ಬಾಯಿ ಚಪಲವನ್ನು ಮೀರುವುದು ಅಂದರೆ ಬಹುತೇಕರಿಗೆ ದೊಡ್ಡ ಸಾಧನೆಯೇ. ಯಾಕೆಂದರೆ, ಒಂದೇ ಬಗೆಯೆ, ಕೇವಲ ಆರೋಗ್ಯಕರ ಎಂಬಂಥ ತಿಂಡಿಗೆ ಅಂಟಿಕೊಂಡಿರುವುದು ಕಷ್ಟವೇ. ಕುರುಕಲು, ಜಂಕ್ ಎಂದು ಏನಾದರೊಂದು ಹೊಟ್ಟೆ ಸೇರುತ್ತಲೇ ಇರುತ್ತದೆ. ಎಷ್ಟೇ ಕಂಟ್ರೋಲ್ ಮಾಡಿಕೊಂಡರೂ, ಒಮ್ಮೆಯಾದರೂ ನಮ್ಮ ಬುದ್ಧಿ ಹೇಳುವ ಮಾತನ್ನು ಮನಸ್ಸು ಕೇಳುವುದಿಲ್ಲ. ಕೈ ತಾನೇತಾನಾಗಿ ತಿಂಡಿಯ ಕಡೆಗೆ ಓಡುತ್ತದೆ. ನಿಗ್ರಹಿಸಿಕೊಂಡಷ್ಟು ಇನ್ನಷ್ಟು ಮತ್ತಷ್ಟು ತಿನ್ನುವ ಬಯಕೆ ಹೆಚ್ಚುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ಸತ್ಯ. ಹಾಗಾಗಿಯೇ ಕೆಲವೊಮ್ಮೆ ಎಷ್ಟೇ ಕಂಟ್ರೋಲ್ ಮಾಡಿಕೊಂಡರೂ ಎಲ್ಲವನ್ನೂ ಮರೆತು ತಿಂದುಬಿಡುತ್ತೇವೆ. ಹಾಗಾದರೆ, ಹೆಚ್ಚು ಎಣ್ಣೆತಿಂಡಿ ತಿಂದು, ಅಯ್ಯೋ, ಎಷ್ಟೊಂದು ಎಣ್ಣೆತಿಂಡಿ ತಿಂದುಬಿಟ್ಟೆನಲ್ಲಾ ಅನಿಸಿದರೆ, ಏನು ಮಾಡಬಹುದು, ಏನು ತಿಂದರೆ ಒಳ್ಳೆಯದು ಹಾಗೂ ಏನನ್ನು ತಿನ್ನಬಾರದು ಎಂಬುದನ್ನು ನೋಡೋಣ.
೧. ಎಣ್ಣೆ ತಿಂಡಿ ಸಿಕ್ಕಾಪಟ್ಟೆ ತಿಂದುಬಿಟ್ಟೆ ಅನಿಸಿದರೆ, ಕೊಂಚ ಉಗುರುಬೆಚ್ಚಗೆ ನೀರು ಕುಡಿಯಿರಿ. ಇದು ಜೀರ್ಣಕ್ರಿಯೆಯನ್ನು ಚುರುಕುಗೊಳಿಸುತ್ತದೆ. ತಿಂದ ಆಹಾರ ಸರಿಯಾಗಿ ಕರಗುವಂತೆ ನೋಡಿಕೊಳ್ಳುವುದಲ್ಲದೆ, ಅದರಲ್ಲಿರುವ ಪೋಷಕಾಂಶಗಳನ್ನು ದೇಹಕ್ಕೆ ಸೇರುವಂತೆ ಮಾಡಿ, ಬೇಡದ ಅಂಶಗಳನ್ನು ಬೇಗನೆ ಕಳಿಸಿಕೊಡುತ್ತದೆ. ಜೊತೆಗೆ ಮಲಬದ್ಧತೆಯಾಗದಂತೆ ನೋಡಿಕೊಳ್ಳುತ್ತದೆ.
೨. ಒಂದು ಡಿಟಾಕ್ಸ್ ಡ್ರಿಂಕ್ ಮಾಡಿ ಕುಡಿಯಿರಿ. ದೇಹದಲ್ಲಿ ಸೇರಿಕೊಂಡ ಕಶ್ಮಲಗಳನ್ನು ಹೊಡೆದೋಡಿಸಲು, ನಿಂಬೆಹಣ್ಣಿನ ಜ್ಯೂಸ್, ಜೇನು, ನಿಂಬೆಹಣ್ಣು ಹಾಗೂ ಶುಂಠಿ ಹಾಕಿ ಮಾಡಿದ ಚಹಾ, ಗ್ರೀನ್ ಟೀ, ನಿಂಬೆಹಣ್ಣು ಮತ್ತು ಸೌತೆಕಾಯಿ ಬೆರೆಸಿದ ನೀರು, ಕಿತ್ತಳೆ ಹಾಗೂ ಕ್ಯಾರೆಟ್ ಜ್ಯೂಸು, ಮಸಾಲೆ ಮಜ್ಜಿಗೆ ಅಥವಾ ಇನ್ನಾವುದಾದರೂ ಡಿಟಾಕ್ಸ್ ಪಾನೀಯ ಕುಡಿಯಬಹುದು. ಹೊಟ್ಟೆಯುಬ್ಬರ ಕಡಿಮೆಯಾಗಿ ತಂಪಾಗುತ್ತದೆ.
೩. ನಡೆಯಿರಿ. ಹೆಚ್ಚು ಕುರುಕಲು ತಿಂದೆ ಅನಿಸಿದರೆ, ಸುಮ್ಮನೆ ಎದ್ದು ಒಂದರ್ಧ ಗಂಟೆ ಚಂದನೆಯ ವಾಕ್ ಮಾಡಿ ಬನ್ನಿ. ನಡಿಗೆ ಜೀರ್ಣಕ್ರಿಯೆಯನ್ನು ಚುರುಕುಗೊಳಿಸುತ್ತದೆ. ದೇಹ ರಿಲ್ಯಾಕ್ಸ್ ಆಗುತ್ತದೆ.
೪. ಮುಂದಿನ ಆಹಾರಕ್ರಮವನ್ನು ಚೆನ್ನಾಗಿ ಯೋಜಿಸಿಕೊಳ್ಳಿ. ಹಾಗಂತ ನಿನ್ನೆ ಹೆಚ್ಚು ಎಣ್ಣೆತಿಂಡಿ ತಿಂದೆ ಎಂದು ಬೆಳಗಿನ ತಿಂಡಿಯನ್ನೇ ಬಿಟ್ಟು ಕೂರಬೇಡಿ. ಬದಲಾಗಿ ಒಳ್ಳೆಯ ಪ್ರೋಟೀನ್ಯುಕ್ತ ಬೆಳಗಿನ ತಿಂಡಿ ಸೇವಿಸಿ. ಎಣ್ಣೆ ಅಂಶ ಕಡಿಮೆ ಮಾಡಿ, ಒಳ್ಳೆಯ ಆಹಾರದ ಕಡೆಗೆ ಗಮನ ಕೊಡಿ. ಹೆಚ್ಚು ನೀರು, ಹಣ್ಣಿನ ರಸ, ಕಾಳುಗಳು ಹೊಟ್ಟೆ ಸೇರಲಿ.
೫. ಪ್ರೊಬಯಾಟಿಕ್ ಆಹಾರ ಹೆಚ್ಚು ಮಾಡಿ. ಮೊಸರು ಮಜ್ಜಿಗೆಯಂತಹ ಪ್ರೊಬಯಾಟಿಕ್ ಆಹಾರ ಇಂತಹ ಸಮಯದಲ್ಲಿ ಸೇವಿಸುವುದು ಒಳ್ಳೆಯದು. ಅದನ್ನು ಸೇರಿಸಿ. ಜೀರ್ಣಕ್ರಿಯೆಯನ್ನು ಇದು ಸರಾಗಗೊಳಿಸುತ್ತದೆ.
ಇದನ್ನೂ ಓದಿ | World vision day | ನಿಮ್ಮ ಕಣ್ಣಿನ ದೃಷ್ಟಿಯ ಬಗೆಗೆ ಇರಲಿ ದೂರದೃಷ್ಟಿ!
೬. ಹೆಚ್ಚು ಹಣ್ಣು ತರಕಾರಿಗಳನ್ನು ಸೇವಿಸಿ. ಈಗಾಗಲೇ ಎಣ್ಣೆ ತಿಂಡಿಗಳನ್ನು ಹೆಚ್ಚು ಸೇವಿಸಿರುವುದರಿಂದ ಆದಷ್ಟು ಕೊಬ್ಬಿನಂಶ ಹೆಚ್ಚು ಸೇವಿಸುವುದನ್ನು ನಿಲ್ಲಿಸಿ. ಪೊಟೀನ್, ಖನಿಜಾಂಶಗಳಿರುವ ಸೊಪ್ಪು ತರಕಾರಿ, ಬೇಳೆ ಕಾಳುಗಳು, ಹಣ್ಣುಗಳನ್ನು ಸೇವಿಸಿ. ಹೆಚ್ಚು ನಾರಿನಂಶ ಇರುವ ಸೊಪ್ಪು ತರಕಾರಿ ಹಣ್ಣುಗಳು ಇಂತಹ ಸಮಯದಲ್ಲಿ ಉತ್ತಮ.
೭. ನಿದ್ದೆಗೆಡಬೇಡಿ. ಹೆಚ್ಚು ಎಣ್ಣೆತಿಂಡಿ ಹೊಟ್ಟೆಗೆ ಸೇರಿಸಿಕೊಂಡು ನಿದ್ದೆಗೆಡುವುದು ಒಳ್ಳೆಯದಲ್ಲ. ಸರಿಯಾದ ಸಮಯಕ್ಕೆ ನಿದ್ದೆ ಮಾಡಿ. ನಿದ್ದೆ ನಿಮ್ಮ ಮೂಡ್ ಅನ್ನು ಉತ್ತಮಗೊಳಿಸುತ್ತದೆ. ದೇಹ, ಮನಸ್ಸು, ಆತ್ಮ ಎಲ್ಲವಕ್ಕೂ ಶಾಂತಿ ನೆಮ್ಮದಿ ನೀಡುವ ಮದ್ದು ನಿದ್ದೆಯಲ್ಲಿದೆ. ಹಾಗಾಗಿ ಮತ್ತೆ ಸಿಕ್ಕಾಪಟ್ಟೆ ತಿನ್ನುವ ಮೂಡಿನಿಂದ ಹೊರಬಂದು ಯಥಾಸ್ಥಿತಿಗೆ ಮರಳಲು ನಿದ್ದೆ ಸಹಕಾರಿ.
೮. ಎಣ್ಣೆತಿಂಡಿ ತಿಂದ ಕೂಡಲೇ ತಣ್ಣಗಿನ ತಿನಿಸುಗಳನ್ನು ತಿನ್ನಬೇಡಿ. ಐಸ್‌ಕ್ರೀಂ, ಮತ್ತಿತರ ತಣ್ಣಿಗಿನ ತಿನಿಸುಗಳು ಎಣ್ಣೆತಿಂಡಿಯನ್ನು ಬೇಗ ಕರಗಲು ಬಿಡುವುದಿಲ್ಲ. ಜೀರ್ಣಕ್ರಿಯೆಯನ್ನು ಕಷ್ಟವಾಗಿಸುವ ತಿನಿಸುಗಳು ಕೂಡಲೇ ತಿನ್ನದಿರುವುದು ಒಳ್ಳೆಯದು.
೯. ಎಣ್ಣೆತಿಂಡಿ ತಿಂದು ಕೂಡಲೇ ಮಲಗಿಬಿಡಬೇಡಿ. ೨-೩ ಗಂಟೆಗಳ ಅಂತರ ಇದ್ದರೆ ಅವು ಕರಗಲು ಸಹಾಯವಾಗುತ್ತದೆ.
ಇದನ್ನೂ ಓದಿ | Diabetes Diet | ಮಧುಮೇಹ ನಿಯಂತ್ರಣಕ್ಕೆ ಇದೊಂದು ಸೂತ್ರ ನೆನಪಿಟ್ಟುಕೊಳ್ಳಿ