು ಡಿಟಾಕ್ಸ್‌ ಮಾಡಲ್ ಸಾಧ್ಯವಾಗುತ್ತದೆ.

ಧ್ಯಾನ

ಎತ್ತಣ ಮಾಮರ ಎತ್ತಣ ಕೋಗಿಲೆ ಎಂದು ಯೋಚಿಸಬೇಡಿ. ಮಾನಸಿಕ ಒತ್ತಡವು ದೇಹದ ಜೀರ್ಣಾಂಗಗಳ ಆರೋಗ್ಯವನ್ನು ಸಂಪೂರ್ಣ ಹಾಳು ಮಾಡುತ್ತದೆ ಎಂಬುದನ್ನು ಬಹಳಷ್ಟ್ ಅ‍ಧ್ಯಯನಗಳು ದೃಢಪಡಿಸಿವೆ. ಮನಸ್ಸನ್ನು ಒತ್ತಡ ಮುಕ್ತ ಮಾಡುವುದರಿಂದ, ಇಡೀ ಶರೀರದ ಮೇಲೆ ಧನಾತ್ಮಕ ಪರಿಣಾಮ ಬೀರುವುದನ್ನು ಕಾಣಬಹುದು ನಾವು. ಹಾಗಾಗಿ ಪ್ರತಿದಿನ 30 ನಿಮಿಷಗಳ ಧ್ಯಾನ ಮಾಡುವುದರಿಂದ ಜೀರ್ಣಾಂಗಗಳ ಆರೋಗ್ಯವನ್ನೂ ಸುಧಾರಿಸಬಹುದು.

ವ್ಯಾಯಾಮ

ಶಾರೀರಿಕ ಚಟುವಟಿಕೆಯು ಜೀರ್ಣಾಂಗಗಳನ್ನೂ ಚುರುಕಾಗಿಸುತ್ತದೆ. ಯಾವುದೇ ರೀತಿಯ ಏರೋಬಿಕ್‌ ಮಾದರಿಯ ವ್ಯಾಯಾಮಗಳು ದೇಹಕ್ಕೆ ಒಳ್ಳೆಯದು. ಚುರುಕು ನಡಿಗೆ, ಈಜು, ಸೈಕಲ್‌ ಹೊಡೆಯುವುದು, ನೃತ್ಯ, ಪಿಲಾಟೆ, ಯೋಗ ಮುಂತಾದ ಯಾವುದನ್ನಾದರೂ ಅಭ್ಯಾಸ ಮಾಡಬಹುದು. ಊಟದ ನಂತರ ಹತ್ತು ನಿಮಿಷಗಳ ನಡಿಗೆಯೂ ಆಹಾರವನ್ನು ಚೆನ್ನಾಗಿ ಪಚನ ಮಾಡುತ್ತದೆ. ಅದರಲ್ಲೂ ಮಧುಮೇಹ ಇರುವವರಲ್ಲಿ ಇಂಥ ಚಟುವಟಿಕೆಗಳು ಸಕ್ಕರೆಯಂಶದ ನಿಯಂತ್ರಣಕ್ಕೆ ಬಹಳಷ್ಟು ನೆರವು ನೀಡುತ್ತದೆ.

ಇದನ್ನೂ ಓದಿ: Olive Oil Benefits: ಆಲಿವ್‌ ಎಣ್ಣೆ ಕೇವಲ ಅಡುಗೆಗಲ್ಲ, ಮುಖದ ಚರ್ಮ ಹಾಗೂ ಕೂದಲ ಸೌಂದರ್ಯಕ್ಕೂ ಬೇಕು!

ಅತಿಯಾಗಿ ತಿನ್ನುವುದಲ್ಲ

ಊಟ ಎಷ್ಟೇ ರುಚಿಯಾಗಿದ್ದರೂ, ಅದೇನು ಬದುಕಿನ ಕಡೆಯ ಊಟ ಎಂಬಂತೆ ಉಣ್ಣಬೇಕಿಲ್ಲ. ಅಲ್ಪತೃಪ್ತನಿಗೆ ರುಚಿ ಹೆಚ್ಚು ಎನ್ನುವ ಮಾತಿನಂತೆ, ಸ್ವಲ್ಪ ತಿಂದಿದ್ದನ್ನೂ ಪ್ರೀತಿಯಿಂದ ಹೊಟ್ಟೆ ಸೇರಿಸಿದರೆ, ಅದೇ ಪ್ರಿಯವಾಗುತ್ತದೆ. ಊಟಕ್ಕೆ ಕೂತಾಗ ಸಿಕ್ಕಾಪಟ್ಟೆ ತಿನ್ನುವುದು ಮಾತ್ರವಲ್ಲ, ಆಗಾಗ ತಿನ್ನುತ್ತಿರುವುದು, ಅನಾರೋಗ್ಯಕರ ತಿಂಡಿಗಳನ್ನೇ ತಿನ್ನುವುದು- ಇಂಥ ಆಹಾರಭ್ಯಾಸಗಳು ಜೀರ್ಣಾಂಗಗಳನ್ನು ಹಿಂಡಿ ಹಿಪ್ಪೆ ಮಾಡುತ್ತವೆ. ಬದಲಿಗೆ, ಸತ್ವಯುತವಾದ ಮಧ್ಯಮ ಗಾತ್ರದ ಊಟವನ್ನು ಅಳವಡಿಸಿಕೊಂಡರೆ ಒಳ್ಳೆಯದು

ಹರ್ಬಲ್‌ ಚಹಾಗಳು

ನೈಸರ್ಗಿಕ ಹರ್ಬಲ್‌ ಚಹಾಗಳು ಹೊಟ್ಟೆಯ ಆರೋಗ್ಯವನ್ನು ವೃದ್ಧಿಸುತ್ತವೆ. ಶುಂಠಿ ಚಹಾ, ಚಕ್ಕೆಯ (ಸಿನ್ನಮನ್) ಚಹಾ, ಕ್ಯಾಮೊಮೈಲ್‌ ಚಹಾ ಮುಂತಾದವು ಆಹಾರ ಪಚನವಾಗಲು ನೆರವು ನೀಡುತ್ತವೆ. ಜೊತೆಗೆ ಇವುಗಳಲ್ಲಿರುವ ಉತ್ಕರ್ಷಣ ನಿರೋಧಕಗಳು ಜೀರ್ಣಾಂಗಗಳಲ್ಲಿನ ಉರಿಯೂತ ಕಡಿಮೆ ಮಾಡಲೂ ಸಹಾಯ ಮಾಡುತ್ತವೆ. ಕೊತ್ತಂಬರಿ ನೀರು, ಜೀರಿಗೆ ನೀರು ಇತ್ಯಾದಿಗಳು ಗ್ಯಾಸ್‌, ಆಸಿಡಿಟಿಗಳ ನಿಯಂತ್ರಣಕ್ಕೂ ನೆರವಾಗುತ್ತವೆ. ಇಂಥ ಯಾವುದೇ ಚಹಾಗಳ ಡಿಪ್‌ ಟೀ ಬ್ಯಾಗ್ ಬಳಸಿದರೆ‌ ತಯಾರಿಕೆ ಸುಲಭ. ಹಾಗಲ್ಲದೆ, ನೀವೆ ಮಾಡಿಕೊಳ್ಳುವ ಉದ್ದೇಶವಿದ್ದರೆ ತಯಾರಿಸುವ ಕ್ರಮ ಹೀಗಿದೆ- ಶುಂಠಿ ಅಥವಾ ಚಕ್ಕೆಯ ಚಹಾ ಮಾಡುವುದಿದ್ದರೆ, ಒಂದು ಕಪ್‌ ನೀರಿಗೆ ಒಂದಿಂಚು ಚಕ್ಕೆ ಅಥವಾ ಅರ್ಧ ಇಂಚು ಶುಂಠಿಯನ್ನು ಹಾಕಿ. ೫ ನಿಮಿಷಗಳ ಕಾಲ ಈ ನೀರು ಚೆನ್ನಾಗಿ ಕುದಿಯಲಿ. ನಂತರ ಇದನ್ನು ಬೇಕಾದ ಉಷ್ಣತೆಯಲ್ಲಿ ಸೇವಿಸಬಹುದು. ಊಟದ ಒಂದು ತಾಸಿನ ನಂತರ ಹರ್ಬಲ್‌ ಟೀ ಅಥವಾ ಗ್ರೀನ್‌ ಟೀಗಳ ಸೇವನೆ ಹೆಚ್ಚಿನ ಪರಿಣಾಮಗಳನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ. ಹಾಗೆಂದು ದಿನದ ಉಳಿದ ಸಮಯದಲ್ಲಿ ಇದನ್ನು ಸೇವಿಸಬಾರದೆಂದಲ್ಲ. ಆದರೆ ಹಸಿದ ಹೊಟ್ಟೆಯಲ್ಲಿ ಶುಂಠಿ ಚಹಾ ಸೇವಿಸುವುದು ಸಮಸ್ಯೆಗಳನ್ನು ತರಬಹುದು.

Exit mobile version