Site icon Vistara News

Dinesh Gundurao : ನಕಲಿ ವೈದ್ಯರನ್ನು ದೂರ ಇಟ್ಟರೆ ಮಾತ್ರ ನಾಟಿ ಪದ್ಧತಿಗೆ ಏಳಿಗೆ ಎಂದ ದಿನೇಶ್ ಗುಂಡೂರಾವ್

Dinesh gundu rao Fake doctors

ಬೆಂಗಳೂರು: ನಕಲಿ ವೈದ್ಯರ (Fake doctors) ಹಾವಳಿಯಿಂದಾಗಿ ನಾಟಿ ವೈದ್ಯ ಪದ್ಧತಿಗೆ (Folk medicine system) ಹಿನ್ನಡೆಯಾಗಿದೆ. ಹೀಗಾಗಿ ನಕಲಿ ವೈದ್ಯರನ್ನು ನಿಯಂತ್ರಿಸಿ ನಾಟಿ ಪದ್ಧತಿಗೆ ಪ್ರೋತ್ಸಾಹ ನೀಡಬೇಕಾಗಿದೆ. ಆಧುನಿಕ ವೈದ್ಯಕೀಯದ ಜೊತೆಗೆ ಪಾರಂಪರಿಕ ವೈದ್ಯ ಪದ್ಧತಿಯನ್ನು ನಾವು ಮುಖ್ಯವಾಹಿನಿಗೆ ತರಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಹೇಳಿದ್ದಾರೆ.

ನಾಗಮಂಗಲ ಆದಿಚುಂಚನಗಿರಿ ಸಂಸ್ಥಾನದಲ್ಲಿ ಗುರುವಾರ ನಡೆದ ರಾಷ್ಟ್ರೀಯ ಪಾರಂಪರಿಕ ವೈದ್ಯರ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.‌ ಬೆಳೆಯುತ್ತಿರುವ ವಿಜ್ಞಾನ ತಂತ್ರಜ್ಞಾನದ ಯುಗದಲ್ಲಿ ಬಹುತೇಕರು ನಾಟಿ ವೈದ್ಯ ಪದ್ಧತಿಯನ್ನು ನಂಬುತ್ತಿಲ್ಲ. ನಿಜವೆಂದರೆ ಅಲೋಪತಿ ಬರುವ ಮುನ್ನ ನಮ್ಮ ರಾಜ ಮಹಾರಾಜರಿಗೆ ಚಿಕಿತ್ಸೆ ನೀಡಿ, ಕಾಯಿಲೆಗಳನ್ನು ವಾಸಿ ಮಾಡುತ್ತಿದ್ದುದು ನಮ್ಮ ಗಿಡ ಮೂಲಿಕೆಗಳ ಔಷಧಿಯ ನಾಟಿ ಪದ್ದತಿ ಎಂಬುದನ್ನ ಮರೆಯಬಾರದು ಎಂದರು.‌

ʻʻಗಿಡ ಮೂಲಿಕೆಗಳ ಚಿಕಿತ್ಸೆ, ಪಾರಂಪರಿಕ ವೈದ್ಯ ಪದ್ಧತಿಯನ್ನು ಮುಖ್ಯವಾಹಿನಿಗೆ ತರಬೇಕು. ಆದರೆ ತರಲಾಗುತ್ತಿಲ್ಲ.‌ ಅದಕ್ಕೆ ಮುಖ್ಯ ಕಾರಣ ನಕಲಿ ವೈದ್ಯರ ಹಾವಳಿ. ನಕಲಿ ವೈದ್ಯರ ಹಾವಳಿಯಿಂದಾಗಿಯೇ ನಾಟಿ ವೈದ್ಯ ಪದ್ದತಿ ಮುಖ್ಯವಾಹಿನಿಗೆ ಬರದೇ ಮರೆಯಾಗಿ ಹೋಗುತ್ತಿದೆʼʼ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಭಿಪ್ರಾಯ ಪಟ್ಟರು..

Dinesh gundu rao Fake doctors

ನೈಜ ನಾಟಿ ವೈದ್ಯರನ್ನು ಗುರುತಿಸುವುದು ಒಂದು ಸವಾಲು

ಸರ್ಕಾರಕ್ಕೆ ನಿಜವಾದ ನಾಟಿ ವೈದ್ಯರ ಮೇಲೆ ನಂಬಿಕೆಯಿದ್ದರೂ, ನಕಲಿ ವೈದ್ಯರಿಂದಾಗಿ ಈ ಪದ್ದತಿಯನ್ನು ಪ್ರೋತ್ಸಾಹಿಸಲು ಸಾಧ್ಯವಾಗುತ್ತಿಲ್ಲ. ನೈಜ ನಾಟಿ ವೈದ್ಯರನ್ನು ಗುರುತಿಸುವುದು ಒಂದು ಸವಾಲು. ಹೀಗಾಗಿ ಒಂದು ಫ್ರೇಮ್ ವರ್ಕ್ ಮುಖ್ಯ. ನಿಯಮಾವಳಿಗಳೊಂದಿಗೆ ನಾಟಿ ವೈದ್ಯರನ್ನು ಗುರುತಿಸುವ ವ್ಯವಸ್ಥೆ ಜಾರಿಗೆ ಬರಬೇಕು. ಈ ನಿಟ್ಟಿನಲ್ಲಿ ಸರ್ಕಾರ ಚರ್ಚಿಸಿ ತೀರ್ಮಾನಗಳನ್ನು ತೆಗೆದುಕೊಳ್ಳಲು ಮುಕ್ತ ಮನಸ್ಸು ಹೊಂದಿದೆ ಎಂದು ಇದೇ ವೇಳೆ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದರು. ಈ ನಿಟ್ಟಿನಲ್ಲಿ ನಾಟಿ ವೈದ್ಯರ ಔಷಧಿ ವಿಧಾನಗಳು, ಗಿಡಮೂಲಿಕೆಗಳ ಬಗ್ಗೆ ವಿಸ್ತೃತವಾಗಿ ವರದಿಯೊಂದಿಗೆ ಮನವಿ ಸಲ್ಲಿಸುವಂತೆ ಪಾರಂಪರಿಕ ವೈದ್ಯರ ಪರಿಷತ್‌ಗೆ ಸಚಿವರು ಸೂಚನೆ ನೀಡಿದರು.

ಇದನ್ನೂ ಓದಿ: Dinesh Gundu Rao : ರಕ್ತದಾನ ಮಾಡಿ ಜನ್ಮದಿನ ಆಚರಿಸಿಕೊಂಡ ಸಚಿವ ದಿನೇಶ್ ಗುಂಡೂರಾವ್

ನಾಟಿ ಪದ್ಧತಿ, ಅಲೋಪತಿ ಹಳೇ ಬೇರು ಹೊಸ ಚಿಗುರು: ಆದಿಚುಂಚನಗಿರಿ ಶ್ರೀ

ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು, ಆರೋಗ್ಯ ಕ್ಷೇತ್ರದಲ್ಲಿ ಹಳೇ ಬೇರು ಹೊಸ ಚಿಗುರು ಎರಡು ಮುಖ್ಯ ಎಂದು ಹೇಳಿದರು. ನಾಟಿ ವೈದ್ಯ ಪದ್ಧತಿಯನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಋಷಿಮುನಿಗಳಿಂದ ಪರಂಪರಾಗತವಾಗಿ ಬಂದಿರುವ ಭಾರತೀಯ ವೈದ್ಯ ಪದ್ಧತಿಯನ್ನು ನಾವು ಉಳಿಸಿಕೊಂಡು ಹೋಗಬೇಕು. ಹಲವು ಗಿಡಮೂಲಿಕೆಗಳು ಅವಸಾನದ ಅಂಚಿನಲ್ಲಿವೆ. ಗಿಡ ಮೂಲಿಕೆ ರಕ್ಷಣೆಗೆ ಸರ್ಕಾರ ಮುಂದಾಗಬೇಕು. ಈ ನಿಟ್ಟಿನಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ನಿಜಕ್ಕೂ ಆಸಕ್ತಿ ತೋರಿಸಿ ಸಮ್ಮೇಳನಕ್ಕೆ ಬಂದಿದ್ದಾರೆ ಎಂದು ಶ್ರೀಗಳು ಶ್ಲಾಘನೆ ವ್ಯಕ್ತಪಡಿಸಿದರು.

ನಾಟಿ ವೈದ್ಯರ ಸಮ್ಮೇಳನದಲ್ಲಿ‌ ಮೊದಲ ಬಾರಿಗೆ ಸರ್ಕಾರದ ಆರೋಗ್ಯ ಸಚಿವರು ಪಾಲ್ಗೊಂಡಿರುವುದು ನಿಜಕ್ಕೂ ಸಂತಸದ ಸಂಗತಿ.‌ ಏನಾದರೂ ಒಂದು ಪರಿಹಾರ ಕಂಡುಕೊಳ್ಳಬೇಕು ಎಂಬ ದೃಷ್ಟಿಕೋನವನ್ನು ದಿನೇಶ್ ಗುಂಡೂ ರಾವ್ ಹೊಂದಿದ್ದಾರೆ. ಈ ಹಿಂದೆ ಆಯುಷ್ ಕಾಲೇಜುಗಳಲ್ಲಿ ಪ್ರವೇಶಾತಿ ವ್ಯವಸ್ಥೆಯಲ್ಲಿ ಸಾಕಷ್ಟು ಸಮಸ್ಯೆಯಿತ್ತು. ಸಮಸ್ಯೆಯನ್ನು ಸಚಿವರ ಗಮನಕ್ಕೆ ತಂದ 10 ದಿನಗಳಲ್ಲಿ ಪರಿಹಾರವನ್ನು ಸಚಿವ ದಿನೇಶ್ ಗುಂಡೂರಾವ್ ನೀಡಿದರು ಎಂದು ಶ್ಲಾಘಿಸಿದರು.

Exit mobile version