ಚಳಿಗಾಲವೆಂದರೆ ಒಂಥರಾ ಚೆನ್ನ. ಬೆಚ್ಚಗಿನ ಹೊದಿಕೆಗಳು, ಸುಡುವ ಕಾಫಿ, ಬಿಸಿ ಬೋಂಡಾ, ಮಂಜು ಮುಸುಕಿದ ಹಾದಿಗಳು, ಬೆವರಿನ ಗೊಡವೆಯೇ ಇಲ್ಲ… ಹೀಗೆ ಎಲ್ಲ ಕಾಲಗಳಿಗೂ ಅದರದ್ದೇ ಆದ ಸಂಭ್ರಮಗಳು ಇದ್ದ ಹಾಗೆ ಚಳಿಗಾಲಕ್ಕೂ ಇದೆ. ಆದರೆ ಇವೆಲ್ಲಾ ಆಗಬೇಕೆಂದರೆ ಆರೋಗ್ಯ ಕೈ ಕೊಡುವಂತಿಲ್ಲ. ಆಗ ಮಾತ್ರವೇ ಚಳಿಗಾಲವೆಂದರೆ ಸೊಗಸೆನಿಸುತ್ತದೆ. ಚಳಿ ಬಾಧಿಸದೆ ಇರುವಂತೆ ಆಗುವುದಕ್ಕೆ ಏನು ಮಾಡಬೇಕು? ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹೇಗೆ? ಇಲ್ಲಿವೆ ಕೆಲವು (Winter Care Tips) ಸರಳ ಸೂತ್ರಗಳು-
ಬೆಚ್ಚಗಿನ ವಸ್ತ್ರಗಳು
ಇದೇನು ದೊಡ್ಡ ರಾಕೆಟ್ ತಂತ್ರಜ್ಞಾನವಲ್ಲ, ಚಳಿಯಾದರೆ ಬೆಚ್ಚಗಿನ ವಸ್ತ್ರ ಹಾಕಬೇಕೆಂಬುದು ಎಲ್ಲರಿಗೂ ತಿಳಿಯುತ್ತದೆ, ನಿಜ. ಆದರೆ ವಸ್ತ್ರಗಳನ್ನು ಹಲವು ಪದರಗಳಲ್ಲಿ ಧರಿಸಿ. ನೆನಪಿಡಿ, ಬಟ್ಟೆಯ ಅಳತೆಗಳು ಎಲ್ಲವೂ ಒಂದೇ ಆದರೆ ತೀರಾ ಬಿಗಿಯೆನಿಸಿ, ರಕ್ತ ಸಂಚಾರಕ್ಕೆ ತೊಂದರೆ ಎನಿಸಬಹುದು. ಹಾಗಾಗಿ ಸ್ವಲ್ಪ ದೊಡ್ಡ ಅಳತೆಯದ್ದು ಸೂಕ್ತ. ಇದರಿಂದ ಹೊರಗಿನ ತಾಪಮಾನಕ್ಕೆ ಅನುಸಾರವಾಗಿ ದೇಹದ ತಾಪಮಾನವನ್ನು ಹೊಂದಿಸಿಕೊಳ್ಳುವುದು ಸುಲಭವಾಗುತ್ತದೆ. ತೀರಾ ಚಳಿಯಿದ್ದರೆ ಉಣ್ಣೆಯ ಅಥವಾ ಫ್ಲೆನೆಲ್ ಇಲ್ಲವೇ ಫ್ಲೀಸ್ ರೀತಿಯ ವಸ್ತ್ರಗಳು ಬೇಕಾಗಬಹುದು. ಚಳಿ ಶುರುವಾದ ಮೇಲೆ ಅವುಗಳನ್ನು ಕಪಾಟೆಲ್ಲಾ ಕಿತ್ತಾಡಿ ಹುಡುಕುವ ಬದಲು, ಕೊಂಚ ಮೊದಲೇ ಬಿಸಿಲಿಗೆ ಹಾಕಿಟ್ಟುಕೊಂಡರೆ, ಮುಗ್ಗಲು ಬಟ್ಟೆಯಿಂದ ಅಲರ್ಜಿ ಉಂಟಾಗುವುದನ್ನು ತಡೆಯಬಹುದು.
ಬಿಸಿ ಪೇಯಗಳು
ಹೀಗೆನ್ನುತ್ತಿದ್ದಂತೆ ಕೊಳಗಗಟ್ಟಲೆ ಕಾಫಿ ಹೀರುವ ಕನಸು ಕಾಣಬೇಡಿ. ಅತಿಯಾದ ಕೆಫೇನ್ ಸೇವನೆ ಸಮಸ್ಯೆಗಳನ್ನು ತರುತ್ತದೆ. ಅರಿಶಿನ ಹಾಲು, ಹಲವು ರೀತಿಯ ಹರ್ಬಲ್ ಚಹಾಗಳು, ಗ್ರೀನ್ ಟೀ, ನಾನಾ ರೀತಿಯ ಕಷಾಯಗಳು, ರುಚಿಕಟ್ಟಾದ ಸೂಪ್‌ಗಳು, ಸುಮ್ಮನೆ ಬಿಸಿನೀರಾದರೂ ಸಾಕು- ನೋಡಿ, ಎಷ್ಟೊಂದು ಆಯ್ಕೆಗಳಿವೆ ಬಿಸಿ ಪಾನೀಯಗಳ ಪಟ್ಟಿಯಲ್ಲಿ. ಪ್ಯಾಕ್ ಮಾಡಿದ ಅಥವಾ ಮೊದಲೇ ಬೆರೆಸಿಟ್ಟ ಪೇಯಗಳನ್ನು ಖರೀದಿಸುವ ಬದಲು, ನಿಮ್ಮಿಷ್ಟಕ್ಕೆ ತಕ್ಕಂತೆ ಮನೆಯಲ್ಲೇ ಮಾಡಿಕೊಳ್ಳುವುದು ಸೂಕ್ತ.
ಅಭ್ಯಂಗ ಸ್ನಾನ
ಚಳಿಗಾಲದ ಎಣ್ಣೆ ಸ್ನಾನಕ್ಕಿರುವ ಖದರೇ ಬೇರೆ. ದಿನಾ ಎಣ್ಣೆ ಸ್ನಾನ ಮಾಡುವುದು ಅಸಾಧ್ಯ. ವಾರಕ್ಕೊಮ್ಮೆಯಾದರೂ ಅಭ್ಯಂಜನವಿರಲಿ. ಚಳಿಗಾಲದಲ್ಲಿ ಎದುರಾಗುವ ಚರ್ಮದ ಸಮಸ್ಯೆಗಳನ್ನು ಇದರಿಂದ ನಿಯಂತ್ರಿಸುವುದು ಸಾಧ್ಯ. ಕೀಲು, ಮಾಂಸಖಂಡಗಳಲ್ಲಿ ನೋವಿದ್ದರೆ ಅದಕ್ಕೂ ಎಣ್ಣೆ ಸ್ನಾನ ಉಪಶಮನ ನೀಡುತ್ತದೆ. ಜೊತೆಗೆ, ಬಿಸಿನೀರ ಸ್ನಾನ ದೇಹವನ್ನು ಚೇತೋಹಾರಿಯಾಗಿಸುತ್ತದೆ.
ವ್ಯಾಯಾಮ ಮಾಡಿ
ಚಳಿಗಾಲದಲ್ಲಿ ವ್ಯಾಯಾಮವನ್ನೆಂದೂ ತಪ್ಪಿಸಬೇಡಿ. ಇಂಥದ್ದೇ ವ್ಯಾಯಾಮವನ್ನು ಮಾಡಬೇಕೆಂದಿಲ್ಲ. ನಡಿಗೆ, ಸೈಕಲ್ ಹೊಡೆಯುವುದು, ಯೋಗ, ಏರೊಬಿಕ್ಸ್… ಇಂಥ ಯಾವುದಾದರೂ ಸರಿ. ಆದರೆ ವ್ಯಾಯಾಮದ ಮೂಲಕ ದೇಹವನ್ನು ಬಿಸಿ ಮಾಡುವಂಥ ಅಗತ್ಯವಿದೆ. ಇದರಿಂದ ದೇಹ ಬೆಚ್ಚಗಿದ್ದು, ರಕ್ತ ಪರಿಚಲನೆ ಸುಧಾರಿಸಿ, ಮಾಂಸಖಂಡಗಳು ಬಲಗೊಳ್ಳುತ್ತವೆ. ದೇಹದಲ್ಲಿ ಶಕ್ತಿ ಸಂಚಯಿಸಿ, ರೋಗನಿರೋಧಕ ಶಕ್ತಿಯೂ ಹೆಚ್ಚುತ್ತದೆ.
ಚರ್ಮವನ್ನು ತೇವವಾಗಿಡಿ
ವಾರಕ್ಕೊಮ್ಮೆ ಅಭ್ಯಂಗ ಮಾಡಿದರೆ ವಾರದ ಉಳಿದೆಲ್ಲಾ ದಿನಗಳಿಗೂ ಸಾಕಾಗುವುದಿಲ್ಲ. ಹಾಗಾಗಿ ಚರ್ಮ ಒಣಗದಂತೆ ಕಾಪಾಡಿಕೊಳ್ಳಿ. ಉತ್ತಮ ಮಾಯಿಶ್ಚರೈಸರ್ ಬಳಸಿ. ಇದರಿಂದ ಶುಷ್ಕತೆ ಹೆಚ್ಚಿ, ತ್ವಚೆ ಕೆಂಪಾಗುವುದು, ತುರಿಕೆ, ದದ್ದು, ಎಕ್ಸಿಮಾದಂಥ ಸಮಸ್ಯೆಗಳನ್ನು ದೂರ ಇರಿಸಬಹುದು.
ದಿನಕ್ಕೆ ಮೂರು ಲೀಟರ್ ನೀರು
ದಿನವಿಡೀ ಬಿಸಿ ಪೇಯಗಳನ್ನೇ ಕುಡಿಯುತ್ತಿರುವುದಕ್ಕೆ ಸಾಧ್ಯವಿಲ್ಲ. ದಿನಕ್ಕೆ ಮೂರು ಲೀ. ನೀರು ಚಳಿಗಾಲದಲ್ಲೂ ಅಗತ್ಯ. ಹಾಗಾಗಿ ಬಾಯಾರಿಕೆ ಆಗುತ್ತಿಲ್ಲ ಎಂದು ಸುಮ್ಮನಿರದೆ, ಸಾಕಷ್ಟು ನೀರು ಕುಡಿಯಿರಿ. ಇದು ಚರ್ಮದ ಆರೋಗ್ಯವನ್ನೂ ಕಾಪಾಡುತ್ತದೆ. ಶೀತ-ಕೆಮ್ಮಿನಂಥ ಸೋಂಕು ರೋಗಗಳಿಂದ ತಪ್ಪಿಸಿಕೊಳ್ಳುವುದಕ್ಕೂ ನೆರವಾಗುತ್ತದೆ.
ಸೋಂಕಿನಿಂದ ತಪ್ಪಿಸಿಕೊಳ್ಳಿ
ಹೊರಗಿನಿಂದ ಬರುತ್ತಿದ್ದಂತೆ ಕೈಗಳನ್ನು ಮೊದಲು ಸ್ವಚ್ಛ ಮಾಡಿಕೊಳ್ಳಿ. ಸೋಂಕಿತರಿಂದ ದೂರ ಇರಿ. ನಿಮಗೆ ಸೋಂಕಿದ್ದರೆ ಉಳಿದವರಿಗೆ ಹರಡದಂತೆ ಎಚ್ಚರ ವಹಿಸಿ. ಸಂಸ್ಕರಿಸಿದ ಆಹಾರ, ಸಕ್ಕರೆಭರಿತ ತಿನಿಸುಗಳು ರೋಗನಿರೋಧಕ ಶಕ್ತಿಯನ್ನು ಕುಂದಿಸುತ್ತವೆ. ಇಂಥವುಗಳ ಬದಲು ಋತುಮಾನಕ್ಕೆ ಸರಿಯಾದ ಹಣ್ಣು-ತರಕಾರಿಗಳಿಗೆ ಆದ್ಯತೆ ನೀಡಿ. ಪ್ರೊಟೀನ್ ಭರಿತ ಸತ್ವಯುತ ಆಹಾರ ಸೇವಿಸಿ.
ಬಿಸಿಲು ಕಾಯಿಸಿ
ಚಳಿಗಾಲದಲ್ಲಿ ಬಿಸಿಲು ಕಾಯಿಸುವ ಮಜವೇ ಮಜ! ಚಳಿಯೆಂದು ಹುದುಗಿ ಮನೆಯಲ್ಲೇ ಕುಳಿತಾಗ ಎಲ್ಲಕ್ಕಿಂತ ಹೆಚ್ಚು ಕೊರತೆಯಾಗುವುದು ಸೂರ್ಯನ ಬಿಸಿಲಿನದ್ದು. ಇದು ದೇಹಕ್ಕೆ ಆಗುವ ವಿಟಮಿನ್ ಡಿ ಕೊರತೆಯನ್ನು ನೀಗಿಸುತ್ತದೆ. ಬೆಳಗಿನ ಎಳೆ ಬಿಸಲು ಇಂದಿಷ್ಟು ಹೊತ್ತು ಬೀಳಲಿ ದೇಹದ ಮೇಲೆ. ಬಿಸಿಲಿನ ಕೊರತೆ ಆದಷ್ಟೂ ಮಾನಸಿಕ ಆರೋಗ್ಯವೂ ಕುಂದುತ್ತದೆ.
ಇದನ್ನೂ ಓದಿ: Healthy Food: ಈ ಎಲ್ಲ ರಾಸಾಯನಿಕಗಳು ನೀವು ತಿನ್ನುವ ಆಹಾರದಲ್ಲಿದೆಯೇ? ಹಾಗಾದರೆ ಎಚ್ಚರ!