Site icon Vistara News

Digestive Problems | ಜೀರ್ಣ ಸಂಬಂಧೀ ಸಮಸ್ಯೆಯೇ? ಇಲ್ಲಿವೆ 10 ಸೂತ್ರಗಳು!

digestion

ನಿಮಗೆ ಸರಿಯಾಗಿ ಜೀರ್ಣ ಆಗುತ್ತಿಲ್ಲವೇ? ಜೀರ್ಣ ಸಂಬಂಧೀ ಏನಾದರೊಂದು ಸಮಸ್ಯೆ ಯಾವಾಗಲೂ ಇದ್ದೇ ಇರುತ್ತದೆಯೋ? ಹಾಗಾದರೆ ಈ ಹತ್ತು ಸೂತ್ರಗಳನ್ನು ದೈನಂದಿನ ಜೀವನದಲ್ಲಿ ಚಾಚೂ ತಪ್ಪದೆ ಪಾಲಿಸಿ. ನಿಮ್ಮ ಸಮಸ್ಯೆಗಳೆಲ್ಲ ನೀರು ಕುಡಿದಷ್ಟೇ ಸಲೀಸಾಗಿ ಮಾಯವಾಗುತ್ತದೆ.

೧. ಬಿಸಿ ನೀರು ಕುಡಿಯುವ ಮೂಲಕ ಬೆಳಗನ್ನು ಆರಂಭಿಸಿ: ಬೆಳಗ್ಗೆ ಎದ್ದ ಕೂಡಲೇ ಒಂದು ಲೋಟ ಬಿಸಿ ನೀರನ್ನು ಕುಡಿಯಿರಿ. ಇದು ದೇಹದಲ್ಲಿರುವ ಕಶ್ಮಲಗಳನ್ನೆಲ್ಲ ಹೊರಹಾಕಲು ಸಹಾಯ ಮಾಡುತ್ತದೆ. ಜೀರ್ಣಾಂಗ ವ್ಯವಸ್ಥೆಯನ್ನು ಇದು ಸಮತೋಲನದಲ್ಲಿಡುತ್ತದೆ. ಜೊತೆಗೆ ರಕ್ತ ಪರಿಚಲನೆಯನ್ನೂ ವೃದ್ಧಿಸುತ್ತದೆ. ತಿಂದ ಆಹಾರವನ್ನು ಸುಲಭವಾಗಿ ಜೀರ್ಣವಾಗುವಂತೆ ಇದು ಮಾಡುತ್ತದೆ. ಮಲಬದ್ಧತೆಯನ್ನು ನಿವಾರಿಸುತ್ತದೆ. ತೂಕ ಕಡಿಮೆಗೊಳಿಸುವಲ್ಲಿಯೂ ಇದು ನೆರವಾಗುತ್ತದೆ.

೨. ಪ್ರತಿದಿನ ಒಂದು ಬಾಳೆಹಣ್ಣು ತಿನ್ನಿ: ಪಚನಕ್ರಿಯೆಗೆ ಸಹಾಯ ಮಾಡಬಲ್ಲ ಒಂದು ಅತ್ಯುತ್ತಮ ಆಹಾರವೆಂದು ಬಾಳೆಹಣ್ಣನ್ನು ಪರಿಗಣಿಸಲಾಗುತ್ತದೆ. ಹಾಗಾಗಿ, ಬೆಳಗಿನ ತಿಂಡಿಯ ಜೊತೆ, ಅಥವಾ ಬೆಳಗ್ಗೆದ್ದು ವರ್ಕ್‌ಔಟ್‌ ಮಾಡುವವರಾದರೆ ಅದಕ್ಕೂ ಮೊದಲು ಅಥವಾ ಮಧ್ಯಾಹ್ನದೂಟ ಹಾಗೂ ಬೆಳಗ್ಗಿನ ತಿಂಡಿಯ ನಡುವಿನ ಸಮಯ ಬಾಳೆಹಣ್ಣು ತಿನ್ನಲು ಪ್ರಶಸ್ತವಾದ ಕಾಲ. ಬಾಳೆಹಣ್ಣಿನಲ್ಲಿ ಪ್ರೊಬಯಾಟಿಕ್‌ ಇರುವುದರಿಂದ ಒಳ್ಳೆಯ ಬ್ಯಾಕ್ಟೀರಿಯಾಗಳ ವೃದ್ಧಿಗೆ ಇದು ಸಹಾಯ ಮಾಡುತ್ತದೆ. ಇದರಲ್ಲಿರುವ ಪೆಕ್ಟಿನ್‌ ಎಂಬ ನಾರಿನಂಶವು ಮಲಬದ್ಧತೆಯ ಸಮಸ್ಯೆ ಹೊಂದಿರುವವರಿಗೂ ಅತ್ಯುತ್ತಮ.

೩. ವ್ಯಾಯಾಮ ಮಾಡಿ: ಒಂದೇ ಕಡೆ ಕೂತಿರುವುದು, ಆಲಸಿಗಳಾಗಿರುವುದು ಜೀರ್ಣಕ್ರಿಯೆಗೆ ಒಳ್ಳೆಯದಲ್ಲ. ಉತ್ತಮ ಆಹಾರ ತಿಂದು ಕ್ರಿಯಾಶೀಲರಾಗಿರುವುದೂ ಬಹಳ ಮುಖ್ಯ. ವ್ಯಾಯಾಮ ಮಾಡುವುದರಿಂದ ದೇಹದಲ್ಲಿ ಪಚನಕ್ರಿಯೆಗೆ ವೇಗ ಸಿಗುತ್ತದೆ. ಹೆಚ್ಚು ಕ್ಲಿಷ್ಟಕರ ದೈಹಿಕ ವ್ಯಾಯಾಮ ಮಾಡಲು ಸಾಧ್ಯವಾಗದಿದ್ದರೂ, ವಾಕಿಂಗ್‌, ಉಸಿರಾಟದ ವ್ಯಾಯಾಮ ಇತ್ಯಾದಿಗಳನ್ನು ಮಾಡಬಹುದು.

೪. ಊಟದ ನಂತರ ಬೆಲ್ಲ ಹಾಗೂ ತುಪ್ಪ ತಿನ್ನಿ: ಭಾರತದಲ್ಲಿ ಸಾಂಪ್ರದಾಯಿಕವಾಗಿ ಬೆಲ್ಲ ಹಾಗೂ ತುಪ್ಪವನ್ನು ಊಟದ ನಂತರ ತಿನ್ನುವುದರಿಂದ ಪಚನಕ್ರಿಯೆ ಸರಿಯಾಗಿ ಆಗುತ್ತದೆ ಎಂಬ ನಂಬಿಕೆಯಿದೆ. ಮಧ್ಯಾಹ್ನದೂಟದ ನಂತರ ಮುಖ್ಯವಾಗಿ ಹೀಗೆ ತಿನ್ನುವುದನ್ನು ರೂಢಿ ಮಾಡಿಕೊಂಡರೆ, ನಿಧಾನವಾಗಿ ಜೀರ್ಣಕ್ರಿಯೆಯಲ್ಲಿ ಸುಧಾರಣೆ ತರುತ್ತದೆ. ಇದು ಆಹಾರ ಕರಗಲು ಬೇಕಾಗುವ ಕಿಣ್ವಗಳನ್ನು ಕ್ರಿಯಾಶೀಲಗೊಳಿಸುವುದಲ್ಲದೆ, ಊಟದ ನಂತರ ಮನಸ್ಸಿಗೆ ಉಲ್ಲಾಸ ನೀಡುವ ಸಿಹಿತಿಂಡಿಯಂತೆಯೂ ಕೆಲಸ ಮಾಡುತ್ತದೆ.

೫. ಸರಿಯಾಗಿ ನೀರು ಕುಡಿಯಿರಿ: ಸರಿಯಾದ ಪ್ರಮಾಣದಲ್ಲಿ ನೀರು ಕುಡಿಯುವುದು ಬಹಳ ಮುಖ್ಯ. ಬಹಳಷ್ಟು ಸಮಸ್ಯೆಗಳಿಗೆ ಪರಿಹಾರ ನೀರು ಕುಡಿಯುವುದರಲ್ಲೇ ಇದೆ. ಆದರೆ ಇದೆಲ್ಲ ಗೊತ್ತಿದ್ದೂ ಬಹುತೇಕರು ನೀರು ಸರಿಯಾಗಿ ಕುಡಿಯುವುದಿಲ್ಲ. ಮಲಬದ್ಧತೆಯ ಸಮಸ್ಯೆ ಇರುವವರೂ ಕೂಡಾ ಹೆಚ್ಚು ನೀರು ಕುಡಿದರೆ, ಕೆಲಸ ಸುಲಭವಾಗುತ್ತದೆ. ಆದರೆ, ಊಟ ಮಾಡುವ ಸಂದರ್ಭ ಮಾತ್ರ ಹೆಚ್ಚು ನೀರು ಕುಡಿಯದೆ, ಊಟಕ್ಕೆ ಅರ್ಧ ಗಂಟೆಗೆ ಮೊದಲೇ ನೀರು ಕುಡಿಯುವುದು ಹಾಗೂ ಇತರ ಸಮಯದಲ್ಲಿ ನೀರನ್ನು ಕುಡಿಯುತ್ತಿರುವುದು ಒಳ್ಳೆಯದು.

೬. ಹೆಚ್ಚು ಚಹಾ ಕಾಫಿ ಒಳ್ಳೆಯದಲ್ಲ: ಕೆಫೀನ್‌ಯುಕ್ತ ಪೇಯಗಳಿಂದ ದೂರವಿರುವುದು ಒಳ್ಳೆಯದು. ಕಾಫಿ ಹಾಗೂ ಚಹಾ ಜೀರ್ಣಕ್ರಿಯೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದು ಅಸಿಡಿಟಿ ಹೆಚ್ಚು ಮಾಡಿ, ಎದೆಯುರಿ ಮತ್ತಿತರ ಸಮಸ್ಯೆಗಳನ್ನೂ ತಂದೊಡ್ಡುತ್ತದೆ. ಬೆಳಗ್ಗೆ ಎದ್ದ ಕೂಡಲೇ ತಿಂಡಿ ತಿನ್ನುವ ಮೊದಲೇ ಚಹಾ ಕಾಫಿ ಕುಡಿಯುವುದು ಒಳ್ಳೆಯದಲ್ಲ. ಹಾಗೆಯೇ ಸಂಜೆ ಮೇಲೆ ಕಾಫಿ ಚಹಾ ಒಳ್ಳೆಯದಲ್ಲ.

೭. ಆಲಸ್ಯ ಬಿಡಿ: ಉದಾಸೀನತೆಯಿಂದ ದಿನವಿಡೀ ಸುಮ್ಮನೆ ಕೂರುವುದು ಒಳ್ಳೆಯದಲ್ಲ. ಒಂದೇ ಜಾಗದಲ್ಲಿ ಕೂತಿರುವುದರಿಂದ ಜೀರ್ಣ ಸರಿಯಾಗಿ ಆಗುವುದಿಲ್ಲ. ಕ್ರಿಯಾಶೀಲರಾಗಿ ಓಡಾಡಿಕೊಂಡು ಕೆಲಸ ಮಾಡುತ್ತಿರಿ. ಒಂದೇ ಜಾಗದಲ್ಲಿ ಕೂತು ಕೆಲಸ ಮಾಡುವ ವೃತ್ತಿಯಲ್ಲಿದ್ದರೆ, ಕೆಲವು ವಿಷಯಗಳಿಗೆ ಕೆಲಸದ ನಡುವೆಯೂ ಗಮನ ಕೊಡಿ. ಆರೋಗ್ಯಕರ ಊಟ ಮಾಡಿ, ಖಾಲಿ ಹೊಟ್ಟೆಯಲ್ಲಿ ಕೂರಬೇಡಿ. ಸಣ್ಣ ಸಣ್ಣ ಆರೋಗ್ಯಕರ ಸ್ನ್ಯಾಕ್‌ಗಳನ್ನು ಮಧ್ಯದಲ್ಲಿ ತೆಗೆದುಕೊಳ್ಳಬಹುದು. ಕೂತು ಮಾಡುವ ಕೆಲಸದಿಂದ ಆಗಾಗ ಬ್ರೇಕ್‌ ತೆಗೆದುಕೊಂಡು ಅಲ್ಲೇ ಸಣ್ಣ ವಾಕ್‌ ಮಾಡಿ, ಮಿತವಾಗಿ  ಉಂಡರೂ ಮನಸ್ಸಿಗೆ ತೃಪ್ತಿಯಾಗುವಂತೆ, ದೇಹಕ್ಕೂ ಎಲ್ಲ ಪೋಷಕಾಂಶ ಸಿಗುವಂಥ ಊಟ ಉಣ್ಣಿ. ಜೀರಿಗೆ, ಓಂಕಾಳು, ಸೋಂಪು ಇವುಗಳನ್ನು ಬಳಸಿ.

ಇದನ್ನೂ ಓದಿ | Diabetes Diet | ಮಧುಮೇಹ ನಿಯಂತ್ರಣಕ್ಕೆ ಇದೊಂದು ಸೂತ್ರ ನೆನಪಿಟ್ಟುಕೊಳ್ಳಿ

೮. ಆಹಾರವನ್ನು ಅವಸರದಲ್ಲಿ ನುಂಗಬೇಡಿ: ಚೆನ್ನಾಗಿ ಜಗಿದು ಉಣ್ಣುವುದನ್ನು ಅಭ್ಯಾಸ ಮಾಡಿಕೊಳ್ಳಿ. ಅದು ಸುಲಭ ಜೀರ್ಣಕ್ರಿಯೆಗೆ ಸಹಾಯವಾಗುತ್ತದೆ. ಆಹಾರವನ್ನು ಸರಿಯಾಗಿ ಜಗಿಯುವಾಗಲೇ ಲಾಲಾರಸ ಉತ್ಪತ್ತಿಯಾಗಿ ಅದು ಪಚನಕ್ರಿಯೆಗೆ ನೆರವಾಗುತ್ತದೆ. ಪಚನಕ್ರಿಯೆಯೆಂಬುದು ಬಾಯಿಯಿಂದಲೇ ಶುರುವಾಗುತ್ತದೆ ಎಂಬುದು ನೆನಪಿರಲಿ.

೯. ಸರಿಯಾದ ಸಮಯಕ್ಕೆ ಊಟ ಮಾಡಿ: ಎಷ್ಟೇ ಕೆಲಸದ ಒತ್ತಡ ಇದ್ದರೂ ಸರಿಯಾದ ಸಮಯವನ್ನು ಊಟಕ್ಕೆಂದು ಮೀಸಲಿಡಿ. ಬೆಳಗ್ಗೆ ಎದ್ದ ಮೇಲೆ ಎರಡು ಗಂಟೆಗಳೊಳಗಾಗಿ ತಿಂಡಿ ತಿನ್ನಿ. ಮಧ್ಯಾಹ್ನ ಎರಡು ಗಂಟೆಗೂ ಮುನ್ನ ಉಣ್ಣುವುದನ್ನು ರೂಢಿಸಿಕೊಳ್ಳಿ. ರಾತ್ರಿಯೂಟ ಲಘುವಾಗಿರಲಿ ಹಾಗೂ ಮಲಗುವ ಎರಡು ಗಂಟೆಗೂ ಮುನ್ನ ಮುಗಿಸಿಕೊಳ್ಳಿ.

೧೦. ಪ್ರೊಬಯಾಟಿಕ್‌ ಆಹಾರ ಸೇವಿಸಿ: ನಿತ್ಯದ ಆಹಾರದಲ್ಲಿ ಪ್ರೊಬಯಾಟಿಕ್‌ ಇರಲಿ. ಮೊಸರು, ಮಜ್ಜಿಗೆ, ಇಡ್ಲಿ, ಪನೀರ್‌, ಬಾಳೆಹಣ್ಣು ಇತ್ಯಾದಿಗಳಲ್ಲಿ ಪ್ರೊಬಯಾಟಿಕ್‌ ಇದೆ. ಇವು ಕೇವಲ ಪಚನ ಕ್ರಿಯೆಗೆ ಮಾತ್ರ ಸಹಾಯ ಮಾಡುವುದಲ್ಲ, ಇವು ನಮ್ಮಲ್ಲಿ ರೋಗನಿರೋಧಕ ಶಕ್ತಿಯನ್ನೂ ಹೆಚ್ಚು ಮಾಡುತ್ತವೆ.

ಇದನ್ನೂ ಓದಿ | World Heart day | ವಾಲ್ನಟ್‌ ತಿನ್ನಿ, ಹೃದಯದ ಆರೋಗ್ಯ ಕಾಪಾಡಿಕೊಳ್ಳಿ!

Exit mobile version