ಒಂದು ಕಾಲದಲ್ಲಿ ಹಳ್ಳಿಯಲ್ಲಿ ಹೆಚ್ಚಾಗಿ ಬಳಸಲಾಗುತ್ತಿದ್ದ ಸಬ್ಬಸಿಗೆ ಸೊಪ್ಪು (Dill leaves) ಇಂದು ಪಟ್ಟಣದವರಿಗೂ ಅಪರಿಚಿತವೇನಲ್ಲ. ಇದರ ಆರೋಗ್ಯದ ಲಾಭಗಳು (Dill leaves benefits) ತಿಳಿಯದೇ ಇದ್ದವರೂ ಇದರ ರುಚಿಯನ್ನು ಚೆನ್ನಾಗಿ ಬಲ್ಲರು. ನಿಮಗೆ ಗೊತ್ತಿರಲಿ, ಸಬ್ಬಸಿಗೆ ಸೊಪ್ಪು ಉತ್ತಮ ಔಷಧೀಯ (Medicinal values) ಗುಣಗಳ ಕಣಜ. ಇದು ರುಚಿಯಲ್ಲಿ ಮಾತ್ರವಲ್ಲ ನಮ್ಮ ಹಲವು ಆರೋಗ್ಯ ಸಮಸ್ಯೆಗಳಿಗೆ ರಾಮಬಾಣ. ಸಬ್ಬಸಿಗೆ ಸೊಪ್ಪಿನಲ್ಲಿ ವಿಟಮಿನ್ ಎ, ವಿಟಮಿನ್ ಸಿ, ಮ್ಯಾಂಗನೀಸ್ ಮತ್ತು ಕಬ್ಬಿಣದಂತಹ ಹಲವು ಪೋಷಕಾಂಶಗಳಿವೆ. ಇದರಿಂದ ಯಾವುದೆಲ್ಲಾ ಆರೋಗ್ಯ ಪ್ರಯೋಜನಗಳಿವೆ (health tips) ಅಂತ ಈಗ ನೋಡೋಣ.
ಬ್ಲಡ್ ಶುಗರ್ ಲೆವೆಲ್ ನಿಯಂತ್ರಣ: ಡಯಾಬಿಟಿಸ್ ರೋಗಿಗಳಿಗೆ ಸಬ್ಬಸಿಗೆ ಸೊಪ್ಪು ತುಂಬಾ ಪ್ರಯೋಜನಕಾರಿ ಆಗಿದೆ. ಈ ಸೊಪ್ಪು ನಮ್ಮ ದೇಹದಲ್ಲಿ ಇನ್ಸುಲಿನ್ ಮಟ್ಟವನ್ನು ಹೆಚ್ಚಿಸುತ್ತವೆ. ಮಧುಮೇಹ ವಿರೋಧಿ ಗುಣಗಳನ್ನು ಹೊಂದಿದ್ದು, ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸಲು ಸಹಾಯ ಮಾಡುತ್ತದೆ. ಸಬ್ಬಸಿಗೆ ಸೊಪ್ಪನ್ನು ತಿನ್ನುವುದರಿಂದ ಬ್ಲಡ್ ಶುಗರ್ ಲೆವೆಲ್ ಇದ್ದಕ್ಕಿದ್ದಂತೆ ಹೆಚ್ಚಾಗುವುದಿಲ್ಲ. ಹಾಗಾಗಿ, ಮಧುಮೇಹವನ್ನು ಸುಲಭವಾಗಿ ನಿಯಂತ್ರಿಸಬಹುದು.
ಎದೆಹಾಲು ಹೆಚ್ಚಳಕ್ಕೆ: ಸಾಮಾನ್ಯವಾಗಿ ಬಾಣಂತಿಯರಿಗೆ ಎದೆಹಾಲನ್ನು ಹೆಚ್ಚಿಸಲು ಸಬ್ಬಸಿಗೆ ಸೊಪ್ಪು ತುಂಬಾ ಪ್ರಯೋಜನಕಾರಿ. ಬಾಣಂತಿಯರ ಆರೋಗ್ಯವನ್ನು ಕಾಪಾಡಿಕೊಂಡು ಲ್ಯಾಕ್ಟೋಸ್ ಅಂಶವನ್ನು ಹೆಚ್ಚಿಸುವ ಮೂಲಕ ಮಗುವಿಗೆ ಸಾಕಷ್ಟು ಎದೆಹಾಲು ಸಿಗುವಂತೆ ಮಾಡುತ್ತದೆ.
ತೂಕ ನಿಯಂತ್ರಣ: ಸಬ್ಬಸಿಗೆ ಸೊಪ್ಪಿನ ಸೇವನೆಯಿಂದ ದೇಹದ ತೂಕವನ್ನು ಕಡಿಮೆ ಮಾಡಬಹುದು. ಸಬ್ಬಸಿಗೆ ಸೊಪ್ಪಿನಲ್ಲಿ ಫೈಬರ್ ಸಮೃದ್ಧವಾಗಿದ್ದು, ಇದು ಉತ್ಕರ್ಷಣ ನಿರೋಧಕಗಳನ್ನು ಹೊಂದಿದೆ. ಸಬ್ಬಸಿಗೆ ಸೊಪ್ಪಿನ ಸೇವನೆಯಿಂದ ದೇಹದ ಚಯಾಪಚಯ ವೇಗಗೊಳ್ಳುತ್ತದೆ. ಇದು ತೂಕ ನಷ್ಟಕ್ಕೂ ಕೂಡ ಪ್ರಯೋಜನಕಾರಿ.
ಮೂಳೆಗಳನ್ನು ಬಲಪಡಿಸಲು: ಮೂಳೆಗಳ ಆರೋಗ್ಯಕ್ಕೂ ಸಬ್ಬಸಿಗೆ ಸೊಪ್ಪು ತುಂಬಾ ಪ್ರಯೋಜನಕಾರಿ. ಸಬ್ಬಸಿಗೆ ಸೊಪ್ಪಿನಲ್ಲಿ ಕ್ಯಾಲ್ಸಿಯಂ, ಕಬ್ಬಿಣ, ವಿಟಮಿನ್ ಡಿ ಮತ್ತು ಥಯಾಮಿನ್‌ನಂತಹ ಪೋಷಕಾಂಶಗಳು ಇವೆ. ಇವು ಮೂಳೆಗಳನ್ನು ಬಲಿಷ್ಠಗೊಳಿಸಲು ಅಗತ್ಯ. ಕೀಲು ನೋವಿನ ಸಮಸ್ಯೆ ಇರುವವರು ನಿಯಮಿತವಾಗಿ ಸಬ್ಬಸಿಗೆ ಸೊಪ್ಪನ್ನು ಸೇವಿಸುವುದರಿಂದ ಈ ಸಮಸ್ಯೆಗೆ ಪರಿಹಾರ ಪಡೆಯಬಹುದು.
ದೇಹದ ತೂಕ ಇಳಿಕೆ: ದೇಹದ ತೂಕ ಇಳಿಸಲು ಸುಲಭ ಉಪಾಯ ಸಬ್ಬಸಿಗೆ ಸೊಪ್ಪಿನ (dill leaves) ಸಾಂಬಾರು ಅಥವಾ ಸಬ್ಬಸಿಗೆ ಪಲ್ಯ ಸೇವನೆ. ಗ್ರೀನ್ ಟೀ ಜೊತೆಗೆ ಸಬ್ಬಸಿಗೆ ಎಲೆಗಳನ್ನು ಬೆರೆಸಿ ಕುಡಿಯುವುದರಿಂದ ದೇಹದಲ್ಲಿರುವ ಕೆಟ್ಟ ಕೊಬ್ಬಿನಾಂಶ ಕರಗುತ್ತದೆ.
ನಿದ್ರಾಹೀನತೆ ಪರಿಹಾರ: ಬೆಳಗ್ಗಿನಿಂದ ಕೆಲಸ ಮಾಡಿ ಆಯಾಸವಾದರೂ ರಾತ್ರಿ ಸಮಯದಲ್ಲಿ ನಿದ್ದೆ ಬರುವುದಿಲ್ಲ. ಒಬ್ಬ ಮನುಷ್ಯನಿಗೆ ಕನಿಷ್ಟ 8 ಗಂಟೆಗಳ ಕಾಲ ನಿದ್ರೆ ಸಿಗಬೇಕು. ಅದು ಆರೋಗ್ಯವನ್ನು ಉತ್ತಮವಾಗಿಡುತ್ತದೆ. ನಿದ್ರಾಹೀನತೆ ಸಮಸ್ಯೆಯಿಂದ ಬಳಲುವವರು ಸಬ್ಬಸಿಗೆ ಸೊಪ್ಪು ಸೇವಿಸುವ ಅಭ್ಯಾಸ ರೂಡಿಸಿಕೊಳ್ಳಿ.
ಬಿಕ್ಕಳಿಕೆ ನಿವಾರಣೆ: ಹಲವರಿಗೆ ಊಟ ಮಾಡುವಾಗ ಬಿಕ್ಕಳಿಕೆ, ನೀರು ಸೇವಿಸದೇ ಇದ್ದರೇ ಬಿಕ್ಕಳಿಕೆ ಸಮಸ್ಯೆ ಕಾಡುತ್ತದೆ. ಪದೇ ಪದೇ ಬಿಕ್ಕಳಿಕೆ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದರೆ, ಅಂಥವರು ಬಿಕ್ಕಳಿಕೆ ನಿವಾರಣೆಗೆ ಸಬ್ಬಸಿಗೆ ಸೇವಿಸುವುದನ್ನು ಹೆಚ್ಚು ಮಾಡಿಕೊಳ್ಳಿ.
ಇದನ್ನೂ ಓದಿ: World Breastfeeding Week: ಮಗುವಿಗೆ ತಾಯಿಯ ಎದೆ ಹಾಲೇ ಅಮೃತ! ಇದುವೇ ಮಗುವಿನ ಆರೋಗ್ಯದ ಗುಟ್ಟು